ಸಾಹಿತ್ಯಸೃಷ್ಟಿಯಲ್ಲಿ ಕವಿಗಳು ಬಳಸಿರುವ ಆಡಂಬರದ ಶೈಲಿಗೆ ಈ ಹೆಸರಿದೆ. ಇದರ ಎರಡು ಬಗೆಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

  • ಸ್ಪೇನಿನ ಕವಿ ಗಾಂಗರ (1561-1627) ಜಾರಿಗೆ ತಂದ ಕ್ಲಿಷ್ಟ ಪದ್ಧತಿ ಒಂದು. ಅದಕ್ಕೆ ಗಾಂಗರಿಸಮ್ ಎಂಬ ಹೆಸರು. ಕಲ್ಚರಿಸಮ್ ಎಂದೂ ಅದನ್ನು ಕೆಲವರು ಕರೆದರು. ಸುಲಭವೂ ತಿಳಿಯೂ ಆದ ರೀತಿಯಲ್ಲಿ ಕಾವ್ಯ ಕಟ್ಟುತ್ತಿದ್ದ ಗಾಂಗರ 1609ರಲ್ಲಿ ತನ್ನ ನುಡಿವೈಖರಿಯನ್ನು ಬದಲಾಯಿಸಿದ. ಪಾಲಿಫೀಮ್ ಎಂಬ ಬೃಹತ್ಕಾವ್ಯಕ್ಕೆ ಸಾಧಾರಣ ಶೈಲಿ ಸಾಲದೆಂದು ಬಗೆದು ಪೆಡಸಾದ ಶೈಲಿಯೊಂದನ್ನು ತಯಾರಿಸಿಕೊಂಡ.

ಅದರ ಆಕೃತಿಯೇನೆಂದರೆ- ೧. ಲ್ಯಾಟಿನ್ನಿಂದ ನಿರಾತಂಕವಾಗಿ ತೆಗೆದುಕೊಂಡ ಶಬ್ದಗಳು, ಶಬ್ದಗುಚ್ಛಗಳು. ೨. ಸಂಕೀರ್ಣವೂ ಗೋಜು ಗೋಜೂ ಆದ ಉಪಮಾನಗಳಿಂದ ಎದ್ದ ಸಾದೃಶ್ಯಗಳು. ೩. ಪುರಾತನರ ಮೂಲ ಕಥಾವಳಿಯಿಂದ ಆಯ್ದ ವಿಚಿತ್ರ ನಿದರ್ಶನಗಳು. ೪ಜರ್ಮನ್, ಇಟ್ಯಾಲಿಯನ್ ಭಾಷೆಗಳ ಪದಗಳ ಬಳಕೆ. ೫. ನಾಮವಾಚಕ, ಕ್ರಿಯಾಪದ ಇತ್ಯಾದಿಗಳಿಗೆ ವ್ಯಾಕರಣದಂತೆ ನಿರ್ದಿಷ್ಟವಾಗಿರುವ ಕ್ರಮದ ಪಲ್ಲಟ, ತಿರುಗು ಮುರುಗು. ಗಾಂಗರನ ಈ ವಾಕ್ಯ ರೀತಿ ದೊಡ್ಡ ವಾದವಿವಾದ ಎಬ್ಬಿಸಿತು. ಪ್ರಖ್ಯಾತ ನಾಟಕಕಾರ ಲೋಪ್ಡ ವೇಗ ಅದನ್ನು ಅವಹೇಳನಗೈದು ಬೇಗ ಯಾವುದೋ ಕಾರಣಕ್ಕಾಗಿ ತನ್ನ ಆಕ್ಷೇಪವನ್ನು ಹಿಂದಕ್ಕೆ ತೆಗೆದುಕೊಂಡ. ಇತರರ ನಿಂದೆಯೂ ನಿತ್ರಾಣದಿಂದ ಕುಂದಿತಾಗಿ, ಗಾಂಗರನ ಪದ್ಧತಿ ವಿಜಯ ಗಳಿಸಿತು. ಕೊಂಚಕಾಲ ಅದರ ಆಧಿಪತ್ಯ ನಡೆಯಿತು. ಆದರೆ ಬೇಗ ಅದರಿಂದ ರಸಿಕವೃಂದಕ್ಕೆ ಬೇಸರ ಉಂಟಾಯಿತು. ವಿರೋಧಿಗಳು ಹೆಚ್ಚಾಗುತ್ತಾ ಬಂದರು. ಕೊನೆಗೆ ಗಾಂಗರಿಸಮ್ ಎಂದರೆ ಕಡುಮಬ್ಬು, ಒಣಪಾಂಡಿತ್ಯ ಎಂಬ ಅರ್ಥವೆಂದಾಯಿತು. 20ನೆಯ ಶತಮಾನದಲ್ಲಿ ಇದ್ದಕ್ಕಿದ್ದಂತೆ ಒಂದು ಗುಂಪಿನ ಲೇಖಕರಿಗೆ ಗಾಂಗರ್ ಅತ್ಯುತ್ತಮ ಕವಿ, ಅವನ ಶೈಲಿ ಅನುಕರಣೀಯ ಎಂದು ಭಾಸವಾದರೂ ಆ ಭಾವನೆ ಹೆಚ್ಚು ದಿವಸ ಉಳಿಯಲಿಲ್ಲ.

  • ಇಟಲಿಯ ಮಾರೀನೊ (1569-1625) ಪ್ರಯೋಗಿಸಿ ಪ್ರಚಾರಕ್ಕೆ ತಂದ ಮಾರೀನಿಸಮ್ ಇನ್ನೊಂದು ಅಲಂಕಾರ ವೈಪರೀತ್ಯ. ತನ್ನ ಸುದೀರ್ಘಕಾವ್ಯವಾದ ಲ್ಆದೊನೆಯಲ್ಲಿ ಆತ ಬಳಸಿದ ಪದ್ಧತಿ 16ನೆಯ ಶತಮಾನದ ಇಟಲಿಯ ಗುಣಧರ್ಮವನ್ನು ಪ್ರತಿಫಲಿಸಿತು. ಕಾವ್ಯದಲ್ಲಿ 50ಪರಿಚ್ಛೇದಗಳೂ 5000ಕ್ಕೂ ಮೀರಿದ ವೃತ್ತಗಳೂ ಇದ್ದುವು. ಆಗ ಇಟಲಿ ಪರಕೀಯ ಆಳರಸರ ದಾಸ್ಯದಲ್ಲಿ ಕೊರಗುತ್ತ, ಮತಧರ್ಮ ನಯನೀತಿಗಳಲ್ಲಿ ಹುಸಿಗೂ ಕಪಟಕ್ಕೂ ಪಕ್ಕಾಗಿ ಇಳಿಗತಿಯಲ್ಲಿತ್ತು. ತನ್ನ ಕವಿ ಮಾರ್ಗದ ಕೃತಕತೆ, ಉತ್ಪ್ರೇಕ್ಷೆ, ಅತ್ಯಾಡಂಬರಗಳು ಆ ಸಮಯಕ್ಕೂ ಪರಿಸ್ಥಿತಿಗೂ ತಕ್ಕುದಾಗಿರುವಂತೆ ಮಾರೀನೊ ಮಾಡಿದ. ಆದ್ದರಿಂದ ಮಾರೀನಿಸಮ್ ಸೆಸೆಂಟಿಸ್ಮೊ (ಹದಿನಾರನೆಯ ಶತಮಾನ) ಎಂಬ ಹೆಸರೂ ಬಂತು. ಮಾರೀನೊನ ಮುಖ್ಯ ಉದ್ದೇಶ ಓದುಗರಿಗೆ ಕಣ್ಣು ಕೋರೈಸುವಂತೆಯೂ ಭಾರಿ ವಿಸ್ಮಯ ಬಡಿಯುವಂತೆಯೂ ಮಾಡುವುದು.

ಅದಕ್ಕಾಗಿ ಅವನು ಉಪಯೋಗಿಸಿದ ಕಾವ್ಯೋಪಾಯಗಳು ಇವು: ೧. ತಲೆಚಿಟ್ಟು ಹಿಡಿಸುವಷ್ಟು ಅಲಂಕಾರಗಳ, ಅದರಲ್ಲೂ ರೂಪಕಾಲಂಕಾರದ ಬಳಕೆ; ೨. ಅಸಾಧಾರಣವೂ ಅನಿರೀಕ್ಷಿತವೂ ಆದ ಪದಪುಂಜ ಮತ್ತು ವಾಕ್ಯರಣಿ, ಅನಿರೀಕ್ಷ್ಯ, ಅದ್ಭುತ ಸನ್ನಿವೇಶ ರಚನೆ; ೩. ಅತಿ ಬುದ್ಧಿವಂತಿಕೆಯಿಂದ ಮಿಶ್ರಣಗೈದ ವಿರುದ್ಧ ಭಾವಗಳು; ೪. ಅಂದವಿಲ್ಲ ಎನ್ನಲಾಗದ ಚತುರವೂ ಸೂಕ್ಷ್ಮವೂ ಆದ ಕೃತಕ ಭಂಗಿಗಳು; ೫. ದೂರದ ವಿಕಾರವಾದ ಹೋಲಿಕೆಗಳು; ೬. ಆಡಂಬರದ ಬಡಾಯಿ ಮಾತು, ಅತ್ಯುಕ್ತಿ; ೭. ಅತಿಶಯೋಕ್ತಿಯ ಸುರಿಮಳೆ. ಹೀಗಿದ್ದರೂ ಇಟಲಿಯ ಭಾಷೆಗೂ ಸಾಹಿತ್ಯಕ್ಕೂ ಮಾರೀನೊ ದೊಡ್ಡ ಉಪಕಾರ ಮಾಡಿದನೆಂದೇ ಪಂಡಿತರ ಅಭಿಮತ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: