ಅನಿಲದ ಮೊಗವಾಡ ಮನುಷ್ಯ ಜೀವಕ್ಕೆ ಅಪಾಯಕಾರಕ ಅನಿಲ ಸೇವನೆಯಿಂದ ತಟ್ಟಬಹುದಾದ ಹಾನಿಯಿಂದ ಮನುಷ್ಯನನ್ನು ರಕ್ಷಿಸುವ ಸಾಧನೆ (ಗ್ಯಾಸ್ ಮಾಸ್ಕ್).

ಇತಿಹಾಸ ಬದಲಾಯಿಸಿ

ಇದಕ್ಕೆ ಈಗ ಉಸಿರಾಟಿಕವೆಂದೂ (ರೆಸ್ಪೆರೇಟರ್) ಹೆಸರಿದೆ. ಯುದ್ಧದ ಕೈದುವಾಗಿ ಮೊಟ್ಟಮೊದಲು (ಜನವರಿ 31, 1915) ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಪೋಲೆಂಡಿನಲ್ಲಿ ಜರ್ಮನರು ರಷ್ಯನರ ಮೇಲೆ ವಿಷದ ಅನಿಲಗಳನ್ನು ಹಾಕಿದರು.

 
ಮಹಾಯುದ್ಧದ ಸಮಯದಲ್ಲಿ ಬಳಸಿದ ಅನಿಲದ ಮೊಗವಾಡ

[೧] ಮತ್ತೆ ಬೆಲ್ಜಿಯಮ್ಮಿನಲ್ಲಿ ಮಿತ್ರರಾಷ್ಟ್ರಗಳ ಸೇನೆಗಳ ಮೇಲೂ ಬಳಸಿದರು. ಆಗ ಅನಿಲ ಮೊಗವಾಡದ ಆವಶ್ಯಕತೆ ಉಂಟಾಯಿತು.

ಅನನುಕೂಲಗಳು ಬದಲಾಯಿಸಿ

ವಿಷಾನಿಲದ ಕೆಡುಕು ತಾಗದಂತೆ ತಡೆಯಲು ಮೊದಲು ತಯಾರಿಸಿ ಬಳಸಿದ ಸೈನಿಕನ ಮೊಗವಾಡ ಒಡ್ಡೊಡ್ಡಾಗಿತ್ತು. ಮೊಗದ ಸುತ್ತ ತಗುಲಿಸಿರುವ ಮೊಗವಾಡ ಎದೆಯ ಮುಂದೆ ಕೊರಳಿಗೆ ತೂಗು ಕಟ್ಟಿರುವ, ಮೊಗವಾಡದೊಂದಿಗೆ ಕೊಳವೆಯಿಂದ ಕೂಡಿರುವ ಕರಾಟವನ್ನು (ಕ್ಯಾನಿಸ್ಟರ್) ಹೊತ್ತುಕೊಂಡಿರಬೇಕಿತ್ತು. ಒಣ ಇದ್ದಲು ತುಂಬಿದ ಕವಾಟದ ಮೂಲಕ ಬರುವ ಕೊಳವೆಯನ್ನು ಸೈನಿಕ ಬಾಯಲ್ಲಿ ಇರಿಸಿಕೊಂಡು ಉಸಿರು ಎಳೆದುಕೊಂಡಾಗ ವಿಷಾನಿಲ ಸೋಸಿ ಬರುತ್ತಿತ್ತು. ಮೂಗಿನಲ್ಲಿ ಗಾಳಿ ತೂರದಂತೆ ಒಂದು ಚಿಪ್ಪಳ (ಕ್ಲಿಪ್)ಹಾಕುತ್ತಿದ್ದರು. ಇವನ್ನು ತೊಟ್ಟ ಸೈನಿಕನ ಚಲನವಲನವೂ, ಕಾದಾಡುವ ಸಾಮರ್ಥ್ಯವೂ ಕುಗ್ಗಿತ್ತು. ಗುಂಡಿನ ಸುರಿಮಳೆಯಿಂದ ತಪ್ಪಿಸಿಕೊಳ್ಳಲು ಸೈನಿಕ ನೆಲದ ಮೇಲೆ ಕವುಚಿ ಬೀಳಲು ಆತಂಕವಾಗಿತ್ತು. ಎರಡನೆಯ ಮಹಾಯುದ್ಧದ ಹೊತ್ತಿಗೆ ಅನುಕೂಲವಾದ ಮೊಗವಾಡಗಳು ಬಂದಿದ್ದುವು. ಇವು ಹಗುರವಾಗಿದ್ದು, ತೊಡಲು ಚೆನ್ನಾಗಿದ್ದುವು. ಕಣ್ಣುಗಳಿಗೆ ಅಡ್ಡ ಬರುತ್ತಿರಲಿಲ್ಲ. ಮೂಗಿನ ಚಿಪ್ಪಳ, ಬಾಯಲ್ಲಿನ ಕೊಳವೆ ಇಲ್ಲದೆ ಉಸಿರಾಟ ಸರಾಗವಾಯಿತು. ಅಲ್ಲದೆ ಕರಾಟವನ್ನು ಹೆಗಲಮೇಲೆ ಹಾಕಿ, ಕಂಕುಳಿನ ಕೆಳಗೆ ಇರಿಸುತ್ತಿದ್ದುದರಿಂದ ಸೈನಿಕನ ಓಡಾಟಗಳಿಗೆ ಏನೇನೂ ಅಡ್ಡ ಬರುತ್ತಿರಲಿಲ್ಲ. ಮೊಗವಾಡದಲ್ಲಿ ಹಲವಾರು ತಿದ್ದುಪಾಟುಗಳು ಆಗಿಬಂದರೂ ವಿಷಾನಿಲ ತುಂಬಿದ ಗಾಳಿಯನ್ನು ಸೋಸಲು ಬಳಸುತ್ತಿದ್ದ ರಾಸಾಯನಿಕಗಳು ಮಾತ್ರ ಬದಲಾಗಿಲ್ಲ. ಕರಾಟಗಳಲ್ಲಿನ ಇದ್ದಲೂ ಸೋಡಾ ಲೈಮೂ ಎಂತಹ ವಿಷಾನಿಲಗಳನ್ನೂ ಹೀರಿಕೊಂಡು ಸಯ್ಗೊಳಿಸುತ್ತಿದ್ದುವು. ಆದರೆ ವಿಷಾನಿಲ ಹುಟ್ಟಿಸುವ ಕೆಲವು ರಾಸಾಯನಿಕಗಳು ಎಷ್ಟೋ ಹೊತ್ತು ನುಣ್ಣನೆಯ ಪುಡಿಯಂತೆ ಗಾಳಿಯಲ್ಲಿ ತೇಲಾಡುತ್ತಿದ್ದುವು. ಇವನ್ನು ತಡೆವಂತೆ ಗಾಳಿಯನ್ನೂ ಸೋಸಿಬಿಡುವ ಉಣ್ಣೆ ತಡಿಯ ಪಟ್ಟೆಗಳು ಕರಾಟಗಳಲ್ಲಿವೆ.

