ಮಂಗಳೂರಿನ ಅಕ್ಕಮಕ್ಕನ ಬಿಡಾರ ಎಂಬುದಾಗಿ ಕರೆಯಿಸಿ ಕೊಳ್ಳುವ ಹೋಟೆಲ್ [] ತುಳುವರಿಗೆ ಕೇವಲ ಹೋಟೆಲ್ ಅಲ್ಲ, ಶತಮಾನದ ಭಾವನಾತ್ಮಕ ನಂಟು ಹೊಂದಿರುವ ಜಾಗ.

ಕುಡ್ಲದ ಅಕ್ಕಮಕ್ಕೆನ ಬುಡಾರ

ಬದಲಾಯಿಸಿ

ಮಂಗಳೂರಿನಲ್ಲಿ ಈಗ ಹಲವಾರು ಐಷಾರಾಮಿ ಫೈವ್‌ಸ್ಟಾರ್‌ ಹೋಟೆಲ್ ತಲೆ ಎತ್ತಿವೆ. ಜೊತೆಗೆ ಉತ್ತಮ ಸೇವೆಗಳನ್ನು ನೀಡುತ್ತಿದೆ. ಆದರೆ 130 ವರ್ಷಗಳ ಹಿಂದೆಯೇ ಮಂಗಳೂರಿನಲ್ಲಿ ಒಂದು ಜನಪ್ರಿಯ ಹೊಟೇಲ್ ಇತ್ತು. ಅದು ಈಗಲೂ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರೆ ನಂಬಲೇಬೇಕು. ಅದುವೇ ಅಕ್ಕಮಕ್ಕ ಹೊಟೇಲ್‌. ಈ ಹೆಸರು ಹೆಚ್ಚಾಗಿ ಮಂಗಳೂರಿಗರಿಗೆ ಅಲ್ಲದೆ ಅವಿಭಜಿತ ಜಿಲ್ಲೆಯಲ್ಲಿರುವರಿಗೂ ಚಿರಪರಿಚಿತ, ಆದರೆ ಇದರ ಹಿನ್ನೆಲೆ ಹೆಚ್ಚಿನವರಿಗೆ ತಿಳಿದಿಲ್ಲ.

ಇತಿಹಾಸ

ಬದಲಾಯಿಸಿ

ಅಕ್ಕಮಕ್ಕೆ ಎಂಬ ಮಹಿಳೆ ಮೂಲತಃ ತಲಪಾಡಿಯವರು. ಮದುವೆಯಾದ ಅವರ ಕೆಲವೇ ವರ್ಷಗಳಲ್ಲಿ ಅವರ ಗಂಡ ತೀರಿಕೊಂಡರು. ಮುಂದೆ ಬೇರೆ ಬೇರೆ ಕಾರಣಗಳಿಗೆ ತಲಪಾಡಿ ಊರನ್ನು ತೊರೆದು ತನ್ನ ತಮ್ಮ ಐತಪ್ಪ ಮಾಡ ಅವರ ಜೊತೆ ಮಂಗಳೂರಿನಲ್ಲಿ ನೆಲೆಸಿದರು. ಈ ಹೋಟೆಲ್ ಯಾವಾಗ ಪ್ರಾರಂಭವಾಯಿತೆಂದು ನಿಖರವಾಗಿ ಯಾರಿಗೂ ಗೊತ್ತಿಲ್ಲ. ಆದರೆ ಕೆಲವರ ಪ್ರಕಾರ 120 ರಿಂದ 130 ವರ್ಷ ಆಯಿತು ಅಕ್ಕಮಕ್ಕೆಯ ನಂತರ ಮಗಳು ಚಂದ್ರಾವತಿ ನೋಡಿಕೊಳ್ಳುತ್ತಿದ್ದರು. ಅವರನ್ನು ಕಿನ್ಯಕ್ಕೆ ಎಂದು ಕರೆಯುತ್ತಿದ್ದರು. ಮುಂದೆ ಈ ಹೋಟೆಲಿನ ಜವಾಬ್ದಾರಿ ನೋಡಿದರು. ಈಗ ಸತ್ಯವತಿ ಅವರು ಹೊಟೇಲು ನೋಡಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟಿಷ್ ಪೊಲೀಸರಿಂದ ಏಟು ತಿಂದವರಿಗೆ ಅಕ್ಕಮಕ್ಕೆ ಅವರನ್ನು ಉಪಚರಿಸಿ, ವೈದ್ಯಕೀಯ ಚಿಕಿತ್ಸೆ ಕೊಡಿಸುತ್ತಿದ್ದರು ಎಂಬುವುದನ್ನು ಕೆಲವರು ಈಗಲೂ ನೆನಪಿಸುತ್ತಿದ್ದಾರೆ.

