ಅವಂತಿಸುಂದರೀ ಕಥಾ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ದಂಡಿ : -ಅವಂತಿಸುಂದರೀ ಕಥಾ ಎಂಬ ಸಂಸ್ಕೃತ ಕವಿ ಬರೆದನೆನ್ನಲಾದ ಗದ್ಯ ಕಾವ್ಯ. 1924ರಲ್ಲಿ ಎಂ. ಆರ್. ಕವಿ ಎಂಬುವರು ಬೆಳಕಿಗೆ ತಂದರು. ದಂಡಿಯದೆಂದು ಊಹಿಸಲಾಗಿದೆ. ಕೈ ಬರೆಹದ ಪ್ರತಿ ಹುಳುಹತ್ತಿ ಜೀರ್ಣವಾಗಿದೆ. ಅಚ್ಚು ಮಾಡಿದರೆ 25 ಪುಟಗಳಷ್ಟಾಗಬಹುದು. ಇದರಲ್ಲಿ ಕಥಾಸಾರವೆಂಬ ಕೆಲವು ಶ್ಲೋಕಗಳೂ ಇವೆ. ಇದರಿಂದ ಕೆಲವು ಹೊಸ ವಿಚಾರಗಳು ತಿಳಿದುಬಂದಿವೆ. ಕವಿಯ ವಂಶಾವಳಿ, ದಂಡಿಯ ಪೂರ್ವದ ಕೆಲವು ಕವಿಗಳ ಹೆಸರುಗಳು ಇಲ್ಲಿ ಉಕ್ತವಾಗಿವೆ. ಈ ಕಥೆಯನ್ನು ನಂಬುವುದಾದರೆ ದಂಡಿ ಭಾರವಿಯ ಮರಿಮೊಮ್ಮಗನಾಗುತ್ತಾನೆ. ಕೌಶಿಕಗೋತ್ರದ ಒಂದು ಬ್ರಾಹ್ಮಣ ಮನೆತನದವರು ಮೂಲತಃ ಆನಂದಪುರ ನಿವಾಸಿಗಳಿದ್ದು ಅಲ್ಲಿಂದ ಅಚಲಪುರಕ್ಕೆ ಬಂದು ನೆಲೆಸಿದರು. ನಾರಾಯಣನ ಮಗ ದಾಮೋದರ. ಕಿರಾತಾರ್ಜುನೀಯ ಕರ್ತೃ ಭಾರವಿಯ ಮಗ ಮನೋರಥ. ಅವನ ಮಗ ವೀರದತ್ತ. ವೀರದತ್ತ ಮತ್ತು ಗೌರಿಯರ ಮಗ ದಂಡಿ. ಭಾರವಿ ಗಂಗರಾಜ ದುರ್ವಿನೀತನ ಮಿತ್ರನೆಂದೂ ಆಮೇಲೆ ಪಲ್ಲವರಾಜ ಕಾಂಚಿಯ ಅರಸು ಸಿಂಹವಿಷ್ಣುವಿನ ಆಸ್ಥಾನದಲ್ಲಿದ್ದನೆಂದೂ ತಿಳಿದಿದೆ. ಚಿಕ್ಕಂದಿನಲ್ಲಿ ತಾಯಿತಂದೆಗಳನ್ನು ಕಳೆದುಕೊಂಡು, ಭಾರತದ ಉದ್ದಕ್ಕೂ ತಿರುಗಾಡಿ ಕೊನೆಗೆ ತನ್ನ ಪೂರ್ವಜರಿಗೆ ಆಶ್ರಯವನ್ನಿತ್ತ ಪಲ್ಲವ ರಾಜಾಸ್ಥಾನಕ್ಕೆ ಬಂದನೆಂದು ತಿಳಿಯುತ್ತದೆ. ಒಂದು ದಿನ ಮಹಾಮಲ್ಲಪುರದಲ್ಲಿರುವ ಗುಡಿಯಲ್ಲಿ ತ್ರಿವಿಕ್ರಮ ಮೂರ್ತಿಯ ತೋಳೊಂದು ಮುರಿದಂತೆ ಕಂಡಿತು. ಶಿಲ್ಪ ಕಲಾಕುಶಲನಾದ ದಂಡಿ ಪರೀಕ್ಷಿಸುವಾಗ್ಗೆ ಸಮುದ್ರದ ತೆರೆಯೊಡನೆ ಬಂದ ಕಮಲವೊಂದು ಮೂರ್ತಿಯ ಪಾದವನ್ನು ಮುಟ್ಟಲು ಒಬ್ಬ ವಿದ್ಯಾಧರ ಪ್ರತ್ಯಕ್ಷನಾದನಂತೆ. ಈ ಆಶ್ಚರ್ಯವನ್ನು ಕಂಡು ಇದರ ಯಥಾರ್ಥವನ್ನು ತಿಳಿಯಲು ದಂಡಿ ಕಾಂಚಿಗೆ ಬಂದು ತಪಸ್ಸು ಮಾಡಲಾಗಿ ಅವಂತಿಸುಂದರಿಯ ಕಥೆ ಅವನಿಗೆ ಹೊಳೆಯಿತಂತೆ. ಇದು ಕಥೆಗೆ ಪೂರ್ವಭಾವಿಯಾದ ವಿಷಯ. ಈ ವಿಷಯದಲ್ಲಿ ಇನ್ನೂ ಸಂಶೋಧನೆಯಾಗಬೇಕಾಗಿದೆ. ಇದು ಕಳೆದು ಹೋದ ದಶಕುಮಾರಚರಿತದ ಪೂರ್ವಪೀಠಿಕೆಯಾಗಿರಬಹುದೆಂದು ಎಂ. ಆರ್. ಕವಿ ಭಾವಿಸುತ್ತಾರೆ.