ಅಜಿಲಮೊಗರು
ಅಜಿಲಮೊಗರು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೇತ್ರಾವತಿನದಿ ತಟದಲ್ಲಿರುವ ಈ ಪುಟ್ಟ ಊರು ಜಿಲ್ಲಾ ಕೇಂದ್ರ ಮಂಗಳೂರಿನಿಂದ 38 ಕಿ.ಮೀ ದೂರದಲ್ಲಿದೆ. ತಾಲೂಕು ಕೇಂದ್ರ ಬಂಟ್ವಾಳದಿಂದ 12 ಕಿ.ಮೀ ಹಾಗೂ ರಾಜಧಾನಿ ಬೆಂಗಳೂರಿನಿಂದ 309 ಕಿ.ಮೀ ಅಂತರದಲ್ಲಿದೆ. ಅಜಿಲಮೊಗರು ದಕ್ಷಿಣದಿಂದ ಪುತ್ತೂರು ತಾಲೂಕು, ಉತ್ತರದಿಂದ ಬೆಳ್ತಂಗಡಿ ತಾಲೂಕು, ಪೂರ್ವಭಾಗದಿಂದ ಮಂಜೇಶ್ವರ ತಾಲೂಕು, ಪಶ್ಚಿಮದಿಂದ ಮಂಗಳೂರು ತಾಲೂಕಿನಿಂದ ಸುತ್ತುವರಿದಿದೆ. ಪುತ್ತೂರು, ಮೂಡಬಿದ್ರೆ, ಮಂಗಳೂರು, ಬಿ.ಸಿ ರೋಡು ಅಜಿಲಮೊಗರುವಿನ ಸಮೀಪದ ನಗರಗಳು. ಅಜಿಲಮೊಗರು ಪ್ರದೇಶವು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಗಳ ಗಡಿ ಪ್ರದೇಶವಾಗಿದೆ. ತುಳು, ಬ್ಯಾರಿ, ಕೊಂಕಣಿ ಪ್ರಮುಖ ಭಾಷೆಗಳು. ಆಡಳಿತ ಭಾಷೆ ಕನ್ನಡ. ಒಟ್ಟು ಜನಸಂಖ್ಯೆ 4647 ಇದರಲ್ಲಿ 2213 ಪುರುಷರು ಮತ್ತು 2434 ಮಹಿಳೆಯರು ಒಳಗೊಂಡಿದ್ದಾರೆ. ಒಟ್ಟು 808 ಮನೆಗಳು ಅಜಿಲಮೊಗರುವಿನಲ್ಲಿದೆ. 1365 ಎಕರೆ ಅಜಿಲಮೊಗರುವಿನ ಭೌಗೋಳಿಕ ವ್ಯಾಪ್ತಿ.
ಇತಿಹಾಸ
ಬದಲಾಯಿಸಿಅಜಿಲಮೊಗರು ಎಂಬ ಊರು ಬಹಳ ಹಿಂದಿನ ಕಾಲದಿಂದಲೇ ಪ್ರಸಿದ್ದವಾದುದು. ಇಲ್ಲಿನ ಚರಿತ್ರೆಗೆ ಏಳುನೂರು ವರ್ಷಗಳಿಗೂ ಹಿಂದಿನ ಇತಿಹಾಸವಿದೆ. ಕರ್ನಾಟಕದ ಅತ್ಯಂತ ಪುರಾತನ ಮುಸ್ಲಿಂ ಕೇಂದ್ರ ಅಜಿಲಮೊಗರು. ಅಜಿಲಮೊಗರು ಎಂಬ ಊರು ಪ್ರಸಿದ್ದಿಯಾಗಲು ಕಾರಣ ಇಲ್ಲಿ ನೆಲೆಯೂರಿ ಮಸೀದಿ ಸ್ಥಾಪಿಸಿ ಅಜಿಲಮೊಗರನ್ನು ಮುಸ್ಲಿಂ ಧಾರ್ಮಿಕ ಕೇಂದ್ರವಾಗಿ ಮಾಡಿದ ಹಝ್ರತ್ ಸೈಯ್ಯದ್ ಬಾಬಾ ಫಕ್ರುದ್ದೀನ್ [ರ ಅ] ರವರು. ಹಝ್ರತ್ ಸೈಯ್ಯದ್ ಬಾಬಾ ಫಕ್ರುದ್ದಿನ್ ರವರು ಇರಾನ್ ದೇಶದಿಂದ ಅಜಿಲಮೊಗರಿಗೆ ಬಂದವರು. ಬಾಬಾರವರು ಅಜಿಲಮೊಗರು ತಲುಪುವ ಮುನ್ನ ಕರ್ನಾಟಕದ ಅನೇಕ ಕಡೆಗಳಲ್ಲಿ ಸ್ವಲ್ಪ ಸ್ವಲ್ಪ ಕಾಲ ತಂಗುತ್ತಾ ಬಂದಿದ್ದರು. ಅದರ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪೊಳಲಿ ಎಂಬ ನಾಡು ಒಂದಾಗಿದೆ. ಅಲ್ಲಿ ಬಾಬಾರವರು ಸ್ವಲ್ಪ ಕಾಲ ತಂಗಿ ಮಸೀದಿಯನ್ನು ಕಟ್ಟಿಸಿದ್ದರು. ಆ ಮಸೀದಿ ಈಗಲೂ ಪೊಳಲಿಯಲ್ಲಿದೆ.
ಅಜಿಲಮೊಗರು ಜುಮ್ಮಾ ಮಸೀದಿ
ಬದಲಾಯಿಸಿಹಝ್ರತ್ ಸೈಯ್ಯದ್ ಬಾಬಾ ಫಕ್ರುದ್ದೀನ್[ಸೂಕ್ತ ಉಲ್ಲೇಖನ ಬೇಕು] ರವರಿಗೆ ಇಲ್ಲಿ ಮಸೀದಿ ಕಟ್ಟಿಸಲು ಭೂಮಿಯನ್ನು ದಾನವಾಗಿ ನೀಡಿದವರು ಇಲ್ಲಿನ ದೊಡ್ಡ ಜಮೀನ್ದಾರರಾಗಿದ್ದ “ಅಜಿಲ” ಎಂಬ ವ್ಯಕ್ತಿಯಾಗಿದ್ದರು. ಇಲ್ಲಿ ಕಟ್ಟಿಸಲಾದ ಮಸೀದಿಗೆ ಬಾಬಾರವರು ತನ್ನ ಶಿಷ್ಯರಾದ ಝಕರಿಯಾ ರವರನ್ನು ಇಮಾಮ್ [ಮುಖ್ಯಸ್ಥ] ಆಗಿ ನೇಮಿಸಿದರು. ಮಸೀದಿಯ ಮುಂಭಾಗದಲ್ಲಿ ಇರುವ ದರ್ಗಾ ಇವರದ್ದೇ ಆಗಿದೆ.
ಸಕ್ಕರೆಯ ಮರ
ಬದಲಾಯಿಸಿಅಜಿಲಮೊಗರು ಮಸೀದಿಯ ಮುಭಾಗದಲ್ಲಿರುವ ದರ್ಗಾದ ಮುಂದೆ ಸತ್ತುಹೋದ ಮರದ ಕಾಂಡದ ಉಳಿಕೆಯಿದ್ದು ಈ ಮರವು ಹಝ್ರತ್ ಸೈಯ್ಯದ್ ಬಾಬಾ ಫಕ್ರುದ್ದೀನ್ ರವರ ಕಾಲದಲ್ಲೇ ಇತ್ತು. ಈ ಮರವನ್ನು ಸಕ್ಕರೆಯ ಮರ ಎಂದು ಕರೆಯಲಾಗುತ್ತದೆ. ಈ ಮರದಲ್ಲಿ ಸಕ್ಕರೆ ರೂಪದ ಸಿಹಿಯಾದ ವಸ್ತು ಬೆಳೆಯುತಿತ್ತು. ಈ ಸಕ್ಕರೆ ರೂಪದ ಸಿಹಿಯಾದ ವಸ್ತುವನ್ನು ಮಸೀದಿಗೆ ಆಗಮಿಸುವ ಜನರಿಗೆ ಬಾಬಾರವರು ತಬರ್ರುಕ್[ ಪ್ರಸಾದ] ಆಗಿ ನೀಡುತಿದ್ದರು. ಹಲವಾರು ವರ್ಷಗಳ ಕಾಲ ಮರದಿಂದ ಸಿಹಿಯಾದ ಸಕ್ಕರೆ ರೂಪದ ವಸ್ತು ಜಿನುಗುತಿತ್ತು. ತದನಂತರ ಕಾರಾಣಾಂತರಗಳಿಂದ ನಿಲುಗಡೆಯಾಯಿತು.
ಮಸೀದಿಗೆ ಜಾಗ ಕೊಟ್ಟ ಅಜಿಲ
ಬದಲಾಯಿಸಿಹಝ್ರತ್ ಸೈಯ್ಯದ್ ಬಾಬಾ ಫಕ್ರುದ್ದಿನ್ ರವರು ಅಜಿಲಮೊಗರುವಿಗೆ ಆಗಮಿಸಿದಾಗ ಅವರಿಗೆ ತಂಗಲು ವ್ಯವಸ್ಥೆ ಮಾಡಿಕೊಟ್ಟಿದ್ದು ಅಂದು ಅಜಿಲಮೊಗರುವಿನ ಅತೀ ದೊಡ್ಡ ಜಮೀನ್ದಾರನಾಗಿದ್ದ ಅಜಿಲ ಎಂಬ ವ್ಯಕ್ತಿ. ಒಂದು ದಿನ ಅಜಿಲನಿಗೆ ಸೇರಿದ ಒಂದು ಕೊಬ್ಬಿದ ಎತ್ತು ಮೇಯುತಿತ್ತು. ದೂರದಿಂದ ಪ್ರಯಾಣ ಮಾಡಿ ಬಂದಿದ್ದ ಬಾಬಾ ಮತ್ತು ಅವರ ಶಿಷ್ಯರಿಗೆ ತುಂಬಾ ಹಸಿವಾಗಿತ್ತು. ಆಹಾರಕ್ಕೆ ಯಾವ ದಾರಿಯೂ ತೋಚಲಿಲ್ಲ. ಶಿಷ್ಯಂದಿರು ತಮ್ಮ ಹಸಿವಿನ ಬಗ್ಗೆ ಬಾಬಾರವರಲ್ಲಿ ಅಹವಾಲು ಹೇಳಿದಾಗ, ಬಾಬಾರವರು ಅಲ್ಲಾಹನ [ದೇವರ] ಕಲ್ಪನೆಯ ಮೇರೆಗೆ ಅಲ್ಲೇ ಮೇಯುತಿದ್ದ ಆ ಎತ್ತನ್ನು ಪಾಕ ಮಾಡಿ ಭಕ್ಷಿಸುವಂತೆ ಹೇಳಿದರು. ಶಿಷ್ಯಂದಿರು ಹಾಗೆಯೇ ಮಾಡಿದರು. ಈ ವಿಷಯವು ಅಜಿಲರಿಗೆ ಮುಟ್ಟಿದಾಗ ತೀವ್ರ ಸಿಟ್ಟಿನಿಂದ ಅಲ್ಲಿಗೆ ಧಾವಿಸಿ ಬಂದರು. ನನ್ನ ಎತ್ತನ್ನು ನೀವು ತಿಂದಿದ್ದೀರಿ. ಇದಕ್ಕೆ ತಕ್ಕುದಾದ ಪ್ರತೀಕಾರವನ್ನು ನಾನು ನೀಡದೇ ಇರಲಾರೆ ಎಂದು ಅಬ್ಬರಿಸಿದನು. ಬಾಬಾರವರು ತಾನು ಭಕ್ಷಿಸಿದ್ದ ಮಾಂಸದ ಮೂಲೆಗಳು ಮತ್ತು ಎತ್ತಿನ ಚರ್ಮವನ್ನು ಒಂದು ಕಡೆ ರಾಶಿಹಾಕಿ ತನ್ನ ಕೈಯಲ್ಲಿರುವ ಲಾಠಿಯಿಂದ ಅದನ್ನು ಮುಟ್ಟಿದರು, ಆಶ್ಚರ್ಯವೇ ಸರಿ, ಅದು ಜೀವಂತ ಎತ್ತಾಗಿ ಎದ್ದು