ಅಗೆಯುವ ಯಂತ್ರ(ಎಕ್ಸ್ಕವೇಟರ್)

(ಅಗೆಯುವ ಯಂತ್ರಗಳು ಇಂದ ಪುನರ್ನಿರ್ದೇಶಿತ)
ಎಕ್ಸ್ಕವೇಟರ್

ಅಗೆಯುವ ಯಂತ್ರಗಳು

ಬದಲಾಯಿಸಿ

ಕಲ್ಲು ಮತ್ತು ಮಣ್ಣನ್ನು ಅಗೆದು ಹೊರ ತೆಗೆಯಲು ಈ ಯಂತ್ರಗಳನ್ನು (ಎಕ್ಸ್ಕವೇಟರ್) ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಇವು ಸೂಕ್ತ ರೀತಿಯಲ್ಲಿ ಮಾರ್ಪಾಟು ಮಾಡಿದ ಕ್ರೇನ್ಯಂತ್ರಗಳೇ ಆಗಿವೆ. ಇಂಥವನ್ನು ಡ್ರ್ಯಾಗ್ ಲೈನ್ ಎನ್ನುತ್ತಾರೆ. ಈ ಯಂತ್ರಕ್ಕೆ ಅನೇಕ ಬಗೆಯ ಸಾಧನೆಗಳ ಸಾಧ್ಯತೆ ಇದೆ. ಇದರ ಮುಖ್ಯವಾದ ಮೂರು ಭಾಗಗಳೆಂದರೆ: 1. ಉದ್ದವಾಗಿರುವ ಒಂದು ಕ್ರೇನ್ದಂಡ. 2. ಸಮಾನಾಂತರ ಪಥದಲ್ಲಿ ಮಣ್ಣೆಳೆದು ಅಗೆಯುವ ಒಂದು ಬಕೆಟ್ ಮತ್ತು 3. ಎರಡು ಹಗ್ಗಗಳು (ಕೇಬಲ್ಸ್). ಅಗೆಯುವ ಶಕ್ತಿಯ ನಿರ್ವಹಣೆ ಹಗ್ಗಗಳ ಮೇಲೆ ಇರುವುದರಿಂದ ಕ್ರೇನಿನ ದಂಡ ಉದ್ದವಾಗಿಯೂ ಹಗುರವಾಗಿಯೂ ಇರಲು ಸಾಧ್ಯ. ಅಗೆಯಬೇಕಾದ ಸ್ಥಳಕ್ಕೆ ಮಾತ್ರ ಬಕೆಟನ್ನು ಎಸೆಯುತ್ತದೆ. ಅನಂತರ ಅದನ್ನು ಒಂದು ಹಗ್ಗ ಯಂತ್ರದ ಕಡೆಗೆ ಎಳೆಯಲಾರಂಭಿಸುತ್ತದೆ. ಬಕೆಟಿನ ಆಕಾರ ಮತ್ತು ತೂಕಗಳಿಗನುಸಾರವಾಗಿ ಹೀಗೆ ಕಲ್ಲು ಅಥವಾ ಮಣ್ಣು ಅದರಲ್ಲಿ ತುಂಬಿಕೊಳ್ಳುತ್ತದೆ. ತುಂಬಿದ ಬಕೆಟನ್ನು ಯಂತ್ರದ ಎರಡನೇ ಹಗ್ಗ ಕ್ರೇನ್ದಂಡ ಎಸೆಯುವುದಕ್ಕಿಂತ 10|-12| ಹೆಚ್ಚು ದೂರಕ್ಕೆ ಎಸೆಯುತ್ತದೆ. ನೀರು ಮತ್ತು ಕೆಸರಿನ ಕಾರಣ ಇತರ ಬಗೆಯ ಯಂತ್ರಗಳು ಕೆಲಸ ಮಾಡಲು ಸಾಧ್ಯವಾಗದೇ ಇರುವಾಗಲೂ ಇಂಥ ಯಂತ್ರವನ್ನು ಅಗೆಯುವ ಕೆಲಸಗಳಿಗಾಗಿ ಬಳಸಬಹುದು. ನೀರಾವರಿಗೆಂದು ನಾಲೆ ತೋಡುವಾಗ, ನದಿ ಪಾತ್ರಗಳ ಅಗಲವನ್ನು ಹೆಚ್ಚಿಸಬೇಕಾದಾಗ, ಮರಳು ಮತ್ತು ಜಲ್ಲಿ ಗುಂಡಿಗಳನ್ನು ತೋಡುವಾಗ ಇಂಥ ಯಂತ್ರಗಳನ್ನು ಬಳಸಲಾಗುತ್ತದೆ. ಮಾರ್ಪಾಟುಗೊಂಡ ಕ್ರೇನಿನ ಇಂಥ ಮತ್ತೊಂದು ಯಂತ್ರಚಾಲಿತ ಉಪಕರಣಕ್ಕೆ ಹಿಡಿಕೆಮೊರ (ಪೊವೆಲ್ ಷೊವೆಲ್) ಎಂದು ಹೆಸರು. ಇದರ ಕ್ರೇನ್ ದಂಡ ದಪ್ಪವಾಗಿಯೂ ಗಿಡ್ಡಗಾಗಿಯೂ ಇರುತ್ತದೆ. ಅಗೆಯುವ ಬಕೆಟ್ ಕೆಳಗೆ ಅದ್ದಿ ಏಳುವ ಮತ್ತೊಂದು ದಂಡದ ತುದಿಯಲ್ಲಿರುತ್ತದೆ. ಮುನ್ನುಗ್ಗುವ ಮತ್ತು ಮೇಲೇಳುವ ಎರಡು ಬಗೆಯ ಚಲನೆಗಳಿಂದ ಬಕೆಟ್ ದೊಡ್ಡ ಚೂರುಗಳನ್ನು ಕತ್ತರಿಸಿ ತುಂಬಿಕೊಳ್ಳುತ್ತದೆ. ಕೀಲುಗಳುಳ್ಳ ಅದರ ತಳವನ್ನು ತೆರೆಯುವುದರ ಮೂಲಕ ಅದರಲ್ಲಿ ತುಂಬಿರುವ ಹೆಂಟೆ ಮುಂತಾದುವು ಗಳನ್ನು ಬೇರೊಂದೆಡೆ ಸುರಿಯಬಹುದು. ಅಗೆಯಬೇಕಾದ ಸ್ಥಳ ಒಣಪ್ರದೇಶವಾಗಿ ಗಡಸಾಗಿದ್ದಾಗ, ಕಡಿದಾದ ಕಣಿವೆಮುಖಗಳನ್ನು ಕತ್ತರಿಸಬೇಕಾದಾಗ, ಗಣಿ ಉದ್ಯಮದಲ್ಲಿ ಹೀಗೆ ವಿವಿಧ ಪ್ರಕಾರವಾಗಿ ಇಂಥ ಯಂತ್ರಗಳನ್ನು ಬಳಸುತ್ತಾರೆ. ತಿರುವುಗುದ್ದಲಿ (ಬ್ಯಾಕ್ಹೊ): ಮಾರ್ಪಾಟುಗೊಂಡ ಮತ್ತೊಂದು ಉಪಕರಣ. ಇದರಲ್ಲಿ ಅಗೆಯುವ ಬಕೆಟನ್ನು ತಲೆಕೆಳಗಾಗಿ ಗಿಡ್ಡನೆಯ ದಂಡದ ತುದಿಗೆ ಅಳವಡಿಸಿದೆ. ಬಕೆಟ್ ಅರೆವೃತ್ತಾಕಾರದಲ್ಲಿ ಕೆಳಕ್ಕೆ ಮತ್ತು ಯಂತ್ರದ ಕಡೆಗೆ ಹಗ್ಗಗಳಿಂದ ಎಳೆಯುಲ್ಪಟ್ಟು, ಅದರಲ್ಲಿ ಕಲ್ಲು ಮತ್ತು ಮಣ್ಣು ತುಂಬಿಕೊಳ್ಳುತ್ತವೆ. ಅನಂತರ ತುಂಬಿದ ಬಕೆಟನ್ನು ಮೇಲಕ್ಕೆತ್ತಿ ಅದರಲ್ಲಿರುವ ಮಣ್ಣುಕಲ್ಲನ್ನು ದೂರ ಸುರಿಯಲಾಗುತ್ತದೆ. ಈ ಮೊದಲು ವಿವರಿಸಿರುವ ಯಂತ್ರಗಳಷ್ಟು ಇದು ಬಲಯುತವಾಗಿಲ್ಲದಿದ್ದರೂ ಗಟ್ಟಿಭೂಮಿಯೊಳಗೆ ಕಂದಕಗಳನ್ನಗೆಯಲು, ಕಾಲುವೆಗಳನ್ನು ತೋಡಲು, ನಳಿಗೆಗಳನ್ನು ಹಾಕಲು, ಭೂಮಿಯನ್ನು ಅಗೆಯಲು-ಇವೇ ಮುಂತಾದ ಕೆಲಸಗಳಿಗೆ ಇದು ಸಾಧನವಾಗಿದೆ.

