ಅರಿಷಡ್ವರ್ಗ
ಅರಿಷಡ್ವರ್ಗ : ಮನುಷ್ಯನ ಮನಶ್ಶಾಂತಿಯನ್ನು ಕದಡುವ, ಸ್ವಾಸ್ಥ್ಯಕ್ಕೆ ಪತಿಬಂಧಕರೂಪ ವಾಗಿರುವ ಭಾವನೆಗಳನ್ನು ಶತ್ರುಗಳು (ಅರಿ) ಎಂದು ಬಗೆದು, ಅವುಗಳನ್ನು ಆರು ಗುಂಪಾಗಿ ವರ್ಗೀಕರಣ ಮಾಡುತ್ತಾರೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯಇವೇ ಆ ಅರಿಷಡ್ವರ್ಗಗಳು. ಇವನ್ನು ಕಾಮಕ್ರೋಧ, ಲೋಭಮೋಹ, ಮದಮಾತ್ಸರ್ಯಎಂದು ಮತ್ತೆ ದೀರ್ಘವಾಗಿ ವಿಂಗಡಿಸುವ ಪದ್ಧತಿಯೂ ಉಂಟು. ಯೋಗಿಯಾದವ ಈ ಆರನ್ನೂ ಜಯಿಸಬೇಕು. ಇವು ಆರೂ ಅಂತಃಶತ್ರುಗಳೆಂದು ಕಲ್ಪನೆ. ಇವನ್ನು ಗೆದ್ದರೆ ಮನುಷ್ಯ ಲೋಕವನ್ನೇ ಗೆದ್ದಂತೆ; ಇವನ್ನು ಗೆಲ್ಲದೆ ಲೋಕವನ್ನೇ ಗೆದ್ದರೂ ಪರಾಜಿತನಾದಂತೆಯೇ. ಇವೆಲ್ಲವೂ ರಜೋಗುಣದಿಂದ ಉಂಟಾದುವೆಂದೂ ಇವನ್ನು ಧೃತಿಯಿಂದ ಗೆಲ್ಲಬೇಕೆಂದೂ ಅಧಿಕಾರವಿಧಿ ಹೇಳುತ್ತದೆ. ಚತುರ್ವಿಧ ಸಾಧನೆಗಳು ಈ ಅರಿಷಡ್ವರ್ಗಗಳನ್ನು ಜಯಿಸುವ ಸಲುವಾಗಿಯೇ ನಿಂತಿವೆ. (ನೋಡಿ- ಸಾಧನೆಗಳು -ಚತುರ್ವಿಧ) (ಎಸ್.ಕೆ . ಆರ್.)