ಅಪರಾಧ ಮತ್ತು ಅಪರಾಧಕಾಯಿದೆ

ಸಮಾಜದ ಹಿತರಕ್ಷಣೆಯ ಹೊಣೆ ಹೊತ್ತಿರುವ ಸರ್ಕಾರದ ದೃಷ್ಟಿಯಲ್ಲಿ ಅಪರಾಧವೆಂದರೇನು, ಅದನ್ನು ತಡೆಗಟ್ಟಲು ಯಾವ ಬಗೆಯ ಕಾಯಿದೆಗಳನ್ನು ಮಾಡಲಾಗಿದೆ ಎಂಬುದನ್ನು ಚಾರಿತ್ರಿಕವಾಗಿ ಇಲ್ಲಿ ಪರಿಶೀಲಿಸಲಾಗಿದೆ.

ಪರಿಚಯಸಂಪಾದಿಸಿ

ಸಮಾಜದ ಹಿತದೃಷ್ಟಿಯಿಂದ ಸಮಾಜ ಸಹಜೀವನದ ಅನೇಕ ತರದ ವ್ಯವಸ್ಥೆಗಳನ್ನು ಏರ್ಪಡಿಸುತ್ತದೆ. ಆ ವ್ಯವಸ್ಥೆಗಳನ್ನು ಊರ್ಜಿತಪಡುವುದಕ್ಕಾಗಿ ಬೇರೆ ಬೇರೆ ತರದ ನಿಯಮಗಳನ್ನು ರೂಪಿಸುತ್ತದೆ. ಅವುಗಳ ಪಾಲನೆಯ ಬಗ್ಗೆ ಒತ್ತಾಯಿಸುವಂತೆ ಕ್ರಮಗಳನ್ನು ಕಲ್ಪಿಸುತ್ತದೆ. ಸಮಾಜದ ಹಿತ, ಆರ್ಥಿಕ, ಧಾರ್ಮಿಕ, ನೈತಿಕ, ಸಾಂಪ್ರದಾಯಿಕ ಹಾಗೂ ಸಾಂಸ್ಕ್ರತಿಕ ನಿಯಮಗಳನ್ನು ಅವಲಂಬಿಸಿದೆ. ಇಂಥ ನಿಯಮಗಳನ್ನು ಪಾಲಿಸುವವನು ಸಮಾಜದ ಹಿತಕ್ಕೆ ಪೋಷಕನಾಗುತ್ತಾನೆ. ಆ ನಿಯಮಗಳನ್ನು ಕಡೆಗಣಿಸುವವನು ಆಯಾ ದೃಷ್ಟಿಯಿಂದ ಸಮಾಜಹಿತಕ್ಕೆ ಭಂಗತರುವ ಪ್ರಸಂಗವನ್ನು ತರುತ್ತಾನೆ. ನಿಯಮಗಳ ತಿರುಳು ವಿಧಿ, ನಿಷೇಧ. ಅಂದರೆ ಹೀಗೆ ಮಾಡಬೇಕು, ಹೀಗೆ ಮಾಡಬಾರದು ಎಂಬ ಅದೇಶ. ಇಂಥ ನಿಯಮಗಳನ್ನು ಉಲ್ಲಂಘಿಸುವವರೆಲ್ಲರೂ ಆಯಾ ದೃಷ್ಟಿಯಿಂದ (ಅಂದರೆ ಧಾರ್ಮಿಕ, ಆರ್ಥಿಕ, ನೈತಿಕ, ಸಂಪ್ರದಾಯಿಕ ಹಾಗೂ ಸಾಂಸ್ಕ್ರತಿಕ) ತಪ್ಪುಗಾರರಾಗುತ್ತಾರೆ. ಆದರೆ ಸರ್ಕಾರದ ಮಟ್ಟಿಗೆ ಇಂಥ ತಪ್ಪುಗಳು ಎಷ್ಟೇ ದೊಡ್ಡವಾದರೂ ಅಪರಾಧವೆಂದು ಎಣಿಸಲ್ಪಡುವುದಿಲ್ಲ.

ಇಂಥ ಎಲ್ಲ ತರದ ನಿಯಮಗಳ ಸಂಬಂಧದಲ್ಲಿಯೂ ಅವುಗಳನ್ನು ಉಲ್ಲಂಘಿಸುವುದನ್ನು ತಡೆಯುವುದಕ್ಕಾಗಿ ಸಮಾಜ ಬೇರೆ ಬೇರೆ ಸಾಧನಗಳನ್ನು ಉಪಯೋಗಿಸುತ್ತದೆ. ಅಪಹಾಸ್ಯ, ಸ್ಥಾನಮಾನಚ್ಯುತಿ, ಧಾರ್ಮಿಕ, ಸಾಮಾಜಿಕ ಇಲ್ಲವೆ ಸಾಂಘಿಕ ಬಹಿಷ್ಕಾರ ಇವೇ ಮೊದಲಾದವು ಇಂಥ ಸಾಧನಗಳು, ಆದರೆ ಯಾವುದೇ ನಿಯಮೋಲ್ಲಂಘನೆಗೆ ಇದಕ್ಕೂ ಬಲವಾದ ಒತ್ತಾಯವನ್ನು ಕಲ್ಪಿಸಬೇಕೆಂದು ತೋರಿದಾಗ ಅದರ ಪಾಲನೆಯ ಬಗೆಗೆ ಸಮಾಜದ ಘಟನಾತ್ಮಕ ಪ್ರತಿನಿಧಿಯಾದ ಸರ್ಕಾರ ಅವುಗಳಿಗೆ ವಿಶೇಷವಾದ ಸ್ಥಾನವನ್ನೂ ಕ್ಲುಪ್ತಸ್ವರೂಪವನ್ನೂ ಇತ್ತು ನಿರ್ದಿಷ್ಟಕ್ರಮಗಳನ್ನು ಸ್ಥಾಪಿಸುವುದು. ಹೀಗೆ ಕ್ರಮಗಳನ್ನು ರೂಪಿಸಿ ಸರ್ಕಾರ ಎತ್ತಿಹಿಡಿದ ನಿಯಮಗಳೇ ಕಾಯಿದೆಗಳು. ಆದ್ದರಿಂದ ಅಪರಾಧದ ಸ್ವರೂಪ ಮತ್ತು ವ್ಯಾಖ್ಯೆಯನ್ನು ಇಂಥ ಕಾಯಿದೆಗಳ ಚೌಕಟ್ಟಿನಲ್ಲಿ ಬರುವ ಕರ್ತವ್ಯಲೋಪ, ದುಷ್ಕ್ರತಿಗಳೊಳಗೇ ಶೋಧಿಸಬೇಕಲ್ಲದೆ, ಸಮಾಜದ ಉಳಿದ ನಿಯಮಗಳ ಉಲ್ಲಂಘನೆಯಿಂದಲ್ಲ. ಸಾಮಾಜಿಕ, ಆರ್ಥಿಕ, ಧಾರ್ಮಿಕ, ನೈತಿಕ ಇತ್ಯಾದಿ ನಿಯಮಗಳ ಪೈಕಿ ಯಾವ ಯಾವ ನಿಯಮಗಳು ಸರ್ಕಾರದ ದೃಷ್ಟಿಯಿಂದ ಮಹತ್ತ್ವದವೋ ಸರ್ಕಾರದ ಕಕ್ಷೆಯಲ್ಲಿರುವ ವಿವಿಧ ಕ್ರಮಗಳನ್ನು ಕೈಗೊಳ್ಳಲು ಯೋಗ್ಯವೋ ಅವುಗಳನ್ನು ಮಾತ್ರ ಸರ್ಕಾರ ಕಾಯಿದೆಯ ಚೌಕಟ್ಟಿನಲ್ಲಿ ಸೇರಿಸುತ್ತದೆ. ಇವುಗಳ ಉಲ್ಲಂಘನೆ ಮಾತ್ರ ಕಾಯಿದೆಯ ದೃಷ್ಟಿಯಿಂದ ತಪ್ಪೆಂದೆಣಿಸಲ್ಪಡುತ್ತದೆ.

ವಿವಿಧಗಳುಸಂಪಾದಿಸಿ

ಕಾಯಿದೆ ತನ್ನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡುವುದಕ್ಕಾಗಿ ನಿಯಮಗಳನ್ನು ಮೀರುವವರನ್ನೆಲ್ಲ ಒಂದಿಲ್ಲೊಂದು ತೊಂದರೆಗೆ ಗುರಿಪಡಿಸುತ್ತದೆ. ಆದರೆ ಅದು ಹೇರುವ ತೊಂದರೆಗಳೆಲ್ಲ ಅಷ್ಟೇ ನಿಷ್ಠುರವಾಗಿರುವುದಿಲ್ಲ. ಅವು ಮುಖ್ಯವಾಗಿ ಮೂರು ವಿಧದವು : 1 ವ್ಯರ್ಥೀಕರಣ; 2 ಪರಿಹರಣ (ಪರಿಹಾರಕ್ರಮ); 3 ದಂಡನ-ಇವು ಕಾಯಿದೆಯ ದೃಷ್ಟಿಯಿಂದ ಘಟಿಸಿದ ಬೇರೆ ಬೇರೆ ತಪ್ಪುಗಳಿಗೆ ನಿಯೋಜಿತವಾದ ತೊಂದರೆಗಳು. ಇವುಗಳಲ್ಲಿ ದಂಡನಕ್ಕೆ ಅರ್ಹವೆಂದು ವಿಧಿಸಲ್ಪಟ್ಟ ತಪ್ಪುಗಳು ಮಾತ್ರ ಅಪರಾಧಗಳು.

ವ್ಯರ್ಥೀಕರಣಸಂಪಾದಿಸಿ

ಯಾವುದೇ ಲೇಖದಿಂದ ಇಲ್ಲವೆ ವ್ಯವಹಾರದಿಂದ ಪಡೆಯಲಪೇಕ್ಷಿಸಿದ ಉದ್ದೇಶ ಆ ಲೇಖ ಇಲ್ಲವೆ ವ್ಯವಹಾರ ಕಾಯಿದೆಯಲ್ಲಿ ಹೇಳಿದ ರೀತಿಯಲ್ಲಿ ಇಲ್ಲದ್ದರಿಂದ ವ್ಯರ್ಥವಾಗುವಿಕೆ. ಕಾಯಿದೆಗೆ ವ್ಯತಿರಿಕ್ತವಾದ ಅರ್ಜಿ, ದಾವೆ, ಮೊದಲಾದವುಗಳನ್ನು, ವಿಚಾರಕ್ಕೆ ಸಹ ತೆಗೆದುಕೊಳ್ಳದೆ ತಿರಸ್ಕರಿಸಬಹುದು. ಸಹಿ, ಸಾಕ್ಷಿ, ಸ್ಟಾಂಪು, ಲೇಖ, ನೋಂದಣಿ-ಹೀಗೆ ಕಾಯಿದೆಯಲ್ಲಿ ಹೇಳಿದ ಈ ಮೊದಲಾದ ಅವಶ್ಯಕತೆಗಳಿಂದ ರಹಿತವಾದ ವಸ್ತು, ವ್ಯವಹಾರಗಳಿಗೆ ತದುದ್ದಿಷ್ಟ ಫಲಗಳು ದೊರೆಯದಂತೆ ವಿಧಿಸುವುದು ವ್ಯರ್ಥೀಕರಣದ ಉದಾಹರಣೆಗಳು. ಹೀಗೆ ಆಯಾ ಲೇಖಗಳ ಬಗೆಗಿನ ವ್ಯವಹಾರ, ದಸ್ತುಗಳ ಬಗೆಗೆ ಕೈಗೊಂಡ ಖರ್ಚು, ಶ್ರಮವನ್ನು ಹಾಳುಮಾಡಿ ಅದರಿಂದ ಪಡೆಯಬೇಕೆನ್ನುವ, ಪಡೆದಿರುವನೆಂದೆಣಿಸಿದ ಹಿತವನ್ನು ಅಲ್ಲಗಳೆದು, ಕಾಯಿದೆಯ ನಿಯಮವನ್ನು ಅನುಸರಿಸದವನನ್ನು ನಿರಾಶೆಗೊಳಿಸುವುದೇ ವ್ಯರ್ಥೀಕರಣದ ಉದ್ದೇಶ. ಇದು ತಪ್ಪಿತಸ್ಥನನ್ನು ಪರಿಹಾರ ತೆರುವ ಪ್ರಸಂಗಕ್ಕಾಗಲೀ ದಂಡನೆಗಾಗಲೀ ಗುರಿಪಡಿಸುವುದಿಲ್ಲ.

