ಅಕೇಯನ್ ಒಕ್ಕೂಟ
ಅಕೇಯನ್ ಒಕ್ಕೂಟ
ಬದಲಾಯಿಸಿಅಕೇಯನ್ ಪಂಗಡದ ಹನ್ನೆರಡು ಪ್ರಮುಖ ನಗರರಾಷ್ಟ್ರಗಳು ಪ್ರ.ಶ.ಪು.4ನೆಯ ಶತಮಾನದಲ್ಲಿ ರಚಿಸಿಕೊಂಡ ಒಂದು ಒಕ್ಕೂಟ. ಕಾರಿಂತ್ ಕೊಲ್ಲಿಯಿಂದ ಉಪದ್ರವ ಕೊಡುತ್ತಿದ್ದ ಕಡಲ್ಗಳ್ಳರ ಹಾವಳಿಯನ್ನು ತಡೆಗಟ್ಟಲು ಈ ಒಕ್ಕೂಟ ಸ್ಪಾರ್ಟ ಮತ್ತು ತೀಬ್ಸಿನ ಪ್ರಾಬಲ್ಯವನ್ನು ತಡೆಗಟ್ಟಲು ಹೋರಾಡಿತು. ಪ್ರ.ಶ.ಪು. 338ರಲ್ಲಿ ಮ್ಯಾಸಿಡೋನಿಯದ 2ನೆಯ ಫಿಲಿಪ್ಪನ ಆಕ್ರಮಣವನ್ನು ತಡೆಗಟ್ಟಲು ಒಕ್ಕೂಟ ಹೋರಾಡಿತು. ಅಲೆಕ್ಸಾಂಡರ್ ಮಹಾಶಯನ ಮರಣಾನಂತರದ ಗೊಂದಲದಲ್ಲಿ ದುರ್ಬಲವಾಗಿದ್ದ ಈ ಒಕ್ಕೂಟ ನಾಮಾವಶೇಷವಾಯಿತು. ಆದರೆ ಕೆಲವು ಅಕೇಯನ್ ರಾಷ್ಟ್ರಗಳ ಪ್ರಯತ್ನದಿಂದ ಪುನಃ ಸಂಯುಕ್ತರೀತಿಯ ರಾಜಕೀಯ ಒಕ್ಕೂಟವೊಂದು ಸ್ಥಾಪಿತವಾಯಿತು. ಕಾಲಕ್ರಮೇಣ ಅಕೇಯನ್ ಪಂಗಡಕ್ಕೆ ಸೇರದ ಇತರ ನಗರರಾಷ್ಟ್ರಗಳಾದ ಆರ್ಗಾಲಿಸ್, ಕಾರಿಂತ್ ಮತ್ತು ಏಜಿಯಾನ್ಗಳೂ ಸಮಾನತೆಯ ಆಧಾರದ ಮೇಲೆ ರೂಪಿತವಾಗಿದ್ದವು. ಕೇಂದ್ರ ಆಡಳಿತ ಸಮಿತಿಗೆ ಯುದ್ಧಕಾಲದಲ್ಲಿ ಸಂಪುರ್ಣ ಅಧಿಕಾರವಿತ್ತಲ್ಲದೆ ಶಾಸಕಾಂಗಗಳ ಮುಂದೆ ಪ್ರಮುಖ ಸಮಸ್ಯೆಗಳನ್ನು ಚರ್ಚೆಗೆ ತರುವ ಅಧಿಕಾರವೂ ಇತ್ತು. ಪ್ರಾದೇಶಿಕ ಸಮಾನತೆಯ ಆಧಾರದ ಮೇಲೆ ಚುನಾಯಿತರಾದ ಸದಸ್ಯರಿಂದ ಕೂಡಿದ ಎರಡು ಶಾಸಕಾಂಗಗಳಿದ್ದುವು. ಸರ್ವೋತ್ಕೃಷ್ಟ ಫೆಡರಲ್ ನ್ಯಾಯಾಲಯವಿದ್ದಿತು. ಒಕ್ಕೂಟದ ರಾಜ್ಯಗಳಲ್ಲೆಲ್ಲ ಏಕರೂಪದ ನಾಣ್ಯಪದ್ಧತಿಯಿತ್ತು. ಒಕ್ಕೂಟದ ಸದಸ್ಯ ರಾಷ್ಟ್ರಗಳು ಒಳಾಡಳಿತದಲ್ಲಿ ಸ್ವತಂತ್ರವಾಗಿದ್ದುವು. ವಿದೇಶಾಂಗ ನೀತಿ ಮತ್ತು ಯುದ್ಧಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರ ಸರ್ಕಾರ ಪರಮಾಧಿಕಾರವನ್ನು ಹೊಂದಿತ್ತು. ಒಕ್ಕೂಟ ತನ್ನ ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಸ್ಪಾರ್ಟ ಮತ್ತು ಮ್ಯಾಸಿಡೋನಿಯದ ಐದನೆಯ ಫಿಲಿಪ್ಪನೊಡನೆ ಯುದ್ಧಗಳಲ್ಲಿ ಹೋರಾಡಿತು. ಕೊನೆಗೆ ಅಯ್ಟೋಲಿಯನ್ನರೊಡನೆ ಸೇರಿ ರೋಮನ್ನರನ್ನು ಎದುರಿಸಿತು. ಪ್ರ.ಶ.ಪು. 168ರಲ್ಲಿ ರೋಮನರು ಪಿಡ್ನ ಎಂಬಲ್ಲಿ ಅಕೇಯನ್ನರನ್ನು ಸಂಪುರ್ಣವಾಗಿ ಸೋಲಿಸಿದರು. ಪ್ರ.ಶ.ಪು. 146ರಲ್ಲಿ ರೋಮನರು ಅಕೇಯನ್ ರಾಜಕೀಯ ಒಕ್ಕೂಟವನ್ನು ವಿಸರ್ಜಿಸಿದರು. ಅದು ಕೇವಲ ಸಾಂಸ್ಕೃತಿಕ ಹಾಗೂ ನಾಮಮಾತ್ರ ಸಂಸ್ಥೆಯಾಗಿ ಉಳಿಯಿತು. ಅಕೇಯನ್ ನಗರ ರಾಜ್ಯಗಳನ್ನು ಮ್ಯಾಸಿಡೋನಿಯದೊಡನೆ ವಿಲೀನಗೊಳಿಸಿ ಒಂದು ಪ್ರಾಂತ್ಯವನ್ನಾಗಿ ವಿಂಗಡಿಸಿ ರೋಮನರು ತಮ್ಮ ಆಡಳಿತವನ್ನು ಸ್ಥಾಪಿಸಿದರು. ಅಕೇಯನ್ ಒಕ್ಕೂಟ ಸಮಾನತೆ ಹಾಗೂ ಸ್ವಾತಂತ್ರ್ಯ ಧ್ಯೇಯಗಳಿಗಾಗಿ ಶತಮಾನಗಳ ಕಾಲ ಹೋರಾಡಿತು. ಇದು ಸಂಯುಕ್ತ ಪ್ರಜಾಪ್ರಭುತ್ವ ಸಂಪ್ರದಾಯಕ್ಕೆ ತನ್ನದೇ ಆದ ಕಾಣಿಕೆಯನ್ನು ಸಲ್ಲಿಸಿದೆ.