ಸದಸ್ಯ:Vishwanatha Badikana/ನನ್ನ ಪ್ರಯೋಗಪುಟ 3

ದೆಹಲಿ, ಮೀರತ್ ಮೊದಲಾದ ಕಡೆ ಬಳಕೆಯಲ್ಲಿರುವ ಗ್ರಾಮೀಣ ನುಡಿ. ಗ್ರಿಯರ್ಸನ್ ಇದನ್ನು ವರ್ನಾಕ್ಯುಲರ್ ಹಿಂದಿ ಎಂದು ಕರೆದರೆ ಸುನೀತಿಕುಮಾರ ಚಟರ್ಜಿ ಜನಪದೀಯ ಹಿಂದೂಸ್ತಾನಿ ಎಂದು ಕರೆದಿದ್ದಾರೆ. ಈ ಖಡೀ ಬೋಲಿಯೇ ಶಿಷ್ಟ ಹಿಂದೀ, ಉರ್ದು ಮತ್ತು ಹಿಂದೂಸ್ತಾನಿಯ ಮೂಲಾಧಾರ ಭಾಷೆಯಾಗಿದೆ. ದಿನಬಳಕೆಯ ಶಬ್ದಗಳ ಜೊತೆಗೆ ಸರಳ ಉರ್ದು ಶಬ್ದಗಳಿಂದ ಕೂಡಿದಾಗ ಇದು ಹಿಂದೂಸ್ತಾನಿ ಎನ್ನಿಸಿಕೊಂಡರೆ, ಸಂಸ್ಕøತಶಬ್ದದ ಒಲವು ಹೆಚ್ಚಾದಾಗ ಹಿಂದೀ ಎನ್ನಿಸಿಕೊಳ್ಳುತ್ತದೆ. ಅರಬ್ಬೀ ಪಾರಸೀ ಶಬ್ದಗಳ ಬಾಹುಳ್ಯವಿದ್ದಾಗ ಇದೇ ಉರ್ದುವಾಗುತ್ತದೆ.

ಖಡೀ ಬೋಲಿ ಶಬ್ದ ಅಷ್ಟೇನೂ ಹಳೆಯದಲ್ಲ. ಇದರ ಆರಂಭಿಕ ಅರ್ಥ, ಹೆಸರು, ರೂಪ, ಪ್ರಯೋಗ, ವಿಕಾಸ ಮೊದಲಾದವುಗಳ ಬಗೆಗೆ ವಿದ್ವಾಂಸರಲ್ಲಿ ಏಕಾಭಿಪ್ರಾಯವಿಲ್ಲ. 1803ರ ಸರಿಸುಮಾರಿನಲ್ಲಿ ಖಡೀ ಬೋಲಿ ಎಂಬ ಮಾತಿನ ಪ್ರಯೋಗ ಬರವಣಿಗೆಯಲ್ಲಿ ಕಂಡುಬರುತ್ತದೆ. ಆಧುನಿಕ ಯುಗದಲ್ಲಿ ಇದನ್ನು ಮೊದಲಿಗೆ ಸಾಹಿತ್ಯ ರೂಪದಲ್ಲಿ ಬಳಸಿದವರಲ್ಲಿ ಲಲ್ಲೂ ಲಾಲ್, ಗಿಲ್‍ಕ್ರೈಸ್ಟ್ , ಹಾಗೂ ಸದಲ್ ಮಿಶ್ರರ ಹೆಸರು ಉಲ್ಲೇಖನಾರ್ಹ.

ಖಡೀ (ಬರೀ) ಎಂದರೆ ವಿಶುದ್ಧ, ಅಪ್ಪಟ-ಎಂದರೆ ಅರಬ್ಬಿ ಪಾರಸೀ ಶಬ್ದರಹಿತವಾದ್ದು ಎಂದು ಅರ್ಥೈಸುವವರು ಖಡೀ ಬೋಲಿಯನ್ನು ಉರ್ದುವಿಗೆ ಹೋಲಿಸಿಕೊಂಡು ತಮ್ಮ ವಾದವನ್ನು ಮಂಡಿಸಿದ್ದಾರೆ. ಹಿಂದೀ ಸಾಹಿತ್ಯದ ಪ್ರಪ್ರಥಮ ಇತಿಹಾಸ ಬರೆದ ಫ್ರೆಂಚ್ ಲೇಖಕ ಗಾಸಾಂದ ತಾಸಿ ಇದನ್ನು ಶುದ್ಧ ಭಾಷೆ ಎಂದರೆ ಹಿಂದೀ ವ್ಯಾಕರಣವನ್ನು ಬರೆದ ಕೈಲಾಸ (1875) ಅಚ್ಚನುಡಿ ಎನ್ನುತ್ತಾನೆ. ಸುಧಾಕರ ದ್ವಿವೇದಿಯ ಅಭಿಪ್ರಾಯವೂ ಇದೇ. ಚಂದ್ರಬಲಿ, ಪಾಂಡೇಯ ಮೊದಲಾದ ವಿದ್ವಾಂಸರೂ ಇದನ್ನೇ ಅನುಮೋದಿಸಿದ್ದಾರೆ. ಎರಡನೆಯ ತಂಡದ ಪ್ರಕಾರ ಖಡೀ ಎಂದರೆ ನಿಂತಿರುವ ಇಲ್ಲದೆ ಎದ್ದ ಎಂದು ಅರ್ಥ. ರಾಜಸ್ಥಾನೀ, ಗುಜರಾತಿ, ಬ್ರಜ ಮೊದಲಾದವು ಪಡೀ ಬೋಲಿಗಳಾದರೆ (ಬಿದ್ದ ಭಾಷೆ) ಸೈನ್ಯ ಹಾಗೂ ಸಮಾಜದ ಬಳಕೆಯಲ್ಲುಳಿದ ಮೀರತ್ತಿನ ಭಾಷೆ ಎದ್ದ ಭಾಷೆ (ಖಡೀ ಬೋಲಿ) ಎಂದು ಚಂದ್ರಧರೆ ಶರ್ಮ ಗುಲೇರಿ ಎಂಬ ವಿದ್ವಾಂಸರ ಮತ. ಸುನೀತಿಕುಮಾರ ಚಟರ್ಜಿಯವರೂ ಇದೇ ವಾದವನ್ನು ಸಮರ್ಥಿಸಿದ್ದಾರೆ.

ವ್ರಜ ಭಾಷೆಗಿಂತ ಇದು ಕರ್ಕಶವಾದ್ದರಿಂದ ಇಲ್ಲಿನ ಖಡೀ ಶಬ್ದಕ್ಕೆ ಕಠಿಣ ಕರ್ಕಶ ಎಂಬ ಅರ್ಥವಿದೆಯೆಂದು ಧೀರೇಂದ್ರವರ್ಮ, ಕಾಮತಾಪ್ರಸಾದ ಗುರು ಮೊದಲಾದವರ ವಾದ.

ಮತ್ತೆ ಕೆಲವರು ಖಡೀ ಎಂದರೆ ಸುಸ್ಥಿರ, ಸುಪ್ರಚಲಿತ, ಸುಸಂಸ್ಕøತ ಅಥವಾ ಶಿಷ್ಟ ಎಂದು ಅರ್ಥಮಾಡಿದ್ದಾರೆ. ಇದಕ್ಕೆ ವಿರುದ್ಧವಾಗಿ ಅಬ್ದುಲ್ ಹಕ್ ಅವರು ಖಡೀ ಬೋಲಿ ಎಂದರೆ ಅಸಂಸ್ಕøತ ಅನಾಗರಿಕ ಆಡುನುಡಿ ಎಂದು ಪ್ರತಿಪಾದಿಸಿದ್ದಾರೆ. ಹೀಗೆಯೆ ಇದನ್ನು ಹೊಸಭಾಷೆ, ಕೃತಕಭಾಷೆ ಎಂದು ಮುಂತಾಗಿ ವ್ಯಾಖ್ಯಾನ ಮಾಡುವ ವಿದ್ವಾಂಸರೂ ಇದ್ದಾರೆ.

