ಅಟ್ಟೊ ರಿಚರ್ಡ್ ಲುಮ್ಮರ್

ಜರ್ಮನ್ ಭೌತಶಾಸ್ತ್ರಜ್ಞ

ಜರ್ಮನಿಯ ಭೌತವಿಜ್ಞಾನಿಯಾಗಿದ್ದ ಅಟ್ಟೊ ರಿಚರ್ಡ್ ಲುಮ್ಮರ್‌ರವರು ೧೮೬೦ರ ಜುಲೈ ೧೭ರಂದು ಸೆಕ್ಸೋನಿಯ ಜೆನಾದಲ್ಲಿ ಜನಿಸಿದರು.[] ಮೈಕಾ ಹಾಳೆಗಳಲ್ಲಿ ಆಂತರಿಕ ಪ್ರತಿಫಲನ ಕ್ರಿಯೆಯಿಂದ (internal reflection) ಉತ್ಪತ್ತಿಯಾದ ವ್ಯತಿಕರಣ ಅಂಚುಗಳ (interference fringes) ಮೇಲೆ ಲುಮ್ಮರ್‌ರವರು ತಮ್ಮ ಸಂಶೋಧನೆಯನ್ನು ನಡೆಸಿದರು. ಆ ಸಂಶೋಧನೆಯ ಉತ್ತೇಜನದಿಂದ ಅವರು ಉಚ್ಚ-ಪೃಥಕ್ಕರಣದ ರೋಹಿತದರ್ಶಕವನ್ನು (high-resolution spectroscope) ನಿರ್ಮಿಸಿದರು. ನಂತರ ಅರ್ನ್‌ಸ್ಟ್ ಗೆಹ್ರ್‌ಕೆಯವರು (೧೮೭೮-೧೯೬೦) ಆ ರೋಹಿತದರ್ಶಕದಲ್ಲಿ ಅಶ್ರಗವನ್ನು (prism) ಅಳವಡಿಸಿದರು. ಹಾಗೆ ತಯಾರಾದ ‘ಲುಮ್ಮರ್-ಗೆಹ್ರ್‌ಕೆ ವ್ಯತಿಕರಣ ರೋಹಿತದರ್ಶಕ’ ಹಿಂದೆ ಚಾರ್ಲ್ಸ್ ಫಾಬ್ರೆ (೧೮೬೭-೧೯೪೫) ಮತ್ತು ಆಲ್ಫ್ರೆಡ್ ಪೆರೋಟ್ (೧೮೬೩-೧೯೨೫) ನಿರ್ಮಿಸಿದ್ದ ವ್ಯತಿಕರಣಮಾಪಕವನ್ನು (spectrometer) ಹಿಂದಕ್ಕೆ ಹಾಕಿತು. ಕಾಂತಿಮಾನದ (luminosity) ಮೇಲೆ ಅಂತರರಾಷ್ಟ್ರೀಯ ಏಕಮಾನವನ್ನು ನಿರ್ಧರಿಸುವ ಕೆಲಸವನ್ನು ಅವರು ಮಾಡಿದರು. ಅದಕ್ಕಾಗಿ ಲುಮ್ಮರ್‌ರವರು ಇನ್ನೊಬ್ಬ ಜರ್ಮನಿಯ ವಿಜ್ಞಾನಿ ಯೂಜಿನ್ ಬ್ರೋಧನ್‌ರವರ (೧೮೬೦-೧೯೩೮) ಜೊತೆ ಸೇರಿಕೊಂಡು ‘ಲುಮ್ಮರ್-ಬ್ರೋಧನ್ ಕೊಳವೆ’ ಎಂಬುದಾಗಿ ಪ್ರಸಿದ್ಧಿಯಾದ ದ್ಯುತಿಮಾಪಕವನ್ನು (photometer) ವಿನ್ಯಾಸಿಸಿದರು. ಆ ಉಪಕರಣ ರಾಬರ್ಟ್ ಬುನ್ಸೆನ್ (೧೮೧೧-೧೮೯೯) ೧೮೪೪ರಲ್ಲಿ ಕಂಡುಹಿಡಿದಿದ್ದ ‘ಗ್ರೀಸ್-ಸ್ಪಾಟ್ ದ್ಯುತಿಮಾಪಕ’ದ ಪರಿಷ್ಕೃತ ಮಾದರಿಯಾಗಿತ್ತು. ನಂತರ ಲುಮ್ಮರ್‌ರವರು ವಿಜ್ಞಾನಿ ವಿಲ್‌ಹೆಲ್ಮ್ ವೀನ್‌ರವರ (೧೮೬೪-೧೯೨೮) ಜೊತೆ ಸೇರಿ ‘ಕಪ್ಪು-ಕಾಯದ ವಿಕಿರಣಕಾರಿ’ (black-body radiator) ಗೋಳವನ್ನು ಕಂಡುಹಿಡಿದರು. ಆ ವಿಕಿರಣಕಾರಿಯನ್ನು ಒಂದು ನಿಗದಿತ ಉಷ್ಣಕ್ಕೆ ಕಾಯಿಸಿದಾಗ, ಅದು ಪರಿಪೂರ್ಣ ಕಪ್ಪು-ಕಾಯದ (ideal black-body) ರೀತಿ ವರ್ತಿಸುತ್ತದೆ. ನಂತರ ಲುಮ್ಮರ್‌ರವರು ‘ಪಾದರಸ ಬಾಷ್ಟದ ದೀಪ’ವನ್ನು (mercury vapour lamp) ನಿರ್ಮಿಸಿದರು.[] ಅಲ್ಲದೆ ಅವರು ಸೂರ್ಯನ ಉಷ್ಣತೆಯ ಅಂದಾಜನ್ನು ತಯಾರಿಸಿದರು. ಲುಮ್ಮರ್‌ರವರು ೧೯೨೫ರ ಜುಲೈ ೫ರಂದು ಬ್ರೆಸ್ಲಾದಲ್ಲಿ (ಈಗ ಪೋಲೆಂಡಿನಲ್ಲಿರುವ ವ್ರೊಕ್ಲಾದಲ್ಲಿ) ನಿಧನರಾದರು.[]

ಅಟ್ಟೊ ರಿಚರ್ಡ್ ಲುಮ್ಮರ್‌
ಜನನ೧೭-೦೭-೧೮೬೦
ಜರ್ಮನಿಯ
ಮರಣ೦೫-೦೭-೧೯೨೫
ಜರ್ಮನಿ
ಕಾರ್ಯಕ್ಷೇತ್ರಭೌತವಿಜ್ಞಾನ
ಡಾಕ್ಟರೇಟ್ ಸಲಹೆಗಾರರುಹೆರ್ಮಾನ್ ಫ಼ನ್ ಹೆಲ್ಮ್‌ಹೋಲ್‍ಟ್ಸ್
ಡಾಕ್ಟರೇಟ್ ವಿದ್ಯಾರ್ಥಿಗಳುಜಾರ್ಜ್ ಅರ್ನೆಸ್ಟ್ ಗಿಬ್ಸನ್

ಉಲ್ಲೇಖಗಳು

ಬದಲಾಯಿಸಿ
  1. "Lummer, Otto Richard (1860-1925)". Archived from the original on 2008-05-15. Retrieved 2008-05-29.
  2. "Scientist: Otto Lummer". Answers.com. Retrieved 2008-05-29.
  3. "The Radiation Laws and the Birth of Quantum Mechanics". Archived from the original on 2008-05-01. Retrieved 2008-05-29.