ಅಲೆಕ್ಸಿಸ್ ಡ ಟಾಕ್ವೀಲ್
ಅಲೆಕ್ಸಿಸ್ ಡ ಟಾಕ್ವೀಲ್ ( 1805-1859). ಫ್ರೆಂಚ್ ಇತಿಹಾಸಕಾರ, ರಾಜಕಾರಣಿ. ರಾಜಕೀಯ ಸಾಮಾಜಿಕ ಪ್ರವೃತ್ತಿಗಳನ್ನು ಅವಲೋಕಿಸಿ ವಿವೇಚಿಸಿದ 19ನೆಯ ಶತಮಾನದ ಧೀಮಂತರಾದ ಕಾರ್ಲ್ ಮಾಕ್ರ್ಸ್, ಫ್ರೆಡರಿಕ್ ಎಂಗೆಲ್ಸ್, ಜೆ.ಎಸ್. ಮಿಲ್ ಮುಂತಾದವರ ಶ್ರೇಣಿಗೆ ಸೇರಿದವ. ಹತ್ತೊಂಬತ್ತನೆಯ ಶತಮಾನದ ಪ್ರಥಮಾರ್ಧದಲ್ಲಿ ಹುಟ್ಟಿ (1805) ಬೆಳೆದು ಬರವಣಿಗೆ ನಡೆಸಿ, ದ್ವಿತೀಯಾರ್ಧದ ಪ್ರಥಮ ದಶಕದ ಕೊನೆಯಲ್ಲಿ (1859) ತೀರಿಕೊಂಡ ಟಾಕ್‍ವೀಲ್ ಆಜನ್ಮ ಶ್ರೀಮಂತ, ಪ್ರತಿಭಾಶಾಲಿ.
ಬದುಕು ಮತ್ತು ಸಾಧನೆ
ಬದಲಾಯಿಸಿತಂದೆ ಫ್ರೆಂಚ್ ಸರ್ಕಾರಿ ಅಧಿಕಾರಿ. ತಂದೆಯಂತೆ ಮಗನೂ 1827ರಲ್ಲಿ ಸರ್ಕಾರದಲ್ಲಿ ಅಧಿಕಾರಿಯಾಗಿ ಜೀವನರಂಗ ಪ್ರವೇಶಿಸಿದ. ಅಮೆರಿಕ ಸಂಯುಕ್ತಸಂಸ್ಥಾನಗಳ ಸರ್ಕಾರ ಮತ್ತು ಕಾನೂನು ಪದ್ಧತಿಗಳನ್ನು ಅಧ್ಯಯನ ಮಾಡಲು 1831ರಲ್ಲಿ ಆ ದೇಶವನ್ನು ಸಂದರ್ಶಿಸಿದ. ಅಮೆರಿಕದ ಪ್ರಜಾಪ್ರಭುತ್ವ ಪದ್ಧತಿ ಮತ್ತು ಕಾರ್ಯವೈಖರಿಯಿಂದ ಪ್ರಭಾವಿತನಾದ ಟಾಕ್‍ವೀಲ್ 1835ರಲ್ಲಿ ಅಮೆರಿಕನ್ ಪ್ರಜಾಪ್ರಭುತ್ವ ಕುರಿತ ಎರಡು ಸಂಪುಟಗಳ ಒಂದು ಗ್ರಂಥವನ್ನು ಬರೆದು ಪ್ರಕಟಿಸಿದ. ಅನಂತರ ಅವನಿಗೆ ರಾಜಕಾರಣದಲ್ಲಿ ಆಸಕ್ತಿ ಬೆಳೆಯಿತು. 