ಅಚ್ಚುಮೊಳೆಗಳ ಸಂಯೋಜಕ

ಬಿಡಿ ಅಚ್ಚಿನ ಮೊಳೆಗಳನ್ನು ಆವಶ್ಯಕತೆಗನುಗುಣವಾಗಿ ಅಳತೆಯ ಕ್ರಮಾನುಸಾರ ಒಂದೊಂದು ಶಬ್ದಗಳಂತೆ ಜೋಡಿಸಿ ಅವುಗಳನ್ನು ಪ್ರತ್ಯೇಕ ಪುಟಗಳಾಗುವಂತೆ ವಿಭಾಗಿಸಿ ವಿನ್ಯಾಸಗೊಳಿಸುವ ಕುಶಲ ಕೆಲಸಗಾರ, ಕೈ ಬರೆಹದ ಪ್ರತಿಯ ಆಧಾರದ ಮೇಲೆ ಅಚ್ಚಿನ ಪುಟವನ್ನು ಸಿದ್ಧಗೊಳಿಸುವವನು.[೧]

ಅಚ್ಚುಮೊಳೆಗಳ ಸಂಖ್ಯೆ ಬದಲಾಯಿಸಿ

ಒಂದೊಂದು ಭಾಷೆಯಲ್ಲಿಯೂ ಮುದ್ರಣಕ್ಕೆ ಅವಶ್ಯಕವಾದ ಅಚ್ಚುಮೊಳೆಗಳ ಸಂಖ್ಯೆ ಬೇರೆ ಬೇರೆಯಾಗಿರುತ್ತದೆ. ಇಂಗ್ಲಿಷ್ ಮುದ್ರಣಕ್ಕೆ ಸುಮಾರು 154 ತರಹದ ಮೊಳೆಗಳು ರೋಮನ್ ಲಿಪಿಯಲ್ಲಿಯೂ 90 ತರಹದ ಮೊಳೆಗಳು ಓರೆ (ಇಟಾಲಿಕ್) ಲಿಪಿಯಲ್ಲಿಯೂ ಬೇಕಾಗುತ್ತದೆ. ಹಾಗೆಯೇ ಕನ್ನಡ ಮುದ್ರಣಕ್ಕೆ ಸುಮಾರು 255 ಮೊಳೆಗಳು ಬೇಕು. ದೇವನಾಗಿರಿ ಲಿಪಿಯಲ್ಲಿ ಮುದ್ರಿಸುವುದಕ್ಕೆ 338 ಮೊಳೆಗಳು ಬೇಕಾಗುತ್ತವೆ. ಒಂದೊಂದು ಭಾಷೆಯ ಮುದ್ರಣಕ್ಕೆ ಬೇಕಾಗುವ ಅಚ್ಚುಮೊಳೆಗಳನ್ನು ಅನೇಕ ಖಾನೆಗಳುಳ್ಳ ಎರಡು ಮರದ ತಟ್ಟೆ (ಟೈಪ್ ಕೇಸ್) ಗಳಲ್ಲಿ ತುಂಬಿಡಬೇಕು. ಇದರಲ್ಲಿಯೂ ಹೆಚ್ಚಾಗಿ ಬಳಕೆಯಲ್ಲಿರುವ ಅಚ್ಚುಮೊಳೆಗಳನ್ನು ಅಚ್ಚುಮೊಳೆ ಸಂಯೋಜಕನ ಕೈಗೆ ಹತ್ತಿರವಿರುವಂತೆ ಮರದ ತಟ್ಟೆಯ ಮಧ್ಯದಲ್ಲಿಯೂ ಕಡಿಮೆ ಬಳಕೆಯಲ್ಲಿರುವ ಅಚ್ಚು ಮೊಳೆಗಳನ್ನು ತಟ್ಟೆಯ ಅಂಚಿನಲ್ಲಿರುವ ಖಾನೆಗಳಲ್ಲಿಯೂ ಇಡಬೇಕು.[೨]