ನಿಂತು ಹಿಂದಿನಂತೆಯೇ ಹೋಗಿ ಮೇಯ ತೊಡಗಿತು. ಈ ಚಕಿತವನ್ನು ಕಣ್ಣಾರೆ ಕಂಡ ಅಜಿಲ ಇವರು ಸಾಮಾನ್ಯರಲ್ಲ ಮಹಾತ್ಮರು ಎಂದು ಖಚಿತವಾದಾಗ ನಿಮಗೆ ಏನು ಅವಶ್ಯಕತೆಯಿದೆಯೋ ಅದೆಲ್ಲವನ್ನು ನನ್ನಲ್ಲಿ ಕೇಳಿರಿ ನಾನು ಪೂರೈಸಿ ಕೊಡುತ್ತೇನೆ ಎಂದು ಹೇಳಿದ. ಅದಕ್ಕೆ ಬಾಬಾರವರು ನನಗೆ ಬೇರೇನು ಬೇಡ ಅಲ್ಲಾಹನಿಗೆ [ದೇವರಿಗೆ] ಆರಾಧನೆ ಮಾಡಲು ಅಲ್ಪ ಜಾಗ ಕೊಟ್ಟರೆ ಸಾಕು, ಎಂದರು ಅಜಿಲರು ಬಹಳ ಸಂತೋಷದಿಂದ ತನ್ನ ಒಡೆತನದಲ್ಲಿದ್ದ ಅಲ್ಲಿನ ಜಾಗವನ್ನು ಮಸೀದಿ ಕಟ್ಟಿಸಲು ದಾನವಾಗಿ ನೀಡಿದರು. ಅಂದು [700 ವರ್ಷಗಳ ಹಿಂದೆ] ಸ್ಥಾಪಿತವಾದ ಮಸೀದಿಯಾಗಿದೆ ಇಂದಿನ ಅಜಿಲಮೊಗರು ಜುಮ್ಮಾ ಮಸೀದಿ. ಅಜಿಲಮೊಗರು ಎಂಬ ಹೆಸರು ಬರಲು ಕಾರಣ ಅಜಿಲ ಎಂಬ ವ್ಯಕ್ತಿಯಾಗಿದ್ದಾರೆ. ಅಜಿಲಮೊಗರು ಉರೂಸ್ ಮಾಲಿದಾ ಎಂಬ ವೈಶಿಷ್ಯತೆಯನ್ನು ಹೊಂದಿರುತ್ತದೆ. ಈ ವೈಶಿಷ್ಯತೆಯನ್ನು ಹೊಂದಿರುವ ಇನ್ನೊಂದು ಉರೂಸ್ ಜಗತ್ತಿನಲ್ಲೇ ಇಲ್ಲ. ಮಾಲಿದಾ ಎಂದರೆ ಉರೂಸಿನ ಸಂದರ್ಭದಲ್ಲಿ ಮಾತ್ರ ತಯಾರಿಸಲಾಗುವ ಒಂದು ವಿಶೇಷ ಆಹಾರ ಪದಾರ್ಥವಾಗಿದೆ. ಮಾಲಿದಾ ಅಜಿಲಮೊಗರು ಉರೂಸಿನ ವಿಶೇಷ ಪ್ರಸಾದವಾಗಿದೆ. ಪ್ರತೀ ವರ್ಷವೂ ಅರಬಿಕ್ ಕ್ಯಾಲೆಂಡರಿನ ಜುಮಾದಿಲ್ ಆಖಿರ್ ತಿಂಗಳ 13, 14, 15ನೇಯ ದಿನಗಳಲ್ಲಿ ಮಾಲಿದಾ ಉರೂಸ್ ನಡೆಯುತ್ತದೆ.
