ಅಲೈಟಿಸ್ ನೆಲಗಪ್ಪೆ (ಟೋಡ್). ಸೂಲಗಿತ್ತಿ ಕಪ್ಪೆ (ಮಿಡ್ವೈಫ್ ಟೋಡ್) ಎಂದೂ ಹೆಸರಿದೆ. ಡೀಮಾರ್ಸ್ ಎಂಬ ವಿಜ್ಞಾನಿ (1724) ಈ ಕಪ್ಪೆಯ ವಿವರ ನೀಡಿದ್ದಾನೆ. ತಮ್ಮ ತತ್ತಿಗಳನ್ನು ರಕ್ಷಿಸುವುದರಲ್ಲಿ ಅಧಿಕ ಆಸಕ್ತಿ ವಹಿಸುವ ಈ ಉಭಯಜೀವಿಗೆ ಸೂಲಗಿತ್ತಿ ಕಪ್ಪೆ ಎಂಬ ಹೆಸರು ಉಚಿತವಾಗಿದೆ. ಇದರ ಉದ್ದ ಸುಮಾರು 2". ದೇಹಾಕೃತಿ ಸ್ವಲ್ಪಮಟ್ಟಿಗೆ ಗುಂಡು. ಮೈಮೇಲಿನ ಮಾಸಲು ಬೂದುಬಣ್ಣದ ಚರ್ಮ ಸದಾ ತೇವಯುತ. ಅಗಲವಾದ ಕಣ್ಣುಗಳು, ನೆಟ್ಟಗೆ ನಿಂತಿರುವ ಕಣ್ಣುಪಾಪೆ. ಬಾಯಿಯ ಮೇಲುದವಡೆ ಮತ್ತು ಮೇಲಂಗುಳಲ್ಲಿ ಹಲ್ಲುಗಳು ಇವೆ. ಗುಂಡಾದ ಅಂಟುಳ್ಳ ನಾಲಗೆ. ಈ ಕಪ್ಪೆ ಮಂದಗಮನದ ನಿಶಾಚರ ಪ್ರಾಣಿ. ಕೆಲವು ಸ್ತನಿಗಳು ನೆಲದಲ್ಲಿ ರಚಿಸಿದ ಬಿಲಗಳನ್ನು ಈ ಕಪ್ಪೆ ಹಗಲಲ್ಲಿ ತನ್ನ ಏಕಾಂತವಾಸಕ್ಕೆ ಆರಿಸುತ್ತದೆ. ಸಂಜೆಯ ಹೊತ್ತಿಗೆ ಸಿಳ್ಳು ಹಾಕುವ ಧ್ವನಿ ಮಾಡಿಕೊಂಡು ಹೊರಬರುತ್ತದೆ. ಗಂಡು ಹೆಣ್ಣು ಕಪ್ಪೆಗಳು ಕೂಡಿದ ಮೇಲೆ ಹೆಣ್ಣು ಕಪ್ಪೆ ಗರ್ಭಕಟ್ಟಿದ ತತ್ತಿಗಳನ್ನು ನೆಲದ ಮೇಲೆ ಇಡುತ್ತದೆ. ಇದರ ಸಂತಾನೋತ್ಪತ್ತಿಯ ಕಾಲ ವಸಂತ ಮತ್ತು ಗ್ರೀಷ್ಮಋತುಗಳು. ಹಳದಿ ಬಣ್ಣದ ದೊಡ್ಡ ತತ್ತಿಗಳು ಮಣಿಗಳಂತೆ ಎರಡು ಮೂಲೆಗಳಲ್ಲಿ ಕೂಡಿರುತ್ತವೆ. ತತ್ತಿಗಳ ರಕ್ಷಣೆಗೆ ಅವುಗಳ ಸುತ್ತ ಒಂದು ಲೋಳೆ ಆವರಿಸಿರುತ್ತದೆ. ಗರ್ಭಕಟ್ಟಿದ ನಂತರ ಗಂಡುಕಪ್ಪೆ ತತ್ತಿಗಳ ಮಾಲೆಯನ್ನು ತನ್ನ ಹಿಂದಿನ ಕಾಲುಗಳ ಮಧ್ಯೆ ಹೆಣೆದುಕೊಳ್ಳುತ್ತದೆ. ತತ್ತಿಗಳಲ್ಲಿ ಭ್ರೂಣ ಮೂರು ವಾರಗಳಲ್ಲಿ ಬೆಳೆಯುತ್ತದೆ. ಲೋಳೆಯಿಂದ ಆವೃತವಾದ ಕೋಶಗಳಿಂದ ಕಪ್ಪೆಯ ಮರಿಗಳು ಹೊರಬರುವ ವೇಳೆಗೆ ಗಂಡುಕಪ್ಪೆ ನೀರನ್ನು ಪ್ರವೇಶಿಸುತ್ತದೆ. ಅನಂತರ ಗೊದಮೊಟ್ಟೆಗಳು ಅಥವಾ ಮರಿಗಳು (ಟ್ಯಾಡ್ಪೋಲ್ ಲಾರ್ವ) ನೀರಿನಲ್ಲೇ ಜೀವಿಸುತ್ತ ರೂಪಾಂತರ ಹೊಂದಿ ಪ್ರೌಢ ಜೀವಿಗಳಾಗುತ್ತವೆ.

ಸೂಲಗಿತ್ತಿ ಕಪ್ಪೆ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅಲೈಟಿಸ್&oldid=836210" ಇಂದ ಪಡೆಯಲ್ಪಟ್ಟಿದೆ