ಅದುರುಶುದ್ಧಿ

ಅದುರನ್ನು ಅದರೊಂದಿಗೆ ಬೆರೆತಿರುವ ಅನುಪಯುಕ್ತ ವಸ್ತುಗಳು ಹಾಗೂ ಕಲ್ಮಷಗಳಿಂದ ಬೇರ್ಪಡಿಸುವ ವಿಧಾನ

ಬದಲಾಯಿಸಿ

ಸಾಮಾನ್ಯವಾಗಿ ಅದುರನ್ನು ಅದರಲ್ಲಿನ ಲೋಹಾಂಶಗಳ ಪ್ರಮಾಣದ ಮೇಲೆ ಉತ್ತಮ, ಮಧ್ಯಮ ಹಾಗೂ ಕೆಳದರ್ಜೆಯವೆಂದು ವಿಂಗಡಿಸಲಾಗುವುದು. ಉತ್ತಮ ದರ್ಜೆಯ ಅದುರನ್ನು ಗಣಿಯಿಂದ ತೆಗೆದು ಈಗಾಗಲೇ ಉಪಯೋಗಿಸಿರುವುದರಿಂದ ಈಗ ಹೇರಳವಾಗಿ ಮಧ್ಯಮ ಮತ್ತು ಕೆಳದರ್ಜೆಯ ಅದುರು ಮಾತ್ರ ಸಿಕ್ಕುತ್ತದೆ. ಅತ್ಯುತ್ತಮ ದರ್ಜೆಯ ಹಿರಿಯ ಅದುರುನಿಕ್ಷೇಪಗಳು ಈಗ ಸಾಮಾನ್ಯವಾಗಿ ಇಲ್ಲವೆಂದೇ ಹೇಳಬೇಕು. ಆದ್ದರಿಂದ ಮಧ್ಯಮ ಮತ್ತು ಕೆಳದರ್ಜೆಯ ಅದುರಿಗೆ ಈಗ ಹೆಚ್ಚು ಗಮನ ಕೊಡಬೇಕಾದುದು ಅತ್ಯಾವಶ್ಯಕ.

ಮಧ್ಯಮ ಮತ್ತು ಕೆಳದರ್ಜೆಯ ಅದುರನ್ನು ಶುದ್ಧಿಮಾಡಲು ಅನೇಕ ವಿಧಾನಗಳಿವೆ. ಅದುರನ್ನು ಕುಲುಮೆಯಲ್ಲಿ ಹಾಕಿ ಲೋಹಾಂಶವನ್ನು ಬೇರ್ಪಡಿಸುವ ವಿಧಾನದಲ್ಲಿ ಸುಣ್ಣಕಲ್ಲು ಮತ್ತು ಕಲ್ಲಿದ್ದಲನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಬೇಕಾಗುವುದು. ಇದು ನೈಸರ್ಗಿಕ ಸಂಪತ್ತಿನ ದೃಷ್ಟಿಯಿಂದಲೂ ಮತ್ತು ಆರ್ಥಿಕದೃಷ್ಟಿಯಿಂದಲೂ ಲಾಭದಾಯಕವಲ್ಲ.

ಇನ್ನು ಶುದ್ಧೀಕರಣದ ದೊಡ್ಡ ಯಂತ್ರಗಳನ್ನು ನಿಕ್ಷೇಪಗಳ ಬಳಿ ಸ್ಥಾಪಿಸುವುದಾದರೆ ಮೊದಲು ಯೋಜಿತ ಮಾರ್ಗದರ್ಶಕ ಯಂತ್ರೋಪಕರಣಗಳ ಸಹಾಯದಿಂದ ಹಂತ ಹಂತವಾಗಿ ಅದುರನ್ನು ಶುದ್ಧಿ ಮಾಡುವುದರ ಬಗ್ಗೆ ಪರೀಕ್ಷಿಸಿ ನೋಡಿ, ಲಾಭದಾಯಕವಾಗಿರುವುದೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಏಕೆಂದರೆ ಅದುರನ್ನು ಶುದ್ಧಿಮಾಡುವಾಗ ಯಾವುದಾದರೊಂದು ಬಗೆಯ ಜಟಿಲ ಸಮಸ್ಯೆ ಇದ್ದೇ ಇರುತ್ತದೆ.

