ಕೇವಲ ಕೆಲವರ ಕೈಯಲ್ಲಿ ಆಡಳಿತಾಧಿಕಾರ ಸೀಮಿತವಾಗಿರುವ ಆಡಳಿತ ಪದ್ಧತಿ (ಆಲಿಗಾರ್ಕಿ). ಅಲ್ಪಸಂಖ್ಯಾಧಿಪತ್ಯವೆಂದೂ ಇದನ್ನು ಹೇಳಬಹುದು. ಪ್ರಜಾಪ್ರಭುತ್ವದಲ್ಲೂ (ಡೆಮಾಕ್ರಸಿ) ಚುನಾಯಿತ ಪ್ರತಿನಿಧಿಗಳು ಕೆಲವರೇ ಆಡಳಿತ ನಡೆಸುವರಾದರೂ ಸರ್ಕಾರ ಪ್ರಜೆಗಳಿಗೆ ಹೊಣೆಯಾಗಿರುತ್ತದೆ. ಅಲ್ಪತಂತ್ರ ವ್ಯವಸ್ಥೆಯಲ್ಲಿ ತಾತ್ತ್ವಿಕವಾಗಿ ಆ ನಿರ್ಬಂಧವಿಲ್ಲ. ಪ್ರಾಚೀನ ಗ್ರೀಸಿನ ಥೀಬ್ಸ್‌, ಮೆಗಾರ, ಕಾರಿಂತ್‌ಗಳಲ್ಲಿ ಇಂಥ ಸರ್ಕಾರವಿತ್ತು. ಕುಲೀನತಂತ್ರವೇ (ಅರಿಸ್ಟಾಕ್ರಸಿ) ಕಾಲಕ್ರಮೇಣ ಅಲ್ಪತಂತ್ರವಾಗಿ ಮಾರ್ಪಾಟಾಗುತ್ತದೆಂಬ ಅಭಿಪ್ರಾಯವಿದೆಯಾದರೂ ಅವೆರಡಕ್ಕೂ ಖಚಿತವಾದ ವ್ಯತ್ಯಾಸವಿದೆ. ಅಲ್ಪತಂತ್ರ ವ್ಯವಸ್ಥೆ ಶ್ರೀಮಂತಾಧಿಪತ್ಯ. ಅಲ್ಲಿ ಆಡಳಿತವರ್ಗ ತನ್ನ ಹಿತ, ಮೇಲ್ಕ್ಮೆ ಅಧಿಕಾರ ಭದ್ರತೆಗಾಗಿ ಮಾತ್ರ ವ್ಯವಹರಿಸುತ್ತದೆ. ಕುಲೀನತಂತ್ರದಲ್ಲಾದರೋ ಆಡಳಿತ ಉತ್ತಮರ ಕೈಯಲ್ಲಿದ್ದು ಸಾರ್ವಜನಿಕ ಹಿತಚಿಂತನೆಯೇ ಅದರ ಗುರಿಯಾಗಿರುತ್ತದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: