ಅಕ್ಷೋಭಕ ತೊಟ್ಟಿಗಳು

ಅಕ್ಷೋಭಕ ತೊಟ್ಟಿಗಳು

ಬದಲಾಯಿಸಿ

ಜಲಯಂತ್ರಗಳು ಆವರ್ತಿಸುವ ವೇಗವನ್ನು ನಿಯಂತ್ರಿಸುವಾಗ, ಅವುಗಳಿಗೆ ನೀರನ್ನು ಪುರೈಸುವ ಪೈಪುಗಳಲ್ಲಿ ಹರಿಯುವ ನೀರಿನ ಜಡತೆಯ ಪರಿಣಾಮವಾಗಿ, ಹಲವು ಸಮಸ್ಯೆಗಳು ತಲೆದೋರುತ್ತವೆ. ಕ್ರಮಕಾರಕಗಳು (ಗವರ್ನರ್ಸ್), ಜಲಯಂತ್ರಗಳೊಳಗೆ ನೀರನ್ನು ಬಿಡುವ ಬಾಗಿಲುಗಳನ್ನು ಭಾಗಶಃ ಮುಚ್ಚಿದಾಗ, ಪೈಪುಗಳಲ್ಲಿ ಹರಿಯುವ ನೀರಿನ ವೇಗ ಕಡಿಮೆಯಾಗುವುದು. ಆಗ ಜಲಬಡಿಗೆ (ವಾಟರ್ ಹ್ಯಾಮರ್) ಉಂಟಾಗಿ, ಯಂತ್ರಗಳ ಸಮೀಪದಲ್ಲಿನ ನೀರಿನ ಒತ್ತಡ ಒಮ್ಮೆಗೇ ಮೇಲೇರುವುದು. ಇದರಿಂದ ಯಂತ್ರಗಳ ಆವರ್ತನ ವೇಗ ಕಡಿಮೆಯಾಗುವುದಕ್ಕೆ ಬದಲಾಗಿ ಹೆಚ್ಚುತ್ತ ಹೋಗುವುದು. ಆದ್ದರಿಂದ ನೀರಿನ ಜಡತೆಯ ಪರಿಣಾಮವನ್ನು ನಿವಾರಿಸುವುದು ಅಗತ್ಯ. ಇದಕ್ಕಾಗಿ ರಚಿಸಿದ ಸಾಧನಕ್ಕೆ ಅಕ್ಷೋಭಕ ತೊಟ್ಟಿ (ಸರ್ಜ್ ಟ್ಯಾಂಕ್) ಎಂದು ಹೆಸರು. ಅಕ್ಷೋಭಕ ತೊಟ್ಟಿಗಳನ್ನು ಜಲಯಂತ್ರಗಳಿಗೆ ಸಾಧ್ಯವಾದಷ್ಟು ಸಮೀಪದಲ್ಲಿ, ನೀರು ಪುರೈಸುವ ಪೈಪುಗಳಿಗೆ, ಒಂದು ಲಂಬ ಕೊಳವೆಯ ಮೂಲಕ ಜೋಡಿಸಿರುತ್ತಾರೆ. ಈ ತೊಟ್ಟಿಗಳ ಮೇಲ್ಭಾಗ ತೆರೆದಿರುತ್ತದೆ. ಜಲಯಂತ್ರಗಳ ಬಾಗಿಲುಗಳು ಮುಚ್ಚಿ, ನೀರಿನ ವೇಗ ಕಡಿಮೆಯಾಗಿ, ಒತ್ತಡ ಮೇಲೇರಿದಾಗಿ, ನೀರು ತೊಟ್ಟಿಗಳೊಳಗೆ ನುಗ್ಗುತ್ತದೆ. ಮತ್ತು ಜಲಬಡಿಗೆ ಉಂಟಾಗದಂತೆ ತಡೆಯುತ್ತದೆ. ಜಲಯಂತ್ರಗಳ ಬಾಗಿಲುಗಳು ತೆರೆದುಕೊಂಡಾಗ, ಪೈಪುಗಳಲ್ಲಿ ನೀರು ವೇಗೋತ್ಕರ್ಷದಿಂದ ಹರಿಯುತ್ತದೆ. ಆಗ ಅಕ್ಷೋಭಕ ತೊಟ್ಟಿಗಳೊಳಗಿಂದ ನೀರು ಹರಿದು ಪೈಪಿನೊಳಗೆ ತುಂಬಿಕೊಳ್ಳುವುದರಿಂದ, ನೀರಿನ ಒತ್ತಡ ಕಡಿಮೆಯಾಗದೆ ಒಂದೇ ಸಮನಾಗಿರುವುದು. ಜಲಯಂತ್ರಗಳ ಮೇಲಿನ ನೀರಿನ ಎತ್ತರ ಬಹಳ ಹೆಚ್ಚಾಗಿದ್ದರೆ, ಮೇಲ್ಭಾಗ ಮುಚ್ಚಿರುವ ತೊಟ್ಟಿಗಳನ್ನು ಉಪಯೋಗಿಸುವರು. ಮುಚ್ಚಿದ ತೊಟ್ಟಿಗಳಲ್ಲಿ ಸಿಲುಕಿಕೊಳ್ಳುವ ಗಾಳಿ, ಜಲಯಂತ್ರದ ಬಾಗಿಲುಗಳು ಮುಚ್ಚಿ ಅಥವಾ ತೆರೆಯುವಾಗ ಸಂಕುಚಿಸುತ್ತದೆ, ಇಲ್ಲವೇ ವಿಸ್ತರಿಸುತ್ತದೆ. ಹೀಗೆ ಪೈಪು ಮತ್ತು ತೊಟ್ಟಿಗಳ ನಡುವೆ ನೀರಿನ ವಿನಿಮಯ ನಡೆಯುವುದರಿಂದ, ಜಲಬಡಿಗೆ ಉಂಟಾಗದೆ ಜಲಯಂತ್ರಗಳ ಸಮೀಪದಲ್ಲಿ ನೀರಿನ ಒತ್ತಡ ಒಂದೇ ಸಮನಾಗಿರುವುದು.