ಅತ್ತಿರಾಂಪಾಕ್ಕಂ
ಅತ್ತಿರಾಂಪಾಕ್ಕಂ ಮದ್ರಾಸಿನಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು 40 ಮೈಲಿಗಳ ದೂರದಲ್ಲಿ ಹಳೆಯ ಪಾಲಾರ್ ಅಥವಾ ಈಗಿನ ಕೊರ್ತ ಲೈಮಾರ್ ನದೀಕಣಿವೆಯಲ್ಲಿರುವ ಈ ಚಿಕ್ಕ ಊರು. ದಕ್ಷಿಣಭಾರತದ ಪೂರ್ವಶಿಲಾಯುಗದ ಮುಖ್ಯ ನೆಲೆಗಳಲ್ಲೊಂದು. ಇಲ್ಲಿ ಪ್ಲೀಸ್ಟೋಸೀನ್ ಕಾಲಕ್ಕೆ ಸೇರಿದ ನಾಲ್ಕು ನದೀ ಮಟ್ಟಗಳು (ರೀವರ್ ಟೆರೇಸಸ್) ಇದ್ದು ಅವುಗಳಲ್ಲಿ ಎರಡನೆಯ ಮತ್ತು ಮೂರನೆಯ ಮಟ್ಟಗಳಿಂದ ಆದಿಮಾನವನಿರ್ಮಿತವಾದ ಅಬೆವಿಲಿಯನ್ ಮತ್ತು ಅಷ್ಯೂಲಿಯನ್ ಹಂತದ ಕೈಕೊಡಲಿಗಳೂ ಕ್ಲಾಕ್ಟೋನಿಯನ್ ಮತ್ತು ಲೆವಲ್ವಾಸಿಯನ್ ರೀತಿಯ ಚಕ್ಕೆಕಲ್ಲಿನಾಯುಧಗಳೂ ದೊರಕಿವೆ.
ಅತ್ತಿರಾಂಪಾಕ್ಕಂ | |
---|---|
ಹಳ್ಳಿ |
ಸಂಗ್ರಹಣೆ
ಬದಲಾಯಿಸಿಭಾರತದಲ್ಲೇ ಮೊದಲ ಬಾರಿಗೆ ಈ ಪ್ರದೇಶದಲ್ಲಿ ರಾಬರ್ಟ್ ಬ್ರೂಸ್ಫುಟ್ ಈ ಶಿಲಾಯುಧಗಳನ್ನು ಸಂಗ್ರಹಿಸಿದ. ಅನಂತರ ಟಿ.ಟಿ.ಪ್ಯಾಟರ್‍ಸನ್ ಮತ್ತು ವಿ.ಡಿ.ಕೃಷ್ಣಸ್ವಾಮಿಯವರ ಸಂಶೋಧನೆಗಳಿಂದ ಭಾರತೀಯ ಪೂರ್ವಶಿಲಾಯುಗ ಸಂಸ್ಕೃತಿಯಲ್ಲಿ ಈ ಪ್ರದೇಶದ ಪ್ರಾಮುಖ್ಯ ತಿಳಿದುಬಂದಿದೆ. ಅತ್ತಿರಾಂಪಾಕ್ಕಂ ಮತ್ತು ಇಲ್ಲಿಂದ 15 ಮೈಲಿ ದೂರದಲ್ಲಿ ನಾರಣಾವರಂ ನದಿಯ ತೀರದಲ್ಲಿರುವ ವಡ ಮಧುರೈ ಎಂಬೆರಡು ನೆಲೆಗಳಿಂದ ಪೂರ್ವಶಿಲಾಯುಗ ಸಂಸ್ಕೃತಿಯ ಬೆಳೆವಣೆಗೆ ತಿಳಿದುಬರುತ್ತದೆ.
ಕಾಲಮಾನ
ಬದಲಾಯಿಸಿಈ ಪ್ರದೇಶಗಳಲ್ಲಿ ಕಂಡುಬರುವ ಮೊದಲ ನದೀಮಟ್ಟದಲ್ಲಿ ಅಬ್ಬೆವಿಲ್ಲಿಯನ್ ಮತ್ತು ಅಷ್ಯೂಲಿಯನ್ ಹಂತದ ಮೊದಲಭಾಗದ ಕೈಕೊಡಲಿಗಳೂ ಚಕ್ಕೆಕಲ್ಲುಗಳೂ ಮತ್ತಿತರ ಆಯುಧಗಳೂ ದೊರಕಿವೆ. ಎರಡನೆಯ ಮಟ್ಟದಲ್ಲಿ ಅಷ್ಯೂಲಿಯನ್ ಹಂತದ ಮುನ್ನಡೆ ಕಂಡುಬಂದು ಆಯುಧಗಳು ನೇರವಾಗೂ ಚೂಪಾಗೂ ಮಾರ್ಪಟ್ಟಿವೆ. ಮೂರನೆಯ ಮಟ್ಟದಲ್ಲಿ ಅಷ್ಯೂಲಿಯನ್ ಹಂತದ ಕೊನೆಗಾಲದ ಆಯುಧಗಳೂ ಮಿಕಾಕ್ವಿಯನ್ ರೀತಿಯ ಕೈಕೊಡಲಿಗಳೂ ಲೆವಲ್ವಾಸಿಯನ್ ರೀತಿಯ ಚಕ್ಕೆಕಲ್ಲಿನಾಯುಧಗಳೂ ಕಂಡುಬಂದಿವೆ. ಕಡೆಯದಾದ ನಾಲ್ಕನೆಯ ಮಟ್ಟದಲ್ಲಿ ಶಿಲಾಯುಗದ ಅಂತ್ಯಕಾಲಕ್ಕೆ ಸೇರಿದ ಆಯುಧಗಳೂ ದೊರಕುತ್ತವೆ. ಇತ್ತೀಚಿನ ಸಂಶೋಧನೆಗಳಿಂದ ಶಿಲಾಯುಗದ ಅಂತ್ಯಕಾಲಕ್ಕೆ ಸೇರಿದ ಆಯುಧಗಳನ್ನು ಮಧ್ಯಶಿಲಾಯುಗದ ಅವಶೇಷಗಳೆಂದು ಪ್ರಾಕ್ತನ ಶಾಸ್ತ್ರಜ್ಞರು ಗುರುತಿಸಿದ್ದಾರೆ.