ಅರ್ಚಕ ಬಿ. ರಂಗಸ್ವಾಮಿ

ಭಾರತೀಯ ಜಾನಪದ ವಿದ್ವಾಂಸ

ಅರ್ಚಕ. ಬಿ. ರಂಗಸ್ವಾಮಿ (1895-1991) ಜಾನಪದ ಕೇತ್ರದಲ್ಲಿ ಕೆಲಸ ಮಾಡಿದ ಆದ್ಯ ವಿದ್ವಾಂಸರು.

ಇವರ ಪೂರ್ಣ ಹೆಸರು ಬಿ. ರಂಗಸ್ವಾಮಿ ಭಟ್ಟ. ಕೃಷ್ಣರಾಜಪೇಟೆ ತಾಲ್ಲೂಕಿನ ಬಂಡಿಹೊಳೆ ಇವರ ಹುಟ್ಟೂರು. ತಂದೆ ನಾರಾಯಣ ಭಟ್ಟ, ತಾಯಿ ಶೇಷಮ್ಮ. ನಾಲ್ಕನೆಯ ತರಗತಿಯವರೆಗೆ ಬಂಡಿಹೊಳೆಯಲ್ಲಿ ವಿದ್ಯಾಭ್ಯಾಸಮಾಡಿ ಹೆಚಿನ ವಿದ್ಯಾಭ್ಯಾಸಕ್ಕೂ ಸಂಸ್ಕೃತ ವಿದ್ಯಾಬ್ಯಾಸಕ್ಕೂ ಮೈಸೂರನ್ನು ಆಶ್ರಯಿಸಿದ ಇವರು ರಾಮಾನುಜ ಕೂಟ ಎಂಬ ಉಚಿತ ವಿದ್ಯಾರ್ಥಿನಿಲಯದಲ್ಲಿ ಹನ್ನೆರಡು ವರ್ಷ ವಾರಾನ್ನ ಉಂಡು, ನಾಲ್ಕು ವರ್ಷ ಸ್ವಯಂಪಾಕ - ಹೀಗೆ ಇಪ್ಪತ್ತು ವರ್ಷಗಳ ಕಾಲ ವಿದ್ಯಾಬ್ಯಾಸ ಮಾಡಿದರು. ಆ ಅವಧಿಯಲ್ಲಿ ಯಜುರ್ವೇದದ ಪೂರ್ಣ ಅಧ್ಯಯನ, ಆಗಮದಲ್ಲಿ ವಿದ್ವತ್ತು ಸಾಧಿಸಿದರು.


