ಅಕ್ಕಿಯ ಸೊಂಡಿಲುಕೀಟ
ಅಕ್ಕಿಯ ಸೊಂಡಿಲು ಕೀಟ ಶೇಖರಿಸಿಟ್ಟ ಕಾಳುಗಳಿಗೆ (ದ್ವಿದಳಧಾನ್ಯಗಳನ್ನು ಬಿಟ್ಟು) ಪ್ರಪಂಚಾದ್ಯಂತ ಭಾರಿ ಪ್ರಮಾಣದ ನಷ್ಟವನ್ನುಂಟುಮಾಡುವ ಕೀಟವೆಂದರೆ ಇದೇ. ಸುಸ್ರಿ, ರೈಸ್ ವೀವಿಲ್ ಮತ್ತು ಸೈಟೊಫೈಲಸ್ (ಕ್ಯಲಾಂಡ್ರ) ಒರೈಸೇ ಎಂಬ ಹೆಸರುಗಳನ್ನುಳ್ಳ ಈ ಜೀವಿ ಕೋಲಿಯಾಪ್ಟರ ಗಣದ ಕಕೂರ್್ಯಲಿಯಾನಿಡೀ ಕುಟುಂಬಕ್ಕೆ ಸೇರಿದ್ದು. ಮೂತಿ ತಲೆಯ ಮುಂದೆ ಆನೆ ಸೊಂಡಿಲಿನಂತೆ ಚಾಚಿಕೊಂಡಿರುವ ಮೂತಿಯೇ ಈ ಹೆಸರಿಗೆ ಕಾರಣ; ವಾಡೆಹುಳ, ಕುಟ್ಟೇಹುಳ ಎಂದೂ ಇದನ್ನು ಕರೆಯುವುದುಂಟು.
ಪರಿಚಯ
ಬದಲಾಯಿಸಿಪ್ರಾಯಕ್ಕೆ ಬಂದ ಕೀಟ ಮಾಸಲು ಕೆಂಪು ಅಥವಾ ಕಂದು ಬಣ್ಣವಾಗಿದ್ದು ಸುಮಾರು 2-3 ಮಿಮೀ ಉದ್ದವಿರುತ್ತದೆ. ಬೆನ್ನ ಮೇಲೆ ನಾಲ್ಕು ಕಪ್ಪುಚುಕ್ಕೆಗಳಿವೆ. ಉಗ್ರಾಣದಲ್ಲಿರುವ ಎಲ್ಲ ಬಗೆಯ ಕಾಳುಗಳಿಗೂ ಅಂದರೆ ಜೋಳ, ಗೋದಿ, ಅಕ್ಕಿ, ಸಜ್ಜೆ, ಮುಸುಕಿನ ಜೋಳ ಮುಂತಾದವುಗಳಿಗೆಲ್ಲ ಹತ್ತುತ್ತದೆ. ರಾಗಿ, ಸಾವೆ ಮುಂತಾದ ಸಣ್ಣ ಕಾಳುಗಳಿಗೂ ದ್ವಿದಳ ಧಾನ್ಯಗಳಿಗೂ ಸಾಮಾನ್ಯವಾಗಿ ಮುತ್ತುವುದಿಲ್ಲ. ಉಂಡೆಕಾಳುಗಳಿಗೇ ಈ ಹುಳುಬೀಳುವುದು ಸ್ವಾಭಾವಿಕ; ಬತ್ತಕ್ಕೆ ಹತ್ತುವುದು ಅಪರೂಪ; ಒಡೆದ, ಬೀಸಿದ ಪದಾರ್ಥಗಳಿಗೆ ಸಾಧಾರಣವಾಗಿ ಇದರಿಂದ ತೊಂದರೆ ಇಲ್ಲ.
ಅಕ್ಕಿಯ ಸೊಂಡಿಲು ಕೀಟದ ಜೀವನ ಕ್ರಮ
ಬದಲಾಯಿಸಿ- ಈ ಕೀಟ ತನ್ನ ಉದ್ದನೆ ಸೊಂಡಿಲಿನಿಂದ ಕಾಳಿನ ಬಿರುಸು ಸಿಪ್ಪೆಯನ್ನು ಕೊರೆದು ಒಳಗಿನ ಪಿಷ್ಟ ಭಾಗವನ್ನು ತಿನ್ನುತ್ತದೆ. ಅಲ್ಲದೆ ಸೊಂಡಿಲಿನಿಂದ ಕಾಳಿನಲ್ಲಿ ಕುಳಿತೋಡಿ ಅದರೊಳಗೆ ಒಂದು ತತ್ತಿ ಇಟ್ಟು ಅದಕ್ಕೆ ಅಪಾಯವಾಗದಂತೆ ಮೇಲೆ ಅಂಟಿನಿಂದ ಮುಚ್ಚುತ್ತದೆ. ಮೊಟ್ಟೆಯೊಡೆದು ಬಂದ ಮರಿಗಳು ಕಾಳಿನೊಳಕ್ಕೆ ಕೊರೆದುಕೊಂಡು ಹೋಗಿ, ತಿರುಳನ್ನು ತಿಂದು ಬೆಳೆಯುವುವು.
