ಅಡ್ಜುಟೆಂಟ್ ಹಕ್ಕಿ
ಆಫ್ರಿಕಾ ಮತ್ತು ಏಷ್ಯಾ ಖಂಡಗಳ ಕೊಕ್ಕರೆಗಳಲ್ಲಿ ಅತ್ಯಂತ ದೊಡ್ಡದೂ ವಿಕಾರವೂ ಆಗಿರುವ ಪಕ್ಷಿ. ತಲೆ ನುಣ್ಣಗಿದೆ. ಕೊಕ್ಕು ತುಂಬ ದೊಡ್ಡದು; ಕತ್ತಿನ ಕೆಳಭಾಗದಲ್ಲಿ ಒಂದು ಚೀಲ ನೇತಾಡುತ್ತದೆ. ಮಿಲಿಟರಿ ಅಧಿಕಾರಿಗಳಂತೆ ಇದು ಗಂಭೀರವಾಗಿ ನಡೆಯುವುದರಿಂದ ಇದಕ್ಕೆ ಈ ಹೆಸರು ಬಂತು.[೧]
ಕೊಕ್ಕು ಗಟ್ಟಿಯಾಗಿ ಬೋಳಾಗಿದೆ. ತಲೆಯನ್ನು ಎಳೆಗೂದಲು ಆವರಿಸಿದೆ. ಗರಿಗಳು ಬಿರುಸಾಗಿವೆ; ನಾಜೂಕಾಗಿಲ್ಲ. ಕಾಲುಗಳು ಉದ್ದ, ಬಲವುಳ್ಳವು; ಅವುಗಳ ಮೇಲೆ ಯಾವ ಹೊದ್ದಿಕೆಯೂ ಇಲ್ಲ. ರೆಕ್ಕೆ ಹರವಾಗಿದೆ. ಮನುಷ್ಯರ ವಾಸಸ್ಥಾನಗಳಿಗೆ ಈ ಹಕ್ಕಿ ಹೊಂದಿಕೊಂಡಿದೆ ಮತ್ತು ಹೊಲಸನ್ನು ನಿರ್ಮೂಲ ಮಾಡುವುದರಲ್ಲಿ ಒಳ್ಳೆಯ ಪಾತ್ರವಹಿಸುತ್ತದೆ. ಹಾವುಗಳನ್ನು ತಿನ್ನುತ್ತದಾದರೂ ಹೆಚ್ಚಾಗಿ ಹೆಣಗಳೇ ಇದರ ಆಹಾರ. ಅಲುಗಾಡದೆ ಬೆನ್ನಿಗೆ ಕೊರಳನ್ನು ಚಾಚಿಕೊಂಡು ದೀರ್ಘಕಾಲ ನಿಲ್ಲಬಲ್ಲದು. ಓಡಾಟಗಳೆಲ್ಲ ಹಗಲಿನಲ್ಲೇ. ಉತ್ತರ ಭಾಗದಲ್ಲಿರುವುವು ಪಯಣಿಗ ಹಕ್ಕಿಗಳು. ಇಂಡಿಯಾಕ್ಕೆ ಬೇಸಿಗೆಯಲ್ಲಿ ಬರುತ್ತವೆ; ಬೇಸಿಗೆ ಮುಗಿವ ಹೊತ್ತಿಗೆ ಬಂಗಾಳದಲ್ಲಿ ಸಾಧಾರಣವಾಗಿ ಕಾಣಿಸಿಕೊಳ್ಳುತ್ತವೆ. ಇವನ್ನು ಕೊಲ್ಲಬಾರದೆಂದು ಭಾರತ ಸರ್ಕಾರ ಕಾಯಿದೆ ಮಾಡಿದೆ.
ಸಾಮಾನ್ಯವಾಗಿ ಇವು ದೊಡ್ಡ ದೊಡ್ಡ ಹಿಂಡುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹಾರಾಟ ಅಷ್ಟು ಹಗುರವಲ್ಲ, ರೆಕ್ಕೆಗಳ ಬಡಿತ ಹೆಚ್ಚು; ಆದರೂ ವೇಗವಾಗೂ ತುಂಬ ಎತ್ತರಕ್ಕೂ ಹಾರಬಲ್ಲವು. ಆಫ್ರಿಕದ ಜಾತಿಯ ಹಕ್ಕಿಯ ತಲೆ ಮಾಂಸದಂತೆ ಕೆಂಪಾಗಿದೆ; ಬೆನ್ನಿನ ತುಪ್ಪಳದ ಬಣ್ಣ ಲೋಹದ ಕಪ್ಪು ಹಸಿರು, ಕೊರಳು ಮತ್ತು ಕೆಳಭಾಗ ಬಿಳಿ.
ಉಲ್ಲೇಖನಗಳು
ಬದಲಾಯಿಸಿ
http://www.thehindu.com/sci-tech/energy-and-environment/endangered-greater-adjutant-stork-finds-secure-home-to-breed/article5414093.ece
http://www.harrivainolaphoto.com/adjutants.html