ಅದುರಿನಲ್ಲಿ ನಾನಾ ಬಗೆಯ ಖನಿಜವಸ್ತುಗಳು ಮಿಶ್ರಗೊಂಡಿರುತ್ತವೆ. ಅವುಗಳಲ್ಲಿ ಮುಖ್ಯವಾದುವುದಗಳೆಂದರೆ ಸ್ಫಟಿಕ ಮತ್ತು ಸಿಲಿಕೇಟುಗಳು. ಅದುರನ್ನು ಶುದ್ಧಿಮಾಡುವ ಯಂತ್ರೋಪಕರಣಗಳ ಪೈಕಿ, ಇತ್ತೀಚಿನವರೆಗೆ ಹೆಚ್ಚಿಗೆ ಬಳಕೆಯಲ್ಲಿದ್ದುದು ಉಕ್ಕಿನ ಒನಕೆ ಯಂತ್ರ. ಆದರೆ ಇಂದು ಅದುರು ಸಂಸ್ಕರಣ ಕಾರ್ಯದಲ್ಲಿ ನೂತನ ಸುಧಾರಿತ ವಿಧಾನಗಳನ್ನು ಕಂಡು ಹಿಡಿದು, ಆ ಕಾರ್ಯವನ್ನು ನವೀನಗೊಳಿಸಿದ್ದಾರೆ. ಈ ರೀತಿಯ ಸಂಶೋಧನೆಗಳ ಫಲವಾಗಿ ನಮಗೆ ದೊರೆತಿರುವ ಆಧುನಿಕ ರೀತಿಯ ಅದುರುಜಜ್ಜುವ ಯಂತ್ರಗಳು, ಪುಡಿಮಾಡುವ ಯಂತ್ರಗಳು, ಅಯಸ್ಕಾಂತೀಯ ವಿಭಜಕಯಂತ್ರಗಳು, ಸ್ವಯಂಚಾಲಿತ ಕುಲುಕುಜರಡಿಗಳು, ಸ್ವಯಂಚಾಲಿತ ಕುಲುಕುಹಲಗೆಗಳು, ಒನೆಯುವ ಕೇರುವ ಸಲಕರಣೆಗಳು ಇವುಗಳ ಸಹಾಯದಿಂದ ಅದುರು ಶುದ್ಧೀಕರಣ ಕಾರ್ಯದಲ್ಲಿ ಎಂಥ ತೊಡಕಿನ ಸಮಸ್ಯೆಯನ್ನಾದರೂ ಬಿಡಿಸಬಹುದು.

ಅದುರಿನಲ್ಲಿರುವ ಮುಖ್ಯ ಖನಿಜಗಳನ್ನು ವಿಂಗಡಿಸಬೇಕಾದರೆ ಮೊದಲು ಜಜ್ಜುವ ಯಂತ್ರಗಳಿಂದ ಪುಡಿಮಾಡಬೇಕು. ಅನಂತರ ಯಾವ ಗಾತ್ರದಲ್ಲಿ ಖನಿಜವಸ್ತುಗಳು ಅದುರಿನಲ್ಲಿ ಅಡಗಿವೆ ಎಂಬುದನ್ನು ವಿಶೇಷರೀತಿಯ ಜರಡಿಗಳ ಸಹಾಯದಿಂದ ಪರೀಕ್ಷಿಸಿ. ಶುದ್ಧಿಮಾಡಬೇಕಾದ ವಿಧಾನವನ್ನು ನಿರ್ಧರಿಸಬೇಕು. ಆಮೇಲೆ ಅದುರಿನಲ್ಲಿರುವ ಖನಿಜವಸ್ತುಗಳನ್ನು ನಿರ್ದಿಷ್ಟ ಗುರುತ್ವಾಕರ್ಷಣೆ ಹಾಗೂ ಅಯಸ್ಕಾಂತೀಯ ಆಕರ್ಷಣೆಗೆ ಒಳಪಡಿಸಿ ಅನೇಕ ಖನಿಜಗಳನ್ನು ಸುಲಭವಾಗಿ ಬೇರ್ಪಡಿಸಬಹುದು.