ಬಂಡಿಹೊಳೆಯ ದೊಡಮ್ಮನ ಹಬ್ಬದ ಸಂದರ್ಭದಲ್ಲಿ ಕೋಲಾಟದ ಪದಗಳು, ರಂಗದ ಕುಣಿತದ ಹಾಡುಗಳು, ಸುಗ್ಗಿಯ ಕಾಲದಲ್ಲಿ ಊರಿಗೆ ಬಂದು ಮನೆಮನೆಯ ಮುಂದೆ ಹಾಡುತ್ತಿದ್ದ ದೊಂಬಿದಾಸರು, , ತೊಗಲು ಗೊಂಬೆಯಾಟದವರು, ಊರಿ ನೊಳಗೆ ಸದಾ ಕೇಳಿಸುತ್ತಿದ್ದ ಬೀಸುವ ಪದಗಳು, ಕುಟ್ಟುವ ಪದಗಳು, ಸೋಬಾನೆ, ಪದಗಳು, ದೇವರ ಪದಗಳು ಮುಂತಾದುವೆಲ್ಲ ರಂಗ ಸ್ವಾಮಿಯವರಿಗೆ ಬಾಲ್ಯದಿಂದಲೇ ಪ್ರಭಾವ ಬೀರಿದ್ದುವು. ಜೊತೆಗೆ ಆಲೂರು ವೆಂಕಟರಾಯ, ಪ್ರೊಫೆಸರ್ ಹಿರಿಯಣ್ಣ, ವೆಂಕಟಕೃಷ್ಣಯ(ತಾತಯ್ಯ), ಮುದವೀಡು ಕೃಷರಾಯ ಮುಂತಾದ ವಿದ್ವಾಂಸರು ಮಾಡುತ್ತಿದ್ದ ಭಾಷಣಗಳು ಇವರ ಮೇಲೆ ಜನಪದ ಸಂಸ್ಕೃತಿಯ ಗಾಢ ಪ್ರಭಾವ ಬೀರಿದುವು. ಪರಿಣಾಮವಾಗಿ ಬಂಡಿಹೊಳೆಯಲ್ಲಿ ಅರ್ಚಕರು ಒಂದು ಆಶ್ರಮ ಸ್ಥಾಪಿಸಿ ಹಲವಾರು ವರ್ಷ ನಡೆಸಿದರು. ಸ್ವಯಂ ಉದ್ಯೋಗವನ್ನು ಉದ್ದೇಶವಾಗಿರಿಸಿಕೊಂಡು ಆ ಆಶ್ರಮದಲ್ಲಿ ಅರ್ಚಕರು ನೂಲುವುದು, ಬಟ್ಟೆ ಹೊಲಿಯುವುದು, ಚಾಪೆ ಹೆಣೆಯುವುದು, ಬೆತ್ತದ ಕೆಲಸ ಕಲಿಸಿಕೊಟ್ಟು ಹಳ್ಳಿಗರ ಸ್ವಾವಲಂಬನೆಯಲ್ಲಿ ಪ್ರಮುಖ ಸಾಧನೆ ಮಾಡಿದರು. ಜೊತೆಗೆ ರಾಮಾಯಣ, ಮಹಾಭಾರತಗಳ ನಿತ್ಯ ಪಾರಾಯಣದಿಂದ ಜನಪದರನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರಚೋದಿಸಿದರು. ಇವರ ಜನಪರ ಕಾರ್ಯವನ್ನು ನೋಡಲು ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾಇಸ್ಮಾಯಿಲ್ ಎರಡು ಬಾರಿ ಈ ಆಶ್ರಮಕ್ಕೆ ಭೇಟಿ ನೀಡಿದ್ದರು.


ಇವರು 1991 ಸೆಪ್ಟಂಬರ್ 29ರಂದು ನಿಧನೆಹೊಂದಿದರು

ಸಾಹಿತ್ಯ ರಚನೆ

ಬದಲಾಯಿಸಿ

930ರಲ್ಲಿ ಇವರ ಸಂಸ್ಕೃತ ಆಗಮ ಗ್ರಂಥಶ್ರೀ ವೈಖಾನನ ಆಲಯಾ ರಾಧನಾ ಪದ್ಧತಿ: ಪ್ರಕಟವಾಯಿತು. ಇವರು ಬರೆದ "ಸನಾತನ ಧರ್ಮ" ಎಂಬ ಕೃತಿ ಇನ್ನೂ ಹಸ್ತಪ್ರತಿಯ ಹಂತದಲ್ಲೇ ಇದೆ.


ಜನಪದ ಸಾಹಿತ್ಯ ಸಂಗ್ರಹ

ಬದಲಾಯಿಸಿ

ಮೈಸೂರಿನಲ್ಲಿ ದ್ದಾಗ ಒಮ್ಮೆ ಓದಿದ್ದ ‘ಪಾಮರರ ಸಾಹಿತ್ಯವನ್ನು ಉದಾಸೀನ ಮಾಡಬೇಡಿ’ ಎಂಬ ಲೇಖನವೂ ಪ್ರಭಾವ ಬೀರಿತು. ಪರಿಣಾಮವಾಗಿ ಅಂಥ ಸಾಹಿತ್ಯವನ್ನು ಸಂಗ್ರಹಿಸಬೇಕೆಂಬ ಆಸಕ್ತಿ ಮೂಡಿತು. ಹಲವಾರು ಅಡಚಣೆಗಳ ನಡುವೂ ಸಂಗ್ರಹಕಾರ್ಯ ಕೈಗೊಂಡು 1933ರಲ್ಲಿ 'ಹುಟ್ಟಿದ ಹಳ್ಳಿ-ಹಳ್ಳಿಯ ಹಾಡು 'ಎಂಬ ಗ್ರಂಥವನ್ನು ಪ್ರಕಟಿಸಿದರು. ಈ ಕೃತಿ ಹುಟ್ಟಿದ ಹಳ್ಳಿ ಎಂಬ ಹೆಸರಿನಲ್ಲಿ ಪುನರ್ಮುದ್ರಣ ಗೊಂಡಿದೆ (1971). ಬಂಡಿಹೊಳೆವನ್ನು ಕೇಂದ್ರವಾಗಿಟ್ಟು ಕೊಂಡು ಈ ಗ್ರಂಥವನ್ನು ರಚಿಸಿದ್ದರೂ ಸಮಗ್ರ ಬಯಲುಸೀಮೆಯ ಹಳ್ಳಿಗಳ ಜೀವನಾಡಿಯನ್ನು ಇದರಲ್ಲಿಕಾಣಬಹುದು. ಬಯಲುಸೀಮೆಯ ಗ್ರಾಮಾಂತರ ಸಂಸ್ಕೃತಿಯನ್ನು ಇಲ್ಲಿ ಕ್ರೋಡೀಕರಿಸಲಾಗಿದೆ. ಜನಪದ ಸಾಹಿತ್ಯದ ದೃಷ್ಟಿಯಿಂದಲೂ ವೈಜ್ಞಾನಿಕ ಸಂಗ್ರಹ ದೃಷ್ಟಿಯಿಂದಲೂ ಈ ಕೃತಿಗೆ ಅಗ್ರಸ್ಥಾನ ಲಭ್ಯವಾಗುತ್ತದೆ. ಹಾಡಿನ ಸಂಪ್ರದಾಯಗಳು, ಆ ಸಂಪ್ರದಾಯಗಳ ವಿವರಗಳು, ಹಾಡುಗಳು, ಹಾಡಿದವರ ವಿವರಗಳು ಇಲ್ಲಿವೆ. ಕೋಲಾಟ, ಮದುವೆ ಹಾಗೂ ದೇವರ ಪದಗಳು ಹೀಗೆ ಸಾಕಷ್ಟು ಹಾಡುಗಳ ವೈವಿಧ್ಯ ವಿದೆ. ಹಲವು ಪ್ರಸಿದ್ಧ ಲಾವಣಿಗಳು ಇಲ್ಲಿ ಮೊದಲ ಸಲ ಕಾಣಿಸಿಕೊಂಡಿವೆ. 500ಕ್ಕೂ ಹೆಚ್ಚು ಗಾದೆಗಳಿವೆ. ನೇರವಾದ ಸಂಭಾಷಣೆಗಳನ್ನು ಹಿಡಿದಿಡುವ ಮೂಲಕ ಜನಪದ ಭಾಷೆಯ ಸೊಗಸನ್ನು ಪರಿಚಯಿಸಲಾಗಿದೆ. ಮಕ್ಕಳ ಪದಗಳು ಹಾಗೂ ಮಕ್ಕಳ ಆಟಗಳ ಹಿನ್ನೆಲೆಯನ್ನುಳ್ಳ ಚರ್ಚೆಯಿದೆ. ಹಳ್ಳಿಯ ನ್ಯಾಯ ತೀರ್ಮಾನದ ವೈಖರಿ, ಅಲ್ಲಿನ ಮೇಳಗಳ ಸೊಗಸು, ಉತ್ಸವಗಳ, ಹಬ್ಬಗಳ ವೈಭವ, ವರ್ಷದ ಪ್ರತಿಯೊಂದು ತಿಂಗಳಿನಲ್ಲಿಯೂ ನಿಸರ್ಗದ ಬದಲಾವಣೆಯೊಡನೆ ಕಾಣಬರುವ ಬದುಕಿನ ರೀತಿನೀತಿಗಳು ಮುಂತಾದ ಹಳ್ಳಿಯ ಬದುಕಿನ ಸಮಸ್ತ ಮುಖಗಳನ್ನೂ ಏಕಸೂತ್ರದಲ್ಲಿ ಕೊಂಡೊಯ್ಯಲಾಗಿದೆ. ಕಲಾತ್ಮಕ ನಿರೂಪಣೆಯಿದೆ. ಕಲಾದೃಷ್ಟಿ ಹಾಗೂ ಶಾಸ್ರ್ತದೃಷ್ಟಿಗಳಿಂದ ಇದೊಂದು ಸಮಗ್ರ ಜಾನಪದ ದೃಷ್ಟಿಯುಳ್ಳ ಪ್ರಮುಖ ಗ್ರಂಥವೆನಿಸಿದೆ.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: