ಕಟ್ಟೆ
ಕಟ್ಟೆ
ಬದಲಾಯಿಸಿನೀರಿನ ಹರಿವನ್ನು ನಿಯಂತ್ರಿಸುವ ಉದ್ದೇಶದಿಂದ ಒಂದು ನದಿಗೆ ಅಥವಾ ಹೊಳೆಗೆ ಅಥವಾ ತೋಡಿಗೆ ಅಡ್ಡವಾಗಿ ಕಟ್ಟಿದ ಕಟ್ಟಡ (ಡ್ಯಾಮ್). ಜಲಾಶಯದ ನಿರ್ಮಾಣ, ಕುಡಿಯುವ ನೀರಿನ ಪುರೈಕೆ, ವ್ಯವಸಾಯ ಉದ್ಯಮಕ್ಕೆ ನೀರಿನ ಸರಬರಾಜು, ಜಲವಿದ್ಯುದುತ್ಪಾದನೆ, ಭೂಸವೆತ ನಿರೋಧ, ಅಂತರ್ದೇಶೀಯ ನೌಕಾಯಾನ, ಜಲವಿಹಾರ ಸ್ಥಾನಗಳ ನಿರ್ಮಾಣ-ಕಟ್ಟೆಯ ಉಪಯೋಗಗಳು. ಇವುಗಳಲ್ಲಿ ಒಂದು ಅಥವಾ ಹಲವಿರಬಹುದು. ಒಂದಕ್ಕಿಂತ ಹೆಚ್ಚು ಉಪಯೋಗಗಳಿರುವ ಕಟ್ಟೆಗಳಿಗೆ ವಿವಿಧೋದ್ದೇಶ ಕಟ್ಟೆಗಳೆಂದು ಹೆಸರು. ಪುರಾತನ ಈಜಿಪ್ಟಿನಲ್ಲಿ ನೈಲ್ ನದಿಗೂ ಮೆಸೊಪೊಟೇಮಿಯದಲ್ಲಿ ಟೈಗ್ರಿಸ್ ನದಿಗೂ ಅಡ್ಡಲಾಗಿ ನೀರಾವರಿಗಾಗಿ ಕಟ್ಟೆಗಳನ್ನು ಕಟ್ಟಿದ್ದರು. ಅಲ್ಲಿಂದೀಚೆಗೆ ರೋಮನ್ ಚಕ್ರಾಧಿಪತ್ಯದಲ್ಲಿ ಕಟ್ಟಿದ ಕಟ್ಟೆಗಳೂ ಕುಡಿಯುವ ನೀರಿನ ಮೇಲ್ಗಾಲುವೆಗಳೂ (ಆಕ್ವಿಡಕ್ಟ್‌್ಸ) ಪ್ರಸಿದ್ಧವಾಗಿವೆ.
ಕಟ್ಟೆಯ ನಮೂನೆಗಳು
ಬದಲಾಯಿಸಿಕಟ್ಟೆಯನ್ನು ಕಟ್ಟುವ ಜಾಗದಲ್ಲಿ ಅಡಿಪಾಯದ ಲಕ್ಷಣ, ಅಲ್ಲಿ ದೊರೆಯುವ ಕಟ್ಟಡದ ಸಾಮಗ್ರಿಗಳು ಮತ್ತು ಆವಶ್ಯಕತೆಗಳಿಗೆ ಅನುಗುಣವಾಗಿ ಕಟ್ಟೆಯ ನಮೂನೆಗಳು ವ್ಯತ್ಯಾಸವಾಗುತ್ತದೆ. ನಮ್ಮ ದೇಶದಲ್ಲಿ ತಗ್ಗಾದ ಕಟ್ಟೆಗೆ ಅಣೆಕಟ್ಟು ಎಂದು ಹೆಸರು. ಗಂಗಾ, ಯಮುನಾ, ಗೋದಾವರಿ, ಕೃಷ್ಣಾ, ಕಾವೇರಿ-ಈ ಮಹಾನದಿಗಳ ಮೇಲೆ ಹಿಂದೆ ನೀರಾವರಿಗಾಗಿಯೂ ಜಲಯಾನಕ್ಕಾಗಿಯೂ ಕಟ್ಟಿದ ಅಣೆಕಟ್ಟುಗಳು ಈಗಲೂ ಉಪಯೋಗದಲ್ಲಿವೆ. ಮೇಲೆ ಎಲ್ಲೆಡೆಯೂ ನೀರನ್ನು ಹರಿಯಲು ಬಿಡದೆ ನಿರ್ದಿಷ್ಟ ಸ್ಥಳದಲ್ಲಿ ಹರಿಯಲು ಬಿಡುವ ಕೋಡಿ ಅಥವಾ ತೂಬುಗಳಿರುವ ಕಟ್ಟೆಗಳನ್ನು ಅಣೆಗಳೆನ್ನುವರು. ಅವನ್ನು ಕೆಳಗೆ ಕಂಡಂತೆ ವಿಂಗಡಿಸಬಹುದು; 1 ಕೆರೆಗಳ ಮಣ್ಣಿನ ಏರಿಗಳು ; 2 ಕಲ್ಲನ್ನು ತುಂಬಿದ ಏರಿಗಳು; 3 ಕಲ್ಲುಗಾರೆ ಇಲ್ಲವೆ ಕಾಂಕ್ರೀಟಿನ ಗುರುತ್ವ ಕಟ್ಟೆಗಳು; 4 ಊರೆಯ ಕಟ್ಟೆಗಳು; 5 ಪ್ರಬಲಿತ ಕಾಂಕ್ರೀಟಿನ ಹಲಗೆಯ ಪೆಟ್ಟಿಗೆಯ ಕಟ್ಟೆಗಳು; 6 ಕಮಾನಿನ ಕಟ್ಟೆಗಳು.
ಒಂದು ಯೋಜನೆಯ ಪುರ್ವಭಾವಿ ಪರಿಶೀಲನೆಯಲ್ಲಿ ಆ ಜಾಗದಲ್ಲಿ ಒದಗುವ ನೀರು ಮತ್ತು ಸಾಗುವಳಿಯಾಗುವ ಭೂಮಿಯ ಮೋಜಣಿಯನ್ನು ಮಾಡಬೇಕು. ಇವು ಸುಮಾರಾಗಿ ಸಮರ್ಪಕವಾಗಿದ್ದರೆ ನದಿಯ ತಳದಲ್ಲಿ ಅಲ್ಲಲ್ಲಿ ಕೊರೆದು ತಳಪಾಯದ ಸ್ವಭಾವವನ್ನು ತಿಳಿಯಬೇಕು. ಈ ಕೆಲಸವನ್ನು ತೆಗೆದುಕೊಂಡರೆ ಅದರಿಂದ ಬಾಧಕವಾಗಬಹುದಾದ ರಸ್ತೆಗಳು, ರೈಲುದಾರಿಗಳು ಮತ್ತು ವಿದ್ಯುತ್ತಿನ ತಂತಿಸಾಲುಗಳನ್ನು ಗಮನಿಸಿ ತೀರ್ಮಾನಕ್ಕೆ ಬರಬಹುದು.
ಮಣ್ಣಿನ ಏರಿಗಳು
ಬದಲಾಯಿಸಿಈ ನಮೂನೆ ಅನೇಕ ಶತಮಾನಗಳಿಂದಲೂ ನಮ್ಮ ದೇಶದಲ್ಲಿ ಬಳಕೆಯಲ್ಲಿದೆ. ಒಂದು ತೋಡಿಗೆ ಅಡ್ಡಲಾಗಿ ಇಳಿಜಾರಾದ ಪಕ್ಕಗಳುಳ್ಳ ಏರಿಯನ್ನು ಒಳ್ಳೆಯ ಮಣ್ಣಿನಿಂದ ಕಟ್ಟುತ್ತಾರೆ. ಆಗ ನೀರು ಅದರ ಹಿಂದೆ ನಿಂತು ಕೆರೆಯಾಗುತ್ತದೆ. ಕೆರೆಯ ನೀರನ್ನು ಏರಿಯ ಮೂಲಕ ತೂಬಿನಿಂದ ಸಾಗಿಸಿ ನಾಲೆಗಳ ಮೂಲಕ ಎರಡು ದಡಗಳಲ್ಲಿಯೂ ತಗ್ಗಿನ ಜಮೀನುಗಳಿಗೆ ಬಿಟ್ಟು ಬೆಳೆಯನ್ನು ತೆಗೆಯುತ್ತಾರೆ. ಕೆರೆ ಹಿಡಿಯುವುದಕ್ಕಿಂತ ಹೆಚ್ಚು ನೀರು ಮಳೆಯಿಂದ ಬಂದರೆ ಅದನ್ನು ದಡದಲ್ಲಿರುವ ಕೋಡಿಯ ಮೂಲಕ ಮತ್ತೆ ಕೆಳಗಡೆ ತೋಡಿಗೆ ಬಿಡುತ್ತಾರೆ. ಅಡಿಪಾಯದಲ್ಲಿ ಸಾಧಾರಣ ಮಣ್ಣಿರುವ ಜಾಗಗಳಲ್ಲಿ ಈ ನಮೂನೆಯನ್ನು ಉಪಯೋಗಿಸಬಹುದು. ಏರಿಯ ಪಾಶರ್ವ್‌ಚಿತ್ರದಲ್ಲಿ (ಫ್ರೊಫಾಯಿಲ್) ಮಣ್ಣನ್ನು ಮೂರು ವಿಧವಾಗಿ ತುಂಬಬಹುದು. (i) ಎಲ್ಲ ಕಡೆಗಳಲ್ಲಿಯೂ ಒಂದೇ ವಿಧವಾದ ಮಣ್ಣನ್ನು ತುಂಬುವುದು, (ii) ಒಳ್ಳೆಯ ಮಣ್ಣು ಸಾಕಷ್ಟು ದೊರೆಯದೆ ಇರುವ ಕಡೆ ಒಳಭಾಗದಲ್ಲಿ ಜಿಗಟಾದ ಮಣ್ಣನ್ನು ತುಂಬಿ ಎರಡು ಪಕ್ಕಗಳಲ್ಲಿಯೂ ನೀರು ಜಿನುಗಬಹುದಾದ ಹರಳುಮಣ್ಣನ್ನು ತುಂಬುವುದು. (iii) ಒಳಗಡೆ ಏರಿಯ ಮಧ್ಯದಲ್ಲಿ ಜೇಡಿಮಣ್ಣ ಕಲ್ಲುಗಾರೆ, ಇಲ್ಲವೆ ಕಾಂಕ್ರೀಟಿನ ಗೋಡೆಯನ್ನು (ಕೋರ್ವಾಲ್) ಕಟ್ಟಿ ಸುತ್ತಲೂ ಒಂದೇ ವಿಧವಾದ ಮಣ್ಣನ್ನು ತುಂಬುವುದು. ಮೈಸೂರು ರಾಜ್ಯದಲ್ಲಿ ಮದಗನ ಕೆರೆ, ಅಯ್ಯನಕೆರೆ, ಸೂಳೆಕೆರೆ, ಹೆಸರಘಟ್ಟದ ಕೆರೆ ಮೊದಲಾದ ನೂರಾರು ದೊಡ್ಡ ಕೆರೆಗಳಿವೆ.
ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಮಿಸೌರಿ ಮಹಾನದಿಗೆ ಅಡ್ಡಲಾಗಿ ಮಾಂಟಾನ ರಾಜ್ಯದಲ್ಲಿ 1942ರಲ್ಲಿ ಕಟ್ಟಿ ಮುಗಿಸಿದ ಫೋರ್ಡ್ ಫೆಕ್ ಏರಿಯ ಗರಿಷ್ಠ ಎತ್ತರ 76.25 ಮೀ ಉದ್ದ 6.40 ಕಿಮೀ ಜಲಾಶಯದಲ್ಲಿ 19.5 ಮಿಲಿಯನ್ ಎಕರೆ ಅಡಿ ನೀರು ಹಿಡಿಯುತ್ತದೆ. ಇದರಲ್ಲಿ ಪ್ರಪಂಚದ ಮಣ್ಣಿನ ಏರಿಗಳಲ್ಲಿಯೇ ಅತ್ಯಂತ ಹೆಚ್ಚು ಮಣ್ಣು (128 ಮಿಲಿಯನ್ ಸಲೆ ಗಜ) ತುಂಬಿದೆ. ಈ ನದಿಯ ಮೇಲೆಯೇ 1954ರಲ್ಲಿ ದಕ್ಷಿಣ ಡಕೋಟದಲ್ಲಿ ಕಟ್ಟಿದೆ ಓಹೆ ಏರಿಯಲ್ಲಿ ತುಂಬಿರುವ ಮಣ್ಣು 91 ಮಿಲಿಯನ್ ಸಲೆ ಗ್. ಇದೇ ನದಿಗೆ ಅಡ್ಡಲಾಗಿ ಉತ್ತರ ಡಕೋಟದಲ್ಲಿ ಕಟ್ಟಿದ ಮತ್ತೊಂದು ಏರಿಯಲ್ಲಿ 75 ಮಿಲಿಯನ್ ಸಲೆ ಮೀ ಮಣ್ಣು ತುಂಬಿದೆ. ಭಾರತದ ಪೊನೇರಿ ಕೆರೆಯ ನೀರು ಹರಡು (ವಾಟರ್ ಸ್ಪ್ರೆಡ್) 206.4 ಚಕಿಮೀ ಕಟ್ಟೆಯ ಉದ್ದ 48 ಕಿಮೀ ಸಿಲೋನಿನ ವಡವಿಲ್ ಸರೋವರದ ಏರಿಯ ಉದ್ದ 178 ಕಿಮೀ 21.35 ಮೀ ಮೇಲಿನ ಅಗಲ 2.15 ಮೀ ತಳದ ಅಗಲ 61 ಮೀ ಇದರಲ್ಲಿ 17 ಮಿಲಿಯನ್ ಸಲೆ ಅಡಿ ಮಣ್ಣುಸೇರಿದೆ.
ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಮಣ್ಣಿನ ಏರಿ ಇರುವುದು 164.1ಮೀ ಎತ್ತರದ ಕ್ಯಾಲಿಪೋರ್ನಿಯದ ಟ್ರಿನಿಟಿ ಕಟ್ಟೆಯಲ್ಲಿ. ಇದರ ಉದ್ದ 2,450'. ಎರಡನೆಯದು 1947ರಲ್ಲಿ ಅಮೆರಿಕದ ಇಡಾಹೊಸಂಸ್ಥಾನದಲ್ಲಿ ಕಟ್ಟಿದ ಅ್ಯಂಡರ್ಸ್ನ್ ರ್ಯಾಂಚ್ ಏರಿ. ಇದರ ಎತ್ತರ 456'. ಉದ್ದ 1350'.
ಕಲ್ಲನ್ನು ತುಂಬಿದ ಏರಿಗಳು
ಬದಲಾಯಿಸಿಏರಿಗೆ ಒಳ್ಳೆಯ ಮಣ್ಣು ಸಿಕ್ಕದೆ, ಸಿಮೆಂಟ್ ಕಾಂಕ್ರೀಟಿನ ಕಟ್ಟೆಗೆ ಖರ್ಚು ಹೆಚ್ಚಾಗಿ, ಹತ್ತಿರದಲ್ಲಿ ಕಲ್ಲಿನ ಕ್ವಾರಿಗಳಿದ್ದು ಏರಿಯ ಅಡಿಪಾಯದಲ್ಲಿ ಗಟ್ಟಿ ಕಲ್ಲು ಸಿಕ್ಕದೆ ಹೋದ ಕಡೆಗಳಲ್ಲಿ ಈ ನಮೂನೆಯನ್ನು ಉಪಯೋಗಿಸಬಹುದು. ಇಳಿಕಲುಗಳು ಕಡಿದಾಗಿರುವುದರಿಂದ ಈ ಏರಿಗಳು ಅದೇ ಸನ್ನಿವೇಶದ ಮಣ್ಣಿನ ಏರಿಗಳಿಗಿಂತ ಗಾತ್ರದಲ್ಲಿ ಚಿಕ್ಕವಾಗಿರುತ್ತದೆ. ಏರಿಯನ್ನು ಆಳುಗಳು ಹೊರಬಹುದಾದ ಕಲ್ಲಿನ ಗೂಡುಗಳನ್ನು ಇಳಿಕಲುಗಳಲ್ಲಿ ಜೋಡಿಸಿ ಒಳಗಡೆಯೂ ತುಂಬುತ್ತಾರೆ. ಆಗಲೇ ಹೆಚ್ಚಾಗಿ ನೀರನ್ನು ಹೊಯ್ದು ಕುಗ್ಗುವಂತೆ ಮಾಡುತ್ತಾರೆ. ನೀರು ಒಳಕ್ಕೆ ಜಿನುಗದಂತೆ ಏರಿಯ ಮಧ್ಯದಲ್ಲಿ ಒಳ್ಳೆಯ ಮಣ್ಣಿನ ನಡುಗೋಡೆಯನ್ನು ಕಟ್ಟುತ್ತಾರೆ. ಕೆರೆಗೆ ಪ್ರತ್ಯೇಕವಾದ ಕೋಡಿಯನ್ನು ಕಟ್ಟಬೇಕಾಗುತ್ತದೆ. ಕಟ್ಟೆಯ ಅಡಿಪಾಯ ಮೇಲಿನ ಕಲ್ಲಿನ ಕೆಳಕ್ಕೆ ಇಳಿಯದ ಹಾಗಿರಬೇಕು. ಕ್ಯಾಲಿಫೋರ್ನಿಯದಲ್ಲಿ 1913ರಲ್ಲಿ ಮುಗಿಸಿದ ಸಾಲ್ವ್‌ಸ್ಪ್ರಿಂಗ್ಸ್ ಕಟ್ಟೆ ಈ ನಮೂನೆಯಲ್ಲಿದೆ. ಇದರ ಎತ್ತರ 105ಮೀ ಒಳಗಡೆ 3,170,000 ಸಲೆ ಗಜ ಕಲ್ಲು ತುಂಬಿದೆ. ಮುಂದುಗಡೆಯ ಮುಖದಲ್ಲಿ ಕಲ್ಲುಗಳನ್ನು ಕೈಯಿಂದ ಜೋಡಿಸಿ ಅದಕ್ಕೂ ಮುಂದುಗಡೆ ಪ್ರಬಲಿತಕಾಂಕ್ರೀಟಿನ ಚಪ್ಪಡಿಗಳ ಪದರವನ್ನು ಇಟ್ಟಿದ್ದಾರೆ. ಈ ಚಪ್ಪಡಿಗಳ ದಪ್ಪ ತಳದಲ್ಲಿ 1ಮೀಗಳಿಂದ ಮೇಲುಗಡೆ 0.30ಮೀಗೆ ಇಳಿಯುತ್ತದೆ.
ಗುರುತ್ವದ ಕಟ್ಟೆಗಳು
ಬದಲಾಯಿಸಿಇವು ನೀರನ್ನು ಶೇಖರಿಸುವುದಕ್ಕಾಗಿ ಹೊಳೆಗೆ ಅಡ್ಡಲಾಗಿ ಕಟ್ಟಿದ ತಡೆಗಳು, ಒಂದು ಜಾಗದಲ್ಲಿ ಯಾವ ನಮೂನೆಯನ್ನು ಕಟ್ಟಬೇಕು ಎನ್ನುವುದು ಮುಖ್ಯವಾಗಿ ಆಯಾ ನಮೂನೆಗೆ ತಗಲುವ ಖರ್ಚಿನ ಅಂದಾಜಿನ ಮೇಲೆ ಹೋಗುತ್ತದೆ. ಕಲ್ಲಿನ ಕಟ್ಟೆಗಳಿಗೆ ಗಟ್ಟಿಯಾದ ಕಲ್ಲಿನ ಅಡಿಪಾಯ ಬೇಕು. ಕಟ್ಟೆಯಲ್ಲಿ ಉಪಯೋಗಿಸುವ ಸಾಮಗ್ರಿಗಳು ಧಾರಾಳವಾಗಿ ದೊರೆಯಬೇಕು. ಕಟ್ಟೆಗಳನ್ನು ಕಟ್ಟಿ ನಿರ್ಮಿಸಿದ ಜಲಾಶಯಗಳ ನೀರನ್ನು ಈಗ ವಿವಿಧೋದ್ದೇಶಗಳಿಗಾಗಿ ಉಪಯೋಗಿಸುತ್ತಾರೆ. ಇವುಗಳಲ್ಲಿ ಮುಖ್ಯವಾದವು: (i) ಪಟ್ಟಣಗಳಿಗೂ ನಗರಗಳಿಗೂ ಕುಡಿಯುವ ನೀರನ್ನು ಒದಗಿಸುವುದು; (ii) ಪ್ರವಾಹ ನಿಯಂತ್ರಣ; (iii) ವಿದ್ಯುಚ್ಛಕ್ತಿಯ ಉತ್ಪಾದನೆ; (ii) ನೀರಾವರಿ; (iii) ಜಲಯಾನದ ಸೌಕರ್ಯ; (iv) ಕೈಗಾರಿಕೆಗಳು. (v) ಪ್ರವಾಸಿಗಳ ವಿಹಾರಕ್ಷೇತ್ರಗಳು.
