ಅಂತಿಚಕ್ ಬಿಹಾರ ರಾಜ್ಯದ ಭಾಗಲ್ಪುರ ಜಿಲ್ಲೆಯಲ್ಲಿರುವ ಬೌದ್ಧವಿಹಾರ.

A The Main stupa at the centre
The Main stupa at the centre

9ನೆಯ ಶತಮಾನದ ಆರಂಭದಲ್ಲಿ ಪಾಲ ದೊರೆ ಧರ್ಮಪಾಲನಿಂದ ನಿರ್ಮಿಸಲ್ಪಟ್ಟಿತು. 13ನೆಯ ಶತಮಾನದಲ್ಲಿ ನಾಶವಾಯಿತು. ಗಂಗಾ ನದಿ ದಡದ ಮೇಲೆ ಈ ವಿಹಾರವಿದೆಯೆಂದೂ ಇದು ವಿಶಾಲವಾದ ಪೌಳಿ ಗೋಡೆಗಳಿಂದ ಆವೃತವಾಗಿದೆಯೆಂದೂ ಇದರ ಮಧ್ಯಭಾಗದಲ್ಲಿ ಒಂದು ದೊಡ್ಡ ಬೌದ್ಧ ಅಧ್ಯಯನ ಸಭಾಂಗಣವಿದೆಯೆಂದೂ ಟಿಬೆಟ್ ಆಕರಗಳಲ್ಲಿ ಉಲ್ಲೇಖವಿದೆ. ಇಲ್ಲಿಗೆ ಭಾರತದ ವಿವಿಧ ಭಾಗಗಳಿಂದ ವಿದ್ವಾಂಸರು ಅಧ್ಯಯನಕ್ಕೆ ಬರುತ್ತಿದ್ದರೆಂದು ತಿಳಿದುಬರುತ್ತದೆ.

ಈ ನೆಲೆಗೆ 1811ರಲ್ಲಿ ಮೊದಲ ಬಾರಿಗೆ ಫ್ರಾನ್ಸಿಸ್ ಬುಕನನ್ ಭೇಟಿನೀಡಿದ್ದ. ವಿಕ್ರಮಶೀಲ ಇಲ್ಲಿರುವ ಹತ್ತಿರದ ಪತರ್ಘಟ್ಟಾಕ್ಕೆ ಹೊಂದಿಕೊಂಡಿತ್ತು. ಇತ್ತೀಚೆಗೆ ಪಟ್ನಾ ವಿಶ್ವವಿದ್ಯಾಲಯದ ಬಿ.ಪಿ.ಸಿನ್ಹ ಅಂತಿಚಕ್ನಲ್ಲಿ 1960-69ರವರೆಗೆ ಉತ್ಖನನ ನಡೆಸಿ ಇದರ ಸಂಬಂಧವನ್ನು ವಿಕ್ರಮಶೀಲದೊಂದಿಗೆ ಗುರುತಿಸಿದ್ದಾರೆ. ಇಲ್ಲಿರುವ ಚೈತ್ಯ ತ್ರಿಕೂಟ ವಿನ್ಯಾಸದಲ್ಲಿದೆ. 9-13ನೆಯ ಶತಮಾನದ ಅವಧಿಯಲ್ಲಿ 3 ಹಂತಗಳಲ್ಲಿ ಈ ಚೈತ್ಯದ ನಿರ್ಮಾಣವಾಯಿತು. ಭೂಮಿಯ ತಳಮಟ್ಟದಿಂದ ಅಧಿಷ್ಠಾನ 15ಮೀ ಎತ್ತರವಿದ್ದು, ಅದರ ಸುತ್ತಳತೆ 100ಮೀ ಇದೆ. ಈ ಚೈತ್ಯ ಇಟ್ಟಿಗೆಗಳಿಂದ ನಿರ್ಮಾಣಗೊಂಡಿದೆ. ಇದರಲ್ಲಿ ವಿಶಾಲವಾದ ಹಾಗೂ ಸಣ್ಣ ಕೋಣೆಗಳಿವೆ. ಚೈತ್ಯದ ನಡುವೆ ದಾರಿಗಳಿದ್ದು ಇವುಗಳ ನಡುವೆ ಓಡಾಡಬಹುದಾಗಿದೆ. ಮೇಲಿನ ದಾರಿ ಕೆಳಗಿನ ದಾರಿಗಿಂತ 2ಮೀ ಎತ್ತರದಲ್ಲಿದೆ. ಬಾಂಗ್ಲಾದೇಶದ ಪಹರಪುರ್ ನಲ್ಲಿರುವ ಸೋಮಪುರ ಮಹಾ ವಿಹಾರದಂತಿರುವ ಈ ವಿಹಾರದ ಗೋಡೆಗಳು ಸುಂದರವಾದ ಸುಡಾವೆ ಮಣ್ಣಿನ ಫಲಕಗಳಿಂದ ಶೋಭಿತವಾಗಿವೆ. 1972ರಲ್ಲಿ ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆ ನಡೆಸಿದ ಉತ್ಖನನದಲ್ಲಿ 330 ಚ.ಮೀ ನ ಬೌದ್ಧ ವಿಹಾರ ಲಭ್ಯವಾಗಿದ್ದು, ಇದು 208 ಸಣ್ಣ ಕೋಣೆಗಳನ್ನು ಹೊಂದಿರುವುದು ಕಂಡುಬಂದಿದೆ. ವಿಹಾರದ ಉತ್ತರ ದ್ವಾರದಲ್ಲಿ ಚೌಕಾಕಾರದ ಮತ್ತು ವೃತ್ತಾಕಾರದ ರಚನೆಗಳು ಒಳ ಹಾಗೂ ಹೊರ ಗೋಡೆಗಳ ಮೇಲೆ ರಚಿತಗೊಂಡಿವೆ. ಈ ಕೋಣೆಗಳ ನಡುವೆ ಸಾಮಾನ್ಯವಾದ ಅಂಗಳವಿದೆ. ಮುಖ್ಯದ್ವಾರದ ಚಾವಣಿಗೆ ಆಧಾರವಾಗಿ 7.8ಮೀ ಎತ್ತರದ ಏಕಶಿಲಾ ಸ್ತಂಭಗಳನ್ನು ನಿಲ್ಲಿಸಲಾಗಿದೆ. ದಕ್ಷಿಣ ವಿಹಾರದ ದ್ವಾರವನ್ನೂ ಶೋಧಿಸಲಾಗಿದೆ. ಅಲ್ಲದೆ ಈಶಾನ್ಯದ ಮೂಲೆಯಲ್ಲಿ ಒಂದು ದೊಡ್ಡ ಚರಂಡಿಯೂ ತಳಪಾಯದಲ್ಲಿ ಕೆಲವು ಕೋಣೆಗಳೂ ಕಂಡುಬಂದಿದೆ.

A The wall Carvings of various deities
The wall carvings of various deities

ವಿಕ್ರಮಶೀಲದಲ್ಲಿ ದೊರೆತಿರುವ ಅವಶೇಷಗಳು ಬೌದ್ಧ ಮತ್ತು ವೈದಿಕಧರ್ಮದ ದೇವತೆಗಳು, ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ಒಳಗೊಂಡಿವೆ. ಬುದ್ಧ, ಮೈತ್ರೇಯ, ವಜ್ರಪಾಣಿ, ಅವಲೋಕಿತೇಶ್ವರ ಮತ್ತು ಮಂಜುಶ್ರೀ ಮೊದಲಾದ ಹಿತ್ತಾಳೆಯ ವಿಗ್ರಹಗಳೂ ದೊರೆತಿವೆ. ಜೊತೆಗೆ ಕಲ್ಲು, ಕಬ್ಬಿಣ, ತಾಮ್ರ, ಬೆಳ್ಳಿ, ಹಿತ್ತಾಳೆಯ ವಸ್ತುಗಳೂ ಕೆಲವು ಬೆಳ್ಳಿ ಮತ್ತು ತಾಮ್ರನಾಣ್ಯಗಳೂ ಸಿಕ್ಕಿವೆ. ಕೆಂಪು ಹಾಗೂ ಬೂದುಬಣ್ಣದ ಮಣ್ಪಾತ್ರೆಗಳೂ ಇಲ್ಲಿವೆ.

"https://kn.wikipedia.org/w/index.php?title=ಅಂತಿಚಕ್&oldid=801698" ಇಂದ ಪಡೆಯಲ್ಪಟ್ಟಿದೆ