ಅಡ್ರಿನಲ್ ಗ್ರಂಥಿಗಳು

(ಅಡ್ರೀನಲ್ ಗ್ರಂಥಿಗಳು ಇಂದ ಪುನರ್ನಿರ್ದೇಶಿತ)

ಹೊಟ್ಟೆಯಲ್ಲಿ ಬೆನ್ನಿಗಂಟಿಕೊಂಡಿರುವ ಎರಡು ಮೂತ್ರಪಿಂಡಗಳ ಮೇಲೂ ಕುಲಾವಿಗಳಂತಿರುವ ಸಣ್ಣ ಗ್ರಂಥಿಗಳಿಗೆ ಮೂತ್ರಪಿಂಡ ಮೇಲಣ (ಅಡ್ರಿನಲ್) ಗ್ರಂಥಿಗಳೆಂದು ಹೆಸರಿದೆ. ಎಫಿನೆಫ್ರೈನ್(epinephrine) ಗ್ರಂಥಿಗಳು ಎಂದೂ ಕರೆಯಲ್ಪಡುವ ಇವು ನೇರವಾಗಿ ರಕ್ತದೊಳಕ್ಕೆ ಒಳಸುರಿವ, ನಾಳವಿರದ ಗ್ರಂಥಿಗಳು. ಬಲಗಡೆಯದು ಮುಕ್ಕೋನಾಕಾರದಲ್ಲೂ ಎಡಗಡೆಯದು ಅರೆಚಂದ್ರಾಕಾರದಲ್ಲೂ ಇವೆ. ಅನುವೇದನ (ಸಿಂಪತೆಟಿಕ್) ನರದ ಮಂಡಲದ ಅಲ್ಲದೆ ರಕ್ತನಾಳಗಳ ಸಂಬಂಧ ಇವೆರಡಕ್ಕೂ ಧಾರಾಳವಾಗಿದೆ. ಒಂದೊಂದು ಗ್ರಂಥಿಯಲ್ಲೂ ಎರಡು ಬೇರೆ ಬೇರೆ ಭಾಗಗಳಿವೆ : ಕವಚದಂಥ ರಗಟೆ ; ತಿರುಳಿನಂಧ ಕುಸುರಿ (ಮೆಡುಲ್ಲ). ರಗಟೆಯ ಭಾಗವೇ ಹೆಚ್ಚು ದಪ್ಪ. ಮೂರು ವಲಯಗಳಲ್ಲಿ ಜೀವಕಣಗಳೂ ಕಂಬಗಳಂತೆ ಜೋಡಣೆಯಾಗಿವೆ. ಜೀವಿಗೆ ಬೇಕೇಬೇಕಿರುವ ಬಸಿರಣಿಕಕ್ಕೆ (ಪ್ರೊಜಿಸ್ಟಿರೋನ್) ಸಂಬಂಧಿಸಿದ ಸ್ಟಿರಾಯ್ಡ್‍ಗಳು ಎನಿಸಿಕೊಂಡಿರುವ, ಹಲವಾರು ಚೋದನಿಕಗಳು (ಹಾರ್ಮೋನ್ಸ್) ಇಲ್ಲಿ ತಯಾರಾಗುತ್ತವೆ. ನರಗಳ ಸಂಬಂಧದಿಂದ ಬಂದ ಜೀವಕಣಗಳಿರುವ ಕುಸುರಿನಲ್ಲಿ ಬಹುವಾಗಿ ಅಡ್ರಿನಲೀನೂ ಸ್ವಲ್ಪ ನಾರಡ್ರಿನಲೀನೂ ತಯಾರಾಗುತ್ತವೆ.

ಅಡ್ರಿನಲ್ ಗ್ರಂಥಿಗಳು

ಅಡ್ರಿನಲ್ ಸಾರಕದ ತಯಾರಿಕೆ

ಬದಲಾಯಿಸಿ

ಪ್ರಾಣಿಗಳಿಂದ ತಂದ ಹಿಮಗಟ್ಟಿಸಿದ ಅಡ್ರಿನಲ್ ಗ್ರಂಥಿಗಳನ್ನು ನುಣ್ಣಗೆ ಕತ್ತರಿಸಿ, ತಣ್ಣನೆಯ ಮದ್ಯಸಾರದಲ್ಲಿ ಸಾರವಿಳಿಸುವುದರಿಂದ, ಇದರ ಸಾರಕ ತಯಾರಾಗುತ್ತದೆ. ಗ್ರಂಥಿಯಲ್ಲಿನ ನೀರು ಮದ್ಯಸಾರದಲ್ಲಿ ಸೇರಿಕೊಂದು ರಗಟೆಯ ಹಾರ್ಮೋನುಗಳನ್ನು ಕರಗಿಸಿಕೊಳ್ಳುತ್ತದೆ. ಗಟ್ಟಿವಸ್ತುವನ್ನು ಬಿಸಾಡಿ ಉಳಿದ ನೀರಾದ ಮದ್ಯಸಾರವನ್ನು ಇಳಿಸಿದ ಒತ್ತಡದಲ್ಲಿ ಭಟ್ಟಿಯಿಳಿಸಿದಾಗ ಸಾರಕ ದೊರೆಯುವುದು. ಇದರಲ್ಲಿ ಅಡ್ರನಲ್ ಕುಸುರಿನಲ್ಲಿರುವ ಅಡ್ರಿನಲೀನ್, ನೋರಡ್ರಿನಲೀನ್ ಕೂಡ ಇರುವುದರಿಂದ, ಇದನ್ನು ಕ್ಲೋರೊಫಾರ್ಮ್‍ನಲ್ಲಿ ಕರಗಿಸಿ ಇಮರಿಸಿದರೆ, ರಗಟೆಯ ಹಾರ್ಮೋನುಗಳು ಮಾತ್ರ ದೊರೆಯುತ್ತವೆ. ಉಳಿದುದನ್ನು ಸಾಂದ್ರಗೊಳಿಸಿ, ಅಮೋನಿಯ ಸೇರಿಸಿ ಸೋಸಿದರೆ ಅಡ್ರಿನಲೀನ್ ಬಿಳಿಯ ಹರಳುಗಳಾಗಿ ಬರುತ್ತದೆ. ಈ ತೆರನ ವಿಧಾನಗಳಿಂದ ಅಡ್ರಿನಲ್ ಗ್ರಂಥಿಯ ಸಾರಕವನ್ನು ಮೊಟ್ಟಮೊದಲು 1929ರಲ್ಲಿ, ಪರಿಶೋಧಕರ ಎರಡು ಬೇರೆ ಬೇರೆ ತಂಡಗಳು ತಯಾರಿಸಿದುವು. 1930ರ ತನಕ ಅಡ್ರಿನಲ್ ಗ್ರಂಥಿಯ ತೊಂದರೆಯಿಂದಾಗಿ ಅಡಿಸನ್ನನ ರೋಗ ಅನುಭವಿಸುತ್ತಿದ್ದವರಲ್ಲಿ ಯಾರೂ ಉಳಿಯುತ್ತಿರಲಿಲ್ಲ. ಈಗ ಈ ರಗಟೆಯ ಹಾರ್ಮೋನಾದ ಕಾರ್ಟಿಸೋನೊಂದಿಗೆ ಡಿಸಾಕ್ಸಿಕಾರ್ಟಿಕೊಸ್ಟಿರೋನ್ ಕೊಡುವುದರಿಂದ ಆ ರೋಗದಿಂದಾಗುತ್ತಿದ್ದ ಸಾವುಗಳನ್ನು ತಡೆಯಲಾಗುತ್ತಿದೆ.

ಅಡ್ರಿನಲ್ ಗ್ರಂಥಿಯ ರಗಟೆಯಿಂದ ತಯಾರಾಗುವ ರಾಸಾಯನಿಕಗಳು

ಬದಲಾಯಿಸಿ

ಅಡ್ರಿನಲ್ ಗ್ರಂಥಿಯ ರಗಟೆಯಿಂದ ಮೊದಲಾಗಿ (1930-1938) ಸುಮಾರು 30 ಬೇರೆಬೇರೆ ಹರಳಂಥ ರಾಸಾಯನಿಕಗಳು ತಯಾರಾಗಿವೆ. 1937ರಲ್ಲಿ ಡಿಸಾಕ್ಸಿಕಾರ್ಟಿಕೊಸ್ಟಿರೋನ್ ಕೃತಕ ತಯಾರಿ ಆಯಿತು. ಕಾರ್ಟಿಸೋನ್ (1948), ಹೈಡ್ರೊಕಾರ್ಟಿಸೋನ್ (1951) ಅಷ್ಟೂ ಇಷ್ಟೂ ತಯಾರಾಯಿತು. ಈ ಸರಣಿಯ ಕೊನೆಯ ಮುಖ್ಯ ರಾಸಾಯನಿಕವಾದ ಆಲ್ಡೊಸ್ಟಿರೋನ್ 1953ರಲ್ಲಿ ಬೇರ್ಪಟ್ಟು, 1955ರಲ್ಲಿ ಕೃತಕವಾಗೂ ತಯಾರಾಯಿತು.

ಸಾರಕದ ಪ್ರಭಾವಗಳು

ಬದಲಾಯಿಸಿ

ರಗಟೆಯಲ್ಲಿನ ಹಾರ್ಮೋನುಗಳ ಪ್ರಭಾವಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು.

  1. ಖನಿಜದ ಜೀವ ವಸ್ತುಕರಣದಲ್ಲಿ (ಮೆಟಬಾಲಿಸಂ)

ರಕ್ತದಲ್ಲಿರುವ ಸೋಡಿಯಂ, ಪೊಟ್ಯಾಸಿಯಂ, ಕ್ಲೋರೈಡುಗಳ ಪ್ರಮಾಣಗಳನ್ನು ಬಹುಮಟ್ಟಿಗೆ ಸರಿಸಮವಾಗಿ ಇರಿಸುವುದು ಜೀವಿಗೆ ಮುಖ್ಯ. ಆಲ್ಡೊಸ್ಟಿರೋನ್ ಸುರಿಸುವುದರಿಂದ ಈ ರಗಟೆ ಇದನ್ನು ಅಂಕೆಗೊಳಿಸುತ್ತದೆ

  1. ಜೈವಿಕ ಜೀವವಸ್ತುಕರಣದಲ್ಲಿ

ಹಿಟ್ಟು ಸಕ್ಕರೆಗಳು, ಪ್ರೊಟೀನುಗಳು, ಕೊಬ್ಬುಗಳ ಬಳಕೆಯನ್ನೂ ಹಂಚಿಕೆಯನ್ನೂ ಇದರಲ್ಲಿರುವ ಕಾರ್ಟಿಸೋನ್, ಹೈಡ್ರೊಕಾರ್ಟಿಸೋನುಗಳು ಅಂಕೆಯಲ್ಲಿಡುತ್ತವೆ.

  1. ಒಗ್ಗದಿಕೆ (ಅಲರ್ಜಿ), ಅಂಟುಜನಕದ (ಕೊಲ್ಲೆಜನ್) ರೋಗಗಳು, ಹೇರೀಡುವಳಿಯಂಥ (ಹೈಪರ್‍ಸೆನ್ಸಿಟಿವಿಟಿ) ಕಣಜಾಲಗಳ ಪ್ರತಿಕ್ರಿಯೆಗಳಲ್ಲಿ, ಕಾರ್ಟಿಸೋನ್, ಹೈಡ್ರೊಕಾರ್ಟಿಸೋನುಗಳ ಸುಗುಣಗಳು ಶೀತಸ್ರಾವಂದದ ಕೀಲುರಿತವೇ (ರುಮೆಟಾಯ್ಡ್ ಆತ್ರ್ರೈಟಿಸ್) ಮೊದಲಾದ 50 ಇನ್ನಿತರ ರೋಗಚಿಕಿತ್ಸೆಗಳಲ್ಲಿ ತೋರಿವೆ. ಈ ರೋಗಗಳಲ್ಲಿ ಯಾವುದರಲ್ಲೂ ಅಡ್ರಿನಲ್ ಗ್ರಂಥಿಯ ರಗಟೆಯ ಪಾತ್ರ ಇಲ್ಲದಿದ್ದರೂ ಕಾರ್ಟಿಸೋನ್, ಹೈಡ್ರೊಕಾರ್ಟಿಸೋನ್ ಮದ್ದುಗಳು ಹೇಗೆ ಗುಣಪಡಿಸುತ್ತವೆಂದು 1960ರ ಮೊದಲಿನ ತನಕ ಗೊತ್ತೇ ಇರಲಿಲ್ಲ. ಅಡ್ರಿನಲ್ ರಗಟೆಯ ಚಟುವಟಿಕೆಯನ್ನು ಅಡ್ರಿನಲ್ ರಗಟೆ ಪಾಲಿಕ ಚೋದನಿಕರದ (ಎಸಿಟಿಹೆಚ್) ಮೂಲಕ ತೆಮಡಿಕ (ಪಿಟುಯಿಟರಿ) ಗ್ರಂಥಿ ಅಂಕೆಗೊಳಿಸುತ್ತದೆ.

ನಾರಡ್ರಿನಲೀನ್

ಬದಲಾಯಿಸಿ

ಅಡ್ರಿನಲೀನ್ (ಎಪಿನೆಫ್ರೀನ್) ನಲ್ಲಿರುವ ಅಮೈನೊ ಗುಂಪಿನ ಬದಲಾಗಿ ಮೆತಿಲ್ ಗುಂಪು ಸೇರಿರದಿರುವುದೇ ನಾರಡ್ರಿನಲೀನ್ (ನಾರೆಪಿನೆಫ್ರೀನ್). ಇವೆರಡೂ ಅಡ್ರಿನಲ್ ಕುಸುರಿಯಲ್ಲಿ ಒಳಸುರಿಯುತ್ತವೆ.

ಕ್ರೀಡೆಗಳಲ್ಲಿ ಅಡ್ರಿನಲೀನಿನ ಬಳಕೆ

ಬದಲಾಯಿಸಿ

ವಾಲ್ಟರ್ ಕ್ಯಾನನ್ ಅವರು ಹೇಳಿದಂತೆ, ಅಡ್ರಿನಲೀನನ್ನು ಚುಚ್ಚಿ ಹೊಗಿಸಿದರೆ, ಅನುವೇದನ ನರದ ಮಂಡಲವನ್ನು ಪ್ರಚೋದಿಸಿದಂಥ ಪರಿಣಾಮಗಳನ್ನೇ ತೋರುತ್ತದೆ. ಇದ್ದಕ್ಕಿದ್ದಂತೆ ಅಂಜಿಕೆಯಾದಾಗ, ರೇಗಿದಾಗ, ಕಾದಾಡಬೇಕೆಂದಾಗ ಮೈಗೆ ಬಲಗೊಡುವುದು,ಬೇಗನೆ ರಕ್ತದೊತ್ತಡದ, ಏರಿಕೆ ರಕ್ತದ ಸಕ್ಕರೆ ಹೆಚ್ಚಳಿಕೆ, ಸ್ನಾಯುಗಳಿಗೆ ಹೆಚ್ಚು ರಕ್ತದ ಹರಿವು, ಪಚನ ಕುಂದುವುದೇ ಮೊದಲಾದುವೇ ಅಡ್ರಿನಲೀನು ಚುಚ್ಚುವುದರಿಂದಾಗುವ ಪರಿಣಾಮಗಳು. ಚಟುವಟಿಕೆ, ಹುಮ್ಮಸ್ಸು, ಲವಲವಿಕೆಗಳಿಗೆ ಕಾರಣ ಈ ಚೋದನಿಕದ ಸುರಿಕೆ. ಹಾಗಾಗಿ ಅಡ್ರಿನಲೀನ್ ಚುಚ್ಚುಮದ್ದುಗಳನ್ನು ಕ್ರೀಡೆಗಳಲ್ಲಿ ಬಳಸಲಾಗುತ್ತಿದೆ. ಇದರಿಂದ ಕ್ರೀಡಾಪಟುಗಳ ಮೇಲಾಗುವ ಹಲವು ಪರಿಣಾಮಗಳ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇದೆ

ಇಷ್ಟಾದರೂ, ಯಾವ ಜೀವಿಯೇ ಆಗಲಿ, ಅಡ್ರಿನಲ್ ಗ್ರಂಥಿಯ ಕುಸುರಿ ಇಲ್ಲದೆಯೇ ಬದುಕಿರಬಹುದು. ಅನುವೇದನ ನರಗಳು ಚೋದಿಸುವುದರಿಂದಲೂ ಅಸಿಟೈಲ್‍ಕೋಲೀನ್, ಇನ್ಸುಲಿನ್‍ನಂಥ ಕಾರಕಗಳಿಂದಲೂ ಬಹುವಾಗಿ ಅಡ್ರಿನಲ್ ಕುಸುರಿನ ಅಂಕೆಗೊಳಿಸುವುದರಲ್ಲಿ ಕೆಲಸ ಮಾಡುತ್ತವೆ. ಅಡ್ರಿನಲಿನ್‍ನ ಉಡುಗಿಸುವ ಗುಣಗಳಿಗಿಂತಲೂ ಚೋದಿಸುವ ಗುಣಗಳನ್ನೇ ಬಹುವಾಗಿ ನಾರಡ್ರಿನಲೀನ್ ತೋರುವುದು

ಬಾಹ್ಯ ಕೊಂಡಿಗಳು

ಬದಲಾಯಿಸಿ
  1. ಕ್ರೀಡಾಪಟುಗಳಿಂದ ಅಡ್ರಿನಲೀನಿನ ಬಳಕೆ