ಮೈಸೂರಿನಲ್ಲಿ 1912ರಲ್ಲಿ ಪ್ರಾರಂಭವಾದ ಕೃಷ್ಣರಾಜಸಾಗರ ಕಟ್ಟೆ ಪ್ರಪಂಚದಲ್ಲಿ ಮೊದಲನೆಯ ವಿವಿಧೋದ್ದೇಶ ಯೋಜನೆ. ಇದನ್ನು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ಸಂವಿಧಾನ ಮಾಡಿದರು. ಅಮೆರಿಕದ ಸಂಯುಕ್ತ ಸಂಸ್ಥಾನದಲ್ಲಿ 1933ರಲ್ಲಿ ಪ್ರಾರಂಭಮಾಡಿ 1942ರಲ್ಲಿ ಮುಗಿಸಿದ ಟೆನೆಸ್ಸಿಯ ವಿವಿಧೋದ್ದೇಶ ಯೋಜನೆ ಐಕಮತ್ಯದಿಂದ ಮುಂದೆ ನಡೆದು ಆ ಕಣಿವೆಯ ಜನರಿಗೆ ಅಪಾರವಾದ ಅನುಕೂಲತೆಯನ್ನು ಒದಗಿಸಿದೆ. ಇಲ್ಲಿ ಟೆನೆಸ್ಸಿ ನದಿಗೆ ಅಡ್ಡಲಾಗಿ ಒಂದರ ಕೆಳಗೆ ಒಂದರಂತೆ ಒಂಬತ್ತು ಕಟ್ಟೆಗಳನ್ನು ಕಟ್ಟಿದ್ದೇ ಅಲ್ಲದೆ ಉಪನದಿಗಳ ಮೇಲೆ ಹದಿಮೂರು ಎತ್ತರವಾದ ಕಟ್ಟೆಗಳನ್ನು ಕಟ್ಟಿದ್ದಾರೆ. ಪ್ರಪಂಚದಲ್ಲಿಯೇ ಸಂಪುರ್ಣವಾಗಿ ನಿಯಂತ್ರಿತವಾದ ನದಿ ಟೆನೆಸ್ಸಿ. ಉತ್ತರ ಭಾರತದಲ್ಲಿ ಪ್ರತಿವರ್ಷವೂ ಪ್ರವಾಹಗಳಿಂದ ವಿಶೇಷ ನಷ್ಟವನ್ನುಂಟುಮಾಡುತ್ತಿದ್ದ ದಾಮೋದರ ನದಿಯ ಮೇಲೂ ಒಂದರ ಕೆಳಗೆ ಒಂದು ಕಾಂಕ್ರೀಟಿನ ಕಟ್ಟೆಗಳನ್ನು ಕಟ್ಟಿ ನೀರಾವರಿ, ಜಲಯಾನ, ವಿದ್ಯುದುತ್ಪಾದನೆ. ಕೈಗಾರಿಕೆಗಳು-ಈ ವಿವಧೋದ್ದೇಶಗಳಿಗಾಗಿ ನೀರನ್ನು ಬಳಸಿಕೊಂಡಿದ್ದಾರೆ. ಸ್ವಂತ ತೂಕದ ಮೇಲೆ ನಿಂತಿರುವ ಕಟ್ಟೆಗಳಿಗೆ ಗುರುತ್ವದ ಕಟ್ಟಗಳೆನ್ನುತ್ತಾರೆ (ಗ್ರಾವಿಟಿ ಡ್ಯಾಮ್ಸ್). ಇವುಗಳಲ್ಲಿ (i) ಕಲ್ಲುಗಾರೆ ಕಟ್ಟೆಗಳೂ (ಮ್ಯಾಸನ್ರಿ ಡ್ಯಾಮ್ಸ್) (ii) ಕಾಂಕ್ರೀಟಿನ ಕಟ್ಟೆಗಳು-ಎಂದು ಎರಡು ವಿಭಾಗಳಿವೆ. ಕಲ್ಲುಗಾರೆಯ ಕಟ್ಟೆಯ ರಚನೆಯನ್ನು ಬೇರೆ ಕಡೆ ಹೇಳಿದೆ. ಸಿಮೆಂಟ್ ಕಾಂಕ್ರೀಟಿನ ಕಟ್ಟೆಗೆ ಉದಾರಣೆಯಾಗಿ ಪುರ್ವ ಪಂಚಾಬಿನಲ್ಲಿ ಶತದ್ರು ನದಿಗೆ (ಸಟ್ಲೆಜ್) ಅಡ್ಡಲಾಗಿ ಕಟ್ಟಿರುವ ಭಾಕ್ರ ಕಟ್ಟೆಯನ್ನು ತೆಗೆದು ಕೊಳ್ಳಬಹುದು. ಇದರ ಎತ್ತರ ತಳಪಾಯದ ಮೇಲೆ 224.46 ಮೀ ಸರೋವರ 102 ಕಿಮೀ ಮೇಲಿಗಳಷ್ಟು ಹರಡಿ 74 ಲಕ್ಷ ಎಕರೆ ಮೀ ನೀರನ್ನು ತುಂಬಿಕೊಂಡಿದೆ. ಕಟ್ಟೆ ನದಿಯ ಮರಳುಕಲ್ಲಿನ ತಳಪಾಯದ ಮೇಲೆ ನಿಂತಿದೆ. ಕಟ್ಟೆಯ ಉದ್ದ 490.49 ಮೀ. ತಳದ ಗರಿಷ್ಠ ಅಗಲ 217.18 ಮೀ ಮೇಲಿನ ಅಗಲ 11.83 ಮೀ ಕಟ್ಟೆಯಲ್ಲಿ 145 ಮಿಲಿಯನ್ ಸಲೆ ಮೀ ಕಾಂಕ್ರೀಟ್ ಇದೆ.
ನಮೂನೆಗಳು : ಗುರುತ್ವದ ಕಟ್ಟೆಗಳಲ್ಲಿ ಜಲಾಶಯದ ನೀರಿನ ಒತ್ತಡವೇ ಮೊದಲಾದ ಕಾರಣಗಳಿಂದ ಬರುವ ತ್ರಾಸವನ್ನು ಕಟ್ಟೆಯ ತೂಕವೊಂದೇ ತಡೆದು ನಿಲ್ಲಿಸುತ್ತದೆ. ಇದರ ಅಗಲವಾದ ತಳ ಅಡಿಪಾಯದ ಗಟ್ಟಿ ಬಂಡೆಯೊಳಕ್ಕೆ ಸೇರಿಕೊಂಡು ಕಟ್ಟೆ ಕೆಳಗಡೆ ಜಾರದಂತೆ ತಡೆಯುತ್ತದೆ. ಬಂಡೆಯಲ್ಲಿ ಪದರಗಳೇನಾದರೂ ಇದ್ದರೆ ಮುಂಭಾಗದಲ್ಲಿ ತೂತುಗಳನ್ನು ಕೊರೆದು ಒಳಕ್ಕೆ ಸಿಮೆಂಟಿನ ತಿಳಿಯನ್ನು ಒತ್ತಡದಲ್ಲಿ ಬಿಡುತ್ತಾರೆ. ಗುರುತ್ವದ ಕಟೆಗಳಲ್ಲಿ ಎರಡು ನಮೂನೆಗಳಿವೆ. ಒಂದರಲ್ಲಿ ಜಲಾಶಯದಲ್ಲಿ ಬಂದ ಪ್ರವಾಹವನ್ನು ಪ್ರತ್ಯೇಕವಾದ ಕೋಡಿಗಳಲ್ಲಿ ಬಿಟ್ಟು ಕಟ್ಟೆಯ ತಲೆಮಟ್ಟ ಯಾವಾಗಲೂ ಜಲಾಶಯದ ಗರಿಷ್ಠ ಮಟ್ಟಕ್ಕಿಂತ ಮೇಲೆ ಇರುವಂತೆ ಮಾಡಿರುತ್ತಾರೆ. ಉದಾಹರಣೆಗೆ ಕೃಷ್ಣರಾಜಸಾಗರ. ಇನ್ನೊಂದರಲ್ಲಿ ಜಲಾಶಯ ತುಂಬಿದಾಗ ನೀರು ಕಟ್ಟೆಯ ಹಿಂಭಾಗದಲ್ಲಿ ನಯವಾಗಿ ಹರಿದು. ಕೆಳಗಡೆ ಹೊಳೆಗೆ ಸೇರಿಕೊಳ್ಳುತ್ತದೆ. ಉದಾಹರಣೆಗೆ ಭಾಕ್ರ ಅಣೆಕಟ್ಟಿನ ಗೋವಿಂದಸಾಗರ.
ಒಂದು ಗುರುತ್ವದ ಕಟ್ಟೆಯ ಮೇಲೆ ಬೀಳುವ ಒತ್ತಡಗಳು ಈ ರೀತಿ ಇವೆ : (i) ಕಟ್ಟೆಯ ತೂಕ-ಇದು ಕೆಳಗಡೆ ಎಳೆಯುತ್ತದೆ; (ii) ಜಲಾಶಯದ ನೀರಿನ ಒತ್ತಡ-ಇದು ಮಟ್ಟಸವಾಗಿರುತ್ತದೆ; (iii) ತಳಪಾಯದೊಳಕ್ಕೆ ಜಿನುಗಬಹುದಾದ ನೀರಿನ ಒತ್ತಡ-ಇದು ಮೇಲು ಮುಖವಾಗಿದ್ದು ಕಟ್ಟೆಯನ್ನು ತೇಲಿಸುತ್ತದೆ; (iv)ಸರೋವರದ ನೀರಿನ ಮೇಲೆ ಬರುವ ಅಲೆಗಳ ಒತ್ತಡ; (v) ಭೂಕಂಪವಾಗುವ ಕಡೆ ಅವುಗಳ ಆವೇಗ. (vi) ಸರೋವರದ ಮೆಕ್ಕಲು ಮಣ್ಣಿನ ಒತ್ತಡ. ಈ ಒತ್ತಡಗಳನ್ನು ಸಂಘಟಿಸಿದಾಗ ಬರುವ ಪರಿಣಾಮ ಬಲದ ದಿಕ್ಕು ಕಟ್ಟೆಯ ತಳಕ್ಕೆ ಓರೆಯಾಗಿರುತ್ತದೆ. ಅದರ ಪ್ರಮಾಣವನ್ನು (ಖ) ತಳದ ಸಮತಳದ ಅಗಲದಿಂದ (b) ಭಾಗಿಸಿದರೆ ಬರುವುದಕ್ಕಿಂತ ಹೆಚ್ಚಿನ ಸರಾಸರಿ ಒತ್ತಡ ಫಲಿತಬಲಕ್ಕೆ ಸಮಕೋನವಾದ ಮತ್ತೊಂದು ದಿಕ್ಕಿನಲ್ಲಿ ಬೀಳುತ್ತದೆ. ಫಲಿತಬಲ ಲಂಬರೇಖೆಗೆ (ಚಿo) ಗಳಷ್ಟು ಓರೆಯಾಗಿದ್ದರೆ ಗರಿಷ್ಠ ಒತ್ತಡ ಖ/b seಛಿ ಚಿ ಆಗುತ್ತದೆ.
ಇದನ್ನು ಪ್ರಾಯೋಗಿಕವಾಗಿ ಬಳಸಿಕೊಂಡು ಖನ ಬೆಲೆಕಂಡುಹಿಡಿಯುವುದು ಸಾಧ್ಯವಿದೆ.
ಎತ್ತರವಾದ ಕಟ್ಟೆಗಳ ಸಂವಿಧಾನವನ್ನು ಎರಡು ಮಾರ್ಗಗಳಲ್ಲಿ ಮಾಡುತ್ತಾರೆ. (i) ವಿಶ್ಲೇಷಣ ಮಾರ್ಗ-ಇದರಲ್ಲಿ ಕಟ್ಟೆಯ ಮುಂಭಾಗದಲ್ಲಿ ತಳಕ್ಕೆ ಸು. 20' ದೂರದಲ್ಲಿ ಒಂದು ಲಂಬರೇಖೆಯನ್ನು ಅಕ್ಷವಾಗಿ ಇಟ್ಟುಕೊಂಡು ಅದರ ಸುತ್ತ ಪ್ರದಕ್ಷಿಣವಾಗಿಯೂ ಅಪ್ರದಕ್ಷಿಣವಾಗಿಯೂ ಕಟ್ಟೆಯ ಮೇಲಿನ ಬಲಗಳ ಭ್ರಮಣಾಂಕಗಳನ್ನು ತೆಗೆದುಕೊಂಡು ಪರಿಣಾಮದಲ್ಲಿ ಬರುವ ಭ್ರಮಣಾಂಕ ಶೂನ್ಯವಾಗುವಂತೆ ಮಾಡುತ್ತಾರೆ. (ii) ರೇಖಾಕೃತಿಗಳಿಂದ (ಗ್ರ್ಯಾಫಿಕ್ ಸ್ಟ್ಯಾಟಿಕ್ಸ್) ಕಟ್ಟೆಯ ಸಮಸ್ಥಿತಿಯನ್ನು ತನಿಖೆ ಮಾಡುತ್ತಾರೆ. ಎರಡನೆಯ ಮಾರ್ಗ ಸುಲಭ-ಈಚೆಗೆ ಜಲಭಾರದ ಪ್ರಯೋಗಶಾಲೆಗಳಲ್ಲಿ ಮಾದರಿಗಳಿಂದ ಸಂವಿಧಾನವನ್ನು ಪರೀಕ್ಷೆ ಮಾಡುವ ಕ್ರಮ ಎಲ್ಲೆಲ್ಲಿಯೂ ಬಳಕೆಗೆ ಬರುತ್ತಿದೆ. ನಮ್ಮ ರಾಜ್ಯದ ಕೃಷ್ಣರಾಜಸಾಗರದಲ್ಲಿ ಇಂಥ ಒಂದು ಪ್ರಯೋಗಶಾಲೆಯಿದೆ.[೧]
ಊರೆಯ ಕಟ್ಟೆಗಳು (ಬಟ್ರೆಸ್ ಡ್ಯಾಮ್ಸ್)
ಬದಲಾಯಿಸಿಗುರುತ್ವದ ಕಲ್ಲು ಗಾರೆಯ ಕಟ್ಟೆಯಲ್ಲಿ ಉಪಯೋಗಿಸುವ ಸಾಮಗ್ರಿ ಬಹಳ ಹೆಚ್ಚು. ಅದಕ್ಕಾಗಿ ಕಮಾನಿನ ಕಟ್ಟೆಗಳು ಸಾಧ್ಯವಾಗದ ಕಡೆ ಊರೆಯ ಕಟ್ಟೆಗಳನ್ನು ಕಟ್ಟುತ್ತಾರೆ. ಇಲ್ಲಿ ತೂಕದ ಮತ್ತು ಕಮಾನಿನ ಕಟ್ಟೆಗಳ ತತ್ತ್ವಗಳನ್ನು ಸೇರಿಸಿರುತ್ತಾರೆ. ಹೊಳೆಯ ಅಗಲವನ್ನು ಊರೆಗಳಿಂದ ಅಂಕಣಗಳಾಗಿ ಭಾಗಿಸಿ ಮಧ್ಯೆ ನೀರನ್ನು ನಿಲ್ಲಿಸುವುದಕ್ಕೆ ಮಟ್ಟಸ ಕಮಾನುಗಳನ್ನೋ ಪ್ರಬಲಿತಕಾಂಕ್ರೀಟಿನ ತೊಲೆಚಪ್ಪಡಿಗಳನ್ನೋ ಉಕ್ಕಿನ ತೊಲೆತಗಡುಗಳನ್ನೋ ಜೋಡಿಸಿರುತ್ತಾರೆ. ಈ ಕಟ್ಟೆಯೂ ಕಮಾನಿನ ಕಟ್ಟೆಯ ಹಾಗೆ ಬಂಡಿಯ ಕಮಾನಿನ ಸೇತುವೆಯನ್ನು ಸಮಕೋನದಷ್ಟು ತಿರುಗಿಸಿ ಮಲಗಿಸಿದಂತೆ ಕಾಣುತ್ತದೆ. ತಮ್ಮ ತೂಕದ ಮೇಲೆ ನಿಂತಿರುವ ಊರೆಗಳು ಕಮಾನಗಳಿಗೆ ಗುದ್ದು ಕಂಬಗಳಂತೆ ಇರುತ್ತದೆ. ಅದಕೋಸ್ಕರ ಪ್ರತಿಯೊಂದು ಊರೆಗೂ ಒಳ್ಳೆಯ ಕಲ್ಲಿನ ತಳಪಾಯ ಬೇಕು. ಚಪ್ಪಡಿಗಳನ್ನು ಜೋಡಿಸಿದಾಗ ನೀರಿನ ಕಡೆಯ ಮುಖ ಲಂಬಕ್ಕೆ 300-450 ವರೆಗೆ ಓರೆಯಾಗಿರುತ್ತದೆ. ಈ ಚಪ್ಪಡಿಯ ತಳದಲ್ಲಿ ತಡೆಗೋಡೆಯೊಂದು (ಕಟ್ ಆಫ್ ವಾಲ್) ಬೇಕು. ಅಡಿಪಾಯದಲ್ಲಿ ನೀರು ನುಗ್ಗದ ಹಾಗೆ ಇರಬೇಕು. ಇಳಿಕಲು ಊರೆಯ ಕಮಾನಿನ ವಲಯದ ತೂಕದ ಒಂದು ಭಾಗ ಕಮಾನಿನ ಮೇಲೆ ಹರಿದು ಗುದ್ದುಗಂಬವನ್ನು ಸೇರುತ್ತದೆ. ಉಳಿದ ಭಾಗ ಮೇಲಿನ ವಲಯಗಳಿಂದ ಕೆಳಗಿನ ವಲಯಗಳ ಮೂಲಕ ಅಡಿಪಾಯವನ್ನು ಸೇರುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನಗಳ ಅರಿಸೋನದಲ್ಲಿರುವ ಬಾರ್ಟ್ಲೆಟ್ ಕಟ್ಟೆ ಅನೇಕ ಕಮಾನುಗಳುಳ್ಳ ಊರೆಯ ಕಟ್ಟೆ. ಅದರ ಗರಿಷ್ಠ ಎತ್ತರ 87ಮೀ ತಲೆಯ ಮೇಲಿನ ಉದ್ದ 22ಮೀ ಇದರ ನೀರಿನ ಕಡೆಯ ಮುಖಮಟ್ಟಕ್ಕೆ 480 ಕೋನದಲ್ಲಿದೆ. 2ಮೀ ಅಂತರದ ಊರೆಗಳ ನಡುವೆ ಪ್ರಬಲಿತ ಕಾಂಕ್ರೀಟಿನ ಕಮಾನುಗಳಿವೆ. ಕಮಾನಿನ ದಪ್ಪ ಮೇಲುಗಡೆ 0.60ಮೀ 101ಮಿಮೀ ಕೆಳಗಡೆ 2.12ಮೀ ಊರೆಗಳ ಗರಿಷ್ಠ ಅಗಲ 109.2 ಮೀ ಖಿ ಅಥವಾ ಹೋರಿಯ ತಲೆಯ (ಬುಲ್ ಹೆಡ್) ಆಕಾರದ ಕಟ್ಟೆಯಲ್ಲಿಯೂ ಊರುಗಳನ್ನು ಉಪಯೋಗಿಸುತ್ತಾರೆ. ನಕ್ಷೆಯಲ್ಲಿ ನೋಡುವುದಕ್ಕೆ ಖಿ ಯ ತಲೆಗೆರೆಗಳನ್ನು ಸೇರಿಸಿದ ಹಾಗೆ ಕಾಣುತ್ತದೆ. ಕೆಳಗಡೆಯೂ ರೇಖೆಗಳೇ ಊರೆಗಳು. ಈ ನಮೂನೆ ಸರ್ವತ್ರ ಬಳಕೆಗೆ ಬರುತ್ತಿದೆ. ಆ್ಯಂಬುರ್ಸನ್ ನಮೂನೆಯೂ ಹೋರಿಯ ತಲೆಯ ಹಾಗೆ ಅನೇಕ ಖಿ ಗಳನ್ನು ಒಟ್ಟು ಸೇರಿಸಿದಂತೆ ಕಾಣುತ್ತದೆ. ಆದರೆ ನೀರಿನ ಕಡೆಯ ಮುಖ ಲಂಬವಾಗಿರದೆ ವಾಲಿರುತ್ತದೆ. ಅದರಿಂದ ನೀರಿನ ನೂಕು ಲಂಬವಾಗಿಯೂ ಇರುವುದಿಲ್ಲ. ಮಟ್ಟವಾಗಿಯೂ ಇರುವುದಿಲ್ಲ. ಮೆಕ್ಸಿಕೋದಲ್ಲಿರುವ ರಾಡ್ರೀಕ್ಸ್ ಕಟ್ಟೆಯ ನೀರಿನ ಕಡೆಯ ಮುಖ 450 ಗಳಲ್ಲಿ ವಾಲಿದೆ. ಅದರ ಎತ್ತರ 73 ಮೀ. ಅನೇಕ ಊರೆಗಳ ಕಟ್ಟೆಗಳು: ಕಲ್ಲಿನ ತಳದ ಮೇಲೆ ಅಗಲವಾದ ನದಿಗಳಲ್ಲಿ ತಗ್ಗಾದ ಕಟ್ಟೆಗಳನ್ನು ಕಂಬಗಳ ಮೇಲೋ (ಕಮಾನಿನ ಕಟ್ಟೆಯಾಗಲಿ ಕಲ್ಲುಗಾರೆಯ ಕಟ್ಟೆಯಾಗಲಿ ಸಾಧ್ಯವಾಗದೆ ಇರುವ ಕಡೆಗಳಲ್ಲಿ) ಕಟ್ಟುತ್ತಾರೆ. ಈ ಸಂವಿಧಾನದಲ್ಲಿ ಕೆಲವು ಗೋಡೆಗಳನ್ನೋ ಊರೆಗಳನ್ನೋ ಕಟ್ಟಿ ನಡುವಿನ ಅಂಕಣಗಳಲ್ಲಿ ಪ್ರಬಲಿತಕಾಂಕ್ರೀಟಿನ ಚಪ್ಪಡಿಗಳನ್ನೋ ಕಮಾನುಗಳನ್ನೋ ಕಟ್ಟುತ್ತಾರೆ. ಕಟ್ಟೆಯ ನೀರಿನ ಕಡೆಯ ಮುಖಮಟ್ಟಕ್ಕೆ 450 ಇಳಿಕಲಿನಲ್ಲಿದ್ದು ಮೇಲೆ ನಿಂತಿರುವ ನೀರಿನ ತೂಕದಿಂದ ಪ್ರಬಲಿತತೆಯನ್ನು ಪಡೆಯುತ್ತದೆ. ಅನೇಕ ಕಮಾನುಗಳ ಕಟ್ಟೆಗಳಲ್ಲಿ 15.16 ಮೀ ಅಂತರದಲ್ಲಿ ಊರೆಗಳಿಂದ ಬಲಪಡಿಸಿದ ತೆಳುವಾದ ಅರ್ಧಸಿಲಿಂಡರುಗಳಿರುತ್ತವೆ. ಈ ನಮೂನೆಯ ಕಲ್ಲಿನ ತಳಪಾಯದ ಮೇಲೆ ಅಗಲವಾದ ಹೊಳೆಗಳಿಗೆ ಅಡ್ಡಲಾಗಿ ತಗ್ಗಾದ ಕಟ್ಟೆಗಳನ್ನು ಕಟ್ಟಲು ಅನುಕೂಲವಾಗಿದೆ. ಅರ್ಧ ಉರುಳೆಗಳ ಕೆಳಗಿನ ಅಂಚನ್ನು ಕಲ್ಲಿನ ತಳಪಾಯದ ಮೇಲೆ ನಿಂತಿರುವ ಕಾಂಕ್ರೀಟಿನ ತಡೆಗೋಡೆಗೆ ಸೇರಿಸುತ್ತಾರೆ. ಅಮೆರಿಕದ ಅರಿ ಸೋನದಲ್ಲಿ ಕಟ್ಟಿರುವ 76 ಮೀ ಎತ್ತರವಾದ ಕೂಲಿಜ್ ಕಟ್ಟೆಯ ಕಮಾನುಗಳಿಗೆ ಗುಮ್ಮಟದ ಆಕಾರವನ್ನು ಕೊಟ್ಟಿದ್ದಾರೆ. ಹೀಗೆಯೇ ಇಳಿಜಾರಾದ ಕಂಬಗಳ ಅಥವಾ ಊರೆಗಳ ಮೇಲೆ ಪ್ರಬಲಿತಕಾಂಕ್ರೀಟಿನ ಚಪ್ಪಡಿಯ ಕಟ್ಟೆಯನ್ನು ಕಟ್ಟಬಹುದು. ಆಗ ಚಪ್ಪಡಿಗಳನ್ನು ಕಂಬಗಳ ಮೇಲೆ ಅವಿಚ್ಛಿನ್ನವಾಗಿರುವಂತೆ ವಿನ್ಯಾಸಮಾಡಿ ಕೆಳಗಡೆ ಒಂದು ತಡೆಗೋಡೆ ಸೇರಿಸಬೇಕು. ನದಿಯಲ್ಲಿ ಬರುವ ಮಹಾಪ್ರವಾಹದ ನೀರು ಅಣೆಕಟ್ಟಿನ ನೆತ್ತಿ ಮತ್ತು ಬೆನ್ನಿನ ಮೇಲೆ ನೈಸರ್ಗಿಕವಾಗಿ ಉರುಳುವ ಹಾಗೆ ಎತ್ತರವಾದ ಅಣೆಕಟ್ಟುಗಳ ಮೇಲುಭಾಗದ ಆಕಾರವನ್ನು ಪ್ರಯೋಗಶಾಲೆಗಳಲ್ಲಿ ನಿರ್ಧರಿಸುತ್ತಾರೆ. ನೀರು ಬಹಳ ಎತ್ತರದಿಂದ ಉರುಳುವ ಕಡೆ ನದಿಯ ತಳಕ್ಕೆ ರಕ್ಷಣೆಯನ್ನು ನಿಂತ ಅಲೆ ಅಥವಾ ನಿಂತನೀರಿನ ಕೊಳೆಗಳ ಮೂಲಕ ಒದಗಿಸುತ್ತಾರೆ.[೧]
ಪ್ರಬಲಿತ ಕಾಂಕ್ರೀಟಿನ ಹಲಗೆಯ ಪೆಟ್ಟಿಗೆಯ ಕಟ್ಟೆಗಳು
ಬದಲಾಯಿಸಿಈಚೆಗೆ ಇಂಥ ಕಟ್ಟೆಗಳನ್ನು ಅಮೆರಿಕದಲ್ಲಿ ಕಟ್ಟುತ್ತಿದ್ದಾರೆ. ಹಾಗೆಯೇ ಮರದಿಂದಲೂ ಉಕ್ಕಿನಿಂದಲೂ ಕಟ್ಟೆಗಳು ನಿರ್ಮಾಣವಾಗುತ್ತಿವೆ.
ಕಮಾನಿನ ಕಟ್ಟೆಗಳು
ಬದಲಾಯಿಸಿಸೇತುವೆಯ ಮೇಲಿನ ಇಟ್ಟಿಗೆಯ ಇಲ್ಲವೆ ಕಲ್ಲಿನ ಕಮಾನು ಮೇಲೆ ಬರುವ ತೂಕವನ್ನು ಕಂಬಗಳ ಮೂಲಕ ತಳಪಾಯಕ್ಕೆ ಸಾಗಿಸುತ್ತದೆ. ಈ ಸೇತುವೆಯನ್ನು ಒಂದು ಸಮಕೋನದಷ್ಟು ತಿರುಗಿಸಿ ಕಮಾನಿನ ಹೊರಭಾಗವನ್ನು (ಎಕ್ಸ್‌ಟ್ರೇಡಾಸ್) ಜಲಾಶಯದ ಕಡೆಗೆ ಇಟ್ಟರೆ ಕಮಾನಿನ ಕಟ್ಟೆಯ ಚಿತ್ರ ಬರುತ್ತದೆ. ಕಲ್ಲುಗಾರೆಯ ತೂಕಕ್ಕೆ ಬದಲಾಗಿ ಕಮಾನಿನ ಮೇಲೆ ಬರುವ ನೀರಿನ ಮಟ್ಟವಾದ ನೂಕು ಇರುತ್ತದೆ. ಇದು ಎರಡು ಕೊನೆಗಳಲ್ಲಿಯೂ ನೆಲಕ್ಕೆ ಸಾಗುತ್ತದೆ. ಅಗಲ ಚಿಕ್ಕದಾಗಿರುವ ಕಡೆ ಕಂಬಗಳ ಕೊನೆಗಳಲ್ಲಿ ಗಟ್ಟಿಯಾದ ಬಂಡೆಯಿದ್ದರೆ ಮಾತ್ರ ಈ ನಮೂನೆಯನ್ನು ಬಳಸಬಹುದು. ಕಮಾನಿನ ಕಟ್ಟೆ ತೂಕದ ಕಟ್ಟೆಯಷ್ಟು ತೂಕವಾಗಿರಬೇಕಾಗಿಲ್ಲ. ಇಟಲಿಯಲ್ಲಿರುವ ಒಂದು ಕಾಂಕ್ರೀಟಿನ ಕಮಾನಿನ ಕಟ್ಟೆಯ ಎತ್ತರ 449' ಗಳಾದರೆ ಅದರ ತಳದ ಅಗಲ 51'. ಹೊಳೆಯ ದಡಗಳಿಗೆ ನಡುವೆ ಒಂದೇ ಕಮಾನಿದ್ದರೆ ಅದು ಮೂರು ವಿಧಗಳಲ್ಲಿ ಕಟ್ಟೆಯ ನೀರಿನ ಒತ್ತಡವನ್ನು ತಡೆಯುತ್ತದೆ: (i) ಅದರ ತೂಕ, (ii) ಮಟ್ಟವಾದ ಕಮಾನಿನ ಬಲ, (iii) ಮಟ್ಟವಾದ ಭಾಗದ ಚಾಚುತೊಲೆಯ (ಕ್ಯಾಂಟಿಲಿವರ್) ನಿರೋಧ. ಕಮಾನಿನ ಸೇತುವೆ ಮೇಲೆ ಬಿದ್ದ ತೂಕವನ್ನು ತಡೆಯುವಂತೆಯೇ ಕಮಾನಿನ ಕಟ್ಟೆಯೂ ತಡೆಯುತ್ತದೆ. ಸೇತುವೆಯನ್ನು ಹೊಳೆಯ ಕಡೆಗೆ ಒಂದು ಸಮಕೋನದಷ್ಟು ತಿರುಗಿಸಿ ಇಟ್ಟರೆ ಕಟ್ಟೆಯ ಚಿತ್ರ ಬರುತ್ತದೆ. ಸೇತುವೆಯ ಸಂವಿಧಾನದಲ್ಲಿ ಕಮಾನಿನ ಮತ್ತು ಗುರುತ್ವದ ತತ್ತ್ವಗಳನ್ನು ಬಳಸಿದರೆ ಖರ್ಚು ಕಡಿಮೆಯಾಗುವುದು. ಆದರೆ ಈ ತತ್ತ್ವವನ್ನು ಎಲ್ಲ ಕಡೆಗಳಲ್ಲಿಯೂ ಉಪಯೋಗಿಸಲಾಗುವುದಿಲ್ಲ. ನದಿಯ ಪಾತ್ರ ಕಿರಿದಾಗಿದ್ದು ಪಕ್ಕಗಳಲ್ಲಿ ಗಟ್ಟಿಯಾದ ಬಂಡೆಯ ದಡಗಳಿದ್ದರೆ ಅನುಕೂಲ. ಸಾಮಾನ್ಯವಾಗಿ ನದಿಯ ಪಾತ್ರಕ್ಕೆ ಅಡ್ಡಲಾಗಿ ತೆಳುವಾದ ಬಾಗಿದ ಕಾಂಕ್ರೀಟಿನ ಗೋಡೆಯನ್ನು ಕಟ್ಟಿ ಅದರ ಮೇಲೆ ಬೀಳುವ ನೀರಿನ ಒತ್ತಡವನ್ನು ಕಮಾನಿನ ಮೂಲಕ ಇಲ್ಲಿನ ದಡಗಳಿಗೆ ವರ್ಗಾಯಿಸುತ್ತಾರೆ. ಈ ಗೋಡೆ ತಳದಲ್ಲಿ ಬಂಡೆಗೆ ಕಚ್ಚಿಕೊಂಡಂತಿರುವುದರಿಂದ ಚಾಚುತೊಲೆಯ ರೀತಿಯಲ್ಲಿ ತೂಕವನ್ನು ಹೊರುತ್ತದೆ. ಆದ್ದರಿಂದ ಸಂವಿಧಾನ ತೊಡಕಾಗುತ್ತದೆ. ಕಮಾನಿನ ಕಟ್ಟೆಗಳ ಮೇಲೆ ಗರಿಷ್ಟ ಒತ್ತಡ 16 ಟನ್ನುಗಳವರೆಗೂ ಹೋಗಬಹುದು. ನೇರವಾದ ಕಣಿವೆಗಳಲ್ಲಿ ಕಮಾನಿನ ಕಟ್ಟೆಯ ಉಪಯೋಗ ಹೆಚ್ಚು. ಕಮಾನಿನ ತ್ರಿಜ್ಯ ಹೆಚ್ಚಾದರೆ ಈ ನಮೂನೆಯಲ್ಲಿ ಅನುಕೂಲ ಕಡಿಮೆ. ಆಗ ನೇರವಾದ ಕಟ್ಟೆಗೂ ಕಮಾನಿನ ಕಟ್ಟೆಗೂ ತಗಲುವ ಖರ್ಚಿನಲ್ಲಿ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಆದರೆ ಸನ್ನಿವೇಶ ಅನುಕೂಲವಾಗಿರುವ ಕಡೆ ಕಮಾನಿನ ಕಟ್ಟೆಗೆ ಖರ್ಚು ಇತರ ಎಲ್ಲ ಕಮಾನುಗಳಿಗಿಂತಲೂ ಕಡಿಮೆಯಾಗುತ್ತದೆ. ಕಮಾನಿನ ನಡುವಿನ ಕೋನವನ್ನು 135.50 ಗಳಲ್ಲಿಯೂ ಅದರ ತ್ರಿಜ್ಯವನ್ನು ಕಮರಿಯ ಆಳದ 0.6 ರಷ್ಟೂ ಇಟ್ಟರೆ ಬಲ ಮತ್ತು ಮಿತವ್ಯಯಗಳು ಒಟ್ಟಿಗೆ ಸಾಧಿತವಾಗುತ್ತದೆ. ಕಮರಿ ಗಿ-ಆಕಾರವಾಗಿರುವುದರಿಂದ ಕಟ್ಟೆಯ ಮೇಲುಭಾಗ ತಳಕ್ಕಿಂತ ಬಹಳ ಅಗಲವಾಗಿರುತ್ತದೆ. ಎಲ್ಲ ಮಟ್ಟದ ವರಸೆಗಳಿಗೂ ಒಂದೇ ತ್ರಿಜ್ಯವನ್ನಿಟ್ಟರೆ ಕೆಳಗಡೆಯ ಕಮಾನು ಬಹಳ ಚಪ್ಪಟೆ ಆಗುತ್ತದೆ. ಅದಕ್ಕಾಗಿ ಎಲ್ಲ ವರಸೆಗಳಿಗೂ ಒಂದೇ ಕೋನವನ್ನಿಟ್ಟು ವಿನ್ಯಾಸ ಮಾಡುತ್ತಾರೆ. ಆದರೆ ಇದರಿಂದ ಕಟ್ಟಡ ಕೊಂಚ ವಕ್ರವಾಗುತ್ತದೆ. ಅದಕ್ಕಾಗಿ ಕೆಲವರು ಒಂದೇ ತ್ರಿಜ್ಯಕ್ಕೂ ಒಂದೇ ಕೋನಕ್ಕೂ ಮಧ್ಯವರ್ತಿಯಾದ ಆಕೃತಿಯನ್ನು ಕೊಡುತ್ತಾರೆ. ಕಮಾನಿನ ಕಟ್ಟೆಯಲ್ಲಿ ಅದೇ ಕೆಲಸವನ್ನು ನಿರ್ವಹಿಸುವ ಗುರುತ್ವದ ಕಟ್ಟೆಗಿಂತ ನೂರಕ್ಕೆ 30-35 ರಷ್ಟು ಕಡಿಮೆ ಕಲ್ಲುಗಾರೆ ಅಥವಾ ಕಾಂಕ್ರೀಟ್ ಇರುತ್ತದೆ. ಕಮಾನುಗಳನ್ನು ಕಟ್ಟುವುದಕ್ಕೇನೋ ಹೆಚ್ಚು ಖರ್ಚು ತಗಲಿದರೂ ಒಟ್ಟಿನಲ್ಲಿ ಉಳಿತಾಯವಾಗುತ್ತದೆ.[೧]
ಫ್ರಾನ್ಸಿನಲ್ಲಿ ವಿದ್ಯುದುತ್ಪಾದನೆಗಾಗಿ ಡಾರ್ಡನ್ ನದಿಯ ಮೇಲೆ ಎರಡು ಆಧುನಿಕ ಕಮಾನಿನ ಕಟ್ಟೆಗಳನ್ನು ಕಟ್ಟಿದ್ದಾರೆ. ಇವುಗಳಲ್ಲಿ 1946ರಲ್ಲಿ ಮುಗಿದ ಮೇಲೆ ಕಟ್ಟೆಯ ಎತ್ತರ 88.57 ಮೀ ಮೇಲುಗಡೆ ಕಟ್ಟೆಯ ಉದ್ದ 74.32 ಮೀ ಕಟ್ಟೆಯ ಅಂಗವಾಗಿ ಒಂದು ವಿದ್ಯುತ್ಕೇಂದ್ರವನ್ನು ಕಟ್ಟಿದ್ದಾರೆ. ಅದರಲ್ಲಿ ಒಂದು ವಿಶೇಷವಿದೆ. ಕಟ್ಟೆಯ ಮೇಲಿನಿಂದ ಉರುಳುವ ಹೊಳೆಯ ಪ್ರವಾಹದ ನೀರನ್ನು ವಿದ್ಯುತ್ಕೇಂದ್ರದ ಮಾಡಿನ ಮೇಲುಗಡೆ ಎರಡು ವಕ್ರವಾದ ಕೋಡಿಗಳ ಮೂಲಕ ಕೆಳಗಡೆ ಮತ್ತೆ ಹೊಳೆಗೆ ಹಾಯಿಸಿದ್ದಾರೆ. ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಕೊಲೆರಾಡೊ ನದಿಗೆ ಅಡ್ಡಲಾಗಿ ಕಟ್ಟಿರುವ ಗುರುತ್ವದ ಕಮಾನಿನ ಹೂವರ್ ಕಟ್ಟೆ ಆ ಕಾಲದಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಕಟ್ಟೆಯಾಗಿತ್ತು. ಇದರ ಎತ್ತರ 220.22 ಮೀ ಆಳವಾದ ಭಾಗದಲ್ಲಿ ಅಗಲ 202.2ಮೀ ಈ ಕಾಂಕ್ರೀಟಿನ ಕಟ್ಟೆಯಲ್ಲಿ ಅಲ್ಪೋಷ್ಣ ಸಿಮೆಂಟನ್ನು ಉಪಯೋಗಿಸಿದ್ದಾರೆ. ಏಕೆಂದರೆ ಸಿಮೆಂಟ್ ಗಟ್ಟಿಯಾಗುವಾಗ ಉತ್ಪತ್ತಿಯಾಗುವ ಶಾಖ ವಿಶೇಷವಾಗಿರುತ್ತದೆ. ಕಟ್ಟೆಯನ್ನು ಕಟ್ಟುವಾಗ ಹೊಳೆಯ ನೀರನ್ನು 15.17 ಮೀ ವ್ಯಾಸದ ನಾಲ್ಕು ಸುರಂಗಗಳಲ್ಲಿ ಹೊರಗೆ ಬಿಟ್ಟಿದ್ದರು. ಕೆಲಸ ಮುಗಿದ ಮೇಲೆ ಇವು ಕಟ್ಟೆ ತುಂಬಿದಾಗ ಕೋಡಿಯ ನೀರನ್ನು ಆಚೆಗೆ ಸಾಗಿಸುವಂತೆ ಮಾಡಿದ್ದಾರೆ. ಕಟ್ಟೆಯಲ್ಲಿ 3.28 ಮಿಲಿಯನ್ ಸಲೆ ಅಡಿ ಸಿಮೆಂಟ್ ಕಾಂಕ್ರೀಟನ್ನು ಉಪಯೋಗಿಸಿದ್ದಾರೆ. ಕಟ್ಟೆಯ ಹಿಂದುಗಡೆ ಇರುವ ಮೀಡ್ ಸರೋವರದಲ್ಲಿ ಒಂದೂಕಾಲು ಲಕ್ಷ ಕೋಟಿ ಸಲೆ ಮೀ ನೀರು ಹಿಡಿಯುತ್ತದೆ. ಇದಕ್ಕೆ ತಗಲಿದ ಖರ್ಚು 520 ಲಕ್ಷ ಡಾಲರ್. ಕಟ್ಟೆಯ ನೀರಿನಿಂದ 15 ಲಕ್ಷ ಅಶ್ವಸಾಮಥರ್ಯ್‌ದ ವಿದ್ಯುತ್ತು ಉತ್ಪತ್ತಿಯಾಗುತ್ತದೆ. 20 ಲಕ್ಷ ಎಕರೆ ಜಮೀನಿಗೆ ನೀರಾವರಿಯಾಗುತ್ತದೆ. ನದಿಯಲ್ಲಿ ಕೆಳಗಡೆ ಪ್ರವಾಹಗಳ ಹಾವಳಿ ನಿಂತಿದೆ. ಜಲಯಾನಕ್ಕೆ ಅನುಕೂಲತೆಗಳು ಹೆಚ್ಚಾಗಿವೆ. ಪ್ರವಾಸಿಗಳಿಗೆ ಈ ಜಲಾಶಯ ಶ್ರೇಷ್ಠವಾದ ವಿಹಾರ ಕ್ಷೇತ್ರವಾಗಿದೆ. ಕಟ್ಟೆಯ ವಿನ್ಯಾಸ, ನಿರ್ಮಾಣ: ಮಣ್ಣಿನ ಏರಿಯಿಂದ ಹಿಡಿದು ಆಧುನಿಕ ಸಂವಿಧಾನಗಳ ವರೆಗೆ ಎಲ್ಲ ಕಟ್ಟೆಗಳಲ್ಲಿಯೂ (i) ಹೊಳೆಯಲ್ಲಿ ಬಂದ ಪ್ರವಾಹವನ್ನು ಆಚೆಗೆ ಸಾಗಿಸಲು ಕೋಡಿ, (ii) ನೀರಾವರಿಗಾಗಿ ತೂಬು-ಇವು ಇರಲೇಬೇಕು. ಆದರೆ ಅವುಗಳ ವಿನ್ಯಾಸ ಬದಲಾಗುತ್ತದೆ. ದೊಡ್ಡ ಕಲ್ಲುಗಾರೆಯ ಕಟ್ಟೆಗಳಲ್ಲಿ ಮಳೆಗಾಲದಲ್ಲಿ ಬರುವ ಗೋಡುಮಣ್ಣನ್ನು (ಸಿಲ್ಟ್) ಸಾಗಿಸಲು ಅಡಿ ಬಚ್ಚಲುಗಳು ಹೊಳೆಯ ತಳಮಟ್ಟದ ಮೇಲೆ ಸು. 3.03 ಮೀಗಳ ಎತ್ತರದಲ್ಲಿ ಬೇಕಾಗುತ್ತವೆ. ಅವನ್ನೆಲ್ಲ ಕಟ್ಟೆಯಲ್ಲಿ ಅಳವಡಿಸಬೇಕು.[೨]
ಕೋಡಿ
ಬದಲಾಯಿಸಿಇದರ ಸಂವಿಧಾನದಲ್ಲಿ ವಿಶೇಷ ವೈವಿಧ್ಯವಿದೆ. ಕೆರೆಗಳ ದಡದಲ್ಲಿಯೋ ಎರಡು ದಡಗಳಲ್ಲಿಯೋ ತಳಪಾಯದಲ್ಲಿ ಕಲ್ಲು ಇರುವ ತುಂಬು ನೀರಿನ ಮಟ್ಟದಲ್ಲಿ ಕಲ್ಲುಗಾರೆಯ ಕೋಡಿಯ ಗೋಡೆಯನ್ನು ಕಟ್ಟಿ ಅದರ ಮೇಲೆ ಹೆಚ್ಚಿನ ನೀರನ್ನು ಬಿಡುತ್ತಾರೆ. ನೀರು ಕೆಳಗೆ ಬಿದ್ದಾಗ ಕೋಡಿಯ ಹಳ್ಳ ಕೊರೆಯದ ಹಾಗೆ ಇಳಿಜಾರಾದ ಕಲ್ಲಿನ ನೆಲಹಾಸು ಅಥವಾ ನಿಂತ ನೀರಿನ ಕೊಳವನ್ನು ಕಟ್ಟುತ್ತಾರೆ. ಪ್ರವಾಹದ ನೀರು ನದಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟಿನ ಮೇಲೆ ಉರುಳುತ್ತದೆ. ಆದರೆ ಕಟ್ಟೆಗಳ ಕೋಡಿಗಳ ಸಂವಿಧಾನದಲ್ಲಿ ಹಲವು ಬಗೆಗಳಿವೆ. ಒಂದರಲ್ಲಿ ಕಟ್ಟೆಯ ಒಂದು ಭಾಗದ ಮೇಲೆ ಅಣೆಕಟ್ಟಿನ ಮೇಲೆ ಉರುಳಿದ ಹಾಗೆ ಪ್ರವಾಹ ಉರುಳಿ ಕೆಳಗೆ ಹೊಳೆಯನ್ನು ಸೇರಿಕೊಳ್ಳುತ್ತದೆ. ಇನ್ನೊಂದರಲ್ಲಿ ನಡುಹೊಳೆಯಲ್ಲಿ ಕಟ್ಟೆಯ ಒಡಲಿನಲ್ಲಿ ಹಲವು ಕಿರಿದಾದ ಎತ್ತರವಾದ ಕಂಡಿಗಳನಿಟ್ಟು ಅವುಗಳೊಳಕ್ಕೆ ಬರುವ ನೀರನ್ನು ಸ್ಟೋನಿ ನಮೂನೆ ಮೊದಲಾದ ಬಾಗಿಲುಗಳ ಮೂಲಕ ನಿಯಂತ್ರಿಸುತ್ತಾರೆ. ಜೊತೆಗೆ ಕೃಷ್ಣರಾಜಸಾಗರದಲ್ಲಿರುವಂತೆ ಕೆಲವು ಸ್ವಯಂಚಾಲಿತ ಬಾಗಿಲುಗಳನ್ನೂ ಇಡಬಹುದು. ಕೆಲವು ಕಡೆ ತೆರೆದ ಕೋಡಿಗಳೂ ಇರುತ್ತವೆ. ತುಮಕೂರು ಜಿಲ್ಲೆಯ ಮಾರ್ಕೋನಹಳ್ಳಿ ಜಲಾಶಯದಲ್ಲಿ ಎರಡು ಗುಮ್ಮಟದ ಆಕಾರದ ಇಳಿಗೊಳವೆಗಳಿವೆ. ಕಟ್ಟೆಯ ಮೇಲಿನಿಂದ ಕೆಳಕ್ಕೆ ನೀರು ಉರುಳುವಾಗ ಕೆಳಗಡೆ ನೆಲವನ್ನು ಕೊರೆಯದಂತೆ ಸೂಕ್ತವಾದ ರಕ್ಷಣೆಯನ್ನು ಒದಗಿಸಬೇಕು. ಕಟ್ಟೆಯ ಹಿಂದುಗಡೆ ಅದರ ಅಗಲದ ಪುರ್ತ ವಿದ್ಯುದ್ಯೋಜನೆಯ ಯಂತ್ರಾಗಾರವಿದ್ದರೆ ಕಟ್ಟೆಯ ಬೆನ್ನಿನಲ್ಲಿ ವಿದ್ಯುದಾಗಾರದ ತಲೆಯ ಮೇಲುಗಡೆ ನೀರನ್ನು ಇಳಿಜಾರಿನಲ್ಲಿ ಬಿಡುತ್ತಾರೆ. ಆಗ ಕೋಡಿಯ ನೀರು ಕಟ್ಟಡಕ್ಕೆ ಸಾಕಷ್ಟು ಕೆಳಗೆ ನದಿಯನ್ನು ಸೇರುತ್ತದೆ; ಕೋಡಿಯ ನೀರನ್ನು ಆಚೆಗೆ ಸಾಗಿರುವ ಇತರ ಕ್ರಮಗಳಲ್ಲಿ ಪಕ್ಕದಲ್ಲಿ ಬಳಸಿರುವ ಕೋಡಿ (ಸ್ಟೀಲ್ ವೇ ರೌಂಡ್ ದಿ ಡ್ಯಾಮ್) ಮತ್ತು ಪಕ್ಕದ ಬಂಡೆಯಲ್ಲಿ ಕೊರೆದ ಸುರಂಗ ಇವನ್ನು ಹೆಸರಿಸಬಹುದು. ಭಾರತದಲ್ಲಿ ಹೊಳೆಯ ತುಂಬು ಮಟ್ಟದಲ್ಲಿ ಕಟ್ಟೆಯ ತಲೆಗೆ ಓಗೀ ಆಕಾರವನ್ನು ಕೊಟ್ಟು ಹಿಂದುಗಡೆ ನೀರು ಹೊಳೆಗೆ ಉರುಳುವ ಹಾಗೆ ಮಾಡುವುದು ರೂಢಿಯಲ್ಲಿದೆ. ಈ ಕ್ರಮದಲ್ಲಿ ಅಷ್ಟು ಎತ್ತರದಿಂದ ಬೀಳುವ ನೀರು ನದಿಯ ತಳವನ್ನು ಕೊರೆಯದ ಹಾಗೆ ವಿಶೇಷ ರಕ್ಷಣೆಯನ್ನು ಪ್ರತಿಯೊಂದು ಸಂದರ್ಭಕ್ಕೂ ಹೊಂದುವಂತೆ ಪ್ರಯೋಗಶಾಲೆಯಲ್ಲಿ ಸಂವಿಧಾನ ಮಾಡಬೇಕಾಗುತ್ತದೆ. ದಕ್ಷಿಣ ಭಾರತದಲ್ಲಿ ಪುನಾ ಮತ್ತು ಕೃಷ್ಣರಾಜಸಾಗರದಲ್ಲಿ ಇಂಥ ಕೇಂದ್ರಗಳಿವೆ. ಕೋಡಿಯ ಮೇಲೆ ಪ್ರವಾಹವನ್ನು ನಿಯಂತ್ರಿಸಲು ಅಗಲವಾದ ಕಣ್ಣಿನ ಅನೇಕ ಬಗೆಯ ಕವಾಟಗಳು ಬಳಕೆಯಲ್ಲಿವೆ. (i) ಸಮತೂಕವಾದ ಆರೀಯ ಬಾಗಿಲುಗಳು (ರೇಡಿಯಲ್ ಗೇಟ್ಸ್) ವಿದ್ಯುಚ್ಛಕ್ತಿಯಿಂದ ಚಲಿಸುತ್ತವೆ. (ii) ಮದ್ದಲೆಯ ಆಕಾರದ ಬಾಗಿಲುಗಳನ್ನು ಮಂಜು, ಕಸ ಮುಂತಾದವನ್ನು ಮೇಲಿನಿಂದ ಆಚೆಗೆ ಸಾಗಿಸಲು ಬಳಸುತ್ತಾರೆ. ಇವಕ್ಕೆ ಬೆಲೆ ಹೆಚ್ಚು. ಆದರೆ ಇವು ಸರೋವರದ ನೀರಿನ ಒತ್ತಡದಿಂದ ಚಲಿಸುತ್ತವೆ. ವಿದ್ಯುತ್ತು ಬೇಕಾಗಿಲ್ಲ. (iii) ಪ್ರಬಲಿತವಾದ ಚಕ್ರವಿರುವ ಇಲ್ಲವೆ ಸಿಲಿಂಡರಿನ ನಮೂನೆಯ ಮೇಲಕ್ಕೆ ಎತ್ತುವ ಬಾಗಿಲುಗಳನ್ನು ಹೊರಕ್ಕೆ ಹೋಗುವ ನೀರಿನ ನಿಯಂತ್ರಣಕ್ಕಾಗಿ ಉಪಯೋಗಿಸುತ್ತಾರೆ. (iv) ಆರೀಯ ವೃತ್ತಖಂಡದ ಬಾಗಿಲುಗಳು (ಸೆಕ್ಟರ ಗೇಟ್ಸ್) ಅಮೆರಿಕದಲ್ಲಿ ಹೆಚ್ಚಾಗಿ ಬಳಕೆಯಲ್ಲಿವೆ. ಆಳವಾದ ಕಣ್ಣುಗಳಿಗೆ ಹಿಂದೆ ನೋಡಿದ ಸ್ಟೋನೀ ಬಾಗಿಲು ಮತ್ತು ಟೈಂಟರ್ ಬಾಗಿಲುಗಳನ್ನು ಬಳಸಬಹುದು. ಅಮೆರಿಕದಲ್ಲಿ ಮಾರ್ನಿಂಗ್ ಗ್ಲೋರಿ ಎಂದು ಕರೆಯುವ ತೇಲುವ ಉಂಗುರದ ಆಕಾರದ ಬಾಗಿಲನ್ನು ಕೋಡಿಯಿಂದ ಬರುವ ನೀರನ್ನು ನಿಯಂತ್ರಿಸಲು ಉಪಯೋಗಿಸುತ್ತಾರೆ.
ತೂಬುಗಳು (ಸ್ಲೂ)
ಬದಲಾಯಿಸಿಜಲಾಶಯದಿಂದ ನೀರಾವರಿಗಾಗಿ ಬಿಡುವ ನೀರನ್ನು ಇವು ನಿಯಂತ್ರಿಸುತ್ತವೆ. ಹಿಂದಿನ ರಚನೆಗಳಲ್ಲಿ ಏರಿಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ನಿರ್ದಿಷ್ಟವಾದ ಮಟ್ಟದಲ್ಲಿ ಕಲ್ಲುಗಾರೆಯ ಸುರಂಗವನ್ನು ಕಟ್ಟಿ ಮೇಲುಗಡೆ ಚಪ್ಪಡಿಗಳಿಂದಲೋ ಕಮಾನುಗಳಿಂದಲೋ ಮುಚ್ಚುತ್ತಿದ್ದರು. ಈಗ ಭದ್ರಾವತಿಯಲ್ಲಿ ತಯಾರಾದ ತಾಂಡವಾಳದ ಕೊಳಾಯಿಗಳ್ನು ಉಪಯೋಗಿಸುತ್ತಾರೆ. ಇವುಗಳಲ್ಲಿ ಹರಿಯುವ ನೀರನ್ನು ಮುಂದುಗಡೆ ಇರುವ ಕವಾಟದಿಂದ ನಿಯಂತ್ರಣಮಾಡಬೇಕು. ದೊಡ್ಡ ಕಟ್ಟೆಗಳಲ್ಲಿ ಉಕ್ತವಾದ ಮಟ್ಟದಲ್ಲಿ ದೀರ್ಘ ಚತುರಸ್ರಾಕಾರವಾದ ಸುರಂಗವನ್ನು ಮಾಡಿ ಮೇಲುಗಡೆ ಕಲ್ಲಿನ ಕಮಾನುಗಳಿಂದ ಮುಚ್ಚುತ್ತಾರೆ. ಜಲಾಶಯದಿಂದ ನೀರು ಬರಲು ನಾಲೆಯೊಳಕ್ಕೆ ಬೀಳುತ್ತದೆ. ತೂಬುಗಳಲ್ಲಿ ಬರುವ ನೀರನ್ನು ನಿಯಂತ್ರಿಸಲು (i) ಒತ್ತಡದ ಜಾರುವ ಬಾಗಿಲುಗಳು, (ii) ಆರೀಯ ಟೆಂಟರ್ ಬಾಗಿಲುಗಳು, (iii) ಸೂಜಿಯ ಕವಾಟಗಳು, (iv) ಚಿಟ್ಟೆಯ ಆಕಾರದ ಬಾಗಿಲುಗಳು, (v) ಸಿಲಿಂಡರಿನ ಕವಾಟುಗಳು-ಇವನ್ನು ಉಪಯೋಗಿಸುತ್ತಾರೆ.[೨]
ಅಡಿಬಚ್ಚಲುಗಳು (ಸ್ಕೋರಿಂಗ್ ಸ್ಲೂಸಸ್)
ಬದಲಾಯಿಸಿಇವನ್ನು ಕೃಷ್ಣರಾಜಸಾಗರದಲ್ಲಿ ಹೊಳೆಯ ತಳದ ಮೇಲೆ 3.64 ಮೀ ಎತ್ತರದಲ್ಲಿ ಇಟ್ಟು ಸ್ಟೋನೀ ನಮೂನೆಯ ಬಾಗಿಲುಗಳಿಂದ ನಿಯಂತ್ರಣ ಮಾಡಿ ಪ್ರವಾಹ ಕಾಲದಲ್ಲಿ ಗೋಡು ತುಂಬಿದ ನೀರನ್ನು ಕೆಳಗೆ ಕಾವೇರಿ ನದಿಗೆ ಸಾಗಿಸುತ್ತಾರೆ.
ಪೆನ್ಸ್ಟಾಕ್ ಕೊಳವೆಗಳು
ಬದಲಾಯಿಸಿವಿದ್ಯುದುತ್ಪಾದನೆಗಾಗಿ ನೀರನ್ನು ಹೊಳೆಯಿಂದ ಸೂಕ್ತವಾದ ಅಳತೆಯ ಮತ್ತು ಸಂಖ್ಯೆಯ ಪೆನ್ಸ್ಟಾಕ್ ಕೊಳವೆಗಳಿಂದ ಕಟ್ಟೆಯ ಹಿಂದುಗಡೆ ಇರುವ ವಿದ್ಯುಜ್ಜನಕಗಳಿಗೆ ಒಯ್ಯುತ್ತಾರೆ. ಪಂಜಾಬಿನ ಭಾಕ್ರ ಕಟ್ಟೆಯಲ್ಲಿ ಈ ಪೆನ್ಸ್ಟಾಕುಗಳ ವ್ಯಾಸ 4.55ಮೀ ವಿದ್ಯುಜ್ಜನಕಗಳಿಂದ ಹೊರಕ್ಕೆ ಬರುವ ನೀರು ಮತ್ತೆ ಹೊಳೆಯನ್ನು ಸೇರಿ ನೀರಾವರಿಗೆ ಉಪಯೋಗವಾಗುತ್ತವೆ. ಕಟ್ಟೆಗಳನ್ನು ಕಟ್ಟುವ ಜಾಗದ ಸ್ವಭಾವದ ಮೇಲೂ, ಕಟ್ಟಡದ ಸಾಮಗ್ರಿಯ ಮೇಲೂ ಅಡಿಪಾಯದ ಗುಣದ ಮೇಲೂ ಇಂದಿನ ಕಟ್ಟೆಗಳು ಬೇರೆ ಬೇರೆ ತತ್ತ್ವಗಳ ಮೇಲೆ ನಿರ್ಮಾಣವಾಗುತ್ತವೆ. ಹತ್ತಿರದಲ್ಲಿಯೇ ದೊರೆಯುವ ಮಣ್ಣು, ಕಲ್ಲು, ಕಾಂಕ್ರೀಟಿಗೆ ಮರಳು, ಸುಣ್ಣ ಇಲ್ಲವೆ ಸಿಮೆಂಟ್-ಇವನ್ನು ಸಾಗಣೆಯ ಖರ್ಚನ್ನು ಉಳಿಸಿ ಉಪಯೋಗಿಸಿಕೊಂಡು ಅವಕ್ಕೆ ಹೊಂದುವ ಸಂವಿಧಾನವನ್ನು ಮಾಡಬಹುದು. ಕಟ್ಟೆ ಒಳಗಿನಿಂದ ನೀರನ್ನು ಬಿಡದಂತೆ ಪ್ರಬಲಿತವಾಗಿರಬಹುದಾದರೂ ಕೆಳಗಿನಿಂದ ನೀರು ಜಿನುಗಿ ಅಡಿಪಾಯವನ್ನೇ ಕರಗಿಸಬಹುದು. ಈ ನೀರನ್ನು ಅಡಿಪಾಯದ ಮೇಲುಗಡೆ 3.03 ಮೀ ಎತ್ತರದಲ್ಲಿ ಕಟ್ಟೆಯೊಳಗೆ ಉದ್ದಕ್ಕೂ 1.52 ಮೀ ಅಗಲ, 212 ಮೀ ಎತ್ತರದ ಓಣಿಯ ಅಂಚಿನಲ್ಲಿ ಬಿಟ್ಟು ಅಲ್ಲಲ್ಲಿ ಒಟ್ಟುಗೂಡಿಸಿ ಪಂಪುಗಳಿಂದ ಎತ್ತಿ ಆಚೆಗೆ ಹಾಕಬಹುದು ಅಥವಾ ಮೇಲಿನಿಂದ ಧುಮುಕಿ ಕೆಳಭಾಗದಲ್ಲಿ ಆಸರೆಯಾಗಿರುವ ಮಣ್ಣನ್ನು ಆಚೆ ಸಾಗಿಸಬಹುದು. ಇಲ್ಲವೆ ದಡಗಳಲ್ಲಿ ಬೇರೆ ಒಂದು ದಾರಿಯನ್ನೇ ಮಾಡಿಕೊಂಡು ಬಿಡಬಹುದು. ಸಂವಿಧಾನದಲ್ಲಿ ಈ ವಿಚಾರಗಳನ್ನೆಲ್ಲ ಪರಿಶೀಲಿಸಬೇಕಾಗುತ್ತದೆ.[೨]
ಪ್ರಪಂಚದ ಕೆಲವು ಪ್ರಮುಖ ಕಟ್ಟೆಗಳು
ಬದಲಾಯಿಸಿಅತಿ ಉದ್ದದ ಕಟ್ಟೆ : ಹೀರಾಕುಡ್ (ಭಾರತ) 26 ಕಿಮೀ ಅತಿ ಎತ್ತರದ ಮೊದಲ ಹತ್ತು ಕಟ್ಟೆಗಳು (ಎತ್ತರ ಮೀಗಳಲ್ಲಿವೆ) ನ್ಯೂರೆಕ್ (ರಷ್ಯ) .... 308.49 ಇಂಗೌರಿ (ರಷ್ಯ) .... 299.69 ಗ್ರಾಂಡ್ ಡಿಕ್ಸೆನ್ಸ್ (ಸ್ವಿಟ್ಜರ್ಲೆಂಡ್) .... 282.71 ವೈಯಂಟ್ (ಇಟಲಿ) .... 260.60 ಮೈಕ (ಕೊಲಂಬಿಯ) .... 242.67 ಮೌವೊಸಿನ್ (ಸ್ವಿಟ್ಜರ್ಲೆಂಡ್) .... 235.99 ಸಯಾನ್ಸ್‌್ಕ (ರಷ್ಯ) .... 234.78 ಚಿರ್ಕಿ (ರಷ್ಯ) .... 231.75 ಆರೋವಿಲ್ (ಅಮೆರಿಕ) .... 230.53 ಕಾಂಟ್ರ (ಸ್ವಿಟ್ಜರ್ಲೆಂಡ್) .... 228.71
ಅತಿ ದೊಡ್ಡ (ಘನಗಾತ್ರ) ಮೊದಲ ಹತ್ತು ಕಟ್ಟೆಗಳು (ಘನಗಾತ್ರ ಘನಮೀಟರುಗಳಲ್ಲಿವೆ) ತಾರಾಬೆಲ್ಲ (ಪಾಕಿಸ್ತಾನ್) .... 14,46,90,000 ಫೋರ್ಟ್ ಪೆಕ್ (ಅಮೆರಿಕ) .... 11,43,21,480 ಮಂಗ್ಲಾ (ಪಾಕಿಸ್ತಾನ) .... 9,85,53,000 ಒವಾಹೆ (ಅಮೆರಿಕ) .... 8,37,20,000 ದಕ್ಷಿಣ ಸಸ್ಕಾಚಿವಾನ್ (ಕೆನಡ) .... 7,85,33,000 ಆರೋವಿಲ್ (ಅಮೆರಿಕ) .... 7,30,73,000 ಸಾನ್ ಲೂಯಿಸ್ (ಅಮೆರಿಕ) .... 7,09,80,000 ನ್ಯೂರೆಕ್ (ರಷ್ಯ) .... 6,90,69,000 ನಾಗಾರ್ಜುನಸಾಗರ (ಭಾರತ) .... 6,69,76,000 ಗ್ಯಾರಿಸನ್ (ಅಮೆರಿಕ) .... 6,05,15,000 ಭಾರತದ ಕೆಲವು ಪ್ರಮುಖ ಕಟ್ಟೆಗಳು (ಎತ್ತರ ಮೀಗಳಲ್ಲಿವೆ) ಭಾಕ್ರ (ಪಂಜಾಬ್) .... 224.47 ನಾಗಾರ್ಜುನಸಾಗರ (ಆಂಧ್ರ) .... 100.1 ರೈಹ್ಯಾಂಡ್ (ಬಿಹಾರ್) .... 82.203 ಗಾಂಧಿ ಸಾಗರ (ಮಧ್ಯಪ್ರದೇಶ) .... 64.91 ಮೆಟ್ಟೂರು (ತಮಿಳುನಾಡು) .... 64.91 ಕೊಯ್ನ (ಮಹಾರಾಷ್ಟ್ರ) .... 62.79 ಕೆಳಗಿನ ಭವಾನಿ (ತಮಿಳುನಾಡು) .... 61.88 ಹೀರಾಕುಡ್ (ಒರಿಸ್ಸ) .... 60.66 ಕೋನಾರ್ (ಬಿಹಾರ್) .... 59.45 ಭದ್ರಾ (ಕರ್ನಾಟಕ) .... 58.84 ಕಪಿಲಾ (ಕರ್ನಾಟಕ) .... 57.63 ಪೆರಿಯಾರ್ (ತಮಿಳುನಾಡು) .... 53.38 ಘಟಪ್ರಭಾ (ಕರ್ನಾಟಕ) .... 50.96 ತುಂಗಭದ್ರಾ (ಕರ್ನಾಟಕ) .... 49.14 ಮೈಥಾನ್ (ಬಿಹಾರ್) .... 49.14 ನಿಜಾಮಸಾಗರ (ಆಂಧ್ರ) .... 47.62 ಮಯೂರಾಕ್ಷಿ (ಪಶ್ಚಿಮ ಬಂಗಾಳ) .... 47.02 ವಾಣೀವಿಲಾಸಸಾಗರ (ಕರ್ನಾಟಕ) .... 43.07 ಕೃಷ್ಣರಾಜಸಾಗರ (ಕರ್ನಾಟಕ) .... 40.64 ಪಂಚೆಟ್ ಗುಡ್ಡ (ಬಿಹಾರ) .... 40.64 ಮಲಪ್ರಭಾ (ಕರ್ನಾಟಕ) .... 38.52 ರಾಣಾಪ್ರತಾಪಸಾಗರ (ರಾಜಾಸ್ಥಾನ) .... 37.31 [೧]
ಉಲ್ಲೇಖಗಳು
ಬದಲಾಯಿಸಿನುಗು (ಕರ್ನಾಟಕ) .... 34.58 ತಿಲೈಯ (ಬಿಹಾರ್) .... 33.97 (ಎಚ್.ಸಿ.ಕೆ., ಎಂ.ಜಿ.ಎಸ್)
ಉಲ್ಲೇಖಗಳು
ಬದಲಾಯಿಸಿ