ಭಂಡಾರದ ಹರಕೆ
ಬದಲಾಯಿಸಿಕೇವಲ ಮೂರು ದಿನಗಳಲ್ಲಿ ನಡೆಯುವ ಮಾಲಿದಾ ಉರೂಸಿನ ಮೊದಲ ದಿನವನ್ನು ಭಂಢಾರದ ಹರಕೆ ಎಂದು ಕರೆಯಲಾಗುತ್ತದೆ. ಆ ದಿವಸ ಊರಿನ ಪುರುಷರು ಮಸೀದಿಗೆ ತೆರಳಿ ಮಾಲಿದಾ ಎಂಬ ವಿಶೇಷ ತಿಂಡಿಯನ್ನು ತಯಾರಿಸುತ್ತಾರೆ. ಅದೇ ದಿನ ರಾತ್ರಿ ಅದನ್ನು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.
ಊರವರ ಹರಕೆ
ಬದಲಾಯಿಸಿಉರೂಸಿನ ಎರಡನೆಯ ದಿನವನ್ನು ಊರವರ ಹರಕೆ ಎಂದು ಕರೆಯಲಾಗುತ್ತದೆ. ಎರಡನೆಯ ದಿನದಂದು ಊರಿನ ಮತ್ತು ಸಮೀಪದ ಊರುಗಳ ಎಲ್ಲಾ ಮನೆಗಳಲ್ಲಿ ಮಾಲಿದವನ್ನು ತಯಾರಿಸಿ ಮಸೀದಿಗೆ ಒಯ್ಯಲಾಗುತ್ತದೆ. ಊರವರಿಂದ ಹರಕೆಯ ರೂಪದಲ್ಲಿ ಸಂಗ್ರಹವಾದ ಮಾಲಿದವನ್ನು ಮರುದಿನ ಬೆಳಗ್ಗಿನ ನಮಾಝ್ ಬಳಿಕ ಪ್ರಾರ್ಥನೆ ಸಲ್ಲಿಸಿ ಭಕ್ತಾದಿಗಳಿಗೆ ವಿತರಿಸಲಾಗುತ್ತದೆ.
ಕಂದೂರಿ
ಬದಲಾಯಿಸಿಮಾಲಿದ ಊರೂಸಿನ ಮೂರನೆಯ ದಿನವನ್ನು ಕಂದೂರಿ ಎಂದು ಕರೆಯಲಾಗುತ್ತದೆ. ಕಂದೂರಿ ಮಾಲಿದ ಉರೂಸಿನ ಕೊನೆಯ ದಿನವಾಗಿರುತ್ತದೆ. ಈ ದಿನ ಮಸೀದಿಯಲ್ಲಿ ಪ್ರಾರ್ಥನೆ ನಡೆಸಲಾಗುತ್ತದೆ ರಾತ್ರಿ 10 ಗಂಟೆಯ ಬಳಿಕ ಅನ್ನಸಂತರ್ಪಣೆ ನಡೆಯುತ್ತದೆ.
