ಅಕೇಮೆನಿಡೇ

ಬದಲಾಯಿಸಿ

ಪರ್ಷಿಯದ ಪ್ರಾಚೀನ ರಾಜವಂಶದ ಹೆಸರು. ಈ ವಂಶದ ಮೂಲಪುರುಷ ಹಖಮನೀಷ್. ಇವನು ಪ್ರ.ಶ.ಪು.7ನೆಯ ಶತಮಾನದಲ್ಲಿ ಪರ್ಷಿಯದ ನೈಋತ್ಯ ಪ್ರಾಂತ್ಯವನ್ನಾಳುತ್ತಿದ್ದನೆಂದು ತಿಳಿದುಬಂದಿದೆ. ಹಖಮನೀಷ್ ಎಂಬ ಹೆಸರೇ ಗ್ರೀಕರ ಮತ್ತು ರೋಮನರ ಉಚ್ಚಾರಣೆಯ ಪರಿಣಾಮವಾಗಿ ಅಕೇಮೆನಿಡೇ ಎಂದು ರೂಪಾಂತರ ಹೊಂದಿದೆ. ಪ್ರ.ಶ.ಪು. 50 ಶತಮಾನಗಳ ಹಿಂದೆಯೇ ಪರ್ಷಿಯದಲ್ಲಿ ಸ್ಥಾಪಿತವಾಗಿ ಬೆಳೆದು ಬಂದಿದ್ದ ಈಲಾಂ ಸಾಮ್ರಾಜ್ಯ ಆಳಿದ ಮೇಲೆ ಅಕೇಮೆನಿಡೇ ದೊರೆಗಳು ರಾಜ್ಯವನ್ನು ವಿಸ್ತರಿಸಲು ಅನುಕೂಲವಾಯಿತು. ಪ್ರ.ಶ.ಪು.5ನೆಯ ಶತಮಾನದಲ್ಲಿ ಆಳಿದ ಕೈರಸ್ ಮಹಾಶಯ ಲಿಡಿಯದ ಕ್ರೀಸಸ್, ಬ್ಯಾಬಿಲೋನಿಯದ ನೆಬೊನೈಡಸ್ ಮುಂತಾದ ನೆರೆ ರಾಜರನ್ನು ಸೋಲಿಸಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ. ಪ್ರಬಲವಾಗಿದ್ದ ಮೀಡಿಯ ರಾಜ್ಯವೂ ಅವನ ಕೈವಶವಾಯಿತು. ಪ್ರ.ಶ.ಪು.546ರ ಕಾಲಕ್ಕೆ ಅವನು ಕಟ್ಟಿದ್ದ ಸಾಮ್ರಾಜ್ಯ ಭದ್ರತೆಯನ್ನು ಪಡೆದಿತ್ತೆನ್ನಬಹುದು. ಆತನು ಗೆದ್ದ ರಾಜ್ಯಗಳ ನಾಗರಿಕಜೀವನ ಸಂಸ್ಕೃತಿಗಳನ್ನು ಅಳಿಸದೆ ಅವುಗಳ ತಳಪಾಯದ ಮೇಲೆ ಹೊಸ ಸಂಸ್ಕೃತಿಯನ್ನು ರೂಪಿಸಲೆತ್ನಿಸಿದ. ಈಜಿಪ್ಟ್, ಬ್ಯಾಬಿಲೋನಿಯ ಮುಂತಾದ ಕಡೆಗಳಿಂದ ಶಿಲ್ಪಿಗಳನ್ನು ಬರಮಾಡಿಕೊಂಡು ಪಸಾಗಾರ್ಡೆ ಎಂಬಲ್ಲಿ ಭವ್ಯವಾದ ಅರಮನೆ ಮುಂತಾದ ಕಟ್ಟಡಗಳನ್ನು ನಿರ್ಮಿಸಿದ. ಎರಡು ಶತಮಾನಗಳ ಕಾಲ ಕೈರಸ್ ಕಟ್ಟಿದ ಸಾಮ್ರಾಜ್ಯ ಭವ್ಯವಾಗಿ ಬಾಳಿತು. ಪ್ರ.ಶ.ಪು. 522ರಿಂದ 485ರವರೆಗೆ ಆಳಿದ ಡೇರಿಯಸ್ಸನ ಕಾಲದಲ್ಲಿ ಸಿಂಧೂನದಿಯವರೆಗಿನ ಪ್ರದೇಶವೆಲ್ಲ ಪರ್ಷಿಯನ್ನರ ಕೈವಶವಾಯಿತು. ಡೇರಿಯಸ್ಸ್ ಆ ವಿಶಾಲ ಸಾಮ್ರಾಜ್ಯವನ್ನು ಇಪ್ಪತ್ತು ಪ್ರಾಂತಗಳಾಗಿ ವಿಭಾಗಿಸಿ ಪ್ರತಿಯೊಂದಕ್ಕೂ ದಕ್ಷ ಮಾಂಡಲಿಕರನ್ನು ನೇಮಿಸಿದ. ಗ್ರೀಸ್ದೇಶದ ಮೇಲೆ ದಂಡೆತ್ತಿ ಹೋದಾಗ ಮಾತ್ರ ಮ್ಯಾರಥಾನ್ ಕದನದಲ್ಲಿ ಆತ ಸೋತು ಹಿಮ್ಮೆಟ್ಟಬೇಕಾಯಿತು. ಅವನ ಮಗನಾದ ಸರ್ಕ್ಸಸ್ ಗ್ರೀಕರನ್ನು ಸೋಲಿಸಲು ಪುನಃ ಪ್ರಯತ್ನಿಸಿ ಸೆಲಾಮಿಸ್ ಮತ್ತು ಪ್ಲಾಟಿಯ ಕದನಗಳಲ್ಲಿ ಸೋತು ಹಿಂತಿರುಗಬೇಕಾಯಿತು. ಅನಂತರದ ಕಾಲವನ್ನು ಅಕೇಮೆನಿಡೇ ಸಾಮ್ರಾಜ್ಯದ ಅವನತಿಯ ಕಾಲವೆನ್ನಬಹುದು. ಕೊನೆಯ ದೊರೆಯಾದ ಮೂರನೆಯ ಡೇರಿಯಸ್ ಅರ್ಬೆಲ ಕಾಳಗದಲ್ಲಿ ಅಲೆಗ್ಸಾಂಡರನಿಗೆ ಸೋತು (ಪ್ರ.ಶ.ಪು.331) ರಣರಂಗದಿಂದ ಓಡಿಹೋಗಬೇಕಾಯಿತು. ಪರ್ಷಿಯ ಸಾಮ್ರಾಜ್ಯ ವೆಲ್ಲ ಅಲೆಗ್ಸಾಂಡರನ ಮ್ಯಾಸಿಡೋನಿಯ ಸಾಮ್ರಾಜ್ಯಕ್ಕೆ ಸೇರಿಹೋಯಿತು.