ಅನುರಾಧಾ ಧಾರೇಶ್ವರ (ನವೆಂಬರ್ ೨೬, ೧೯೩೮) ಕನ್ನಡದ ಪ್ರಸಿದ್ಧ ಸುಗಮ ಸಂಗೀತ ಗಾಯಕಿಯರಲ್ಲೊಬ್ಬರು. ಅತಿ ಸಣ್ಣ ವಯಸ್ಸಿನಲ್ಲೇ ಸಂಗೀತವನ್ನೂ ಸಂಗೀತದ ಒಳಹೊರಗನ್ನೂ ಅರಿತು, ಇತರರಿಗೆ ಸಂಗೀತ ಕಲಿಸುವ ಪ್ರೌಢಿಮೆ ಪಡೆದ ಕಲಾವಿದೆ ಅನುರಾಧಾ ಧಾರೇಶ್ವರ್. ಅನುರಾಧಾ ಬೆಳವಲದ ಮಡಿಲ ಅಚ್ಚ ಕನ್ನಡ ಪ್ರತಿಭೆ.

ಅನುರಾಧಾ ಧಾರೇಶ್ವರ
Born
ಶಾಂತಾಮತಿ

ನವೆಂಬರ್ ೨೬, ೧೯೩೮
ಹುಬ್ಬಳ್ಳಿ
Occupationಆಕಾಶವಾಣಿ ಕಲಾವಿದರು, ಗಾಯಕಿ

ಜೀವನಸಂಪಾದಿಸಿ

1938ರ ನವೆಂಬರ್ 26ರಂದು ಹುಬ್ಬಳ್ಳಿಯಲ್ಲಿ ಜನಿಸಿದ ಅನುರಾಧಾ ತಂದೆ ನಾಗೇಶ್‌ರಾವ್ ಹಾಗೂ ತಾಯಿ ಕೃಷ್ಣಾಭಾಯಿ ಇಟ್ಟ ಹೆಸರು ಶಾಂತಾಮತಿ. ಸಂಪ್ರದಾಯದ ರೀತ್ಯ ಶಾಂತಾಮತಿ ಮದುವೆಯ ನಂತರ ಅನುರಾಧಾ ಧಾರೇಶ್ವರರಾಗಿ ಆ ಹೆಸರಿನಿಂದಲೇ ಪ್ರಸಿದ್ಧಿ ಪಡೆದರು. ಅನುರಾಧಾ ಅವರು, ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಕಷ್ಟಗಳ ನಡುವೆ ಹೋರಾಟದ ಜೀವನ ನಡೆಸಿ ಅತ್ಯುತ್ತಮ ಗಾಯಕಿಯಾಗಿ ರೂಪುಗೊಂಡಿದ್ದು ಮಹತ್ತರವಾದ ಸಾಧನೆಯೇ ಸರಿ. ಚಿಕ್ಕಂದಿನಿಂದಲೇ ಶಾಲಾ ಸಮಾರಂಭಗಳಲ್ಲಿ ಹಾಡುತ್ತಾ ಬಂದರು. ಧಾರವಾಡಕ್ಕೆ ಬಂದ ಮೇಲೆ ಖ್ಯಾತಗಾಯಕ, ಆಕಾಶವಾಣಿ ಕಲಾವಿದ ರಾಮಚಂದ್ರ ಜಂತ್ರಿಯವರಲ್ಲಿ ಶಿಷ್ಯವೃತ್ತಿ ಆರಂಭವಾಯಿತು. ಈಕೆಯ ಮಧುರ ಕಂಠ ಮತ್ತು ಗುಣಸ್ವಭಾವಗಳನ್ನು ಆತ್ಮೀಯವಾಗಿ ಕಂಡ ರಾಮಚಂದ್ರ ಜಂತ್ರಿ ದಂಪತಿಗಳು ಇವರ ಬಗ್ಗೆ ವಿಶೇಷ ಕಾಳಜಿ ವಹಿಸಿ ತಾವು ಕಲಿತ ಸಂಗೀತವೆಲ್ಲವನ್ನು ಧಾರೆ ಎರೆದರು. ಅನುರಾಧಾ ಅವರಿಗೆ ಶಾಸ್ತ್ರೀಯ ಸಂಗೀತದ ಮಜಲುಗಳು ಪರಿಚಯವಾಗುತ್ತಿದ್ದಂತೆ ಭಾವಗೀತೆಗಳನ್ನೂ ಹೇಳಿಕೊಡುತ್ತಾ ಬಂದರು. ಹೀಗೆ ಶ್ರೇಷ್ಠ ಕವಿಗಳ ಕವಿತೆಗಳು ಅನುರಾಧಾ ಅವರಿಗೆ ಕರಗತವಾಯಿತು. ಅನುರಾಧಾ ವೇದಿಕೆಗಳಲ್ಲಿ ಹಾಡುತ್ತಿದ್ದ ಭಾವಗೀತೆ ಹಾಗೂ ನಾಡಗೀತೆಗಳನ್ನು ಕೇಳಿದವರು ಆಕೆಯನ್ನು ಅಪಾರವಾಗಿ ಅಭಿಮಾನಿಸುತ್ತಿದ್ದರು. ಇವರ ಏರುದನಿ ಮತ್ತು ಧ್ವನಿ ಮಾಧುರ್ಯತೆಗೆ ಮಾರು ಹೋಗದವರೇ ಇರಲಿಲ್ಲ. ಈ ಪುಟ್ಟ ಬಾಲಕಿ ಗಾಯನದ ಜೊತೆಗೆ ಓದಿನಲ್ಲೂ ಮುಂದುವರಿದು ೧೦ನೇ ತರಗತಿಯನ್ನು ಮುಗಿಸಿದರು. ತಮ್ಮ ತಾಯಿ ತಮ್ಮನ್ನು ಓದಿಸಲು, ಬೆಳಸಲು ಪಡುತ್ತಿದ್ದ ಕಷ್ಟವನ್ನು ಕಂಡಿದ್ದ ಅನುರಾಧಾ ತಾವೂ ಕೂಡ ತಮ್ಮ ಸಂಸಾರಕ್ಕೆ ನೆರವಾಗಲು ನಿರ್ಧರಿಸಿ ತಮ್ಮ ಓದನ್ನು 10ನೇ ತರಗತಿಗೆ ಮೊಟುಕುಗೊಳಿಸಿದರು. ಇದೇ ಸಂದರ್ಭದಲ್ಲಿ ಇವರ ಸಂಸಾರವನ್ನು ಹತ್ತಿರದಿಂದ ನೋಡಿದ್ದ ಬಾಸೆಲ್ ಮಿಶನ್ ಗರ್ಲ್ಸ್ ಸ್ಕೂಲ್‌ನ ಹೆಡ್‌ಮಾಸ್ತರ್ ಅಮ್ಮಣ್ಣನವರು ಈಕೆಯ ಗಾಯನ ಪ್ರತಿಭೆಯನ್ನು ಗುರುತಿಸಿ ತಮ್ಮ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡಲು ಅವಕಾಶ ಒದಗಿಸಿಕೊಟ್ಟರು. ಈ ಕಾರ್ಯವನ್ನು ಭಕ್ತಿ, ಶ್ರದ್ಧೆಗಳಿಂದ ನಿರ್ವಹಿಸುತ್ತ ಶಾಲೆಯ ಮಕ್ಕಳಿಗೆ ಪ್ರಿಯರಾದರು. ಮುಂದೆ ಅವರು ಕರ್ನಾಟಕ ವಿಶ್ವವಿದ್ಯಾನಿಲಯದ ಸಂಗೀತ ಪದವಿ ಪಡೆದರು.

ಆಕಾಶವಾಣಿಯಲ್ಲಿಸಂಪಾದಿಸಿ

ಅನುರಾಧಾ ಅವರು ೧೯೬೬ರ ಸಮಯದಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಕೆಲಸಕ್ಕೆ ಸೇರಿದರು. ತಿಂಗಳಗೀತೆ, ರಾಮೋತ್ಸವ ಗೀತೆಗಳು, ರೂಪಕ, ನವರಾತ್ರಿಯ ಗೀತೆಗಳು ಹೀಗೆ ಸಂಗೀತದ ವಿವಿಧ ಪ್ರಕಾರಗಳಲ್ಲಿ ತಮ್ಮ ಧ್ವನಿಯನ್ನು ಆಳಡಿಸಿಕೊಳ್ಳುವ ಶೈಲಿಯನ್ನು ರೂಢಿಸಿಕೊಂಡರು. ಇವರು ಹಾಡಿದ ’ಓ ನನ್ನ ದೇಶಭಾಂದವರೇ' ಎಂಬ ನಾಡಿನ ಗೀತೆಯಂತೂ ಧಾರವಾಡದ ಮನೆ ಮನೆಗಳಲ್ಲೂ ಜನ ಜನಿತವಾಗಿತ್ತು. ಸುಶ್ರಾವ್ಯವಾಗಿ ಹಾಡುತ್ತಿದ್ದ ಈ ಕೋಗಿಲೆಯ ಖ್ಯಾತಿ ದೇಶದೆಲ್ಲೆಡೆ ಹಬ್ಬಿತ್ತು. ಅದು ಚೀನಾ ಭಾರತದ ಮೇಲೆ ಆಕ್ರಮಣ ನಡೆಸಿದ್ದ ಸಮಯದ ಆಸುಪಾಸು. ಆಗ ಪ್ರಧಾನಿಯಾಗಿದ್ದ ಪ್ರಧಾನಿ ನೆಹರು ಅವರ ನೇತೃತ್ವದಲ್ಲಿ ಸಮಾರಂಭವೊಂದು ಜರುಗಿತು. ಈ ಸಮಾರಂಭದ ಪ್ರಾರ್ಥನೆಗೆ ಅನುರಾಧಾ ಧಾರೇಶ್ವರ್ ಅವರನ್ನು ಆಹ್ವಾನಿಸಲಾಗಿತ್ತು. ಅಂದು ಇವರು ಹಾಡಿದ ದೇಶಭಕ್ತಿಗೀತೆಗೆ ಭಾವುಕರಾದ ನೆಹರು ಅವರ ಕಣ್ಣಲ್ಲಿ ಅಶ್ರುತುಂಬಿತ್ತು. ಅನುರಾಧ ಅವರು ಆ ದಿನಗಳಲ್ಲಿ ಆಕಾಶವಾಣಿಯಲ್ಲಿ ಸಂಗೀತ ನಿರ್ದೇಶಕರಾಗಿದ್ದ ಮಹಾನ್ ಗಾಯಕರಾದ ಮಲ್ಲಿಕಾರ್ಜುನ ಮನ್ಸೂರ್ ಅವರ ಸಂಗೀತ ನಿರ್ದೇಶನದ ಹಲವಾರು ಗೀತೆಗಳಿಗೆ ದನಿಯಾಗಿದ್ದರು.

ಸಂಗೀತ ಕಾರ್ಯಕ್ರಮಗಳಲ್ಲಿಸಂಪಾದಿಸಿ

ತಮ್ಮ ಗಾಯನವನ್ನು ಆಕಾಶವಾಣಿಗಷ್ಟೇ ಮೀಸಲಾಗಿಡದೆ ಹೊರಗಿನ ಸಮಾರಂಭಗಳಲ್ಲಿ ಹೆಚ್ಚಾಗಿ ಹಾಡುತ್ತಾ ಧಾರವಾಡದ ಕೋಗಿಲೆಯಾಗಿ ಸುಪ್ರಸಿದ್ಧರಾದರು. ಯಾವುದೇ ಉತ್ಸವ ಕಾರ್ಯಕ್ರಮಗಳಿರಲಿ ಅಲ್ಲಿ ಅನುರಾಧ ಅವರ ಗಾಯನ ಕಾರ್ಯಕ್ರಮ ಇರಲೇಬೇಕು ಎಂಬಷ್ಟು ಪ್ರಸಿದ್ಧಿಗೆ ಬಂದರು. ೧೯೯೭ರ ವರ್ಷದಲ್ಲಿ ನಿವೃತ್ತಿಯಾದ ನಂತರದಲ್ಲಿ ತಮ್ಮನ್ನು ಗಾಯನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು. ಇವರು ಹಾಡುತ್ತಿದ್ದ ವರಕವಿ ಬೇಂದ್ರೆಯವರ ‘ಬೆಳುದಿಂಗಳ ನೋಡ ಬೆಳುದಿಂಗಳ ನೋಡ' ಗೀತೆಯಂತೂ ದಕ್ಷಿಣ ಕರ್ನಾಟಕದ ಶ್ರೋತೃಗಳಿಗೆ ಅಚ್ಚುಮೆಚ್ಚು. ಎಂಥವರನ್ನೂ ತಮ್ಮ ಗಾಯನದಿಂದ ಮೋಡಿಮಾಡುವ ಈಕೆ ಸ್ವತಃ ಸಂಗೀತ ಸಂಯೋಜಕರೂ ಹೌದು. ಇವರೇ ಸಂಯೋಜಸಿ ಹಾಡಿದ ’ತಿಂಗಳ ಲೋಕದ ಅಂಗಳದಲ್ಲಿ’ ಎಂಬ ರೂಪಕ ಆಕಾಶವಾಣಿಯಲ್ಲಿ ಬಹು ಜನಪ್ರಿಯವಾಯಿತು. ಕನ್ನಡವಲ್ಲದೆ ಕೊಂಕಣಿ, ಮರಾಠಿ, ಹಿಂದಿ, ಬಂಗಾಳಿ, ತೆಲುಗು ಮುಂತಾದ ಭಾಷೆಯ ಗೀತೆಗಳನ್ನೂ ಸುಲಲಿತವಾಗಿ ಹಾಡುತ್ತಿದ್ದುದರಿಂದ ಇವರಿಗೆ ಬಹು ಭಾಷಾ ಗಾಯಕಿ ಎಂಬ ಬಿರುದಾಂಕಿತವಾಯಿತು. [೧]

ಪ್ರಶಸ್ತಿ ಗೌರವಗಳುಸಂಪಾದಿಸಿ

ಈ ಅಗಾಧ ಪ್ರತಿಭೆ ಅನುರಾಧಾ ಅವರಿಗೆ ೧೯೮೮-೮೯ರ ಸಾಲಿನ ’ಕರ್ನಾಟಕ ಕಲಾತಿಲಕ’ ಪ್ರಶಸ್ತಿ, ೧೯೯೫ರ ಸಾಲಿನ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸುಗಮ ಸಂಗೀತ ಕ್ಷೇತ್ರದ ಪರಮೋಚ್ಚ ‘ಸಂತ ಶಿಶುನಾಳ ಶರೀಫ ಪ್ರಶಸ್ತಿ’ಗಳನ್ನು ಸಲ್ಲಿಸಿ ಗೌರವಿಸಲಾಗಿದೆ. ಕೊಂಕಣಿ ಭಾಷೆಯಲ್ಲಿನ ಅವರ ಸಂಗೀತ ಸಾಧನೆಗಾಗಿ 'ಕಲಾಕಾರ್' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅವರಿಗೆ ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪುರಸ್ಕಾರ ಸಹಾ ಸಂದಿದೆ.[೨]

ಉಲ್ಲೇಖಸಂಪಾದಿಸಿ

  1. http://archives.kannadaprabha.com/NewsItems.asp?ID=KPD20120306121106&Title=District%20News&lTitle=%C1%DBd%C0%20%C8%DB}%E6%&Topic=0&ndate=3/6/2012&dName=%A8%DB%C1%DA%C8%DBs%DA&Dist=9 ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪುರಸ್ಕಾರ -ಕನ್ನಡ ಪ್ರಭ
  2. http://www.prajavani.net/show_page.php?nid=154475 ಅನುರಾಧಾ ಆಲಾಪನಾ - ಪ್ರಜಾವಾಣಿ