ಸೂರ ಅಲ್ ಫಾತಿಹಃ

| ಸೂರಃ ಅಲ್-ಫಾತಿಹಃ | ಪವಿತ್ರ್ ಕುರ್‍ಆನ್ ನ 1 ನೆಯ ಸೂರಃ | ಇದರಲ್ಲಿ ಒಟ್ಟು 7 ಆಯತ್ ಗಳು ಇವೆ |

ಅಲ್ಲಾಹ್ ನ ಹೆಸರಿನೊಂದಿಗೆ (ಆರಂಭಿಸುತ್ತೇನೆ); ಅವನು ಅತ್ಯಧಿಕ ದಯೆ ತೋರುವವನು, ಶಾಶ್ವತವಾದ ಕರುಣೆಯುಳ್ಳವನು! {1}

ಎಲ್ಲಾ ರೀತಿಯ ಪ್ರಶಂಸೆ, ಸ್ತುತಿ-ಸ್ತೋತ್ರಗಳು ಲೋಕ ವಾಸಿಗಳ ಕರ್ತಾರ, ಸಂರಕ್ಷಕ, ಪರಿಪಾಲಕನಾದ ಅಲ್ಲಾಹ್ ನಿಗೆ ಮಾತ್ರವೇ ಸಲ್ಲುತ್ತದೆ. ಅವನು ಅತ್ಯಂತ ದಯಾಮಯನೂ ನಿರಂತರ ಕರುಣೆ ತೋರುವವನೂ ಆಗಿರುವನು. [ಮನುಷ್ಯರ ಕರ್ಮಗಳಿಗೆ ತಕ್ಕ] ಪ್ರತಿಫಲ ನೀಡಲಾಗುವ ದಿನದ ಸಾರ್ವಭೌಮ ಅಧಿಪತಿಯೂ (ಅಲ್ಲಾಹ್ ನೇ ಆಗಿರುವನು). {2-4}

(ಓ ಅಲ್ಲಾಹ್), ನಿನ್ನನ್ನು ಮಾತ್ರವೇ ನಾವು ಆರಾಧಿಸುತ್ತೇವೆ ಮತ್ತು ನಿನ್ನಲ್ಲಿ ಮಾತ್ರವೇ ನಾವು ಸಹಾಯಕ್ಕಾಗಿ ಮೊರೆಯಿಡುತ್ತೇವೆ. [ಆದ್ದರಿಂದ ನಮ್ಮೊಡೆಯಾ], ನಮಗೆ ನೇರವಾದ ಮಾರ್ಗವನ್ನು ತೋರಿಸಿ ಕೊಡು. ನೀನು ಯಾರನ್ನು ಅನುಗ್ರಹಿಸಿರುವೆಯೋ ಅಂಥವರು ನಡೆದ ಮಾರ್ಗದಲ್ಲಿ (ನಮ್ಮನ್ನು ನಡೆಸು). ನಿನ್ನ ಕ್ರೋಧಕ್ಕೆ ತುತ್ತಾದವರ ಮತ್ತು (ನೀನು ತೋರಿದ) ದಾರಿಯನ್ನು ತಪ್ಪಿದವರ ಮಾರ್ಗವಲ್ಲ! {5-7}

--------------------------------------

ಲಘು ಟಿಪ್ಪಣಿ:

'ಹಮ್ದ್' ಎಂಬ ಸಮಾನ್ಯ ಪದವು ಇಲ್ಲಿ 'ಅಲಿಫ್ - ಲಾಮ್' ನ ಸೇರ್ಪಡೆಯೊಂದಿಗೆ ‘ಅಲ್-ಹಮ್ದ್’ ಆಗಿರುವುದನ್ನು ಗಮನಿಸಿ. ಹಾಗೆ ಬಳಸಲಾದಾಗ ಅದರಲ್ಲಿ ಪ್ರಶಂಸೆ, ಸ್ತುತಿ, ಸ್ತೋತ್ರಗಳೆಲ್ಲವೂ ಸ್ವಾಭಾವಿಕವಾಗಿಯೇ ಸೇರಿಕೊಳ್ಳುವುದರ ಜೊತೆಗೆ ಅಲ್ಲಾಹ್ ನಿಗೆ ಮಾತ್ರವೇ ಬಳಸುವಂತಾಗುತ್ತದೆ. ಆದ್ದರಿಂದಲೇ ಆಂಗ್ಲಕ್ಕೆ ಅದನ್ನು ಭಾಷಾಂತರಿಸಿರುವವರು ಕೇವಲ praise ಎಂದು ಬಳಸುವ ಬದಲು all praise ಎಂದು ಬಳಸಿರುವುದನ್ನು ನಾವು ಕಾಣುತ್ತೇವೆ. ಪ್ರಶಂಸೆ, ಸ್ತುತಿ-ಸ್ತೋತ್ರಗಳೆಲ್ಲವೂ 'ಅಲ್-ಹಮ್ದ್' ನ ಪರ್ಯಾಯ ಪದಗಳೆಂದು ಪರಿಗಣಿಸದೆ ಅದರ ನೇರ ಅರ್ಥವೆಂದು ಪರಿಗಣಿಸಿದುದರಿಂದ ಕಂಸಗಳನ್ನು ಇಲ್ಲಿ ಉದ್ದೇಶಪೂರ್ವಕವಾಗಿಯೇ ಬಳಸಲಾಗಿಲ್ಲ. ಹಾಗೆಯೇ ಕರ್ತಾರ, ಸಂರಕ್ಷಕ, ಪರಿಪಾಲಕ - ಇವೆಲ್ಲ ಮೂಲದಲ್ಲಿರುವ "ರಬ್ಬ್" ಎಂಬ ಅರಬಿ ಪದದ ನೇರವಾದ ಅರ್ಥವಾದ್ದರಿಂದ ಇಲ್ಲಿಯೂ ಕಂಸಗಳನ್ನು ಬಳಸಲಾಗಿಲ್ಲ.

ಆಧಾರ: ಸರಳ ಕುರ್‌ಆನ್ ಜಾಲತಾಣ