ಏರೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಅಲಂಕಾರದ ಎಲೆಗಳಿಂದ ಕೂಡಿದೆ. ಎಲೆಗಳ ಆಕಾರ, ಗಾತ್ರ, ಬಣ್ಣ ಬೇರೆಬೇರೆ ಬಗೆಯವಾಗಿದ್ದು, ನೋಡಲು ರಮ್ಯವಾಗಿದೆ. ಈ ಸಸ್ಯಗಳನ್ನು ತೇವಾಂಶವಿರುವ ಉದ್ಯಾನವನದ ತಗ್ಗುಪ್ರದೇಶಗಳಲ್ಲಿ ಸುಲಭವಾಗಿ ಬೆಳೆಸಬಹುದು. ಮನೆಯಲ್ಲೂ ಅಲಂಕಾರ ಸಸ್ಯವಾಗಿ ಬೆಳೆಸುವುದುಂಟು. ಅಲೊಕೇಷಿಯ ಜಾತಿಯಲ್ಲಿ 70 ಬಹುವಾರ್ಷಿಕ ಪ್ರಭೇದಗಳಿವೆ, ಇವೆಲ್ಲ ಪರ್ಣ ಸಸಿಗಳು. ಇವುಗಳ ಎಲೆಗಳಿಗೆ ಉದ್ದ ತೊಟ್ಟುಗಳಿವೆ. ತೊಟ್ಟು ರೆಕ್ಕೆಗಳಿಂದ ಕೂಡಿದ್ದು ಕೊಳವೆಯಾಕಾರ, ಅರ್ಧ ಕೊಳವೆಯಾಕಾರ, ದಪ್ಪ, ಅಂಬಿನಾಕಾರ, ಹೃದಯಾಕಾರ ಇತ್ಯಾದಿ ವೈವಿಧ್ಯವನ್ನು ಪ್ರದರ್ಶಿಸುತ್ತವೆ; ಹಸುರು, ನೀಲಿಮಿಶ್ರಿತ ಹಸುರು ಮುಂತಾಗಿ ಹಲವು ಬಣ್ಣಗಳಿರುವುದರಿಂದ ಆಕರ್ಷಕವಾಗಿ ಕಾಣುತ್ತವೆ. ನಡುದಿಂಡು ಬುಡದಲ್ಲಿ ಅಗಲವಾಗಿದ್ದು ತುದಿಯ ಕಡೆಗೆ ಹೋದಂತೆ ಕಿರಿದಾಗುತ್ತದೆ. ನಡುದಿಂಡು ಮತ್ತು ನಾಳಗಳಿಗೆ ಹಲವು ಬಣ್ಣಗಳಿವೆ. ಹೂಗೊಂಚಲು, ತಾಳಗುಚ್ಛದ ಮಾದರಿಯಲ್ಲಿದ್ದು ಅದರ ಸುತ್ತ ಉಪಪತ್ರಯುಗ್ಮ ಇದೆ. ಹೂಗೊಂಚಲಿನ ಕವಚ ಹೂಗೊಂಚಲಿಗಿಂತ ಉದ್ದವಾಗಿದೆ; ಅದರ ನವಿರಾದ ರೋಮಯುಕ್ತ ಮೇಲುಭಾಗವೂ ವಿವಿಧ ವರ್ಣವಿನ್ಯಾಸಗಳೂ ಮನಮೋಹಕ ವಾಗಿವೆ. ಗಂಡು ಹೂಗಳು ಗೊಂಚಲಿನ ತಳಭಾಗದಲ್ಲಿ ಸ್ಥಿತವಾಗಿದ್ದು ಕಡಿಮೆ ಸಂಖ್ಯೆಯಲ್ಲಿರು ತ್ತದೆ. ಗಂಡು ಹೂಗಳ ಕೇಸರುಗಳು ಸೇರಿಕೊಂಡು ಆರು ಕೋಣಾಕೃತಿಯಲ್ಲಿವೆ. ಅಂಡಾಶಯ ದಲ್ಲಿ 3-4 ಕೋಶಗಳಿದ್ದು, ಪ್ರತಿ ಕೋಶದ ತಳದಲ್ಲಿ ಹಲವು ಅಂಡಗಳು ಅಂಟಿಕೊಂಡಿರು ತ್ತವೆ. ಹಣ್ಣು ಹಲವು ಬೀಜದ ಮತ್ತು ಕೆಂಪು ಬಣ್ಣದ ಬೆರ್ರಿ. ಅಲೊಕೇಷಿಯ ಸೆಂಡರಿಯಾನ, ಅಲೊಕೇಷಿಯ ಜಬ್ರಿನ, ಅಲೊಕೇಷಿಯ ಇಂಡಿಕ (ಇಂಡಿಯಾ ದೇಶದ ಮೂಲವಾಸಿ), ಅಲೊಕೇಷಿಯ ಕುಪ್ರಿಯ, ಅಲೊಕೇಷಿಯ ಮ್ಯಾಕ್ರೊರೈಜ ಮುಂತಾದುವು ಪ್ರಮುಖ ಪ್ರಭೇದಗಳು.

ಬೇಸಾಯ ಬದಲಾಯಿಸಿ

ಅಲೊಕೇಷಿಯ ಸಸ್ಯಗಳನ್ನು ಮೋಸುಗಳಿಂದ ಮತ್ತು ಗುಪ್ತಕಾಂಡದ ತುಂಡುಗಳಿಂದ ಸುಲಭವಾಗಿ ವೃದ್ಧಿಮಾಡಬಹುದು. ಇವುಗಳನ್ನು ಬೀಜಗಳಿಂದ ವೃದ್ಧಿಮಾಡುವ ಸಾಧ್ಯತೆ ಇದ್ದರೂ ಆ ವಿಧಾನ ಹೆಚ್ಚಿನ ಬಳಕೆಯಲ್ಲಿಲ್ಲ. ಈ ಸಸ್ಯಗಳಿಗೆ ಯಥೇಚ್ಛವಾಗಿ ತೇವಾಂಶವಿರಬೇಕು. ಫಲವತ್ತಾದ ನೆಲ ಬೇಕು. ಬಿಸಿಲಿನ ಝಳವನ್ನು ಸಹಿಸುವ ಶಕ್ತಿ ಇವಕ್ಕಿಲ್ಲ. ನೀರು ಹರಿಯುವ ಅಥವಾ ತಗ್ಗಾದ ಉದ್ಯಾನವನ ಪ್ರದೇಶಗಳಲ್ಲಿ ಇವನ್ನು ಬೆಳೆಸಬಹುದು. ಈ ಸಸ್ಯಗಳು ಬಹಳ ಸೂಕ್ಷ್ಮಪ್ರಕೃತಿಯವಾದ್ದರಿಂದ ಇವನ್ನು ಕುಂಡಗಳಲ್ಲಿ ಬೆಳೆಸುವುದು ಲೇಸು.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: