ಅಜ್ಜಂಪುರ ಜಿ. ಸೂರಿ

(ಅಜ್ಜಂಪುರ ಜಿ ಸೂರಿ ಇಂದ ಪುನರ್ನಿರ್ದೇಶಿತ)

ಅಜ್ಜಂಪುರ ಜಿ ಸೂರಿ (ಏಪ್ರಿಲ್ ೧೭, ೧೯೩೯ - ಮೇ ೨೫, ೨೦೦೮) ಕನ್ನಡದ ಕಥೆ, ಕಾದಂಬರಿಕಾರರಾಗಿ ಜನಪ್ರಿಯರಾಗಿದ್ದಾರೆ. ಪತ್ರಿಕೆಗಳಲ್ಲಿನ ಧಾರಾವಾಹಿಗಳ ಮೂಲಕ ಅವರು ಕನ್ನಡದ ಓದುಗರಿಗೆ ಚಿರಪರಿಚಿತರು.

ಅಜ್ಜಂಪುರ ಜಿ ಸೂರಿ
ಜನನಜಿ. ಸೂರ್ಯನಾರಾಯಣ
ಏಪ್ರಿಲ್ ೧೭, ೧೯೩೯
ತರೀಕೆರೆ ತಾಲ್ಲೂಕಿನ ಅಜ್ಜಂಪುರ
ಮರಣಮೇ ೨೫, ೨೦೦೮
ವೃತ್ತಿಪ್ರಾಧ್ಯಾಪಕರು
ವಿಷಯಕನ್ನಡ ಸಾಹಿತ್ಯ

ಕವಿ, ವಚನಕಾರ, ಕಾದಂಬರಿಕಾರ, ಅನುವಾದಕ ಎಲ್ಲಕ್ಕಿಂತ ಹೆಚ್ಚಾಗಿ ಸಹೃದಯ ಸಾಹಿತಿ ಎನಿಸಿಕೊಂಡಿದ್ದ ಜಿ. ಸೂರ್ಯನಾರಾಯಣರವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಜ್ಜಂಪುರದಲ್ಲಿ 1939ರ ಏಪ್ರಿಲ್‌ 17ರಂದು. ತಂದೆ’ ಗೋವಿಂದಪ್ಪನವರು ಮತ್ತು ತಾಯಿ ಪಾರ್ವತಮ್ಮನವರು. ತಂದೆಯವರದು ಮೂಲತಃ ಬಳೆಮಾರುವ ಕಾಯಕ ಪ್ರವೃತ್ತಿಯಾದರೂ, ದೈಹಿಕ ಸೌಖ್ಯಕ್ಕೆ ಆಯುರ್ವೇದ ಚಿಕಿತ್ಸೆಯನ್ನೂ ಪಾರಮಾರ್ಥಿಕಕ್ಕೆ ಅಧ್ಯಾತ್ಮ ಚಿಕಿತ್ಸೆಯನ್ನೂ ನೀಡುತ್ತ ಗೋವಿಂದಾರ್ಯರೆನಿಸಿದ್ದರು. ಈ ಪರಿಸರದಲ್ಲಿ ಬೆಳೆದ ಸೂರಿಯವರೂ ತಮ್ಮ ಬದುಕಿನಲ್ಲಿ ಸುಸಂಸ್ಕೃತ ಬದುಕನ್ನು ರೂಢಿಸಿಕೊಂಡಿದ್ದರು. ಅಜ್ಜಂಪುರದಲ್ಲಿ ಪ್ರೌಢಶಾಲೆಯವರೆಗೆ ಓದಿ ನಂತರ ಕೃಷಿಕ್ಷೇತ್ರದಲ್ಲಿ ಡಿಪ್ಲೊಮ ಪಡೆದ ಸೂರಿಯವರು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿ ಕ್ಷೇತ್ರಾಭಿವೃದ್ಧಿ ಅಧಿಕಾರಿಯವರೆಗೂ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದರು.[]

ಪತ್ರಿಕೆಗಳಲ್ಲಿ ಧಾರಾವಾಹಿಗಳು

ಬದಲಾಯಿಸಿ

ಬಾಲ್ಯದಿಂದಲೇ ಸಣ್ಣ ಕಥೆ, ಕಾದಂಬರಿ ಬರೆಯುವುದನ್ನು ಹವ್ಯಾಸ ಮಾಡಿಕೊಂಡಿದ್ದ ಅಜ್ಜಂಪುರ ಸೂರಿ ಅವರು ಹಲವಾರು ಕಾದಂಬರಿಗಳನ್ನು ಬರೆದರು. ಅವರ ಬಹುಪಾಲು ಕಾದಂಬರಿಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಶಾಪ, ಹೊಸಚಿಗುರು, ತೋಟದಮನೆ, ಎರಡು ಮನಸು, ಅನುಬಂಧ ಕಾದಂಬರಿಗಳು ಪ್ರಕಟವಾಗಿದ್ದರೆ ಮಾರ್ಗದರ್ಶಿ, ಶ್ವೇತಾಗ್ನಿ, ವಿಮುಕ್ತಿ, ನೇಗಿಲಗೆರೆ ಮುಂತಾದ ಕಾದಂಬರಿಗಳು ಗಿರಿವಾರ್ತೆ, ‘ಮನ್ವಂತರ’, ‘ಅಭಿಮಾನಿ’, ‘ಗೆಳತಿ’ ಮುಂತಾದ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು.

ಬಾನುಲಿಯಲ್ಲಿ ನಾಟಕಗಳು

ಬದಲಾಯಿಸಿ

ಸೂರಿಯವರು ಬಾನುಲಿಗಾಗಿ ಬರೆದ ಹಲವಾರು ನಾಟಕಗಳು ಬೆಂಗಳೂರು ಭದ್ರಾವತಿ ನಿಲಯಗಳಿಂದ ಪ್ರಸಾರಗೊಂಡಿವೆ. ಅವುಗಳಲ್ಲಿ ಕೊನೆಯಾಸೆ, ಕುಳ್ಳರು, ಬೋನಿಗೆ ಬಿದ್ದ ಹುಲಿ, ಮರಗಡುಕ, ಪ್ರೇತಗಳು ಸುಮಂಗಲಿಯರು, ಧನ್ಯಭಿಕ್ಷು, ಒಂದೇ ಜನ ಒಂದೇ ಮನ ಹಲವಾರು ಬಾರಿ ಪ್ರಸಾರವಾಗಿದ್ದರೆ ‘ಪರಿವರ್ತನೆ’ ಮತ್ತು ‘ಅಂತರ’ ರಂಗನಾಟಕಗಳು ಸ್ಪರ್ಧೆಗಳಲ್ಲಿ ಪ್ರದರ್ಶಿತವಾಗಿ ಹಲವಾರು ಬಹುಮಾನಗಳನ್ನೂ ಪಡೆದಿವೆ.