ಸಾಮಾನ್ಯವಾಗಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಖನಿಜಾಂಶಗಳು ಅದುರಿನಲ್ಲಿ ಅಡಗಿರುವುದರಿಂದ ಅದುರನ್ನು ಹಿಟ್ಟುಮಾಡಿ ಶುದ್ಧಿಮಾಡುವುದು ಸುಲಭವೂ ಅಲ್ಲ, ಲಾಭದಾಯಕವೂ ಅಲ್ಲ. ಆದ್ದರಿಂದ ಸಣ್ಣ ಹಾಗೂ ದಪ್ಪ ರವೆಗಾತ್ರದ ಅದುರಿನ ಪುಡಿಯನ್ನು ಸ್ವಯಂಚಾಲಿತ ಕುಲುಕುಹಲಗೆ ಯಂತ್ರಗಳಲ್ಲಿ ಅಥವಾ ಕೇರುವ ಯಂತ್ರಗಳಲ್ಲಿ ನೀರಿನೊಂದಿಗೆ ಹಾಕಿ ಜಾಲಿಸಿ ಖನಿಜವನ್ನು ಬೇರ್ಪಡಿಸಬಹುದು. ರಾಡಿಯಾದ ಅದುರನ್ನು ವಿಂಗಡಿಸುವ ಯಂತ್ರಗಳ ಸಹಾಯದಿಂದ ಜೇಡಿಮಣ್ಣಿನ ಅಂಶವನ್ನು ಬೇರ್ಪಡಿಸಿ, ಖನಿಜ ಕಣಗಳು ನೀರ್ಗುಳ್ಳೆಗಳಿಗೆ ಅಂಟಿಕೊಳ್ಳುವಂತೆ ಮಾಡಿ ತೇಲಿಸುವ ತಂತುವಿನ ಸಹಾಯದಿಂದ ಸಂಗ್ರಹಿಸುವುದು ಆಧುನಿಕ ಪದ್ಧತಿ. ಒಂದು ವೇಳೆ ಅದುರಿನಲ್ಲಿ ಎರಡಕ್ಕಿಂತ ಹೆಚ್ಚಿನ ಖನಿಜಾಂಶಗಳಿದ್ದಲ್ಲಿ ಸೂಕ್ತ ರಾಸಾಯನಿಕ ವಸ್ತುಗಳ ಸಹಾಯದಿಂದ ಒಂದಾದ ಮೇಲೊಂದು ಖನಿಜವನ್ನು ತೇಲಿಸುವ ಯಂತ್ರಗಳ ಸಹಾಯದಿಂದ ಸಂಗ್ರಹಿಸುವುದು ಅತ್ಯಾಧುನಿಕ ಪದ್ಧತಿ. ಗಂಧಕಾಂಶವುಳ್ಳ ಅದುರನ್ನು ಈ ವಿಧಾನದಿಂದ ಶುದ್ಧಿಮಾಡಿ ಸಂಗ್ರಹಿಸುವುದು ಅತಿಸುಲಭ ಹಾಗೂ ಲಾಭದಾಯಕ. ನೀರಿನ ಮಾಧ್ಯಮದೊಂದಿಗೆ ಕೇರುವ ಮತ್ತು ಕುಲುಕುವ ಹಲಗೆಗಳ ಸಹಾಯದಿಂದ ಅದುರನ್ನು ಶುದ್ಧಿಮಾಡುವುದರ ಬದಲಾಗಿ ಅದುಮಿದ ಗಾಳಿಯ ಮಾಧ್ಯಮದಿಂದ ಶುದ್ಧಿಮಾಡುವುದು ಬಳಕೆಗೆ ಬರುತ್ತಿದೆ. ಸಾಮಾನ್ಯವಾಗಿ ಯಂತ್ರಗಳಲ್ಲಿ ಕಲ್ಲಿದ್ದಲನ್ನು ಶುದ್ಧಿಮಾಡಿ ಕೇರುವಾಗ ಅದುಮಿದ ಗಾಳಿಯನ್ನು ಮಾಧ್ಯಮವಾಗಿ ಉಪಯೋಗಿಸುವುದು ನವೀನ ಪದ್ಧತಿ.

ತೇಲು-ಮುಳುಗು ವಿಧಾನದಿಂದ ಕಲ್ಲಿದ್ದಲಿನಂಥ ಅದುರನ್ನು ಶುದ್ಧಿಮಾಡುವುದು ಬಳಕೆಯಲ್ಲಿದೆ. ಈ ವಿಧಾನದಲ್ಲಿ ನುಣ್ಣನೆಯ ಹಿಟ್ಟುಮಾಡಿರುವ ಫೆರೋಸಿಲಿಕಾನ್ ಮಿಶ್ರಲೋಹವನ್ನು ನೀರಿನಲ್ಲಿ ಕದಡಿ, ಬೇರ್ಪಡಿಸಬೇಕಾದ ಖನಿಜಗಳ ನಿರ್ದಿಷ್ಟ ಗುರುತ್ವಕ್ಕೆ ತಕ್ಕಂತೆ ರಾಡಿಯ ಗುರುತ್ವವನ್ನು ಸಹ ಸೂಕ್ತವಾಗಿ ಬದಲಾಯಿಸುವ ವಿಧಾನದಿಂದ ಶುದ್ಧಿಮಾಡುವುದು ಈಗ ರೂಢಿಯಲ್ಲಿದೆ. ಈ ವಿಧಾನದಿಂದ ಕಲ್ಲಿದ್ದಲನ್ನು ಶುದ್ಧಿಮಾಡುವುದು ಅತಿ ಲಾಭದಾಯಕವೆಂದು ಪರಿಗಣಿಸಲಾಗಿದೆ.

ಪರೀಕ್ಷಾರ್ಥ ಪರಿಶೋಧನೆಯ ಅನಂತರ ಕನಿಷ್ಠ ಖರ್ಚಿನಲ್ಲಿ, ಪ್ರವೀಣಯೋಜನೆಯೊಂದಿಗೆ, ಅದುರುಶುದ್ಧಿ ಮತ್ತು ವಿಂಗಡನೆಯ ಕಾರ್ಖಾನೆಯನ್ನು ಗಣಿಯ ಸವಿೂಪದಲ್ಲೇ ಸ್ಥಾಪಿಸುವುದು ಆರ್ಥಿಕ ಹಾಗೂ ಸಾರಿಗೆಯ ದೃಷ್ಟಿಯಿಂದ ಒಳ್ಳೆಯದು (ಬಿ.ಎಸ್.ಆರ್.)[][]

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2014-08-26. Retrieved 2016-10-19.
  2. "ಆರ್ಕೈವ್ ನಕಲು" (PDF). Archived from the original (PDF) on 2017-04-28. Retrieved 2016-10-19.