ಅಚ್ಚುಮೊಳೆಗಳ ತಯಾರಿಕೆ ಬದಲಾಯಿಸಿ

ತಟ್ಟೆಗಳನ್ನು ಸುಮಾರು 31/2`-4` ಎತ್ತರದ ಮರದ ಚೌಕಟ್ಟಿನ (ಫ್ರೇಮ್) ಮೇಲೆ ಇಡಬೇಕು. ಕೆಳಗಿನ ತಟ್ಟೆಯನ್ನು (ಲೋಯರ್ ಕೇಸ್) ಸಮತಳವಾಗಿಯೂ ಮೇಲಿನ ತಟ್ಟೆಯನ್ನು (ಅಪ್ಪರ್ ಕೇಸ್) ಸ್ವಲ್ಪ ಇಳಿಜಾರಾಗಿಯೂ ಇಡಬೇಕು. ಸಂಯೋಜಕ ಯಾವ ಖಾನೆಗಳಲ್ಲಿ ಯಾವ ಅಚ್ಚುಮೊಳೆ ಇದೆ ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾದ್ದು ಬಹಳ ಅವಶ್ಯಕ. ಸಂಯೋಜಿಸಬೇಕಾದ ಹಸ್ತಪ್ರತಿಯನ್ನು ಮೇಲಿನ ತಟ್ಟೆಯ ಎಡಭಾಗದಲ್ಲಿಟ್ಟು ಅದರ ಬಲಭಾಗದಲ್ಲಿ ಸಂಯೋಜಿಸಿದ ಮೊಳೆಗಳ ಸಾಲುಗಳನ್ನು ಇಡುವುದಕ್ಕೆ ಲೋಹದ ಮೂರು ಅಂಚಿನ ಒಂದು ತಟ್ಟೆಯನ್ನು ಇಡಬೇಕು.ಅಚ್ಚುಮೊಳೆ ಸಂಯೋಜಕ ಈ ತಟ್ಟೆಗಳ ಎದುರಿಗೆ ನಿಂತು ಹಸ್ತಪ್ರತಿಯನ್ನು ನೋಡಿ ಒಂದೆರಡು ಶಬ್ದಗಳನ್ನು ಮಾತ್ರ ನೆನಪಿಟ್ಟುಕೊಂಡು ಅವಕ್ಕೆ ಬೇಕಾದ ಅಚ್ಚುಮೊಳೆಗಳನ್ನು ಒಂದೊಂದಾಗಿ ತನ್ನ ಬಲಗೈ ಹೆಬ್ಬೆರಳು ಮತ್ತು ತೋರುಬೆರಳುಗಳಿಂದ ತೆಗೆದುಕೊಂಡು, ಎಡಗೈಯಲ್ಲಿರುವ ಸಂಯೋಜನಾ ಸಲಕರಣೆಯಲ್ಲಿಡಬೇಕು (ಕಂಪೋಸಿಂಗ್ ಸ್ಟಿಕ್).[೩]

ಅಚ್ಚುಮೊಳೆಗಳ ಸಲಕರಣೆ ಬದಲಾಯಿಸಿ

ಈ ಸಲಕರಣೆಯಲ್ಲಿ ಮೊದಲೇ ಗೊತ್ತುಮಾಡಲ್ಪಟ್ಟ ಅಗಲದ 10-12 ಅಚ್ಚುಮೊಳೆಗಳ ಸಾಲುಗಳನ್ನು ಜೋಡಿಸಬಹುದು. ಸಾಲುಗಳೆಲ್ಲ ಒಂದೇ ಉದ್ದವಿರಬೇಕು. ಒಂದು ಸಾಲನ್ನು ಜೋಡಿಸುತ್ತಿರುವಾಗ ಒಂದೊಂದು ಶಬ್ದವನ್ನು ಜೋಡಿಸಿದ ಅನಂತರ ಒಂದೊಂದು ತೆರಪುಮೊಳೆಯನ್ನು (ಬ್ಲಾಂಕ್ ಸ್ಪೇಸ್) ಇಡಬೇಕು. ಸಾಲಿನ ಅಂತ್ಯ ಸಮೀಪಿಸಿದಾಗ ಕಡೆಯ ಶಬ್ದವನ್ನು ಪೂರ್ತಿಯಾಗಿ ಅದೇ ಸಾಲಿನಲ್ಲಿ ಜೋಡಿಸುವುದಕ್ಕೆ ಸಾಧ್ಯವಿಲ್ಲದಿದ್ದರೆ ಶಬ್ದಗಳ ನಡುವೆ ಹಾಕಿರುವ ತೆರಪುಮೊಳೆಗಳನ್ನು ಬದಲಾಯಿಸುವುದರಿಂದ ಅಥವಾ ಆ ಶಬ್ದವನ್ನು ಎರಡು ಭಾಗ ಮಾಡಿ ಪೂರ್ವಭಾಗದ ಜೊತೆಗೆ ಒಂದು ಅಡ್ಡಗೆರೆ ಮೊಳೆಯನ್ನು (ಹೈಫನ್) ಸಾಲಿನ ಕಡೆಯಲ್ಲಿಯೂ ಮತ್ತು ಉತ್ತರಾರ್ಧವನ್ನು ಮುಂದಿನ ಸಾಲಿನ ಪ್ರಾರಂಭದಲ್ಲಿಯೂ ಜೋಡಿಸಿ ಸರಿಪಡಿಸಬೇಕು. ಈ ತೆರಪು ಮೊಳೆಗಳು 3-4 ಅಳತೆಗಳಲ್ಲಿ ದೊರೆಯುತ್ತವೆ. ಹೀಗೆ 10-12 ಅಚ್ಚುಮೊಳೆಗಳ ಸಾಲುಗಳನ್ನು ಜೋಡಿಸಿ ಅವುಗಳನ್ನು ಕೈಸಲಕರಣೆಯಿಂದ, ಮೇಲ್ತಟ್ಟೆಯ ಮೇಲಿರುವ ಲೋಹದ ತಟ್ಟೆಯಲ್ಲಿಡಬೇಕು.ಹೀಗೆ ಒಂದು ತಟ್ಟೆಯ (ಗ್ಯಾಲಿ) ತುಂಬ 50-60 ಸಾಲುಗಳನ್ನು ಜೋಡಿಸಿದ ಮೇಲೆ ಅವನ್ನೆಲ್ಲ ಒಂದು ಗಟ್ಟಿಯಾದ ದಾರದಿಂದ ಕಟ್ಟಿ ಕರಡುಪ್ರತಿ ತೆಗೆಯುವ ಯಂತ್ರದಲ್ಲಿಟ್ಟು (ಪ್ರೂಫ್ó ಮೆಷಿನ್), ಮಸಿ ಲೇಪಿಸಿ ಕರಡುಪ್ರತಿ ತೆಗೆಯಬೇಕು. ಇದರಲ್ಲಿ ಕಂಡುಬಂದ ತಪ್ಪುಗಳನ್ನು ಗುರುತು ಮಾಡಿ ಅವುಗಳನ್ನು ಅಚ್ಚುಮೊಳೆಗಳಿಂದ ತಿದ್ದಬೇಕು. ಈ ತಿದ್ದುಪಡಿಯನ್ನು ಎರಡು ಮೂರು ಕರಡುಪ್ರತಿಗಳನ್ನು ತೆಗೆದು ತಿದ್ದುಪಡಿ ಮಾಡಿ, ಸಂಯೋಜಿತ ಅಚ್ಚುಮೊಳೆಗಳ ಸಮೂಹ ಎಲ್ಲ ರೀತಿಯಲ್ಲಿಯೂ ಸರಿಯಾಗಿದೆ ಎಂಬುದನ್ನು ನಿರ್ಧಾರ ಮಾಡಿಕೊಂಡು ಎರಡನ್ನು ಒಂದೇ ಉದ್ದದ ಪುಟಗಳನ್ನಾಗಿ ವಿಭಾಗಿಸಿ, ಪ್ರತಿ ಪುಟದ ಪ್ರಾರಂಭದಲ್ಲಿ ಪುಟಸಂಖ್ಯೆ ಮತ್ತು ಪುಟಶೀರ್ಷಿಕೆ ಇರುವ ಒಂದು ಸಾಲನ್ನಿಟ್ಟು ಪುಟ ಕಟ್ಟಬೇಕು. (ಡಿ.ಎಸ್.ಜಿ.)