ಪರಿಹರಣಸಂಪಾದಿಸಿ

ಕಾಯಿದೆಯನ್ನು ಉಲ್ಲಂಘಿಸುವುದರಿಂದ ಬಾಧಿತನಾದವನಿಗೆ ಉಲ್ಲಂಘಿತನಿಂದ ಪರಿಹಾರವನ್ನೊದಗಿಸುವುದು. ಇಲ್ಲಿ ಪರಿಹಾರವೆಂದರೆ ಒಬ್ಬನ ಅಕಾರ್ಯ (ಮಿಸ್‍ಫೀಸೆನ್ಸ್), ದುಷ್ಕøತ್ಯ (ಮಾಲ್‍ಫೀಸೆನ್ಸ್), ಕರ್ತವ್ಯಚ್ಯುತಿ-ಅಜಾಗರೂಕತೆ (ನೆಗ್ಲಿಜೆನ್ಸ್)-ಇವುಗಳಿಂದಾದ ತೊಂದರೆ, ಹಾನಿ, ಕೇಡು, ಇವುಗಳ ನಿವಾರಣೆ. ಯಾವನೊಬ್ಬನ ಅಪಕೃತ್ಯದಿಂದ (ಟಾರ್ಟ್), ವಚನಭಂಗದಿಂದ (ಬ್ರೀಚ್ ಆಫ್ ಕಾಂಟ್ರ್ಯಾಕ್ಟ್), ಕರ್ತವ್ಯಚ್ಯುತಿಯಿಂದ (ಬ್ರೀಚ್ ಆಫ್ ಡ್ಯೂಟಿ) ಇನ್ನೊಬ್ಬನಿಗೆ ಶಾರೀರಿಕ, ಮಾನಸಿಕ, ಅಥವಾ ಸ್ವತ್ತಿನ ವಿಷಯದಲ್ಲಿ ಬಾಧೆ ತಗುಲಿದಾಗ, ಕೊಡಬೇಕಾದ ಸ್ವತ್ತನ್ನು ಕೊಡುವಂತೆ ಒತ್ತಾಯಿಸಿ, ಇಲ್ಲವೆ ಆದ ಹಾನಿಗೆ ಯೋಗ್ಯ ಪರಿಹಾರದ್ರವ್ಯವನ್ನು ಕೊಡುವಂತೆ ಮಾಡಿ, ತಪ್ಪಿತಸ್ಥ ಕೊಡುತ್ತಿರುವ ಕೀಟಲೆಯನ್ನು ಕೊಡದಂತೆ ಪ್ರತಿಷೇಧಿಸಿ, ಚ್ಯುತವಾದ ಕರ್ತವ್ಯವನ್ನು ಎಸಗುವಂತೆ ಒತ್ತಾಯಿಸಿ, ಅವನಿಂದಾದ ಬಾಧೆಯನ್ನು ಪರಿಹರಿಸುವುದೇ ಈ ಕ್ರಮಗಳ ಉದ್ದೇಶ. ಆದರೆ ಕಾಯಿದೆಯಲ್ಲಿ ಈ ತಪ್ಪುಗಳಿಗೆ ಅಪರಾಧ (ಕ್ರೈಮ್) ಎಂದು ಕರೆಯುವುದಿಲ್ಲ. ಆದರೆ ಕಳವು, ಕೊಲೆ, ದರೋಡೆ, ಮೋಸ ಮುಂತಾದ ಕೃತಿಗಳನ್ನು ಎಸಗಿದವನ ವಿರುದ್ಧ ತೆಗೆದುಕೊಳ್ಳುವ ಕ್ರಮಗಳಲ್ಲಿ ಅವನನ್ನು ದಂಡಿಸುವುದೇ ಪ್ರಧಾನೋದ್ದೇಶ. ಅಂಥ ಸಮಾಜಘಾತಕ ಕೃತಿಗಳಿಂದ ಸಮಾಜವನ್ನು ಸಂರಕ್ಷಿಸುವುದೇ ಕಾಯಿದೆಯ ಉದ್ದೇಶ. ಆದ್ದರಿಂದ ಇಂಥ ಕೃತಿಗಳನ್ನು ವಿಶೇಷ ತರದ ತಪ್ಪುಗಳೆಂದು ಗಣಿಸಿ ಕಳವು, ಸುಲಿಗೆಗಳಿಂದ ಬಾಧಿತನಾದ ವ್ಯಕ್ತಿ ಉಪೇಕ್ಷಿಸಿದರೂ ಕೊಲೆಯಾದವನ ಸಂಬಂಧಿಕರು ಕೊಲೆ ಗಡುಕನನ್ನು ಕ್ಷಮಿಸಿದರೂ ಕಳವಾದ ವಸ್ತುಗಳನ್ನು ಕಳ್ಳಮಾಲೀಕನಿಗೆ ಕೊಟ್ಟರೂ ಕೊಲೆಗಡುಕ ಕೊಲೆಯಾದವನ ಸಂಬಂಧಿಕರಿಗೆ ಬೇಕಷ್ಟು ಪರಿಹಾರ ಧನವನ್ನು ಕೊಟ್ಟರೂ ಸರ್ಕಾರ ತಾನಾಗಿಯೇ ಆ ಅಪರಾಧಿಯ ವಿರುದ್ಧ ಕ್ರಮವನ್ನು ಕೈಗೊಂಡು ಅವನನ್ನು ದಂಡಿಸುವುದು. ಪರಿಹಾರೋದ್ದೇಶಕ್ರಮ ಬಾಧಿತನಾದ ವಾದಿಯ ಇಚ್ಛಾವಲಂಬಿ. ಆತ ಪ್ರತಿವಾದಿಯೊಡನೆ ಯಾವುದೇ ರೀತಿಯಿಂದ ರಾಜಿ ಮಾಡಿಕೊಂಡು ವ್ಯವಹರಣೆಯನ್ನು ಕೊನೆಗೊಳಿಸಬಹುದು. ಆದರೆ ದಂಡೋದ್ದೇಶಕ ವ್ಯವಹರಣೆಗಳಲ್ಲಿ ಬಾಧಿತನಾದವ ಕೇವಲ ನಿವೇದಕ (ಇನ್‍ಫಾರ್ಮೆಂಟ್). ಸಮಾಜರಕ್ಷಣೆ ಮುಖ್ಯವಾದ್ದರಿಂದ ಸಮಾಜಪ್ರತಿನಿಧಿಯಾದ ಸರ್ಕಾರವೇ ವ್ಯವಹರಣೆಯ ಪ್ರವರ್ತಕ ಹಾಗೂ ನಿಯಂತ್ರಕ. ವ್ಯವಹರಣೆಯನ್ನು ಹೇಗೆ ಯಾವಾಗ ಕೊನೆಗೊಳಿಸುವುದು. ಅಪರಾಧಿಯನ್ನು ಸಮಾಜದ ಹಿತದ ದೃಷ್ಟಿಯಿಂದ ಎಷ್ಟರಮಟ್ಟಿಗೆ ಯಾವ ರೀತಿಯಲ್ಲಿ ದಂಡಿಸುವುದು-ಇದನ್ನೆಲ್ಲ ಸರ್ಕಾರ ಕಾಯಿದೆಯ ನಿಯಮಗಳ ಮೂಲಕ ಇಲ್ಲವೆ ತನ್ನಿಯುಕ್ತ ಅಧಿಕಾರಿಗಳ ಮೂಲಕ ನಿರ್ಣಯಿಸುವುದು. ಮರಣ, ಕಾರಾಗೃಹ ವಾಸ, ಅಂಗವಿಚ್ಛೇದ ಹಾಗೂ ಜುಲ್ಮಾನೆ ಇವೇ ಮೊದಲಾದವುಗಳು ದಂಡನದ ವಿವಿಧರೂಪಗಳು. ಈ ರೀತಿಗಳಲ್ಲಿ ಇವುಗಳಿಂದ ದಂಡಿತ ವಿಶೇಷತರದ ಹಿಂಸೆಗೆ ಬಲಿಯಾಗುತ್ತಾನೆ. ಆದುದರಿಂದ ದಂಡೋದ್ದೇಶಕಕ್ರಮಗಳು ಅತ್ಯಂತ ಉಗ್ರವಾಗಿವೆ. ಕಾರಣ, ಆರೋಪಿಯನ್ನು ಹಾಜರುಪಡಿಸುವ ವಿಷಯದಲ್ಲಿ, ಚೌಕಾಶಿಯ ವಿಷಯದಲ್ಲಿ, ಆರೋಪಿ ಪರಾರಿಯಾಗದಂತೆ ನೋಡಿಕೊಳ್ಳುವ ವಿಷಯದಲ್ಲಿ ಆರೋಪಿತನ ಹಿತಸಂರಕ್ಷಣೆಯ ವಿಷಯದಲ್ಲಿ, ಆರೋಪ ಸಿದ್ಧಪಡಿಸುವ ವಿಚಾರಗಳಲ್ಲಿ ನಿರಪರಾಧಿ ಶಿಕ್ಷೆಗೆ ಗುರಿಯಾಗಬಾರದೆಂದು ದಕ್ಷತೆ ವಹಿಸುವಲ್ಲಿ ಹಾಗೂ ನ್ಯಾಯವಿತರಣೆಯ ಸೂಕ್ಷ್ಮೀಕರಣದ ದೃಷ್ಟಿಯಿಂದಲೂ ಈ ಅಪರಾಧಸಂಬಂಧದ ಕಾಯಿದೆ ಅಪರಾಧೇತರ ಕಾಯಿದೆಗಿಂತ ತೀರ ವಿಭಿನ್ನವಾಗಿದೆ. ಹೀಗೆ ದಂಡನದಲ್ಲಿ ಪರ್ಯವಸಾನ ಹೊಂದುವುದು ಅಪರಾಧ ಲಕ್ಷಣ; ಪರಿಹಾರಕ್ರಮಗಳಲ್ಲಿ ಪರ್ಯವಸಾನ ಹೊಂದುವುದು ಅಪರಾಧೇತರ ತಪ್ಪಿನ ಲಕ್ಷಣ. ಈ ಭೇದ ಕೈಗೊಳ್ಳುವ ಕ್ರಮವನ್ನು ಸೂಚಿಸುವುದೇ ಹೊರತು ಕ್ರಮಗಳನ್ನು ಕೈಕೊಳ್ಳುವುದಕ್ಕಿಂತ ಮೊದಲು ಯಾವ ತಪ್ಪು ಅಪರಾಧ, ಯಾವ ತಪ್ಪು ಅಪರಾಧ ಯಾವ ತಪ್ಪು ಅಪರಾಧೇತರ ಎಂದು ತಿಳಿಯಲು ಸಾಧನವನ್ನು ಸೂಚಿಸುವುದಿಲ್ಲ. ಹಾಗಾದರೆ ಈ ಎರಡು ತರದ ತಪ್ಪುಗಳ ನೈಜಸ್ವರೂಪದಲ್ಲಿ ಭೇದವೇನು? ಯಾವ ತಪ್ಪು ಅಪರಾಧವೆಂದು ಮೊದಲು ನಿರ್ಣಯಿಸದೆ ಅದಕ್ಕೆ, ದಂಡನಕ್ರಮ ಅಥವಾ ಪರಿಹಾರ ಕ್ರಮಗಳಲ್ಲಿ ಯಾವುದು ಯೋಗ್ಯವೆಂದು ಹೇಗೆ ನಿರ್ಣಯಿಸುವುದು? ಕಾಯಿದೆಯಂತೆ ಅಪರಾಧವೆನಿಸಿಕೊಳ್ಳುವ ನಡತೆಯ ಸ್ವಭಾವಲಕ್ಷಣಗಳೇನು ? ಈ ಪ್ರಶ್ನೆಗಳಿಗೆ ನ್ಯಾಯಶಾಸ್ತ್ರದೃಷ್ಟಿಯಿಂದ ವ್ಯಾಪಕವಾದ ಸಮಾಧಾನಕರವಾದ ಉತ್ತರವನ್ನು ಕೊಡುವುದು ಕಠಿಣ. ಆಯಾ ದೇಶದ ಕಾಯಿದೆಯ ವ್ಯಾಖ್ಯಾವಚನದ ಆಧಾರದ ಮೇಲೆ ಉತ್ತರವನ್ನು ಸೂಚಿಸಬಹುದಾದರೂ ಸರ್ವಸಮ್ಮತವಾದ ಲಕ್ಷಣಗಳನ್ನು ಸೂಚಿಸುವುದು ಶಾಸ್ತ್ರದ ಪರಿಪಾಟಿಯೆಂದು ಒಪ್ಪಿಕೊಂಡರೆ ಅಪರಾಧತ್ವದ ನೈಜಸ್ವರೂಪದ ಲಕ್ಷಣಗಳನ್ನು ಹೇಳುವುದು ಕಠಿಣ. ಆ ಕಾರಣದಿಂದ ಕೆಲವು ಸಾರಿ ಮೇಲೆ ಸೂಚಿಸಿದಂತೆ ದಂಡನಕ್ರಮವನ್ನು ನಿರ್ದೇಶಿಸಿದ ಪ್ರತಿಷಿದ್ಧಕೃತಿಗಳೆಲ್ಲ ಅಪರಾಧಗಳು ಎಂದು ಹೇಳಬೇಕಾಗುತ್ತದೆ.

