ಅನೃತಶೋಧ ಪ್ರಯತ್ನಪೂರ್ವಕವಾಗಿ ಸುಳ್ಳು ಹೇಳುತ್ತಿರುವ ಅಪರಾಧಿಯಿಂದ ಸತ್ಯಾಂಶವನ್ನು ಹೊರಗೆಡಹಲು ಮನಶ್ಯಾಸ್ತ್ರದ ರೀತ್ಯ ಏರ್ಪಾಟಾದ ಕ್ರಮ (ಲೈ ಡಿಟೆಕ್ಷನ್). ಅಪರಾಧಿ ತನ್ನ ಅಪರಾಧವನ್ನು ಬಯಲು ಮಾಡಲು ಇಚ್ಚಿಸುವುದಿಲ್ಲ. ಗೋಪ್ಯವಾಗಿಡಲು ಸಕಲಪ್ರಯತ್ನ ನಡೆಸುತ್ತಾನೆ. ತಾನು ನಿರಪರಾಧಿ ಎಂದು ಖಚಿತಪಡಿಸಲು ಸುಳ್ಳು ಮತ್ತು ನಟನೆಯನ್ನು ತನ್ನ ಮಾತು, ಮುಖಚರ್ಯೆ ಮತ್ತು ಚಲನವಲನಗಳಲ್ಲಿ ಯಶಸ್ವಿಯಾಗಿ ಬಳಸಿಕೊಳ್ಳುತ್ತಾನೆ. ಆದರೆ ಅಪರಾಧಕ್ಕೆ ಸಂಬಂಧಿಸಿದ ಗುಪ್ತಆಲೋಚನೆಗಳು ಬಂದಾಗ ಉದ್ಭವಿಸುವ ಭಾವನಾತರಂಗ ಹಾಗೂ ದೈಹಿಕ ಮಾರ್ಪಾಡುಗಳು ಅವನ ಹತೋಟಿಗೆ ಮೀರಿದ್ದು. ಅಂದರೆ ಎಂಥ ನಿಸ್ಸೀಮ ಅಪರಾಧಿಯೇ ಆಗಲಿ ಆಂತರಿಕ ಭಾವಪ್ರದರ್ಶನವನ್ನು ಅಡಗಿಸಲಾರ. ಹಾಗಿದ್ದಲ್ಲಿ ಆಂತರಿಕಭಾವ ಪ್ರದರ್ಶನವನ್ನು ಅಳತೆಗೆ ಒಳಪಡಿಸಿದರೆ ಅಪರಾಧದ ಜಾಡು ಸಿಕ್ಕಿ ಅಪರಾಧಿ ಯಾರೆಂಬುದನ್ನು ಪತ್ತೆ ಹಚ್ಚಬಹುದು.

ಸಾಧ್ಯತೆ

ಬದಲಾಯಿಸಿ

ಭಾವೋದ್ರೇಕದಲ್ಲಿ ಆನುಷಂಗಿಕವಾಗಿ ಆಗುವ ಆಂತರಿಕ ಹಾಗೂ ದೈಹಿಕ ಮಾರ್ಪಾಡುಗಳೆಂದರೆ: ವೇಗವಾದ ಗುಂಡಿಗೆ ಬಡಿತ, ಉದ್ವೇಗದ ಉಸಿರಾಟ, ಹೊಟ್ಟೆಯಲ್ಲಿ ಸಂಕಟ, ಬೆವರುವುದು, ನಡುಕ, ರಕ್ತದ ಹೆಚ್ಚಾದ ಒತ್ತಡ--ಮುಂತಾದುವು; ಅನೇಕ ಬಗೆಯ ಸಲಕರಣೆಗಳಿಂದ ಈ ಆನುಷಂಗಿಕ ಮಾರ್ಪಾಡುಗಳನ್ನು ಅವಲೋಕನೆಗೆ ಮತ್ತು ಅಳತೆಗೆ ಒಳಪಡಿಸುವುದು ಸಾಧ್ಯ.

ಉಪಕರಣಗಳು

ಬದಲಾಯಿಸಿ

ಈ ಎಲ್ಲ ಸಲಕರಣೆಗಳಿಗೂ ಒಟ್ಟಿನಲ್ಲಿ ಅಪರಾಧಪತ್ತೆಯ ಸಲಕರಣೆಗಳೆಂದು ಹೇಳುತ್ತಾರೆ. ಗುಂಡಿಗೆಬಡಿತ, ಉಸಿರಾಟ, ರಕ್ತದ ಒತ್ತಡ ಮತ್ತು ಜಿ.ಎಸ್.ಆರ್ (ಗ್ಯಾಲ್ವನಿಸ್ಕಿನ್ ರೆಸ್ಪಾನ್ಸ್) ಇವುಗಳ ಮಾಪನಕ್ಕೆ ಹಲವು ಉಪಕರಣಗಳಿವೆ. ವ್ಯಕ್ತಿ ಭಾವೋದ್ರೇಕಗೊಂಡಾಗ ಆತನ ದೇಹದಲ್ಲಿ ಉಂಟಾಗುವ ಮಾರ್ಪಾಡುಗಳನ್ನು ಈ ಉಪಕರಣಗಳಿಂದ ಗೊತ್ತುಹಚ್ಚಬಹುದು. ಈ ಮಾರ್ಪಾಡುಗಳು ಚಲಿಸುತ್ತಿರುವ ಪಾಲಿಗ್ರಾಫ್ ಟೇಪಿನಲ್ಲಿ ಮುದ್ರಿತವಾಗುವುವು. ಪ್ರಯೋಗಕ್ಕೆ ಒಳಗಾದ ವ್ಯಕ್ತಿಯ ತಲೆ, ಎದೆ, ಹೊಟ್ಟೆ ಮತ್ತು ತೋಳಿಗೆ ಪಟ್ಟಿ (ಬೆಲ್ಟ್) ಕಟ್ಟಿ, ಆಯಾ ಅಂಗಗಳಲ್ಲಿ ಉಂಟಾಗುವ ಆನುಷಂಗಿಕ ಮಾರ್ಪಾಡುಗಳನ್ನು ಪಾಲಿಗ್ರಾಫ್‍ನಲ್ಲಿ ಮುದ್ರಿಸುತ್ತಾರೆ. ಅಂಗೈಗೆ ಎಲೆಕ್ಟ್ರೋಡ್ ಕಟ್ಟಿ, ಭಾವೋದ್ರೇಕವಾದಾಗ ವಿದ್ಯುತ್‍ಪ್ರವಾಹ ತಡೆಯಿಲ್ಲದೆ ಹರಿಯುವುದನ್ನು ಸೈಕೋಗ್ಯಾಲ್ವನೋಮೀಟರಿಲ್ಲಿ ಅಳೆಯಬಹುದು. ಸಹಜ ಸನ್ನಿವೇಶಗಳಲ್ಲಿ ವಿದ್ಯುತ್‍ಪ್ರವಾಹಕ್ಕೆ ಚರ್ಮದಿಂದ ತಡೆಯುಂಟು. ಭಾವೋದ್ರೇಕವಾದಾಗ ಬೆವರುಗ್ರಂಥಿಗಳು ಪ್ರಚೋದಿಸಲ್ಪಟ್ಟು ಪ್ರತಿಕ್ರಿಯಾರೂಪದಲ್ಲಿ ವ್ಯಕ್ತಿ ಬೆವರುತ್ತಾನೆ. ಹಾಗೆ ಬೆವೆತಾಗ ವಿದ್ಯುತ್‍ಪ್ರವಾಹ ಮೊದಲಿನ ಹಾಗೆ ತಡೆಯಲ್ಪಡದೆ, ಮುಂದುವರಿಯುವುದು. ಅಪರಾಧಪತ್ತೆಯ ಪ್ರಯೋಗಕ್ಕೊಳಗಾಗುವ ವ್ಯಕ್ತಿ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಅಪರಾಧಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಸುಳ್ಳು ಉತ್ತರ ಕೊಡುವಾಗ ಅಪರಾಧಿ ಭಾವೋದ್ರೇಕಗೊಳ್ಳುವುದು ಸಹಜ. ಬಹಿರಂಗಭಾವಪ್ರದರ್ಶನಗಳನ್ನು ಆತ ತೋರಗೊಡದಿದ್ದರೂ ಅನುಷಂಗಿಕ ದೈಹಿಕಮಾರ್ಪಾಡುಗಳನ್ನು ಸಲಕರಣೆಗಳ ಮೂಲಕ ಗೊತ್ತುಪಡಿಸಿಕೊಳ್ಳುವುದು ಸಾಧ್ಯವಾದುದರಿಂದ ಆತ ಅಪರಾಧಿ ಎಂದು ತಿಳಿಯಬಹುದು. ನಿರಪರಾಧಿ ಯಾವ ನಿರ್ದಿಷ್ಟ ಪ್ರಶ್ನೆಗಳಿಗೂ ಭಾವೋದ್ರೇಕಗೊಳ್ಳುವುದಿಲ್ಲ. ಎಲ್ಲ ಬಗೆಯ ಪ್ರಶ್ನೆಗಳಿಗೂ ಆತ ಉದ್ವೇಗರಹಿತನಾಗಿರುತ್ತಾನೆ. ಇದು ಪಾಲಿಗ್ರಾಫ್ ಮುದ್ರಿಕೆಯಲ್ಲಿ ಏರು ತಗ್ಗುಗಳಿಲ್ಲದೆ ಮುದ್ರಿತವಾಗುವುದು. ಪಾಲಿಗ್ರಾಫ್ ಮುದ್ರಿಕೆಯಲ್ಲಿನ ಏರುತಗ್ಗು ಮುದ್ರಣಗಳಿಂದ ಅನೃತಶೋಧ ಸುಲಭವಾಗುತ್ತದೆ.

ಒಮ್ಮೊಮ್ಮೆ ನಿರಪರಾಧಿ ಕೂಡ ತಾನು ಅಪರಾಧವೆಸಗದಿದ್ದರೂ ಅಪರಾಧದ ತಿಳಿವಳಿಕೆ ಇದ್ದಲ್ಲಿ, ಅದಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರಿಸುವಾಗ ಭಾವೋದ್ರೇಕಗೊಳ್ಳುವುದು ಸಹಜ. ಅದರಿಂದಾಗಿ ನಿರ್ದೋಷಿ ಸಿಕ್ಕಿಬೀಳುವುದುಂಟು. ಈ ಸಾಧನೆ ಇಂಥ ಸಂದರ್ಭಗಳಲ್ಲಿ ಯಶಸ್ವಿಯಾಗಲಾರದು. ಆದರೆ ಅನುಮಾನಿತರನ್ನು ನಿರ್ದಿಷ್ಟಗೊಳಿಸುವಲ್ಲಿ ಎಂದಿಗೂ ಇದು ಬಹು ಉಪಯುಕ್ತ ಸಾಧನವಾಗಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅನೃತಶೋಧ&oldid=714127" ಇಂದ ಪಡೆಯಲ್ಪಟ್ಟಿದೆ