ಪುಟ ಕಟ್ಟುವ ಕೆಲಸ ಬದಲಾಯಿಸಿ

ವಿಂಗಡಣೆಯಾದ ಅಚ್ಚುಪುಟಗಳ ಕರಡು ಪ್ರತಿಯನ್ನು ಎತ್ತಿ ಅದರಲ್ಲಿ ಕಂಡುಬರಬಹುದಾದ ತಪ್ಪುಗಳನ್ನು ಗುರುತಿಸಿ ತಿದ್ದುಪಡಿ ಮಾಡಿದ ಅನಂತರ ಪುಟಗಳನ್ನು ನಿರ್ದಿಷ್ಟ ಕ್ರಮದಲ್ಲಿ ಎರಡು. ನಾಲ್ಕು, ಎಂಟು ಅಥವಾ ಹದಿನಾರು ಪುಟಗಳ ಗುಂಪು ಮಾಡಿ ಒಂದು ಕಬ್ಬಿಣದ ಚೌಕಟ್ಟಿನಲ್ಲಿ (ಛೇಸ್) ಇಡಬೇಕು. ಪುಟಗಳ ತಲೆ ಮತ್ತು ಬೆನ್ನು ಭಾಗದಲ್ಲಿ ಗೊತ್ತಾದ ಪ್ರಮಾಣದಲ್ಲಿ ಕಡಿಮೆ ಎತ್ತರವಿರುವ ಮರದ ಅಥವಾ ಕಬ್ಬಿಣದ ಪಟ್ಟಿಯ ತುಂಡುಗಳನ್ನು ಜೋಡಿಸಿ ಪಕ್ಕದಲ್ಲೂ ಕೆಲಭಾಗದಲ್ಲೂ ಬೆಣೆಯಾಕಾರದ ತುಂಡುಗಳನ್ನಿಟ್ಟು ಸಣ್ಣ ಬೆಣೆಗಳಿಂದ, ಷೂಟಿಂಗ್ ಸ್ಟಿಕ್ ಮತ್ತು ಕೊಡತಿಗಳಿಂದ ಬಿಗಿ ಮಾಡಬೇಕು (ಇಂಪೋಸಿಂಗ್). ಬೆಣೆಯಾಕಾರದ ತುಂಡುಗಳ ಮತ್ತು ಸಣ್ಣ ಬೆಣೆಗಳಿಗೆ ಬದಲಾಗಿ ಲೋಹದಿಂದ ತಯಾರಿಸಿದ ಸಲಕರಣೆಗಳಿಂದಲೂ (ಮೆಕ್ಯಾನಿಕಲ್ ಕಾರ್ಯಿಸ್) ಪುಟಗಳನ್ನು ಬಿಗಿ ಮಾಡಬಹುದು. ಈ ಕ್ರಮದಿಂದ ಅನೇಕ ಅನುಕೂಲಗಳುಂಟು. ಹೀಗೆ ಬಿಗಿ ಮಾಡಿದ ಪುಟಗಳ ಸಮೂಹಕ್ಕೆ ಒಂದು ಫಾರಂ ಎಂದು ಹೆಸರು. ಅನೇಕ ಸಹಸ್ರ ಅಚ್ಚು ಮೊಳೆ, ತೆರಪುಮೊಳೆ ಮುಂತಾದವುಗಳಿಂದ ಮಾಡಿದ ಈ ಫಾರಮ್‍ನ್ನು ಒಂದು ಹಲಗೆಯೋಪಾದಿಯಲ್ಲಿ ಎತ್ತಿ ಎಲ್ಲಿಗಾದರೂ ತೆಗೆದುಕೊಂಡು ಹೋಗಬಹುದು.