ಉದ್ದೇಶಸಂಪಾದಿಸಿ

ಯಾವುದೇ ಅಪಕೃತಿಯ ಅಪರಾಧತ್ವದ ಗುಣ ಸಹಜಸ್ಫೂರ್ತಿಯಿಂದ ತಿಳಿಯುವಂಥದಲ್ಲ. ಆ ಕೃತಿ ದಂಡನ ಕ್ರಮನಿರ್ದೇಶನದಿಂದ ಪ್ರತಿಷೇಧಿಸಲ್ಪಟ್ಟಿದೆಯೋ ಎಂಬ ಅಳತೆಗೋಲನ್ನು ಬಿಟ್ಟರೆ ಇನ್ನಾವುದರಿಂದಲೂ ಅರಿಯಲು ಸಾಧ್ಯವಿಲ್ಲ. ಅಪರಾಧ ಕಾಯಿದೆಯ ಉದ್ದೇಶ ಸಾಮಾನ್ಯ ಮನುಷ್ಯನಿಗೆ ತನ್ನ ನಡತೆಯ ವಿಷಯದಲ್ಲಿ ಜಾಗರೂಕತೆಯನ್ನುಂಟು ಮಾಡುವುದಾದರೆ, ಯಾವ ಯಾವ ಕೃತಿಯಿಂದ ದಂಡನೆಕ್ಕೊಳಪಡುವನೆಂದು ಎಚ್ಚರಿಸಿ ಅವನನ್ನು ಅಂಥ ಕೃತಿಗಳಿಂದ ದೂರವಿರುವಂತೆ ಮಾಡುವುದಾದರೆ, ಕಾಯಿದೆಯ ಪಂಡಿತರಿಗೆ ಸಹ ಸಂಶಯವನ್ನುಂಟುಮಾಡುವ ಕಾಯಿದೆಯ ವ್ಯಾಖ್ಯೆ, ವಿವರಣೆ, ಅನುಮಾನಗಳಿಂದ 'ಕಾಯಿದೆಯ ಯಾವ ಕೃತಿಗಳಿಗೆ ದಂಡನವನ್ನು ನಿರೂಪಿಸಿದೆ ಎಂದು ಅರಿತು ನೋಡು ಎಂಬ ಮಾರ್ಗದರ್ಶನ ತೀರ ಅಸಮಂಜಸವಾದೀತು. ಸಾಧಾರಣ ಬುದ್ಧಿಗೆ ನಿಲುಕುವಂತೆ ಅಪರಾಧದ ಸ್ವರೂಪ, ಲಕ್ಷಣವನ್ನು ತಿಳಿಸಬೇಕೆಂಬ ಜನಸಾಮಾನ್ಯರ ಹಂಬಲ ಸಹಜ ಹಾಗೂ ಸಮಂಜಸ. ಆದರೆ ಐತಿಹಾಸಿಕ ಕಾರಣಗಳ ಮೂಲಕವೂ ತಾರ್ಕಿಕ ದೃಷ್ಟಿಯಿಂದಲೂ ಈ ಪ್ರಶ್ನೆ ಜಟಿಲವೂ ವಿವಾದಾಸ್ಪದವೂ ಆಗಿಯೇ ನಿಂತಿದೆ.

ಒಂದೇ ಕೃತಿ ಎರಡು ರೀತಿಯ ಅಪರಾಧವೂ ಆಗಬಹುದು. ನನ್ನ ಮನೆಯನ್ನು ಒಬ್ಬ ಸುಟ್ಟರೆ, ಆ ಲುಕ್ಸಾನು ತುಂಬಿಕೊಡಲು ನಾನು ಪರಿಹಾರಕ್ರಮವನ್ನು ಕೈಕೊಳ್ಳಬಹುದು. ಇಲ್ಲವೆ ತಪ್ಪಿತಸ್ಥನನ್ನು ದಂಡಿಸಲು ಸರ್ಕಾರ ಅಪರಾಧಕಾಯಿದೆ ಕ್ರಮಗಳನ್ನು ಕೈಕೊಳ್ಳಬಹುದು. ಇದರಂತೆ ಮಾನಹಾನಿ, ಕಳವು, ಮೋಸ, ಘಾಸಿ, ಹಣದ, ಚರಸ್ವತ್ತಿನ ದುರುಪಯೋಗ, ಮನೆ, ಭೂಮಿಗಳ ಅತಿಕ್ರಮಣ-ಇವೆಲ್ಲ ಅಂಥ ಸಮಸ್ಯೆಗಳೇ ಆಗಿವೆ. ಅಲ್ಲದೆ ಭಾರತದ ಸರ್ವಸಾಧಾರಣ ಅಪರಾಧಕಾಯಿದೆಯಲ್ಲಿ (ಪೀನಲ್ ಕೋಡ್) ಕೆಲವು ತರದ ಕರಾರುಭಂಗಕ್ಕೆ ಸಹ ಅಪರಾಧದ ರೂಪವನ್ನು ಕೊಡಲಾಗಿದೆ. ಹೀಗಿದ್ದಾಗ ನೈಜ ಸ್ವರೂಪದಲ್ಲಿಯ ಭೇದಗಳನ್ನು ಕಾಣುವುದು ಹೇಗೆ ? ಇದಕ್ಕೆ ಸಮಾಧಾನ ಕಾಣುವುದು ಸುಲಭ. ಒಂದೇ ಕೃತಿಯನ್ನು ಬೇರೆ ಬೇರೆ ದೃಷ್ಟಿಯಿಂದ ನೋಡಿದಾಗ ಬೇರೆ ಬೇರೆ ಲಕ್ಷಣಗಳು ಕಾಣುತ್ತವೆ. ಉದಾಹರಣೆಗಾಗಿ ಯಾವುದೇ ಕಳವು ಅಥವಾ ಮೋಸದ ವಿಷಯವನ್ನು ಪರಿಶೀಲಿಸಿದರೆ ಅದು ಒಬ್ಬ ವ್ಯಕ್ತಿಗೆ ಸಂಬಂಧಿಸಿದಂತೆ ಆ ಸಮಾಜಕ್ಕೂ ಸಂಬಂಧಿಸಿದ್ದಾಗುತ್ತದೆ. ಅದನ್ನು-ವ್ಯಕ್ತಿಗಾದ ಹಾನಿಯನ್ನು ತುಂಬುವ ಅಥವಾ ಸಮಾಜಕ್ಕಿರುವ ಭೀತಿಯನ್ನು ನೀಗಿಸುವ-ಹೀಗೆ ಎರಡು ದೃಷ್ಟಿಯಿಂದ ಪರಿಶೀಲಿಸಬಹುದು.

ಐತಿಹಾಸಿಕವಾಗಿ ವಿಮರ್ಶಿಸಿದಾಗ, ಅಪರಾಧ ಹಾಗೂ ಅಪಕೃತ್ಯಗಳ ನಡುವಣ ಭೇದ ತೀರ ಮಸುಕು ಮಸುಕಾಗಿ ಕಂಡುಬರುತ್ತದೆಯಾದರೂ ವೈಯಕ್ತಿಕ ಹಾನಿಯನ್ನು ಮೀರಿ ಸಮಾಜಕ್ಕೆ ಅನ್ಯಾಯವನ್ನು ಬಗೆದಿರುವ ತಪ್ಪುಗಳ ಕಲ್ಪನೆ ಬುನಾದಿ ಜನಾಂಗಗಳಿಗೂ ಇತ್ತೆಂದು ಹೇಳಬಹುದು. ರಾಷ್ಟ್ರಕ್ಕೆ, ಸಮಾಜಕ್ಕೆ ಎಸಗಿದ ತಪ್ಪುಗಳ ವಿಷಯಗಳಲ್ಲಿ ಸಮಾಜವೇ ಆ ವ್ಯಕ್ತಿಯನ್ನು ಆರೋಪಿಸಿ ಸಭೆಯಲ್ಲಿ ಅವನಿಗೆ ಕೊಡಬೇಕಾದ ಶಿಕ್ಷೆಯನ್ನು ರೂಪಿಸುವ ತುರ್ತು ಕಾಯಿದೆಯನ್ನು ಹೊರಡಿಸಿ ಅವನನ್ನು ಮರಣ, ಅಂಗವಿಚ್ಛೇದ ಮೊದಲಾದ ಶಿಕ್ಷೆಗೆ ಗುರಿಪಡಿಸಿದ. ಇಲ್ಲವೆ ಸಂಪೂರ್ಣ ಸಮಾಜ ಬಾಹಿರನೆಂದು ಸಾರಿ ತಪ್ಪಿತಸ್ಥನನ್ನು ಸಮಾಜದಿಂದ ದೂರೀಕರಿಸಿದ ನಿದರ್ಶನಗಳಿವೆ. ಇಂದು ಘೋರ ಅಪರಾಧವೆಂದೆನಿಸಿರುವ ಕೊಲೆ, ಅಂಗವಿಚ್ಛೇದನಾದಿಗಳು ಅಂದು ವ್ಯಕ್ತಿಗೆ ಅಥವಾ ಆ ಕುಟುಂಬಕ್ಕೆ ಸಂಬಂಧಿಸಿದ ಹಾನಿ ಅಥವಾ ಘಾತವೆಂದು ಎಣಿಸಲ್ಪಟ್ಟು ಅವನ ಸಂಬಂಧಿಕರ ಅಥವಾ ಮಿತ್ರರ ಸೇಡು, ರೋಷಕ್ಕೆ ಕಾರಣವಾಗುತ್ತಿತ್ತೇ ಹೊರತು ಇಡೀ ಸಮಾಜವೇ ದಂಡಿಸಬೇಕಾದ ದ್ರೋಹವೆಂದು ಎಣಿಸಲ್ಪಡುತ್ತಿದ್ದಿಲ್ಲ. ಮುಂದೆ ಈ ತರದ ಹಿಂಸೆ, ಪ್ರತಿಹಿಂಸೆಗಳನ್ನು ನಿಯಂತ್ರಿಸುವುದು ಅವಶ್ಯವೆಂದು ತೋರಿದಾಗ ಸಾಮಾಜಿಕ ನಿಯಂತ್ರಣದ ಮೊದಲ ಹೆಜ್ಜೆಯಾಗಿ ಪ್ರತೀಕಾರದ ಪ್ರಮಾಣವನ್ನು ನಿಶ್ಚಯಿಸುವ ಕಾಯಿದೆಗಳು ರೂಪುಗೊಳ್ಳಹತ್ತಿದುವು. ಅಂದರೆ ಒಂದು ಜೀವಕ್ಕೆ ಮುಖ್ಯವಾಗಿ ಮತ್ತೊಂದು ಜೀವ, ದಂತ ಭಂಗಕ್ಕೆ ದಂತಭಂಗ, ಅಂಗವಿಚ್ಛೇದನಕ್ಕೆ ವೈರಿಯ ಅಥವಾ ವೈರಿಯ ಕುಟುಂಬದ ಅದೇ ಅಂಗವಿಚ್ಛೇದನ-ಹೀಗೆ ಮುಯ್ಯನ್ನು ಸೀಮಿತಗೊಳಿಸುವ ಕಾಯಿದೆಗಳು ಉದ್ಭವಿಸಿದುವು. ಇದರ ಅರ್ಥ ಒಂದರ ಪ್ರತಿಯಾಗಿ ಮತ್ತೊಂದನ್ನು ಕೊಳ್ಳಲೇಬೇಕೆಂದಲ್ಲ, ರೋಷಾವೇಶದಿಂದ ಒಂದಕ್ಕೂ ಹೆಚ್ಚನ್ನು ಕೊಳ್ಳಬಾರದು ಎಂದು. ರೋಷದ ಉಗ್ರತೆಯನ್ನು ಮೊದಲು ನಿಯಂತ್ರಿಸಿ, ಅನಂತರ ಉಂಟಾದ ಘಾಸಿಗೆ, ಅಥವಾ ಜೀವಹಾನಿಗೆ ಪ್ರತಿಯಾಗಿ ಧನಸ್ವೀಕಾರದ ಆಮಿಷವನ್ನು ಬಾಧಿತನಿಗೆ ಅಥವಾ ಅವನ ಕುಟುಂಬಕ್ಕೆ ತೋರಿಸಿ ಸಮಾಜದ ಶಾಂತಿಯನ್ನು ಸ್ಥಾಪಿಸುವ ಪ್ರಯತ್ನ ನಡೆಯಿತು. ಹೀಗೆ ಮಾಡುವಾಗ ಪ್ರತಿರೂಪವಾಗಿ ದೊರೆಯುವ ಧನದ ಅಥವಾ ಇತರ ಪರಿಹಾರಗಳ ಬಗ್ಗೆ ವಿವಾದವುಂಟಾಗಿ ಮತ್ತೆ ಅಶಾಂತಿಯಾಗಬಾರದೆಂದು ಘಾಸಿಗೊಂಡ ಪ್ರತಿಯೊಂದು ಅಂಗಕ್ಕೂ ಜೀವಕ್ಕೂ ಘಾಸಿಹೊಂದಿದವನ ಕುಟುಂಬದ ಸ್ಥಾನಮಾನವನ್ನು ಅನುಲಕ್ಷಿಸಿ ಬೆಲೆಯ ಒಂದು ಕೋಷ್ಟಕ ಏರ್ಪಟ್ಟಿತು. ಹೀಗೆ ಮಹಾಪರಾಧಗಳ ಗುಂಪಿಗೆ ಸೇರಬೇಕಾದ ಅನೇಕ ಕೃತಿಗಳು ಆ ಕಾಲದಲ್ಲಿ ಕೇವಲ ಧನಪ್ರಧಾನದಿಂದಲೇ ಪರಿಹರಿಸಿಕೊಳ್ಳಬಹುದಾದ ತಪ್ಪುಗಳ ಶ್ರೇಣಿಯಲ್ಲಿ ಸೇರುತ್ತಿದ್ದುವು. ಆದರೆ ಇಂಥ ಬುನಾದಿಯ ಜನಾಂಗಗಳಲ್ಲಿ ಸಹ ಪ್ರತಿಷಿದ್ಧ ಸ್ತ್ರೀಗಮನ ಚಾಟಕ ಕುಲದೇವತೆಗಳ ಪ್ರೀತ್ಯರ್ಥವಾಗಿ ಎಸಗಿದ ಮಂತ್ರತಂತ್ರಗಳಲ್ಲಿ ಲೋಪ ತರುವುದು, ಆ ಜನಾಂಗದ ಗುಪ್ತರಕ್ಷಾಮಂತ್ರವನ್ನು ವೈರಿಜನಾಂಗಕ್ಕೆ ತಿಳಿಸುವುದು-- ಇವೇ ಮೊದಲಾದುವುಗಳು ಸಮಾಜಘಾತುಕ ಕೃತಿಗಳೆಂದು ಎಣಿಸಲ್ಪಟ್ಟು, ಈ ಕೃತಿಗೆ ಕಾರಣನಾದವನನ್ನು ಸಮಾಜವೇ ದೂರೀಕರಿಸುತ್ತಿತ್ತು, ಇಲ್ಲವೆ ಕೊಲ್ಲುತ್ತಿತ್ತು. ಹೀಗೆ ಮಾಡುವಲ್ಲಿ ಶಿಕ್ಷೆಯ ಉದ್ದೇಶಕ್ಕಿಂತ ದೇವತೆಯನ್ನು ಸಾಂತ್ವನಗೊಳಿಸುವ ಭಾವವೇ ಪ್ರಧಾನವಾಗಿರುತ್ತಿತ್ತು, ಒಮ್ಮೊಮ್ಮೆ ಯಾವುದೇ ಪ್ರಾಣಿ ಅಥವಾ ಯಾವುದೇ ವಸ್ತು ಒಬ್ಬನ ಮರಣಕ್ಕೆ ಕಾರಣವಾದರೆ, ಅಂದರೆ, ಹೋಗಿ ಒಬ್ಬನನ್ನು ಇರಿದುಕೊಂದರೆ, ಮರ ಒಬ್ಬನ ಮೇಲೆ ಬಿದ್ದರೆ, ಅಕಸ್ಮಾತ್ತಾಗಿ ಗಾಡಿಯ ಚಕ್ರ ಮೇಲೆ ಹಾಯ್ದು ಆತ ಸತ್ತರೆ, ಕುದಿಯುವ ಹಾಲಿನ ಕೊಪ್ಪರಿಗೆಯಲ್ಲಿ ಶಿಶು ಬಿದ್ದು ಸತ್ತರೆ, ಆ ಪ್ರಾಣಿ ಅಥವಾ ಆ ವಸ್ತು ಯಾವುದೋ ವೈರಿಯ ಪಿಶಾಚಗ್ರಸ್ತವಾಗಿದ್ದರಿಂದಲೇ ಅಂಥ ಕೇಡನ್ನೆಸಗಿತೆಂಬ ಭಾವನೆಯಿಂದ ಅದರ ಮೇಲೆ ಮುಯ್ಯಿತೀರಿಸಿಕೊಳ್ಳುವುದಕ್ಕೆ ಆ ವಸ್ತುವನ್ನು ಘಾಸಿಹೊಂದಿದವನ ಕುಟುಂಬದವರಿಗೆ ಇಲ್ಲವೆ ಇಗರ್ಜಿಗೆ, ಅಥವಾ ದೇವಸ್ಥಾನ ಮೊದಲಾದುವುಗಳಿಗೆ ಅದರ ಕಳಂಕವನ್ನೋ ಅದರಲ್ಲಿ ನೆಲೆಸಿದ ದುಷ್ಟ ಪಿಶಾಚಿಯನ್ನೋ ಹೋಗಲಾಡಿಸುವುದಕ್ಕಾಗಿ ಕೊಡುವುದು ಕಂಡುಬರುತ್ತಿತ್ತು. ಮುಂದೆ ಅರಸೊತ್ತಿಗೆ ಪ್ರಬಲವಾದಂತೆ ಅರಸನೇ ಭೂಮಿಯಲ್ಲಿ ದೇವತಾಸ್ವರೂಪಿ ಸರ್ವಧರ್ಮಸ್ವಾಮಿ ಎಂಬ ತತ್ತ್ವದ ಮೇಲೆ ಅವುಗಳನ್ನು ಅರಸನ ವಶಕ್ಕೆ ಕೊಡುವ ಪದ್ಧತಿ ಬಂತು. ಇವೆಲ್ಲ ಅಪರಾಧಿಯ ಸರ್ವಸ್ವವೂ ನೃಪತಿಯ ಚಿತ್ತವನ್ನವಲಂಬಿಸಿದೆ-ಎನ್ನುವ ಮಧ್ಯಯುಗದ ತತ್ತ್ವದ ಬೀಜಾಂಕುರಗಳು. ವ್ಯಕ್ತಿಘಾತಕ ತಪ್ಪುಗಳು, ಸಮಾಜಘಾತಕ ತಪ್ಪುಗಳು ಎಂಬ ವರ್ಗೀಕರಣದ ಮೂಲವನ್ನು ಮೇಲೆ ಹೇಳಿದವುಗಳಲ್ಲಿ ಕಾಣಬಹುದು. ಇನ್ನೊಂದು ರೀತಿಯಲ್ಲಿ ತಪ್ಪುಗಾರ ರಾಜದಂಡನೆಗೆ ಕಾರಣನಾಗುತ್ತಿದ್ದ. ಇಂಗ್ಲೆಂಡಿನಲ್ಲಿ ಹಾಗೂ ಬೇರೆ ಕೆಲವು ದೇಶಗಳಲ್ಲಿ ಯಾವುದೇ ವ್ಯಕ್ತಿ ಇನ್ನೊಬ್ಬನನ್ನು ಗಾಯಗೊಳಿಸಿದಾಗ, ಇಲ್ಲವೆ ಕೊಂದಾಗ ಆ ಸ್ಥಳದ ಸ್ವಾಮಿಯ ಗೌರವಕ್ಕೆ ಭಂಗತಂದನೆಂಬ ಕಾರಣದಿಂದ ಸ್ಥಾನಸ್ವಾಮಿಯಾದ ಸರದಾರನಿಗೆ ಇಲ್ಲವೆ ರಾಜನಿಗೆ ತಪ್ಪುದಂಡ ಕೊಡಬೇಕೆಂಬ ವಾಡಿಕೆಯಾಯಿತು. ಮುಂದೆ ರಾಜನ ಅಧಿಕಾರ ಪ್ರಬಲಿಸಿದಂತೆ ಈ ತಪ್ಪುದಂಡ ಕೇವಲ ಅರಸನಿಗೇ ಸೇರುವಂತಾಯಿತು. ಆದರೆ ಎಷ್ಟೋ ಸಾರಿ ಗಾಯವನ್ನೊ ಸಾವನ್ನೊ ಉಂಟುಮಾಡಿದ ನತದೃಷ್ಟ ವ್ಯಕ್ತಿಗೆ ಹಿಂದೆ ಹೇಳಿದ ಪರಿಹಾರಧನವನ್ನೂ ದಂಡವನ್ನೂ ತೆರಲು ಸಾಧ್ಯವಾಗದೆ ಇದ್ದಾಗ ಅವನ ದೇಹ, ಜೀವಸಹಿತ ಸರ್ವ ಹಕ್ಕುಗಳೂ ಅರಸನಿಗೆ ಸೇರುತ್ತಿದ್ದುವು. ಅವನನ್ನು ಕಾಯುವುದು, ಕೊಲ್ಲುವುದು, ಅಂಗವಿಚ್ಛೇದ ಮಾಡುವುದು ಇಲ್ಲವೆ ಗುಲಾಮನಾಗಿ ಮಾರುವುದು ಇವೆಲ್ಲ ಅರಸನ ಚಿತ್ತದಂತೆ ನಡೆಯುತ್ತಿದ್ದುವು. ಹೀಗೆ ಒಂದೇ ತಪ್ಪಿಗೆ ವಿವಿಧ ದಂಡನೆಗಳು ಸಾಧ್ಯವಾದ್ದರಿಂದ ಅಪರಾಧ, ಅಪಕೃತ್ಯಕಾಯಿದೆಗಳು ಹಾಸು ಹೊಕ್ಕಾಗಿ ಹೆಣೆದಿದ್ದುದರಿಂದ ಅವುಗಳ ಪೃಥಕ್ಕರಣ ಅಶಕ್ಯವಾಗಿತ್ತು. ಅಲ್ಲದೆ ಸಂಘಟಿಸಿದ ಕೇಡಿನ ವಿಷಯವೇ ಪ್ರಧಾನವಾಗಿ ಆ ಕೇಡು ದೌರ್ಜನ್ಯಮೂಲವೋ ಅಥವಾ ಅಜ್ಞಾನದಿಂದ ಘಟಿಸಿದ ಆಕಸ್ಮಿಕವೋ ಎಂಬ ವಿಮರ್ಶೆ ವಿವೇಕಗಳು ಕಂಡು ಬರುತ್ತಿದ್ದಿಲ್ಲ. ಅಜ್ಞಾನದಿಂದ ಕೇಡೆಸಗಿದವನೂ ಪರಿಹಾರಕ ಧನ ತೆರಲಿಕ್ಕೂ ತಪ್ಪು ದಂಡಕ್ಕೂ ಹೊಣೆಗಾರನಾಗಿದ್ದರಿಂದ ಅದು ಅಶಕ್ಯವಾದಾಗ ಮರಣ, ಅಂಗವಿಚ್ಛೇದಾದಿ ರಾಜಕೃತದಂಡನೆಗೂ ಪಾತ್ರನಾಗುತ್ತಿದ್ದ. ಇಂಥ ನಿದರ್ಶನಗಳು ಆಂಗ್ಲ, ಐರೋಪ್ಯ ದೇಶಗಳ ಪ್ರಾಚೀನಕಾಯಿದೆಗಳಲ್ಲಿ ವಿಪುಲವಾಗಿ ದೊರೆಯುತ್ತವೆ.