ಬೆಳವಣಿಗೆ

ಬದಲಾಯಿಸಿ

ಈ ವೇಳೆ ಇವರ ಸಣ್ಣ ಗುಡಿಸಲಿನಲ್ಲಿ ದೂರದ ಹಳ್ಳಿಯಿಂದ ಬಂದ ಶಾಲಾ ಮಕ್ಕಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಇತ್ತು. ಮುಂದೆ ಅವರಿಗೆಲ್ಲ ಮೂರು ಹೊತ್ತು ಊಟ ನೀಡುವುದೂ ಅನಿವಾರ್ಯವಾಯಿತು. ಬೆಳಗ್ಗೆ ಕರಾವಳಿ ಶೈಲಿಯ ಗಂಜಿ ಊಟ, ಎಟ್ಟಿದ ಚಟ್ನಿ ಅಂದರೆ ತೆಂಗಿನಕಾಯಿ ಮತ್ತು ಕಾಯಿಮೆಣಸು ಚಟ್ನಿಗೆ ಹುರಿದ ಹುಡಿ ಸಿಗಡಿ ಮೀನು ಬೆರಸಿ ರುಚಿಕಟ್ಟಾದ ವಿಶೇಷ ಚಟ್ಟಿ ತಯಾರಿಸುವುದು, ಅಕ್ಕಮಕ್ಕೆ ಬುಡಾರ ಹೊಟೇಲಿನಲ್ಲಿ ಮೊದಲು ಮೀನಿನ ಊಟ ಇರಲಿಲ್ಲ. ಅಕ್ಕಮಕ್ಕೆಯ ಮುಖ್ಯ ಉದ್ದೇಶ ಹಸಿದವರಿಗೆ ಒಪ್ಪತ್ತಿನ ಊಟ ನೀಡುವುದು. ಆಗ ಊಟಕ್ಕೆ ಹಣ ಇಲ್ಲದಿದ್ದರೂ ನಾಳೆ ಕೊಡಿ ಎನ್ನುತ್ತಿದ್ದರು. ದೂರದ ಊರಿನಿಂದ ಮಂಗಳೂರಿಗೆ ಕಾರ್ಯ ನಿಮಿತ್ತ ಬರುತ್ತಿದ್ದವರು ಅಕ್ಕಮಕ್ಕನ ಹೋಟೇಲಿಗೆ ಮಧ್ಯಾಹ್ನದ ಊಟಕ್ಕಾಗಿ ಬರುತ್ತಿದ್ದರು. ದೂರದ ಊರಿನಿಂದ ಹೆಚ್ಚಾಗಿ ನಡೆದುಕೊಂಡೇ ಅಥವಾ ಎತ್ತಿನ ಗಾಡಿಲ್ಲಿ ಬರುತ್ತಿದ್ದರು. ದಣಿದು ಬರುತ್ತಿದ್ದರಿಂದ ಊಟಮಾಡಿ ಅಲ್ಲೇ ಜಗುಲಿಯಲ್ಲಿ ಸ್ವಲ್ಪ ಹೊತ್ತು ದಣಿವಾರಿಸಿ ಒಂದು ಅಡಿಕೆ ಎಲೆ ಜಗಿದು ಸುಧಾರಿಸಿಕೊಂಡ ಬಳಿಕ ತಮ್ಮ ಊರುಗಳಿಗೆ ವಾಪಾಸ್ಸಾಗುತ್ತಿದ್ದರು. ಆಗ ಮಧ್ಯಮ ವರ್ಗದವರಿಗೆ ಬೆಂಚು, ಮೇಜು, ಕುರ್ಚಿಯಲ್ಲಿ ಕುಳಿತು ಊಟ ಮಾಡುವಷ್ಟು ಸವಲತ್ತು ಇರಲಿಲ್ಲ. ಆಗ ಇವರ ಹೋಟೇಲಿನ ನೆಲದಲ್ಲಿ ಮಣೆ ಹಾಕಿ ಊಟ ಬಡಿಸುವುದು ಕ್ರಮವಾಗಿತ್ತು. ಅವರ ಸುಧಾರಿಕೆ, ಯೋಗ ಕ್ಷೇಮ ವಿಚಾರಿಸುವ ರೀತಿ ತುಂಬಾ ಜನರಿಗೆ ಇಷ್ಟವಾಗುತಿತ್ತು.

ಹೊಟೇಲು ಇರುವ ಜಾಗ

ಬದಲಾಯಿಸಿ

ಮಂಗಳೂರಿನ ಹೃದಯಭಾಗದ ಕೆ.ಎಸ್ ರಾವ್ ರಸ್ತೆಯ ಹಂಪನಕಟ್ಟೆಯ ಸಿಗ್ನಲ್ ಬಳಿ ಈ ಹೊಟೇಲ್ ಇದೆ. [] ಇಲ್ಲಿ ಈಗ ಟೇಬಲ್ ಮೇಲೆ ಬಾಳೆ ಎಲೆ ಹಾಕಿ ಊಟ ಬಡಿಸುವುದು. ಕುಡಿಯಲು ಬಿಸಿನೀರು, ಕುಚ್ಚಲು ಅಕ್ಕಿಯ ಅನ್ನ, ಉಪ್ಪಿನಕಾಯಿ, ಒಂದು ಬಗೆ ತರಕಾರಿ ಪಲ್ಯ, ಆಮೇಲೆ ಮೀನಿನ ಪದಾರ್ಥ ಇರುತ್ತದೆ.