ಅಚ್ಚುಮೊಳೆಗಳ ವಿಧಗಳು ಬದಲಾಯಿಸಿ

ಇದರಲ್ಲಿ ಎರಡು ವಿಧಗಳಿವೆ. ಒಂದು ಹಾಳೆಯ ಎರಡು ಕಡೆಗಳಲ್ಲಿಯೂ ಒಂದೇ ಫಾರಂನಿಂದ ಮುದ್ರಿಸಿ, ಮುದ್ರಿಸಿದ ಹಾಳೆಯನ್ನು ಎರಡಾಗಿ ಕತ್ತರಿಸಿದರೆ, ಎರಡು ಪ್ರತಿಗಳು ದೊರಕುತ್ತವೆ. ಈ ವಿಧಾನಕ್ಕೆ ಅರ್ಧ ಹಾಳೆ ವಿಧಾನ ಎಂದು ಹೆಸರು. ಇದಕ್ಕೆ ಬದಲು ಒಂದು ಹಾಳೆಯ ಒಂದೊಂದು ಕಡೆಗೂ ಬೇರೆ ಬೇರೆ ಪುಟಗಳುಳ್ಳ ಎರಡು ಫಾರಂಗಳಿಂದ ಮುದ್ರಿಸಿದಮೇಲೆ ದೊರಕುವ ಹಾಳೆಯನ್ನು ಕತ್ತರಿಸದಯೇ ಉಪಯೋಗಿಸುವ ವಿಧಾನಕ್ಕೆ ಪೂರ್ಣ ಹಾಳೆ ವಿಧಾನ ಎಂದು ಹೆಸರು. (ಉದಾ ಹದಿನಾರು ಅಚ್ಚು ಪುಟಗಳಲ್ಲಿ 1, 4, 5, 8, 9, 12, 13, 16ನೆಯ ಪುಟಗಳನ್ನು ಒಂದು ಚೌಕಟ್ಟಿನಲ್ಲೂ ಉಳಿದವನ್ನು ಇನ್ನೊಂದು ಚೌಕಟ್ಟಿನಲ್ಲೂ ಇಟ್ಟು ಬಿಗಿ ಮಾಡಿ ಕಾಗದದ ಹಾಳೆಯ ಒಂದು ಪಕ್ಕವನ್ನು ಒಂದು ಫಾರಂನಿಂದಲೂ ಇನ್ನೊಂದು ಪಕ್ಕವನ್ನು ಇನ್ನೊಂದು ಫಾರಂನಿಂದಲೂ ಮುದ್ರಿಸಿ ಮಡಿಸಿದರೆ 16 ಪುಟಗಳ ಒಂದು ಪ್ರತಿ ಬರುತ್ತದೆ.) ಈ ವಿಧಾನದಲ್ಲಿ ಮೊದಲನೆ ಪುಟವುಳ್ಳ ಫಾರಂ ಅನ್ನು `ಹೊರಫಾರಂ` ಎಂದೂ ಮತ್ತೊಂದನ್ನು `ಒಳ ಫಾರಂ` ಎಂದೂ ಕರೆಯುತ್ತಾರೆ. ಹೀಗೆ ಒಂದು ಪುಸ್ತಕದಲ್ಲಿರುವ ಪುಟಗಳನ್ನು ಅನೇಕ ಫಾರಂಗಳಾಗಿ ವಿಭಾಗಿಸಬಹುದು. ಪುಸ್ತಕ ಮುದ್ರಿಸುವವನ (ಪ್ರಿಂಟರ್) ಮತ್ತು ರಟ್ಟು ಕಟ್ಟುವವನ (ಬೈಂಡರ್) ಅನುಕೂಲಕ್ಕಾಗಿ, ಪ್ರತಿಯೊಂದು ಫಾರಂನಲ್ಲಿ ಅದರಲ್ಲಿರುವ ಮೊದಲನೆಯ ಅಚ್ಚುಪುಟದ ಕೆಳಭಾಗದಲ್ಲಿ ಪುಸ್ತಕದ ಸಂಕೇತ ಅಕ್ಷರಗಳನ್ನು ಎಡಗಡೆಯೂ ಮತ್ತು ಫಾರಂನ ಕ್ರಮಸಂಖ್ಯೆಯನ್ನು ಬಲಗಡೆಯೂ ಮುದ್ರಿಸುತ್ತಾರೆ. ಈ ಕ್ರಮಸಂಖ್ಯೆಗಳು ಮೊದಮೊದಲು ಅಕ್ಷರಗಳಲ್ಲಿದ್ದು ಈಗ ರೋಮನ್ ಸಂಖ್ಯೆಗಳಲ್ಲಿರುತ್ತವೆ. ಇವಕ್ಕೆ ಸಿಗ್ನೇಚರ್ ಎಂದು ಹೆಸರು.

ಉಲ್ಲೇಖಗಳು ಬದಲಾಯಿಸಿ