ಹಿಂದೂಧರ್ಮಶಾಸ್ತ್ರಗಳಲ್ಲಿ ಇತಿಹಾಸಪೂರ್ವಯುಗದ ಬಗ್ಗೆ ಹೇಳಲು ಸಾಧ್ಯವಾಗದಿದ್ದರೂ ಧರ್ಮಶಾಸ್ತ್ರಗಳ ಕಾಲದಲ್ಲಿ ಇಂದಿನ ವಿಚಾರಕ್ಕೆ ಕೆಲಮಟ್ಟಿಗೆ ಸರಿ ದೂಗುವಂಥ ಅಪರಾಧಮೀಮಾಂಸೆ ತೋರಿಬರುತ್ತದೆ.

ಪರಿಯಮಸಂಪಾದಿಸಿ

ರಾಜನ ಆಸ್ಥಾನದಲ್ಲಿ ಅಥವಾ ರಾಜನಿಂದ ನಿಯುಕ್ತರಾದ ಅಧಿಕಾರಿಗಳಿಂದ ನಿರ್ಣಯವಾಗಬೇಕಾದ ವಿವಾದಗಳು ವ್ಯವಹಾರವೆನಿಸಿಕೊಂಡಿದ್ದುವು; ಈಗ ಅಪರಾಧವೆನಿಸಿರುವ ತಪ್ಪುಗಳನ್ನು ಶಾಸ್ತ್ರಕಾರರು ಸಾಹಸವೆಂದು ಕರೆಯುತ್ತಿದ್ದರು. ದುಷ್ಟನಿಗ್ರಹ ರಾಜಧರ್ಮದಲ್ಲಿನ ಅತ್ಯಂತ ಮುಖ್ಯ ಕರ್ತವ್ಯ. ಸ್ತೇಯ, ಮನುಷ್ಯಮಾರಣ, ಪರದಾರಾಭಿಮರ್ಶನವೇ ಮೊದಲಾದುವು ಮೊದಲ ತರಗತಿಯ ಸಾಹಸಗಳು. ಇವುಗಳನ್ನು ಎಸಗಿದವನನ್ನು ಜುಲ್ಮಾನೆ, ಶಾರೀರಿಕ್ಲೇಶ, ಮರಣ ಮೊದಲಾದ ಶಿಕ್ಷೆಗಳಿಗೆ ಒಳಪಡಿಸುವುದು ಅರಸನ ಕರ್ತವ್ಯ. ವ್ಯವಹಾರಗಳಲ್ಲಿ, ವಾದಿಕೃತ, ಸ್ವಪಾಶ್ರಯ ಎಂಬ ಭೇದವನ್ನು ಕಲ್ಪಿಸಿದ್ದರು. ಋಣ, ದಾನ ಮೊದಲಾದ ಹಣದ ಸ್ವತ್ತಿನ ವ್ಯವಹಾರಗಳಲ್ಲಿ ಪಕ್ಷಗಾರರು ಇಷ್ಟಬಂದಂತೆ ತಮ್ಮ ತಮ್ಮೊಳಗೆ ರಾಜಿಮಾಡಿಕೊಳ್ಳಬಹುದು. ಆದರೆ ಸಾಹಸಕಾರಿ ಇತರಪಕ್ಷದೊಡನೆ ರಾಜಿಮಾಡಿಕೊಂಡರೂ ಅರಸು ಅವನನ್ನು ಶಿಕ್ಷಿಸಲೇಬೇಕು. ಕೆಲವು ಸಾಹಸಗಳ ವಿಷಯದಲ್ಲಿ ಯಾವುದೇ ವ್ಯಕ್ತಿ ಅರಸನಿಗೆ ಅಥವಾ ರಾಜಭಟರ ಕಡೆಗೆ ದೂರು ಕೊಡದಿದ್ದರೂ ಅರಸನೆ ತನ್ನ ಭಟರ, ಚಾರರ ಮುಖಾಂತರ ಚೌಕಾಶಿಮಾಡಿ ದುಷ್ಟರನ್ನು ಶಿಕ್ಷಿಸಿ ಧರ್ಮವನ್ನು ಎತ್ತಿ ಹಿಡಿಯಬೇಕು. ಈ ಮೊದಲಾದ ವಚನಗಳಿಂದ ಹಿಂದೂಧರ್ಮಶಾಸ್ತ್ರಗಳ ಕಾಲದಲ್ಲಿ ಇಂದಿನಂತೆ ಅಪರಾಧ ಮತ್ತು ಅಪರಾಧೇತರ ಎಂಬ ಭೇದ ಸ್ಫುಟವಾಗಿತ್ತೆಂದು ಕಂಡುಬರುತ್ತದೆ. ದಂಡನ ದುಷ್ಟನಿಗ್ರಹದ ಅಂಗವಾದದ್ದು, ದೌರ್ಜನ್ಯ (ದುರ್ಬುದ್ಧಿ) ಇಲ್ಲದೆ ಘಟಿಸಿದ ಅಕೃತ್ಯ, ಕೇಡುಗಳಿಗೆ ದಂಡವಿಲ್ಲ ಎಂಬ ಉಕ್ತಿಗಳು ಬಹಳೆಡೆಯಲ್ಲಿ ಕಂಡುಬರುತ್ತವೆ. ಮದ್ಯದ ಅಮಲಿನಲ್ಲಿದ್ದಾಗ, ಬುದ್ಧಿ ವೈಕಲ್ಯವಾದಾಗ, ಅಜ್ಞತೆಯಿಂದ ಬಾಲಾವಸ್ಥೆಯಲ್ಲಿ ಎಸಗಿದ ಕೇಡಿಗೆ ದಂಡನವಿಲ್ಲ. ವಾಹನಗಳನ್ನೋ ಪ್ರಾಣಿಗಳನ್ನೋ ಒಯ್ಯುವಾಗ ಕೈಮೀರಿ ಘಟಿಸಿದ ಆಕಸ್ಮಿಕಗಳಿಗೆ ದಂಡನವಿಲ್ಲ. (ಸ್ವತ್ತಿನ ಹಾನಿ ತುಂಬುವ ವಿಷಯದಲ್ಲಿ ಅರಿಯದೆ ಮಾಡಿದ ಹಾನಿಗೂ ಹೊಣೆಗಾರಿಕೆಯನ್ನು ಕೆಲವೆಡೆಯಲ್ಲಿ ಹೇಳಿರುವರು, ಪಾಪಗಳ ಪ್ರಾಯಶ್ಚಿತ್ತಾಧ್ಯಾಯದಲ್ಲಿ ಅಜ್ಞಾನದಿಂದೆಸಗಿದ ಪಾಪಗಳಿಗೂ ಪ್ರಾಯಶ್ಚಿತ್ತವಿದೆ.) ಹೀಗೆ ವ್ಯವಹಾರಾಧ್ಯಾಯದಲ್ಲಿ ಬರುವ ಸಾಹಸ, ಅದರ ಲಕ್ಷಣ ಮೊದಲಾದವು ಕೆಲವು ದೃಷ್ಟಿಯಲ್ಲಿ ಆಧುನಿಕವಾಗಿವೆ. ಆದರೆ ದಂಡನದ ವಿಷಯದಲ್ಲಿ, ವಿಧಿನಿಷೇಧಗಳ ವಿಷಯದಲ್ಲಿ, ವರ್ಣಾಶ್ರಮಧರ್ಮಗಳ ವಿವಿಧ ವರ್ಣದವರು ತಮ್ಮ ಎಲ್ಲೆಯನ್ನು ಮೀರಬಾರದೆಂಬ ಕಟ್ಟಳೆ ಮೀರಿದಾಗ ಕಠೋರ ಶಿಕ್ಷೆಗೆ, ತೀಕ್ಷ್ಣ ಪ್ರಾಯಶ್ಚಿತ್ತಗಳಿಗೆ ಗುರಿಯಾಗುವರೆಂಬ ಹಾಗೂ ಅವರನ್ನು ದಂಡಿಸಿ ತಮ್ಮ ತಮ್ಮ ಆಶ್ರಮಧರ್ಮಕ್ಕೆ ಅಂಟಿಕೊಳ್ಳುವಂತೆ ಮಾಡಬೇಕೆಂಬ ವಿಚಾರ ಆಗಿನ ಎಲ್ಲ ಶಾಸ್ತ್ರಗಳಲ್ಲಿ ಪ್ರಾಮುಖ್ಯವಾಗಿ ತೋರಿ ಬರುತ್ತದೆ. ಕೆಳಜಾತಿಯವರು ಮೇಲಿನ ಜಾತಿಯವರಿಗೆ ಅಗೌರವವನ್ನು ತೋರಿಸಿದಾಗ, ರಾಜ ಕಠಿಣಶಿಕ್ಷೆಯನ್ನು ವಿಧಿಸಬೇಕು ಎಂಬುದು ಮತ್ತು ಮೇಲಿನಜಾತಿಯವರಿಗೆ ವಿಶೇಷ ಸವಲತ್ತುಗಳು ಸಲ್ಲಬೇಕು ಎಂಬುದು ಆಗಿನ ಕಾಳದ ವಿಚಾರಲಕ್ಷಣಗಳು. ಪಲ್ಲೇಟೋನ ರಿಪಬ್ಲಿಕ್‍ನಲ್ಲೂ ಈ ಭಾವನೆ ಇದೆ. ಇಲ್ಲಿ ವರ್ಣಭೇದದ ವಿಷಮತೆಯ ಅತಿರೇಕ ಎಷ್ಟೇ ಅಸಮಂಜಸವಾಗಿ ತೋರಿದರೂ ಅಪರಾಧವೆಸಗುವ ವ್ಯಕ್ತಿ ಮಾತ್ರ ದಂಡನೀಯ. ಅಪರಾಧಿ ಸಮಾಜದ ವ್ಯವಸ್ಥೆಗೆ ಕಂಟಕಪ್ರಾಯ. ಅಧರ್ಮಿಯ ಅಥವಾ ಪಾಪಬುದ್ದಿಯವನ ಅಪರಾಧ ಕೇವಲ ಪರಿಹಾರಧನದಿಂದ ಪರಿಮಾರ್ಜಿತವಾಗುವುದಿಲ್ಲ. ಅದು ರಾಜದಂಡನೆಗೆ ಯೋಗ್ಯವಾದ ತಪ್ಪು-ಇವೇ ಮೊದಲಾದ ಅಪರಾಧಕಾಯಿದೆಯ ಮೂಲತತ್ತ್ವಗಳು ಅಲ್ಲಿ ಎದ್ದು ಕಾಣುತ್ತವೆ.

ತತ್ತ್ವಗಳು ರೂಪುಸಂಪಾದಿಸಿ

ಇಂಗ್ಲೆಂಡ್ ಮತ್ತು ಐರೋಪ್ಯ ದೇಶಗಳಲ್ಲಿ ಸಹ ಕಾಲಾನುಕ್ರಮದಲ್ಲಿ ಕ್ರೈಸ್ತ ಧರ್ಮದ ಪ್ರಭಾವದಿಂದ, ನಿಜವಾದ ಅಪರಾಧಕಾಯಿದೆಯ ತತ್ತ್ವಗಳು ರೂಪುಗೊಂಡಿವೆ. ಹಿಂದೆ ಹೇಳಿದ ಮುಯ್ಯಿ, ಪರಿಹಾರ ಮೊದಲಾದವುಗಳ ಕಾಲದಲ್ಲಿ ಹೊಣೆಗಾರಿಕೆಗೆ ಸದೋಷಮನಃಸ್ಥಿತಿ ಅವಶ್ಯವಿದ್ದಿಲ್ಲ. ಕೇವಲ ವ್ಯಕ್ತಿಯೊಬ್ಬನೇ ಹೊಣೆಗಾರನಾಗುವ ಬದಲು ಅವನ ಕುಟುಂಬ ಇಲ್ಲವೆ ಗುಂಪು ಸಾಮೂಹಿಕವಾಗಿ ಹೊಣೆಯಾಗುತ್ತಿತ್ತು. ಮುಂದೆ ಧರ್ಮದ ಪ್ರಭಾವದಿಂದ ಕಲುಷಿತ ಅಂತಃ ಕರಣವಿಲ್ಲದೆ ಪಾಪವಿಲ್ಲ. ಪಾಪ ರಹಿತನಾದವನಿಗೆ ಶಿಕ್ಷೆ ವಿಧಿಸುವುದು ಅನ್ಯಾಯ ಎಂಬ ಭಾವನೆ ಪ್ರಬಲಿಸಿತು. ಧರ್ಮ ಮತ್ತು ನೀತಿಯ ತತ್ತ್ವಗಳು ಅಂತಃಕರಣದ ಕಲ್ಮಷಕ್ಕೆ ಪ್ರಾಧಾನ್ಯ ಕೊಟ್ಟರೂ ದುಷ್ಟತನದ ನಿಜವಾದ ಆವಿಷ್ಕರಣ ಗೋಚರವಾಗದೆ ವ್ಯಾವಹಾರಿಕಶಾಸ್ತ್ರವಾದ ಕಾಯಿದೆಶಾಸ್ತ್ರ ಹಸ್ತಕ್ಷೇಪ ಮಾಡುವುದು ಯೋಗ್ಯವಲ್ಲ ಎಂಬ ಕಾರಣದಿಂದ ಅಪಾಯಕರ ಕೃತಿ ಮತ್ತು ಸದೋಷ (ಕಲುಷಿತ) ಮನಸ್ಸು ಇವೆರಡೂ ಕೂಡಿದಲ್ಲಿ ಮಾತ್ರ ಕಾಯಿದೆಯ ದೃಷ್ಟಿಯಿಂದ ಅಪರಾಧ ಎಂಬ ತತ್ತ್ವ ನೆಲೆಗೊಂಡಿತು. ಇಲ್ಲಿ ಅಪಾಯವೆಂದರೆ ದೃಷ್ಟಿಗೋಚರವಾಗುವ ಗಾಯ, ಬಂಧನ, ಮರಣ, ಚರಸ್ಥಿರಸ್ವತ್ತಿನ ನಾಶ-ಮುಂತಾದವುಗಳು ಮಾತ್ರವಲ್ಲ, ನಾಗರಿಕ ಜೀವನ ಪೋಷಿಸುತ್ತಿರುವ, ಸುರಕ್ಷಿತತೆ, ಧರ್ಮ, ಶಾಂತಿ, ಸೌಂದರ್ಯ, ಕೀರ್ತಿ, ಶೀಲ, ಸಂಸ್ಕøತಿ, ಆರೋಗ್ಯ, ಸತ್ಸಂಪ್ರದಾಯಗಳ ಮೌಲ್ಯವಿಶೇಷಗಳಿಗೆ ಭಂಗ ತರುವುದು. ಇಂಥ ಘಾತಕಕೃತ್ಯಗಳು ಯಾವುವೆಂಬ ಬಗ್ಗೆ ವಿವಾದಕ್ಕೆಡೆಯಿಲ್ಲದಂತೆ ಕಾಯಿದೆಶಾಸ್ತ್ರ ಸ್ಪಷ್ಟಸೂಚನೆಗಳನ್ನು ನೀಡುತ್ತದೆ. ಸಾಮಾನ್ಯವಾಗಿ ಒಟ್ಟಾರೆ ಸಮಾಜದ ಹಿತದ ದೃಷ್ಟಿಯಿಂದಲೇ ಕಾಯಿದೆ ನಿರ್ಮಾಣವಾಗಿರುತ್ತದೆ. ಶಾಸನ ಆಥವಾ ನ್ಯಾಯಾಲಯದ ನಿರ್ಣಯ ಅದಕ್ಕೆ ಸ್ಫುಟವಾದ ರೂಪ ಕೊಡುತ್ತದೆ. ಸಮಾಜದ ಹಿತಕ್ಕೆ ಕಂಟಕಕಾರಿಯೆನಿಸುವ ಕ್ರಿಯೆಗಳು ಸಹಜವಾಗಿ ಅಪರಾಧ ಮಾಲಿಕೆಗೆ ಸೇರುತ್ತವೆ. ಸರ್ಕಾರ ಅದು ಕೊಡುವ ಸೂಚನೆಗಳನ್ನುಸರಿಸಿ ಕಾಯಿದೆ ಮಾಡುತ್ತದೆ. ಸಮಾಜ ಬದಲಾದಂತೆ ಕಾಯಿದೆಗಳೂ ಮಾರ್ಪಡುತ್ತವೆ. ರೋಮ್ ದೇಶದಲ್ಲಿ, ಹೆಬ್ಬಾಗಿಲಿನಲ್ಲಿ ಪ್ರವೇಶಿಸದೆ ಪಟ್ಟಣದ ಕೋಟೆಯನ್ನು ಏರಿ ಒಳಗೆ ಬಂದರೆ ಅದು ಮರಣದಂಡನೆ ಕೊಡುವಂಥ ಅಪರಾಧವಾಗಿತ್ತು. ಪೂರ್ವಕಾಲದಲ್ಲಿ ನಾಸ್ತಿಕತೆ ಘನ ಅಪರಾಧ. ನರಬಲಿ, ಸಹಸ್ರಭೋಜನ, ಸಹಗಮನ ಪ್ರೋತ್ಸಾಹ-ಇವು ಪುಣ್ಯಕಾರ್ಯಗಳಾಗಿದ್ದುವು. ಫ್ರಾನ್ಸ್‍ನಲ್ಲಿ ವ್ಯಭಿಚಾರ ಒಂದು ಕಾಲಕ್ಕೆ ಅಪರಾಧ, ಇಂಗ್ಲೆಂಡಿನಲ್ಲಿ ಅಲ್ಲ. ಬಹುಭಾರ್ಯಾತ್ವ ಒಮ್ಮೆ ದೊಡ್ಡಸ್ತಿಕೆಯ ಲಕ್ಷಣ; ಇಂದು ಅದು ಹಿಂದುಗಳಲ್ಲಿ ಅಪರಾಧ; ಮುಸಲ್ಮಾನರಲ್ಲಿ ಕ್ಷಮ್ಯ. ಗರ್ಭಪಾತ ಅನೇಕ ದೇಶಗಳಲ್ಲಿ ಅಪರಾಧ; ರಷ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಿಸಿದರೆ ಅಪರಾಧವಲ್ಲ. ಆತ್ಮಹತ್ಯಾಪ್ರಯತ್ನ 1961ರ ಅನಂತರ ಇಂಗ್ಲೆಂಡಿನಲ್ಲಿ ಅಪರಾಧವಲ್ಲ; ನಮ್ಮ ದೇಶದಲ್ಲಿ ಅಪರಾಧ. ಹೀಗೆ ಆಯಾ ದೇಶದ ನೈತಿಕಭಾವನೆ, ಸಮಾಜ ವ್ಯವಸ್ಥೆ, ಧರ್ಮ, ಇತಿಹಾಸ, ಜನತೆಯಲ್ಲಿಯ ಜ್ಞಾನ, ಅಜ್ಞಾನ, ಭಾವೋತ್ಕರ್ಷ, ಆಳುವ ವರ್ಗದ ಹಿತ, ಆರ್ಥಿಕಸ್ಥಿತಿಭದ್ರತೆಯೇ ಮೊದಲಾದ ಸಾಮಾಜಿಕ ಆವಶ್ಯಕತೆಗನುಗುಣವಾಗಿ ಕಾಲ ಕಾಲಕ್ಕೆ ಬೇರೆ ಬೇರೆ ಕೃತಿಗಳು ಕಾಯಿದೆಯಲ್ಲಿ ಸೇರುತ್ತವೆ. ಹೀಗೆ ದೇಶ, ಕಾಲ ಸಮಾಜಗಳಲ್ಲಿ ಭಿನ್ನಭಿನ್ನವಾದ ಅಪರಾಧದ ಸರ್ವವ್ಯಾಪಿ ಲಕ್ಷಣವನ್ನು ಹುಡುಕುವುದು ದುಸ್ತರ. ಒಟ್ಟಿನಲ್ಲಿ ಕಾಯಿದೆ ದಂಡನೀಯವಾಗಿ ಮಾಡಿ, ಪ್ರತಿಷೇಧಿಸಿದ ಪರಿಣಾಮವುಳ್ಳ ಕೃತಿಯೇ ಅಪರಾಧ, ದುಷ್ಕøತಿ, ದುಷ್ಪರಿಣಾಮದ ಇಚ್ಛೆ ಅಥವಾ ಹಾಗೆ ಆಗಬಹುದೆಂದು ಅರಿತೂ ದುಡುಕುವ ಮನೋವೃತ್ತಿ ಕಾಯಿದೆಯ ದೃಷ್ಟಿಯಿಂದ ಅಪರಾಧಬುದ್ಧಿ ಇಲ್ಲವೆ ದುರ್ಬುದ್ಧಿ. ಈ ಅರ್ಥದಲ್ಲಿ ದುರ್ಬುದ್ಧಿ ದುಷ್ಕøತ್ಯಗಳ ಸಂಗಮ ಅಪರಾಧದ ಲಕ್ಷಣ.

ಮೊದಮೊದಲು ಸರ್ವಸಾಮಾನ್ಯನ ನೈತಿಕದೃಷ್ಟಿಯಿಂದ ಹೇಯವಾದ ಕಳವು, ಸುಲಿಗೆ, ಕೊಲೆ, ಸ್ತ್ರೀಯರ ಮೇಲಿನ ಬಲಾತ್ಕಾರ, ಗಾಯಪಡಿಸುವುದು-ಮೊದಲಾದವುಗಳು ದಂಡನೀಯವಾಗಿದ್ದಾಗ ಅಪರಾಧಶಾಸ್ತ್ರವೆಂದರೆ ದುಷ್ಟನಿಗ್ರಹಮೀಮಾಂಸೆ ಎನ್ನಬಹುದಾಗಿತ್ತು. ಮುಂದೆ ಕ್ರಮೇಣ ಅಪಾಯ, ಭೀತಿ, ಬಾಹುಳ್ಯವುಳ್ಳ ಭಾರೀ ಯಂತ್ರಗಳು, ತೀಕ್ಷ್ಣ ರಸಾಯನಗಳು, ಅತಿವೇಗದ ವಾಹನಗಳು, ಬೃಹತ್ ಕಾರ್ಯಾಗಾರಗಳು, ವಿದ್ಯುಚ್ಚಾಲಿತ ಸಲಕರಣೆಗಳು ಬಳಕೆಯಲ್ಲಿ ಬಂದಾಗ ಸ್ವಲ್ಪ ಅಲಕ್ಷ್ಯ, ಮೇಲ್ವಿಚಾರಣೆಯಲ್ಲಿ ನ್ಯೂನತೆ, ಯಂತ್ರದೋಷ, ಕ್ರಿಯಾಲೋಪಗಳು ಸಹ ದೊಡ್ಡ ಪ್ರಮಾಣದಲ್ಲಿ ವಿತ್ತ, ಜೀವಿತಗಳಿಗೆ ಹಾನಿಯನ್ನುಂಟುಮಾಡುವ ಗಂಡಾಂತರವನ್ನು ಒಡ್ಡಿದುವು. ಅದರಂತೆ ಆರ್ಥಿಕವ್ಯವಹಾರಗಳು ಜಟಿಲವಾಗುತ್ತ ಹೋದುವು. ಆಗ ಘಟಿಸಬಹುದಾದ ಅಪಾಯ, ಅವ್ಯವಸ್ಥೆ ತಪ್ಪಿಸಲು ಸರಕಾರ ವ್ಯವಸ್ಥಾನಿರ್ದೇಶಕನಿಯಮಗಳನ್ನು ಮಾಡಬೇಕಾಯಿತು. ಅವುಗಳ ಪಾಲನೆಯನ್ನು ಖಚಿತಗೊಳಿಸಲು, ನಿಯಮೋಲ್ಲಂಘನೆಗೆಲ್ಲ ಜುಲ್ಮಾನೆ ವಿಧಿಸಿ ದಂಡಿಸಬೇಕಾಯಿತು. ಈ ದಂಡನೆಯ ಮುಖ್ಯ ಉದ್ದೇಶ ಅವ್ಯವಸ್ಥೆ; ಅಪಾಯಗಳ ನಿವಾರಣೆ, ದೌರ್ಜನ್ಯಪ್ರತೀಕಾರ, ದುಷ್ಟನಿಗ್ರಹವಲ್ಲ. ಆದರೆ ನ್ಯಾಯಪ್ರಕ್ರಿಯೆ (ಪ್ರೊಸೀಜರ್) ದೃಷ್ಟಿಯಿಂದ ಇವುಗಳನ್ನು ಅಪರಾಧವೆಂತಲೇ ಎಣಿಸಬೇಕಾಗುತ್ತದೆ. ಇಂಥವನ್ನು ದೌರ್ಜನ್ಯಮೂಲವಾದ ನಿಜವಾದ ಅಪರಾಧ ವರ್ಗದಲ್ಲಿ ಸೇರಿಸುವುದು ಅಪರಾಧಶಾಸ್ತ್ರದಲ್ಲಿ ಗೊಂದಲಕ್ಕೆ ಕಾರಣವೆಂದು ಕೆಲವು ವಿದ್ವಾಂಸರು ವಾದಿಸುವರು. ಈ ವ್ಯವಸ್ಥಾಪಕ ಅಪರಾಧಗಳನ್ನೆಸಗುವವನ ಮನಸ್ಸು ನಿರ್ದೋಷವಿರಬಹುದು. ಎಷ್ಟೋ ಸಲ ಆ ಕರ್ತವ್ಯಚ್ಯುತಿಗೆ ಅವನ ಕೆಳಗಿನ ನೌಕರರು ಕಾರಣರಾಗಿರಬಹುದು. ಇವೆಲ್ಲ ಕಾರಣಗಳಿಂದ ವ್ಯಕ್ತಿಗತದೌರ್ಜನ್ಯಪ್ರಧಾನವಾದ ನಿಜವಾದ ಅಪರಾಧಕ್ಕೂ ಕೃತ್ರಿಮವಾಗಿ ನಿರ್ಮಿಸಲ್ಪಟ್ಟ ವ್ಯವಸ್ಥಾತ್ಮಕ ಅಪರಾಧಗಳಿಗೂ ಮಹದಂತರವಿದೆ ಎಂದು ಸಾಧಿಸುವರು. ಸಮಾಜಘಾತ, ದಂಡನಕ್ರಮ ಇವು ಅಪರಾಧಶಾಸ್ತ್ರದ ಮುಖ್ಯಲಕ್ಷಣವಾದ್ದರಿಂದ ಇದನ್ನು ಅಪರಾಧವೆಂದು ಪರಿಗಣಿಸಿ ಮುಂದೆ ಅಪರಾಧ ಸಿದ್ಧವಾದ ಮೇಲೆ ಅಪರಾಧಿಯನ್ನು ಹೇಗೆ ನಡೆಸಿಕೊಳ್ಳುವುದೆಂಬುದರಲ್ಲಿ ಬೇಕಾದರೆ ತಾರತಮ್ಯ ಮಾಡಬಹುದೆಂದು ಮತ್ತೆ ಕೆಲವು ವಿದ್ವಾಂಸರ ಅಭಿಪ್ರಾಯ.

ತೀರ ಹೇಯವಾದ ಅನೈತಿಕಕೃತಿ, ಬುದ್ಧಿಪೂರ್ವಕವಾಗಿ ಎಸಗಿದ ಹಲ್ಲೆ, ಕೊಲೆ, ಅಪ್ರಾಮಾಣಿಕವಿತ್ತಾಪಹರಣ, ಕೌಟುಂಬಿಕಜೀವನವನ್ನು ಕೆಡಿಸುವ ಕೃತಿ, ಮಾನಹಾನಿ, ರಾಷ್ಟ್ರದ್ರೋಹ, ಸಾರ್ವಜನಿಕ ಕೀಟಲೆ, ಸಾರ್ವಜನಿಕ ಅಸ್ವಾಸ್ಥ್ಯಕಾರಿಕೃತಿ, ರಾಷ್ಟ್ರದ ಸುರಕ್ಷಿತತೆಗೆ ಭಂಗ ತರುವಂಥ ಕೃತಿ - ಇಂಥವು ಸಾಧಾರಣ ಎಲ್ಲ ನಾಗರಿಕಜನಾಂಗದ ಕಾಯಿದೆಯಂತೆ ಅಪರಾಧಗಳು. ವ್ಯವಸ್ಥಾತ್ಮಕ ಅಪರಾಧಗಳು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಕಾಲದಲ್ಲಿ ಭಿನ್ನ ಭಿನ್ನವಾಗಿರುವುವು.

ಮೂಲತತ್ತ್ವಗಳುಸಂಪಾದಿಸಿ

ಪೂರ್ವಕಾಲದಲ್ಲಿ ನೆರೆಹೊರೆಯವರ ಆಪಾದನೆಯ ಮೇಲೆ, ಬಲವಾದ ಸಂಶಯದ ಮೇಲೆ ಬಂಧಿಸಲ್ಪಟ್ಟು ತನ್ನ ಮುಂದೆ ಬಂದ ಸಂಶಯಿತನನ್ನು ನ್ಯಾಯಸ್ಥಾನ ನಿರಪರಾಧಿಯೆಂದು ಎಣಿಸುತ್ತಿದ್ದಿಲ್ಲ. ಸಂಶಯಿತ ಕಾದ ಕಬ್ಬಿಣವನ್ನು ಹಿಡಿಯವ, ಬೆಂಕಿಯಲ್ಲಿ ಹೊಕ್ಕುಬರುವ - ಮೊದಲಾದ ಅಗ್ನಿದಿವ್ಯ, ಜಲದಿವ್ಯಾದಿಗಳಿಂದ ಅಥವಾ ತನ್ನ ಸಚ್ಚಾರಿತ್ರ್ಯದ ಬಗೆಗೆ ನಿರ್ದಿಷ್ಟ ಸಂಖ್ಯೆಯ ಜನರಿಂದ ಪ್ರಮಾಣಮಾಡಿಸಿ ತನ್ನ ಪರಿಶುದ್ಧತೆಯನ್ನು ಸಿದ್ಧಮಾಡಬೇಕಾಗಿತ್ತು. ಇಲ್ಲವಾದರೆ ಅವನು ದಂಡನಾರ್ಹನಾಗುತ್ತಿದ್ದ. ಸಮಾಜಶತ್ರುವೆಂಬ ಭಾವದಿಂದ ಅವನ ಪಕ್ಷದಿಂದ ವಕೀಲರಿಗೆ ವಾದಿಸಲು ಆಸ್ಪದವಿದ್ದಿಲ್ಲ. ಅವರ ದೌರ್ಜನ್ಯಕ್ಕನುಗುಣವಾಗಿ, ಅವನ ದುಷ್ಕøತ್ಯ ಪ್ರಚೋದಿಸಿದ ರೋಷಕ್ಕನುಗುಣವಾಗಿ ಅತ್ಯಂತ ಕ್ರೂರವಾದ ಹಿಂಸೆ, ಮರಣ, ಮೊದಲಾದವನ್ನು ವಿಧಿಸುತ್ತಿದ್ದರು.