- ಪ್ರಾಯದ ಕೀಟವೂ ಕಾಳನ್ನು ಹೊರಗಿನಿಂದ ಕೊರೆಯುವುದರಿಂದ ಈ ಕೀಟದ ಉಪಟಳ ಉಗ್ರಾಣದ ಕಾಳಿಗೆ ವಿಪರೀತ ಹೆಚ್ಚು. ಕಾಳಿನ ಗಾತ್ರದ ಮೇಲೆ ಪ್ರೌಢಕೀಟದ ಗಾತ್ರ ನಿರ್ಣಯವಾಗುವುದುಂಟು; ಅಂದರೆ ಸಣ್ಣ ಕಾಳಿನಿಂದ (ಉದಾ, ಸಜ್ಜೆ) ಉತ್ಪತ್ತಿಯಾದ ಕೀಟ ದೊಡ್ಡ ಕಾಳಿನಿಂದ (ಉದಾ. ಮುಸುಕಿನ ಜೋಳ) ಬರುವ ಕೀಟಕ್ಕಿಂತ ಚಿಕ್ಕದು. ಇದರ ಹತ್ತಿರದ ಸಂಬಂಧಿಯಾದ ಸೈ. ಗ್ರನೇರಿಯ ಎಂಬುದು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಪ್ರಬಲವಾಗಿದೆ; ನಮ್ಮ ದೇಶದಲ್ಲಿ ಇದರ ಹಾವಳಿ ಅತ್ಯಲ್ಪ.
- ಹೆಣ್ಣುಕೀಟ ಒಂದು ಸಲಕ್ಕೆ ಸುಮಾರು 400 ಮೊಟ್ಟೆಗಳನ್ನಿಡುವುದು. ಒಂದು ತಲೆಮಾರಿನ ಜೀವಮಾನ 4-6 ವಾರಗಳು ಮಾತ್ರ; ವರ್ಷದಲ್ಲಿ 8-10 ಸಂತತಿಗಳಾಗುತ್ತವೆ. ಹುಳ ಬಿದ್ದ ಕಾಳಿನ ಮೇಲೆ ಕಾಣುವ ರಂಧ್ರಗಳು ಪ್ರೌಢಕೀಟ ಹೊರಕ್ಕೆ ಬರುವಾಗ ಮಾಡಿದ ತೂತುಗಳೇ ಹೊರತು ಮರಿಗಳು ಕಾಳಿನೊಳಕ್ಕೆ ಹೋಗುವಾಗ ಮಾಡಿದುವಲ್ಲ. ಹುಳಬಿದ್ದ ಕಾಳು ಒಳಗೆ ಸಂಪುರ್ಣವಾಗಿ ಟೊಳ್ಳಾಗಿ ಬರಿ ಧೂಳಿನಿಂದ ತುಂಬಿರುತ್ತದೆ. ಅಕ್ಕಿ, ಗೋದಿಗಳಿಗಿಂತ ಜೋಳಕ್ಕೆ ಈ ಹುಳುವಿನ ಅಪಾಯ ಹೆಚ್ಚು.
- ಕಾಳನ್ನು ಉಗ್ರಾಣಕ್ಕೆ ಒಯ್ಯುವುದಕ್ಕೆ ಮುಂಚೆ ಚೆನ್ನಾಗಿ ಒಣಗಿಸಿ, ಈ ಕೀಟಗಳ ಸುಳಿವಿಲ್ಲದ ಶುಚಿಯಾದ ಜಾಗದಲ್ಲಿ ದಾಸ್ತಾನು ಮಾಡಿದರೆ ಹುಳದ ಕಾಟವಿಲ್ಲದಂತೆ ಸಂರಕ್ಷಿಸಬಹುದು. ಹಾಗೂ ಆಗಾಗ್ಗೆ ಎಚ್ಚರಿಕೆಯಿಂದ ಪರೀಕ್ಷಿಸುತ್ತಿರಬೇಕು; ಏಕೆಂದರೆನಮ್ಮ ಗಮನಕ್ಕೆ ಬರದಂತೆಯೇ ಅಕ್ಕಪಕ್ಕದ ಉಗ್ರಾಣದಿಂದ ಈ ಪಿಡುಗು ಅಕ್ರಮ ಪ್ರವೇಶ ಮಾಡುವ ಸಂಭವವುಂಟು. ಅಂಥ ಸಂದರ್ಭದಲ್ಲಿ ವಿಷವಾಯು ಪ್ರಯೋಗ ಮತ್ತಿತರ ವಿಧಾನಗಳಿಂದ ಹುಳುಹತ್ತಿದ ಧಾನ್ಯವನ್ನು ಶುಚಿಗೊಳಿಸಬಹುದು.