1837ರಲ್ಲಿ ಪ್ರತಿನಿಧಿ ಸಭೆಗೆ (ಚೇಂಬರ್ ಆಫ್ ಡೆಪ್ಯುಟೀಸ್) ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತನಾದರೂ 1839ರಲ್ಲಿ ಇವನಿಗೆ ಜಯ ಲಭಿಸಿತು. ಆದರೆ 1848ರ ಕ್ರಾಂತಿಯ ಅನಂತರದವರೆಗೂ ಇವನು ಮಹತ್ತ್ವದ ಪಾತ್ರವೇನನ್ನೂ ವಹಿಸಲಿಲ್ಲ. ಅನಂತರ ಸಂವಿಧಾನ ಸಭೆಯ ಸದಸ್ಯನಾಗಿದ್ದನಲ್ಲದೆ ದ್ವಿತೀಯ ಗಣರಾಜ್ಯದ ಸಂವಿಧಾನ ಕರಡನ್ನು ರಚಿಸಿದ ಸಮಿತಿಯಲ್ಲೂ ಇದ್ದ. 1849ರಲ್ಲಿ ಜೂನ್‍ನಿಂದ ಅಕ್ಟೋಬರ್‍ವರೆಗೆ ವಿದೇಶಾಂಗ ಮಂತ್ರಿಯಾಗಿದ್ದ. 1851ರಲ್ಲಿ ಲೂಯಿ ನೆಪೋಲಿಯನ್ ನಡೆಸಿದ ಕ್ಷಿಪ್ರಾಕ್ರಮಣವನ್ನು ಇವನು ವಿರೋಧಿಸಿ ರಾಜಕಾರಣದಿಂದ ನಿವೃತ್ತನಾದ. ಅನಂತರ ಇವನಿಗೆ ಬರವಣಿಗೆಯಲ್ಲಿ ಆಸಕ್ತಿ ಇನ್ನೂ ಬೆಳೆಯಿತು. 1856ರಲ್ಲಿ ಫ್ರಾನ್ಸಿನ ಕ್ರಾಂತಿಗೆ ಸಂಬಂಧಿಸಿದ ಇವನ ಒಂದು ಗ್ರಂಥ ಪ್ರಕಟವಾಯಿತು. ಇವನು 1859ರ ಏಪ್ರಿಲ್ 16ರಂದು ಕ್ಯಾನೆಸ್ ಪಟ್ಟಣದಲ್ಲಿ ತೀರಿಕೊಂಡ.
ವಿಚಾರಸರಣಿ
ಬದಲಾಯಿಸಿಟಾಕ್ವೀಲನ ಜೀವನದ ವೈವಿಧ್ಯ ಮತ್ತು ವೇಗದಂತೆಯೇ ಅವನ ವಿಚಾರ ಸರಣಿಯೂ ವೈವಿಧ್ಯಮಯವೂ ತೀಕ್ಷ್ಣವೂ ಆದದ್ದು. ಪ್ರಜಾಪ್ರಭುತ್ವ ಮತ್ತು ಕೈಗಾರಿಕಾ ಕ್ರಾಂತಿಗಳ ಬೆಳವಣಿಗೆಯ ಐತಿಹಾಸಿಕ ವಿಶ್ಲೇಷಣೆ ಮತ್ತು ಅವುಗಳ ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳ ಅವಲೋಕನವೇ ಅವನು ಮಾಡಿದ ಮುಖ್ಯ ಕಾರ್ಯ. ಇತಿಹಾಸಚಕ್ರ ಸಮಾನತೆಯತ್ತ ಉರುಳುತ್ತಿದೆಯೆಂದು ಅವನು ವಿವರಿಸಿದ. ಪ್ರಜಾಪ್ರಭುತ್ವದಲ್ಲಿ ಮತ್ತು ಕೈಗಾರಿಕಾ ಕ್ರಾಂತಿಗಳಲ್ಲಿ ಸಮಾನತೆಯ ಸತ್ವವನ್ನಷ್ಟೇ ಅಲ್ಲದೆ, ಅದರ ಹದ್ದುಮೀರಿದ ವೃದ್ಧಿಯನ್ನೂ ಅವನು ಮುನ್ನುಡಿದ. ತನ್ನ ಸಮಕಾಲೀನನಾದ ಮಾಕ್ರ್ಸನದಕ್ಕೆ ವಿರುದ್ಧವಾದ ನಿಲವನ್ನು ಈತ ತಳೆದಿದ್ದ. ಪ್ರಜಾಪ್ರಭುತ್ವದಲ್ಲಿ ಅಧಿಕಾರ, ಐಶ್ವರ್ಯ ಮತ್ತು ಅಂತಸ್ತುಗಳು ಬಂಡವಾಳ ವರ್ಗದಲ್ಲೇ ಕೇಂದೀಕೃತವಾಗುವ ಬದಲು ವಿವಿಧ ವರ್ಗಗಳಲ್ಲಿ ವಿಭಿನ್ನವಾಗಿ ಹಂಚಿಕೆಯಾಗಿ ತತ್ಫಲವಾಗಿ ಸಮಾನತೆ ಹೆಚ್ಚುವುದೆಂದು ವಾದಿಸಿದ. ಹೀಗೆ ಹೆಚ್ಚಿದ ಸಮಾನತೆ ಎಲ್ಲೆಮೀರಿದಾಗ ಪ್ರಜಾಸಮೂಹ ಬಲಗೊಂಡು ಸಾಮೂಹಿಕ ಸರ್ವಾಧಿಕಾರ ಏರ್ಪಡುವ ಭಯ ಬೆಳೆಯುವುದೆಂದು ಅವನು ನುಡಿದ. ಸಾಮೂಹಿಕ ಸರ್ವಶಕ್ತಿಯ ಹಿನ್ನೆಲೆಯಲ್ಲಿ ರಾಜ್ಯಶಕ್ತಿ ಕೇಂದ್ರೀಕೃತ ನೌಕರಶಾಹಿಯಾಗಿ ಪರಿವರ್ತನೆಗೊಂಡು, ವ್ಯಕ್ತಿಸ್ವಾತಂತ್ರ್ಯಕ್ಕೆ ಮತ್ತು ಸಾಂಸ್ಕøತಿಕ ಪ್ರಗತಿಗೆ ಅಡ್ಡಿಯನ್ನು ಉಂಟುಮಾಡಬಹುದೆಂಬುದು ಅವನ ಭಯವಾಗಿತ್ತು. ಇಂಥ ರಾಕ್ಷಸೀ ರಾಜ್ಯಶಕ್ತಿಗೆ ಅಮೆರಿಕದಲ್ಲಿರುವಂಥ ವಿವಿಧ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಖಾಸಗಿ ಸಂಘಸಂಸ್ಥೆಗಳೇ ಕಡಿವಾಣವೆಂದು ಇವನು ಸಾರಿದ. ಶ್ರೀಮಂತನೂ ಧೀಮಂತನೂ ಆದ ಟಾಕ್‍ವೀಲ್ ಪ್ರಜಾಪ್ರಭುತ್ವ ಮತ್ತು ಸಮಾನತೆಯ ವೃದ್ಧಿಯ ಕನಸು ಕಂಡು ಬೆಚ್ಚಿದ್ದು ಆಶ್ಚರ್ಯವೇನೂ ಅಲ್ಲ. ಹದ್ದುಮೀರಿದ ಸಮಾನತೆ, ಗುಣವಿಲ್ಲದ ಸಾಮೂಹಿಕ ಸಂಸ್ಕøತಿ, ಸಾಮೂಹಿಕ ಸರ್ವಾಧಿಕಾರ ಮತ್ತು ಸಾಮೂಹಿಕ ಯುಗದ ಬಗ್ಗೆ ಮಾನವತೆಯನ್ನು ಎಚ್ಚರಿಸಿದ ಟಾಕ್‍ವೀಲ್ ಆಧುನಿಕ ಯುಗದ ರಾಜಕೀಯ ಮತ್ತು ಸಾಮಾಜಿಕ ಬೆಳೆವಣಿಗೆಗಳನ್ನು ವಿಶ್ಲೇಷಿಸಿದ ಒಬ್ಬ ಪ್ರಮುಖ ವಿಚಾರವಾದಿ.