ಮುಂದೆ ಬೆಕೇರಿಯ ಮೊದಲಾದ ವಿದ್ವಾಂಸರ ವಾದದ ಪರಿಣಾಮವಾಗಿ ಫ್ರೆಂಚ್ ಮಹಾಕ್ರಾಂತಿಯ ಅನಂತರ, ಆಧುನಿಕ ಯುಗದ ತತ್ತ್ವಗಳು ರೂಪುಗೊಂಡುವು. ಸಂಶಯಾತೀತವಾಗಿ ಅಪರಾಧ ಸಿದ್ಧವಾಗುವವರೆಗೆ ಆಪಾದಿತ ನಿರಪರಾಧಿ ಎಂದು ತಿಳಿಯಬೇಕು. ಆಪಾದಿತನಿಗೆ ತನ್ನ ಪಕ್ಷವನ್ನು ಮಂಡಿಸಲು ವಕೀಲರನ್ನು ನೇಮಿಸುವ ಆಧಿಕಾರವಿದೆ. ಅಪರಾಧಿಯನ್ನು ದಂಡಿಸುವಾಗ ಮಾನವೀಯತೆಯನ್ನು ಕಡೆಗಣಿಸಬಾರದು - ಮೊದಲಾದವು ಬಳಕೆಗೆ ಬಂದುವು. ದಂಡನೆಯ ಉದ್ದೇಶ ದೌರ್ಜನ್ಯಕ್ಕೆ ತಕ್ಕ ಪ್ರತಿಫಲ ನೀಡುವುದು, ಸಮಾಜಕಂಟಕನನ್ನು ನಿಗ್ರಹಿಸುವುದು, ಅವನಂಥವರಲ್ಲಿ ಭಯಭೀತಿಯನ್ನುಂಟು ಮಾಡುವುದು ಎಂಬುದಾಗಿತ್ತು. ಮುಂದೆ ಮನುಷ್ಯಸ್ವಭಾವದ ಸರಿಯಾದ ಅರಿವು ಬಂದಂತೆ, ಸಂಸ್ಕøತಿ ಬೆಳೆದಂತೆ, ಅಪರಾಧಿ ಸಂಸ್ಕøತಿ, ಸೌಹಾರ್ಧ, ಶಿಕ್ಷಣಸುಸಂಧಿಗಳಿಂದ ವರ್ಜಿತನಾದ ಒಬ್ಬ ದುರ್ದೈವಿ ಸಹೋದರ, ಬುದ್ಧಿವೈಕಲ್ಯ ಪೀಡಿತನಾದವ - ಎಂಬ ವಿಚಾರಗಳು ಪ್ರಬಲಿಸಿ, ಅವನನ್ನು ಮೃದುವಾಗಿ ಸಹೃದಯತೆಯಿಂದ ತಿದ್ದಿ ಸಮಾಜ ಯೋಗ್ಯನನ್ನಾಗಿಮಾಡಿ ಪುನರುತ್ಥಾನಗೊಳಿಸುವುದೇ ಅಪರಾಧಿಯ ವಿಷಯದಲ್ಲಿ ಸರಿಯಾದ ಮಾರ್ಗವೆಂಬ ವಾದ ಪ್ರಬಲಿಸಿ ಆ ಪ್ರಕಾರ ಅಪರಾಧಿಯನ್ನು ನಡೆಸಿಕೊಳ್ಳುವುದರಲ್ಲಿ ಪರಿವರ್ತನೆಯೂ ಆಯಿತು. ಈಗ ಅಪರಾಧಕಾಯಿದೆಯಲ್ಲಿ ಕೆಲವು ಮೂಲಭೂತ ತತ್ತ್ವಗಳು ಸಾಧಾರಣವಾಗಿ ಎಲ್ಲ ನಾಗರಿಕ ರಾಷ್ಟ್ರಗಳಲ್ಲೂ ಅನುಮೋದಿಸಲ್ಪಟ್ಟಿವೆ. ಶಾಸನದ ಮೂಲಕ ಅಪರಾಧವೆಂದು ವ್ಯಾಖ್ಯೆಗೆ ಒಳಪಡದ ಕೃತಿಗಳನ್ನು ಅಪರಾಧವೆಂದು ಗಣಿಸಬಾರದು. ಅಪರಾಧದ ಕಾಲಕ್ಕೆ ಪ್ರಚಲಿತಶಾಸನದಲ್ಲಿ ನಿರ್ದೇಶಿಸಿರುವುದಕ್ಕಿಂತ ಭಿನ್ನವಾದ ಇಲ್ಲವೆ ಹೆಚ್ಚಿನ ಶಿಕ್ಷೆಯನ್ನು ವಿಧಿಸಬಾರದು. ಒಂದು ಅಪರಾಧಕ್ಕೆ ಒಮ್ಮೆ ಮಾತ್ರ ಶಿಕ್ಷೆಯನ್ನು ವಿಧಿಸಬೇಕು. ಅಪರಾಧಿಯನ್ನು ಮನುಷ್ಯಗೌರವಕ್ಕೆ ಅನುಚಿತವಾದ ಅಥವಾ ಅತಿ ಕ್ರೂರವಾದ ಶಿಕ್ಷೆಗೊಳಪಡಿಸಬಾರದು. ಅಪರಾಧವನ್ನು ಒಪ್ಪಲು ಒತ್ತಾಯಿಸಬಾರದು. ಇವೇ ಮುಖ್ಯ ತತ್ತ್ವಗಳು.

 • ಅಪರಾಧದಿಂದ ಸಮಾಜವನ್ನು ರಕ್ಷಿಸಲು ಮೊದಲು ಕ್ರೌರ್ಯವನ್ನು, ಬೆದರಿಕೆಯನ್ನು ಸಮಾಜ ಉಪಯೋಗಿಸಿ ನೋಡಿತು. ಈಗ ಮಾರ್ದವವನ್ನು, ಸೌಹಾರ್ದವನ್ನು ಮನೋರೋಗ ಶುಶ್ರೂಷಣೆಯ ಚಿಕಿತ್ಸೆಗಳನ್ನು ಉಪಯೋಗಿಸಹತ್ತಿದೆ.
 • ಈ ಕೆಲವು ಪ್ರಗತಿಪರ ಪ್ರಯೋಗಗಳಿಂದ ಅಪರಾಧ ಮತ್ತು ಅಪರಾಧಿಗಳ ಸಂಖ್ಯೆ ಕಡಿಮೆಮಾಡುವ ಕೆಲಸ ಶ್ರದ್ಧೆಯಿಂದ ಮುಂದುವರಿಯುತ್ತಿದೆ.(ವಿ.ಆರ್.ಬಿ.)[೧]

ಭಾರತದಲ್ಲಿ ರಾಜದ್ರೋಹಸಂಪಾದಿಸಿ

 • ದೇಶದ್ರೋಹ:
 • ಭಾರತದಲ್ಲಿ ರಾಜದ್ರೋಹದ ಅಪರಾಧ:ಸೆಕ್ಷನ್ 124 ಎ; (Treason )
 • ಭಾರತೀಯ ದಂಡ ಸಂಹಿತೆಯ ‘ಸೆಕ್ಷನ್ 124 ಎ’ ದೇಶದ್ರೋಹ ಏನು ಎಂಬುದನ್ನು ವ್ಯಾಖ್ಯಾನಿಸುತ್ತದೆ. ಸರ್ಕಾರದ ವಿರುದ್ಧ ಅಸಮಾಧಾನವನ್ನು ಪ್ರಚೋದಿಸುವ ಪ್ರಯತ್ನಗಳು ದೇಶದ್ರೋಹ ಪ್ರಕರಣ ಎನಿಸಿಕೊಳ್ಳುತ್ತವೆ. ಅಂದರೆ ಯಾವುದೇ ವ್ಯಕ್ತಿಯು ಮಾತಿನಿಂದ, ಬರವಣಿಗೆಯ ಮೂಲಕ ಅಥವಾ ಚಿಹ್ನೆಗಳ ಮೂಲಕ ಸರ್ಕಾರದ ವಿರುದ್ಧ ದ್ವೇಷವನ್ನು ಅಥವಾ ತಿರಸ್ಕಾರವನ್ನು ಹುಟ್ಟಿಸಲು ಯತ್ನಿಸಿದರೆ ಅಥವಾ ಅದಕ್ಕೆ ಪ್ರಚೋದಿಸಿದರೆ ಅದು ದೇಶದ್ರೋಹ ಎನಿಸಿಕೊಳ್ಳುತ್ತದೆ. ಆದರೆ ದ್ವೇಷ, ತಿರಸ್ಕಾರ ಅಥವಾ ಅಸಮಾಧಾನವನ್ನು ಪ್ರಚೋದಿಸದ ಮತ್ತು ಉತ್ತೇಜಿಸದ ಹೇಳಿಕೆಗಳು ಈ ವಿಭಾಗದ ಅಡಿಯಲ್ಲಿ ಅಪರಾಧ ಎನಿಸುವುದಿಲ್ಲ.
 • ಶಿಕ್ಷೆ ಏನು?
 • ದೇಶದ್ರೋಹದಡಿ ದಾಖಲಾಗುವ ಪ್ರಕರಣವು ಜಾಮೀನುರಹಿತ ಅಪರಾಧ ವಾಗಿದೆ. ಸೆಕ್ಷನ್ 124 ಎ ಅಡಿ 3 ವರ್ಷದಿಂದ ಜೀವಾವಧಿವರೆಗೂ ಶಿಕ್ಷೆ ನೀಡಬಹುದು. ದಂಡವನ್ನೂ ಹಾಕಬಹುದು. ಈ ಕಾನೂನಿನಡಿಯಲ್ಲಿ ಆರೋಪ ಹೊರಿಸಲಾದ ವ್ಯಕ್ತಿಗೆ ಸರ್ಕಾರಿ ಉದ್ಯೋಗವನ್ನು ನಿರ್ಬಂಧಿಸಲಾಗಿದೆ. ಅಗತ್ಯವಿದ್ದಾಗ ನ್ಯಾಯಾಲಯಕ್ಕೆ ಹಾಜರಾಗಬೇಕು.

*ಪ್ರಧಾನಿಗೆ ಪತ್ರ ಬರೆದ ಅಪರಾಧ:

 • 2019ರ ಜುಲೈನಲ್ಲಿ ದೇಶದ ವಿವಿಧ ಕ್ಷೇತ್ರದ 49 ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದರು. ದೇಶದಲ್ಲಿ ಗುಂಪುಹಲ್ಲೆ ಮತ್ತು ಹತ್ಯೆಗಳ ಸಂಖ್ಯೆ ಏರಿಕೆಯದ ಸಂದರ್ಭದಲ್ಲಿ ಈ ಗಣ್ಯರು ಪ್ರಧಾನಿಗೆ ಪತ್ರ ಬರೆದಿದ್ದರು. ಇದೇ ಸಂದರ್ಭದಲ್ಲಿ ದೇಶದಾದ್ಯಂತ ‘ನಾಟ್‌ ಇನ್‌ ಮೈ ನೇಮ್‌’ ಹೆಸರಿನ ಚಳವಳಿಯೂ ನಡೆಯುತ್ತಿತ್ತು. ಪತ್ರ ಬರೆದಿದ್ದ ಗಣ್ಯರು ಈ ಚಳವಳಿಯ ಮುಂದಾಳತ್ವ ವಹಿಸಿದ್ದರು. ಇವರೆಲ್ಲರ ವಿರುದ್ಧ 2019ರ ಅಕ್ಟೋಬರ್‌ನಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ರಾಮಚಂದ್ರ ಗುಹಾ, ಅಡೂರು ಗೋಪಾಲಕೃಷ್ಣನ್, ಮಣಿರತ್ನಂ, ಅಪರ್ಣಾ ಸೆನ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
 • ಭಾರತದಲ್ಲಿ 2020-2021 ಕ್ಕಿಂತ ಹಿಂದೆ- ಕಳೆದ ಐದಾರು ವರ್ಷಗಳಿಂದ ಮಾನವ ಹಕ್ಕುಗಳ ಕಾರ್ಯಕರ್ತರು, ಕಲಾವಿದರು, ವಿಶ್ವವಿದ್ಯಾಲಯಗಳ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ವಿರುದ್ಧ ಕಾನೂನು ಮತ್ತು ಆಡಳಿತದ ವಿರುದ್ಧ ದನಿಎತ್ತಿದವರ ಬಗೆಗೆ ‘ದೇಶದ್ರೋಹ’ದ ಆರೋಪ ಹೊರಿಸುತ್ತಿರುವುದು ಹೆಚ್ಚಾಗಿದೆ. ಇದಕ್ಕೆ ಇತ್ತೀಚಿನ (2021- ಫೆಬ್ರವರಿ) ಸೇರ್ಪಡೆ ಪರಿಸರ ಕಾರ್ಯಕರ್ತೆ ಬೆಂಗಳೂರಿನ ದಿಶಾ ರವಿ ಬಂಧನ ಪ್ರಕರಣ. ಈ ಹಿಂದೆ ಅರುಂಧತಿ ರಾಯ್, ಬಿನಾಯಕ್ ಸೇನ್, ವ್ಯಂಗ್ಯಚಿತ್ರಕಾರ ಅಸೀಮ್ ತ್ರಿವೇದಿ, ಅಸಾದುದ್ದೀನ್‌ ಒವೈಸಿ, ಪ್ರವೀಣ್ ತೊಗಾಡಿಯಾ ಮೊದಲಾದವರ ವಿರುದ್ಧ ಇದೇ ಅಸ್ತ್ರ ಪ್ರಯೋಗಿಸಲಾಗಿತ್ತು.[೨]

ಉಲ್ಲೇಖಸಂಪಾದಿಸಿ

 1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಪರಾಧ ಮತ್ತು ಅಪರಾಧಕಾಯಿದೆ
 2. Sedition Charges In India;ಆಳ–ಅಗಲ: ‘ದೇಶದ್ರೋಹ’ದ ನಾಗಾಲೋಟ;ಪ್ರಜಾವಾಣಿ ವಾರ್ತೆ Updated: 17 ಫೆಬ್ರವರಿ 2021