ಮಾಲಿದಾ ಮಾಡುವ ವಿಧಾನ
ಬದಲಾಯಿಸಿಮಾಲಿದ ಅಜಿಲಮೊಗರು ಉರೂಸಿನಲ್ಲಿ ಮಾಡಲ್ಪಡುವ ವಿಶೇಷ ಆಹಾರ[ಸೂಕ್ತ ಉಲ್ಲೇಖನ ಬೇಕು] . ಮಾಲಿದವನ್ನು ತಯಾರಿಸಲು ಮೊದಲು ಬೇಕಾದಷ್ಟು ಅಕ್ಕಿಯನ್ನು ಹುಡಿ ಮಾಡಬೇಕು. ಈ ಅಕ್ಕಿ ಹುಡಿಯನ್ನು ನೀರು ಹಾಕಿ ಕಲಸಿ ಹಿಟ್ಟಾಗಿ ಪರಿವರ್ತಿಸಬೇಕು. ಈ ಹಿಟ್ಟಿನಿಂದ ದಪ್ಪನೆಯ ರೊಟ್ಟಿಯನ್ನು ಮಾಡಬೇಕು. ನಂತರ ಆ ರೊಟ್ಟಿಯನ್ನು ಕಾಯಿಸಬೇಕು. ಕಾದ ರೊಟ್ಟಿಯನ್ನು ರುಬ್ಬುವ ಕಲ್ಲಿಗೆ ಹಾಕಿ ಒಣಕೆ ಅಥವಾ ಇತರ ಕಬ್ಬಿಣದ ವಸ್ತುಗಳನ್ನು ಬಳಸಿ ಕುಟ್ಟಬೇಕು. ರೊಟ್ಟಿ ಸ್ವಲ್ಪ ಹುಡಿಯಾಗುತಿದ್ದಂತೆ ಅದಕ್ಕೆ ಮೂರು ಚಮಚ ತುಪ್ಪ ಮತ್ತು ಸ್ವಲ್ಪ ಬೆಲ್ಲವೆನ್ನು ಸೇರಿಸಬೇಕು. ನಂತರ ಎಲ್ಲವನ್ನು ಒಟ್ಟಾಗಿ ಕುಟ್ಟಬೇಕು ಸ್ವಲ್ಪ ಹೊತ್ತಿನ ನಂತರ ಅದು ಕಂದು ಬಣ್ಣಕ್ಕೆ ತಿರುಗುವ ಮೂಲಕ ಮಾಲಿದಾ ಎಂಬ ಸಿಹಿಯಾದ ತಿಂಡಿಯಾಗುತ್ತದೆ.
ಮಾಲಿದಾ ತಯಾರಿಸುವಾಗ ಪಾಲಿಸಬೇಕಾದ ನಿಬಂಧನೆಗಳು
ಬದಲಾಯಿಸಿಅಜಿಲಮೊಗರು ಮಾಲಿದಾ ಎಂ¨ ಆಹಾರ ತಯಾರಿಸುವುದು ಒಂದು ಹರೆಕೆಯಾಗಿದೆ. ಮಾಲಿದ ಹರಕೆಗೆ 800 ವರ್ಷಗಳ ಇತಿಹಾಸವಿದೆ. ಅಜಿಲಮೊಗರಿಗೆ ಆಗಮಿಸುವ ಭಕ್ತರು ಮಾಲಿದಾವನ್ನು ಪವಿತ್ರ ಪ್ರಸಾದ ಎಂದು ನಂಬುತ್ತಾರೆ. ಅಜಿಲಮೊಗರು ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ಮಾಲಿದಾಕ್ಕೆ ಅತ್ಯಂತ ಗೌರವವಿದೆ. ಆದ್ದರಿಂದ ತಯಾರಿಸುವಾಗ ಕೆಲವೊಂದು ನಿಬಂಧನೆಗಳು ಪಾಲಿಸಬೇಕಾಗುತ್ತದೆ. ಮಾಲಿದಾ ತಯಾರಿಸುವ ವೇಳೆಯಲ್ಲಾಗಲಿ ನಂತರವಾಗಲಿ ಮಸೀದಿಯಲ್ಲಿ ಪ್ರಾರ್ಥನೆ ಮುಗಿಯುವ ತನಕ ಮಾಲಿದವನ್ನು ಯಾರೂ ತಿನ್ನಬಾರದೆಂಬ ಅಲಿಖಿತ ನಿಯಮವಿದೆ. ತಿಂದವರ ಆರೋಗ್ಯಕ್ಕೆ ತೊಂದರೆಯಾಗುತ್ತದೆ ಎಂಬ ನಂಬಿಕೆಯಿದೆ.
ಉಲ್ಲೇಖ
ಬದಲಾಯಿಸಿಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |