ಕಾಡುಗಂಧ

(ಅಗಿಲು ಇಂದ ಪುನರ್ನಿರ್ದೇಶಿತ)

ಮೀಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಮರ. ಪ್ರಭೇದ ನಾಮ ಡೈಸೋಕ್ಸೈಲಮ್ ಬೈನೆಕ್ಟೆರಿಫೆರಂ.[೧] ಸಾಮಾನ್ಯವಾಗಿ ಅಸ್ಸಾಂ, ಬಂಗಾಳ ಮತ್ತು ದಕ್ಷಿಣ ಭಾರತದ ಕಾಡುಗಳಲ್ಲಿ ಕಾಣಬರುತ್ತದೆ. ಇದು ಸುಮಾರು 30 ಅಡಿಗಳಷ್ಟೆತ್ತರ ಬೆಳೆಯುವ ನಿತ್ಯಹರಿದ್ವರ್ಣ ವೃಕ್ಷ. ಇದರ ಕಾಂಡ ನೇರವಾಗಿ ಸ್ಥಂಭಾಕೃತಿಯಲ್ಲಿದೆ. ಇಡೀ ಮರಕ್ಕೆ ದೇವದಾರು ಮರದ ವಾಸನೆಯಿದೆ. ಎಳೆಯ ರೆಂಬೆಗಳ ಮೇಲೆ ಮೃದುವಾದ ತುಪ್ಪಳಿನ ಹೊದಿಕೆ ಇದೆ. ಎಲೆಗಳು ಸಂಯುಕ್ತ ಮಾದರಿಯವು. ಅವುಗಳ ಬಣ್ಣ ತಿಳಿನೀಲಿ; ಉದ್ದ 6" ರಿಂದ 10". ಸಂಯುಕ್ತ ಎಲೆಯ ಬಿಡಿಭಾಗಗಳು ಪರ್ಯಾಯವಾಗಿ ಜೋಡಣೆಯಾಗಿದ್ದು, ಅಂಡವೃತ್ತಾಕಾರವುಳ್ಳವೂ ಮೊನಚು ತುದಿಯುಳ್ಳವೂ ಆಗಿವೆ. ಇವುಗಳ ಮೇಲ್ಮೈನಯ, ಅಂಚು ಗರಗಸದಂತೆ. ಈ ಮರ ಆಗಸ್ಟ್‍ನಿಂದ ಸೆಪ್ಟೆಂಬರ್ ವರೆಗೆ ಹೂ ಬಿಡುತ್ತದೆ. ಹೂಗೊಂಚಲು ಸಂಕೀರ್ಣ ಮಾದರಿಯದು. (ಪ್ಯಾನಿಕಲ್); ಎಲೆಗಳ ಕಂಕುಳಲ್ಲಿ ಜೋಡಣೆಗೊಂಡಿವೆ.

ಪುಷ್ಪಪತ್ರಗಳು ಒರಟಾಗಿಯೂ ನೀಳವಾಗಿಯೂ ಇದ್ದು ಬಟ್ಟಲಿನ ಆಕಾರದಲ್ಲಿ ಜೋಡಣೆಯಾಗಿವೆ; ಅವುಗಳ ಅಂಚು ಅಸ್ಫುಟವಾದ ಹಲ್ಲುಗಳಿಂದ ಕೂಡಿವೆ. ದಳಗಳ ಸಂಖ್ಯೆ 4; ಬಣ್ಣ ಹಸಿರು ಮಿಶ್ರಿತ ಹಳದಿ. ಇದಲ್ಲದೆ ದಳಗಳ ಒಳಭಾಗ ನುಣುಪಾಗಿಯೂ ಹೊರಭಾಗ ಮೃದುವಾದ ತುಪ್ಪುಳಗಳಿಂದ ಆವೃತವಾಗಿಯೂ ಇದೆ. ಕೇಸರಗಳ ಸಂಖ್ಯೆ 8. ಅಂಡಾಶಯ 4 ಕಾರ್ಪೆಲುಗಳನ್ನೊಳಗೊಂಡಿದೆ. ಬುಡದಲ್ಲಿ ಉದ್ದವಾದ ಮೃದುಗೂದಲಿನ ಹೊದಿಕೆಯಿದೆ. ಪ್ರತಿಕೋಶದಲ್ಲಿಯೂ ಎರಡೆರಡು ಅಂಡಕಗಳಿವೆ. ಶಲಾಕಾಗ್ರ ಮೊಟಕಾಗಿದ್ದು ಶಲಾಕೆ ಅರ್ಧವೃತ್ತಾಕಾರವಾಗಿದೆ. ಕಾಯಿ ಸಂಪುಟಮಾದರಿಯದು. ಹಣ್ಣುಗಳು ಮಾಗಿದಾಗ ಕಿತ್ತಳೆಬಣ್ಣಕ್ಕೆ ತಿರುಗುತ್ತವೆ. ಒಳಗೆ ಹೊಳೆಯುವ ಊದಾಬಣ್ಣದ ದೊಡ್ಡ ಗಾತ್ರದ 4 ಬೀಜಗಳಿವೆ.

ಈ ಮರದ ರಚನೆ ಇದೇ ಜಾತಿಯ ಬಿಳಿಬೂಡ್ಲಿಗೆಯನ್ನು (ಡೈ. ಮಲಬಾರಿಕಮ್) ಹೋಲುತ್ತದೆ. ಇದರ ತೊಗಟೆಯಲ್ಲಿ ಸುಮಾರು ಸೇ. 10-15 ಭಾಗದಷ್ಟು ಟ್ಯಾನಿನ್ ಇರುತ್ತದೆ. ಈ ಮರದ ರಸಕಾಷ್ಠದ ಬಣ್ಣ ಊದಾ ಮತ್ತು ಚೇಗಿನ ಬಣ್ಣ, ಕೆಂಪುಮಿಶ್ರಿತ ಕಂದು. ಇದು ಸಾದಾರಣ ಗಟ್ಟಿಯಾದ, ಭಾರವಾದ ಚೌಬೀನೆಗಳಲ್ಲೊಂದು. ಈ ಮರ ಹೊರಗಿನ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುವಂತಿದ್ದು ಗೆದ್ದಲು ಮತ್ತು ಕೊರೆಯುವ ಹುಳುಗಳ ಹಾವಳಿಯನ್ನು ತಡೆಯುವಂಥದೂ ಆಗಿದೆ. ಈ ಮರ ಬಹುಪಾಲು ತೇಗದ ಮರವನ್ನು ಹೋಲುತ್ತದೆ.

ಮರದ ದಿಮ್ಮಿಯನ್ನು ಪೆಟ್ಟಿಗೆ, ದೋಣಿಗಳ ತಯಾರಿಕೆಯಲ್ಲಿಯೂ ಪೀಪಾಯಿ ಸರಕುಗಳ ಉತ್ಪಾದನೆಯಲ್ಲೂ ಉಪಯೋಗಿಸುತ್ತಾರೆ. ಅಲ್ಲದೆ ಪೀಠೋಪಕರಣಗಳ ತಯಾರಿಕೆಯಲ್ಲಿಯೂ ಬಳಸುವುದುಂಟು.

ಉಲ್ಲೇಖನೆಗಳು: ಬದಲಾಯಿಸಿ

  1. https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಕಾಡುಗಂಧ
"https://kn.wikipedia.org/w/index.php?title=ಕಾಡುಗಂಧ&oldid=924615" ಇಂದ ಪಡೆಯಲ್ಪಟ್ಟಿದೆ