ರೂಪಾಂತರಗಳು

ಬದಲಾಯಿಸಿ

ಸ್ಕಿಮ್ಮರ್

ಬದಲಾಯಿಸಿ

ಭೂಮಿಯ ಮೇಲ್ಪದರವನ್ನು ಸವರಿ ತೆಗೆದ ಕೆತ್ತುಯಂತ್ರದಲ್ಲಿ (ಸ್ಕಿಮ್ಮರ್) ಬಕೆಟ್ ತಗ್ಗಿನಲ್ಲಿ ಸಮಾನಾಂತರ ಮಟ್ಟದಲ್ಲಿರುವ ಒಂದು ಕ್ರೇನ್ ದಂಡದ ಮೇಲೆ ಹಿಂದಕ್ಕೂ ಮುಂದಕ್ಕೂ ಚಲಿಸುತ್ತದೆ. ಹೀಗೆ ಚಲಿಸುವಾಗ ಭೂಮಿಯನ್ನು ಕೆತ್ತಿ ಮಟ್ಟ ಮಾಡುತ್ತದೆ. ರಸ್ತೆ ಕೆಲಸದಲ್ಲಿ ಈ ಯಂತ್ರ ಬಳಕೆಯಲ್ಲಿದೆ. ಇದರ ಕೆಲಸ ಒಪ್ಪಾಗಿ, ಅಚ್ಚು-ಕಟ್ಟಾಗಿರುತ್ತದೆ.

ಕ್ಲಾಮ್ಷೆಲ್

ಬದಲಾಯಿಸಿ

ಈ ಯಂತ್ರದಲ್ಲಿ ತೆರೆದು ಮುಚ್ಚಿ ಮಾಡಬಹುದಾದ, ದವಡೆಯಂಥ ಎರಡು ಚಿಪ್ಪುಗಳನ್ನು ಬಕೆಟಿಗೆ ಅಳವಡಿಸಿದೆ. ಈ ಯಂತ್ರ ಗಡಸಿಲ್ಲದ ಮೆತು ಪದಾರ್ಥಗಳನ್ನು ಮಾತ್ರ ದವಡೆಗಳಿಂದ ಕಚ್ಚಿ ತನ್ನೊಳಕ್ಕೆ ತುಂಬಿಕೊಳ್ಳುತ್ತದೆ.

ವಿಶೇಷ ರೀತಿಯ ಯಂತ್ರಗಳು

ಬದಲಾಯಿಸಿ

ಹಗ್ಗ, ತಂತಿ, ಹೊರಜಿಗಳ ಬದಲು, ದ್ರವದ ಒತ್ತಡದಿಂದ ಚಲಿಸುವ ಕೊಂತದಿಂದಲೂ ಅಗೆಯುವ ಕೆಲಸ ಮಾಡಬಹುದು. ಇಂಥ ಯಂತ್ರಗಳನ್ನು ಎಳೆಯಲು ವಿದ್ಯುಚ್ಛಕ್ತಿ, ಪೆಟ್ರೋಲ್ ಅಥವಾ ಡೀಸಲ್ ಎಣ್ಣೆಗಳನ್ನು ಉಪಯೋಗಿಸಲಾಗುತ್ತದೆ.

ಫ್ರಂಟ್ಎಂಡ್ ಲೋಡರ್

ಬದಲಾಯಿಸಿ

ಈ ಬಗೆಯ ಯಂತ್ರದಲ್ಲಿ ಗಾಲಿಗಳ ಮೇಲೆ ಚಲಿಸುವ ಟ್ರ್ಯಾಕ್ಟರ್ನ ಮುಂಭಾಗದಲ್ಲಿ ಬಕೆಟನ್ನು ಅಳವಡಿಸಿರುತ್ತಾರೆ. ಟ್ರ್ಯಾಕ್ಟರ್ ಮುನ್ನುಗ್ಗಿದೊಡನೆಯೇ ಬಕೆಟ್ಟು ತುಂಬಿಕೊಳ್ಳುತ್ತದೆ. ಹೀಗೆ ತುಂಬಿದ ಬಕೆಟ್ಟನ್ನು ದ್ರವದ ಒತ್ತಡದಿಂದ ಚಲಿಸುವಂಥ ಕೊಂತಗಳಿಂದ ಎತ್ತಿ ಬೇರೊಂದೆಡೆಗೆ ಸುರಿಯಬಹುದು.

ಹಿಡಿಕೆ ಯಂತ್ರಗಳು (ಗ್ರಾಬ್)

ಬದಲಾಯಿಸಿ

ಇವು ಹೆಚ್ಚಾಗಿ ಬಳಕೆಯಲ್ಲಿರುವ ಯಂತ್ರಗಳು, ಇವುಗಳಿಗೆ ಅಗಲವಾಗಿ ಬಾಯ್ಬಿಡುವ ಎರಡು ದವಡೆಗಳಿದ್ದು, ಈ ದವಡೆಗಳನ್ನು ತೆರೆಯಲು ಅಥವಾ ಮುಚ್ಚಲು ಒಂದೊ ಎರಡೋ ಹಗ್ಗಗಳನ್ನು ಉಪಯೋಗಿಸಲಾಗುತ್ತದೆ. ಯಂತ್ರದ ಈ ಭಾಗ ಕೆಳಗಿಳಿದಾಗ ದವಡೆಯ ಬಾಯಿ ತೆರೆದಿರುತ್ತದೆ. ಹಗ್ಗವನ್ನು ಎಳೆದು ಬಿಗಿಪಡಿಸಿದೊಡನೆಯೇ ಬಾಯಿ ಮುಚ್ಚಿಕೊಂಡು ತುಂಬಿಕೊಂಡಿರುವ ಪದಾರ್ಥಗಳೊಡನೆ ಮೇಲೇರುತ್ತದೆ. ಹಗ್ಗದ ಮೂಲಕ ಪುನಃ ಬೇಕಾದ ಸ್ಥಳದಲ್ಲಿ ಅದರ ದವಡೆಗಳನ್ನು ತೆರೆದು ತುಂಬಿರುವ ಪದಾರ್ಥವನ್ನು ಕೆಳಗೆ ಸುರಿಯಬಹುದು. ದವಡೆಗಳು ಮುಚ್ಚಿಕೊಳ್ಳುವಾಗ ಅವುಗಳ ಮೊನಚಾದ ಅಂಚು ಅಂಡಾಕಾರದ ಚಲನೆಯನ್ನು ಹೊಂದಿದ್ದರೆ, ಎಳೆದು ತುಂಬಿಕೊಳ್ಳುವ ಭಾಗಕ್ಕೆ ಸಹಾಯವಾಗುತ್ತದೆ. ಇಂಥ ಯಂತ್ರಗಳು ಹೆಚ್ಚು ಹೆಚ್ಚು ಆಳವಾಗಿ ಭೂಮಿಯನ್ನು ಅಗೆದು ಹೆಚ್ಚು ಹೆಚ್ಚು ಎತ್ತರಕ್ಕೆ ಕಲ್ಲುಮಣ್ಣನ್ನು ಎತ್ತುವ ಸಾಮಥರ್್ಯವನ್ನು ಹೊಂದಿವೆ.