ಇತರ ಕ್ಷೇತ್ರಗಳಲ್ಲಿ ಉಪಯೋಗ ಬದಲಾಯಿಸಿ

ಸೈನ್ಯದಲ್ಲಿ ಅಲ್ಲದೆಯೇ, ಅನಿಲದ ಮೊಗವಾಡಗಳು ಕೈಗಾರಿಕೆಗಳಲ್ಲೂ ಬಳಕೆಯಲ್ಲಿವೆ. ಗಣಿ ಕೆಲಸದ, ಸಹಜವಾಗಿಯೇ ತಯಾರಿಕೆಯ ವಿಧಾನ ಕ್ರಮಗಳಿಂದಲೋ ಏಳುವ, ಹಾನಿಕರವೆನಿಸುವ ಹೊಗೆಗಳನ್ನೂ ಅನಿಲಗಳನ್ನೂ ಹೊರಬಿಡುವ, ರಾಸಾಯನಿಕ ಮತ್ತಿತರ ಕಾರ್ಖಾನೆಗಳ ಕೆಲಸಗಾರರಿಗೆ ಹಾನಿ ತಟ್ಟದಂತೆ ತಡೆಯಲು ಇವು ಕೆಲಸಕ್ಕೆ ಬರುತ್ತವೆ. ಬೆಂಕಿ ಆರಿಸುವವರೂ ನೆರವಿಗೆ ತಂಡದವರೂ ತಮ್ಮ ಎಂದಿನ ಸಲಕರಣೆಗಳೊಂದಿಗೆ ಅನಿಲದ ಮೊಗವಾಡಗಳನ್ನೂ ಇಟ್ಟುಕೊಂಡಿರಬೇಕು. ಅದರಲ್ಲೂ ವಿಶೇಷವಾಗಿ, ಕಳೆದ ಎರಡನೆಯ ಮಹಾಯುದ್ಧದ ಕಾಲದಲ್ಲಿ ಯೂರೋಪಿನಲ್ಲಿ ವಿಷಾನಿಲದ ಮೊಗವಾಡಗಳನ್ನು ಜನರಿಗೂ ಕೊಟ್ಟಿದ್ದರಂತೆ.

ಉಲ್ಲೇಖ ಬದಲಾಯಿಸಿ

  1. [೧][ಶಾಶ್ವತವಾಗಿ ಮಡಿದ ಕೊಂಡಿ]ಯುದ್ಧದ ಸಾಮಗ್ರಿ - ವಿಷಾನಿಲ