ತೆಲುಗಿನಿಂದ ಕನ್ನಡಕ್ಕೆ

ಬದಲಾಯಿಸಿ

ತೆಲುಗು ಸಾಹಿತ್ಯವನ್ನೂ ಬಾಲ್ಯದಿಂದಲೇ ಓದುತ್ತಿದ್ದ ಅಜ್ಜಂಪುರ ಸೂರಿ ಅವರು, ಅವುಗಳಲ್ಲಿ ತಮಗೆ ಇಷ್ಟವಾಗಿದ್ದನ್ನು ಕನ್ನಡಕ್ಕೆ ಏಕೆ ಅನುವಾದಿಸಬಾರದು ಎಂದೆನಿಸಿ, ತೆಲುಗಿನ ಹಲವಾರು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಅವುಗಳಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ‘ಸಂಸ್ಕರಣ’ ಮತ್ತು ‘ಸೀತೆಯ ಕತೆಯಲ್ಲಿ ಸ್ತ್ರೀಪಾತ್ರಗಳು’ ಧಾರಾವಾಹಿಯಾಗಿ ಪ್ರಕಟಗೊಂಡವು. ‘ತರಂಗ’ದಲ್ಲಿ ಮನ್ಮಥರೇಖೆ, ಷಾಂಗ್ರೀಲಾ, ಲೇಡೀಸ್‌ ಹಾಸ್ಟೆಲ್‌, ಅರಣ್ಯ ಮೃದಂಗ, ಜ್ವಾಲಾಮುಖಿ, ಭೂಮಿ ಬಾಯ್ಬಿಟ್ಟಾಗ, ಕ್ರಿಕೆಟ್‌-ಕ್ರಿಕೆಟ್‌ ಕಾದಂಬರಿಗಳು; ಸುಧಾ, ಮಯೂರ ಪತ್ರಿಕೆಗಳಲ್ಲಿ ವೂಡು, ಕಾಲರುದ್ರ, ಒಬ್ಬ ಸೂರ್ಯ ಕಾದಂಬರಿಗಳು; ‘ವಾರಪತ್ರಿಕೆ’ಯಲ್ಲಿ (ವೈಕುಂಠರಾಜುಪತ್ರಿಕೆ) ಕರ್ಮಸಾಕ್ಷಿ, ಕಿನ್ನರಸಾನಿ, ಹಿಮಜ್ವಾಲೆ, ಅನ್ವೇಷಿ ಕಾದಂಬರಿಗಳು ಪ್ರಕಟಗೊಂಡವು. ಇಷ್ಟೇ ಅಲ್ಲದೆ ಪ್ರಜಾಮತ, ಅಭಿಮಾನಿ, ಲೋಕವಾಣಿ, ಮಂಗಳಾ, ಕರ್ಮವೀರ ಮುಂತಾದ ಪತ್ರಿಕೆಗಳೂ ಸೇರಿ ಒಟ್ಟು 40ಕ್ಕೂ ಹೆಚ್ಚು ಸ್ವತಂತ್ರ ಹಾಗೂ ಅನುವಾದಿತ ಕಾದಂಬರಿಗಳು ಧಾರಾವಾಹಿಯಾಗಿಯೇ ಪ್ರಕಟಗೊಂಡು ದಾಖಲೆಯನ್ನೇ ನಿರ್ಮಿಸಿದ್ದಾರೆ.[]

ಬಹಳಷ್ಟು ಸಣ್ಣ ಕಥೆಗಳು

ಬದಲಾಯಿಸಿ

ಅಲೆಗಳು, ಧ್ವನಿಗಳು, ಸ್ನೇಹವಾರ್ತೆ, ಹಸಿರು ತೋರಣ ಮುಂತಾದ 10ಕ್ಕೂ ಹೆಚ್ಚು ವಿವಿಧ ವಿಷಯಗಳ ಮೇಲೆ ಇತರರೊಡನೆ ಸೇರಿ ಸಂಪಾದಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಸ್ವತಂತ್ರ ಕಥೆಗಳು ಪ್ರಕಟವಾಗಿರುವುದರ ಜೊತೆಗೆ 200ಕ್ಕೂ ಹೆಚ್ಚು ಸಣ್ಣ ಕಥೆಗಳನ್ನೂ ಅನುವಾದಿಸಿದ್ದಾರೆ.

ಪ್ರಶಸ್ತಿ ಗೌರವಗಳು

ಬದಲಾಯಿಸಿ

ಗೆ ಸದಾ ಸಾಹಿತ್ಯ ಚಟುವಟಿಕೆಯಲ್ಲಿಯೇ ತೊಡಗಿಸಿಕೊಂಡಿದ್ದು, ಭಾರ್ಗವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮಲೆನಾಡ ರತ್ನ ಪ್ರಶಸ್ತಿಗಳಿಗೆ ಸೂರಿಯವರು ಭಾಜನರಾಗಿದ್ದರು.

ಅಜ್ಜಂಪುರ ಜಿ. ಸೂರಿಯವರು ೨೦೦೮ರ ಮೇ ೨೫ರಂದು ಈ ಲೋಕದಿಂದ ಮರೆಯಾದರು.

ಮಾಹಿತಿ ಕೃಪೆ

ಬದಲಾಯಿಸಿ

ಕಣಜ[ಶಾಶ್ವತವಾಗಿ ಮಡಿದ ಕೊಂಡಿ]

ಉಲ್ಲೇಖಗಳು

ಬದಲಾಯಿಸಿ
  1. "ಅಜ್ಜಂಪುರ ಜಿ. ಸೂರಿ". kanaja.in. Archived from the original on 2014-04-03. Retrieved 7-2-2014. {{cite web}}: Check date values in: |accessdate= (help)
  2. "ಅಜ್ಜಂಪುರ ಜಿ ಸೂರಿ". sallapa.com. Retrieved 7-2-2014. {{cite web}}: Check date values in: |accessdate= (help)