ವಿಶೇಷತೆ

ಬದಲಾಯಿಸಿ

ವಿಶೇಷ ಅಂದರೆ ಈಗಲೂ ಗ್ಯಾಸ್ ಬಳಸದೇ ಕಟ್ಟಿಗೆಯಲ್ಲಿ ಅಡುಗೆ ಮಾಡುತ್ತಾರೆ. ಜೊತೆಗೆ ಇಲ್ಲಿ ಮೀನೂಟ ಬಿಟ್ಟರೆ ಕೋಳಿ ಪದಾರ್ಥ ಅಥವಾ ಯಾವುದೇ ಬೇರೆ ಪದಾರ್ಥ ಸಿಗುವುದಿಲ್ಲ. [] ವಿವಿಧ ರೀತಿಯ ಮೀನು ಫ್ರೈ ಸಿಗುತ್ತದೆ. ವಿಶೇಷವೆಂದರೆ ಇದನ್ನು ತೆಂಗಿನ ಎಣ್ಣೆಯಲ್ಲಿ ಮಾತ್ರ ಕಾಯಿಸುತ್ತಾರೆ. ಇದು ಪ್ರತಿನಿತ್ಯ ಮಧ್ಯಾಹ್ನ 12.30ರಿಂದ 3.30ರವರೆಗೆ ರಾತ್ರಿ ರಾತ್ರಿ 7ರಿಂದ 10ರವರೆಗೆ ತೆರೆದಿರುತ್ತದೆ. ಈಗಲೂ ಮಣ್ಣಿನ ಮಡಕೆಯನ್ನು ಊಟದ ಟೇಬಲ್ ಬಳಿ ತಂದಿಟ್ಟು ಗೆರಟೆಯಿಂದ ನಿರ್ಮಿತವಾದ ಸೌಟಿನಿಂದ ಘಮಘಮ ಪರಿಮಳದ ಮೀನಿನೂಟ ಬಡಿಸುತ್ತಾರೆ.

೨೦೧೮ ರಲ್ಲಿ ಈ ಹೋಟೇಲಿನ ಮೇಲೆ ಮರವೊಂದು ಬಿದ್ದು ಹೋಟೇಲಿನ ಹೆಚ್ಚು ಭಾಗಕ್ಕೆ ಹಾನಿಯಾಗಿತ್ತು. ನಂತರದಲ್ಲಿ ಅದನ್ನು ಸರಿಪಡಿಸಲಾಗಿದೆ. []

[]

ಉಲ್ಲೇಖಗಳು

ಬದಲಾಯಿಸಿ
  1. ಅಕ್ಕಮಕ್ಕನ ಹೋಟೇಲ್ ಬಗ್ಗೆ ಟ್ರಿಪ್ ಅಡ್ವೈಸರ್ ಅಲ್ಲಿನ ಮಾಹಿತಿ
  2. ಅಕ್ಕಮಕ್ಕನ ಹೋಟೇಲ್ ವಿಳಾಸದ ಬಗ್ಗೆ ಇಂಡಿಯಾ ಮಾರ್ಟ್ ತಾಣದಲ್ಲಿನ ಮಾಹಿತಿ
  3. ಅಕ್ಕಮಕ್ಕನ ಹೋಟೇಲ್ ಊಟದ ಬಗ್ಗೆ ಯೂಟ್ಯೂಬ್ ನಲ್ಲಿನ ಮಾಹಿತಿ
  4. ಮಳೆಯಿಂದ ಅಕ್ಕಮಕ್ಕನ ಹೋಟೇಲಿಗೆ ಹಾನಿಯಾದ ಬಗ್ಗೆ ಡೈಲಿಹಂಟ್ ತಾಣದಲ್ಲಿನ ವರದಿ| ಜೂನ್ ೧೧, ೨೦೧೮
  5. "ಮಳೆಯಿಂದ ಅಕ್ಕಮಕ್ಕನ ಹೋಟೇಲಿಗೆ ಹಾನಿಯಾದ ಬಗ್ಗೆ ಮೆಗಾಮೀಡಿಯಾ ನ್ಯೂಸ್ ತಾಣದಲ್ಲಿನ ವರದಿ| ಜೂನ್ ೧೧, ೨೦೧೮". Archived from the original on 2021-09-30. Retrieved 2021-09-30.