ಖಡೀಬೋಲಿ ಮೊದಲು ಎಲ್ಲಿ ಬಳಕೆಯಲ್ಲಿತ್ತು ಎಂಬ ಪ್ರಶ್ನೆಯೂ ಉಂಟು. ಪ್ರಾಚೀನ ಕುರುಜನಪದದಲ್ಲಿ ಬಳಕೆಯಲ್ಲಿತ್ತೆಂದು ಹೇಳಿ ಇದನ್ನು ಕೌರವೀ ಎಂದು ಕೆಲವರು ಕರೆದಿದ್ದಾರೆ. ಇದು ಮೀರತ್ತಿನ ನೆರೆಹೊರೆಯ ಭಾಷೆ ಎಂದು ಗ್ರಿಯರ್ಸನ್, ಚಟರ್ಜಿ, ಧೀರೇಂದ್ರವರ್ಮ, ಶ್ಯಾಮಸುಂದರದಾಸ್ ಮೊದಲಾದವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇದು ಕುರು ಪ್ರದೇಶದಲ್ಲಿ ಪ್ರಚಲಿತವಾಗಿದ್ದ ಅಪಭ್ರಂಶದಿಂದ ಹುಟ್ಟಿಕೊಂಡಿತು ಎನ್ನುವುದು ಅವೈಜ್ಞಾನಿಕ ಎಂದು ಮಾತಾಬದಲ್ ಜಾಯಸ್‍ವಾಲರ ವಾದ. ಅವರ ಪ್ರಕಾರ ಖಡೀಬೋಲಿ ವಸ್ತುತಃ ಪೂರ್ವೀ ಪಂಜಾಬ್, ದೆಹಲಿ ಮತ್ತು ಪಶ್ಚಿಮೀ ಉತ್ತರಪ್ರದೇಶದ ಆಡುನುಡಿಗಳ ಮಿಶ್ರಣದ ಪರಿನಿಷ್ಠಿತರೂಪ.

ಉತ್ಪತ್ತಿಯ ದೃಷ್ಟಿಯಿಂದ ಶೌರಸೇನೀ ಅಪಭ್ರಂಶ ಇಲ್ಲವೆ ಅದರ ಸಂಕ್ರಮಣಾವಸ್ಥೆಯ ರೂಪವಾದ ಶೌರಸೇನೀ ಅವಹಟ್ಟದಿಂದ ಖಡೀಬೋಲಿ ಜನಿಸಿತೆಂದು ಸದ್ಯಕ್ಕೆ ಹೇಳಬಹುದು.

ಖಡೀ ಬೋಲಿ ಈ ಕೆಳಕಂಡ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಬಳಕೆಯಲ್ಲಿದೆ. ಮೀರತ್, ಬಿಜನೌರ್, ಮುಜಫ್ಛರ್ ನಗರ, ಸಹಾರನಪುರ, ಡೆಹರಾಡೂನಿನ ಬಯಲು ಪ್ರದೇಶ, ಅಂಬಾಲ ಕಾಲಸಿಯಾ, ಪಟಿಯಾಲಾದ ಪೂರ್ವಭಾಗ, ರಾಮಪುರ ಮತ್ತು ಮುರಾದಾಬಾದ್, ಬಾಂಗರೂ, ಜಾಟಕೀ ಇಲ್ಲವೆ ಹರಿಯಾಣಿ ಒಂದು ರೀತಿಯಲ್ಲಿ ಪಂಜಾಬ್ ಮತ್ತು ರಾಜಸ್ಥಾನೀ ಮಿಶ್ರಿತ ಖಡೀ ಬೋಲಿ. ಇದು ದೆಹಲಿ, ಕರನಾಲ್, ಹಿಸಾರ್, ಪಟಿಯಾಲಾ, ನಾಭಾ ಮೊದಲಾದ ಕಡೆ ಬಳಕೆಯಲ್ಲಿದೆ. ಖಡೀಬೋಲಿ ಕ್ಷೇತ್ರದ ಎಲ್ಲೆಕಟ್ಟು ಈ ರೀತಿ ಇದೆ. ಪೂರ್ವಕ್ಕೆ ವ್ರಜಭಾಷೆ, ಆಗ್ನೇಯದಲ್ಲಿ ಮೇವರಿ ನೈಋತ್ಯದಲ್ಲಿ ಪಶ್ಚಿಮೀ ರಾಜಸ್ಥಾನೀ, ಪಶ್ಚಿಮದಲ್ಲಿ ಪೂರ್ವೀ ಪಂಜಾಬಿ ಮತ್ತು ಉತ್ತರದಲ್ಲಿ ಪಹಾಡಿ ಬೋಲಿ ಅಥವಾ ಗುಡ್ಡಗಾಡಿನ ಆಡುನುಡಿಗಳು. ಖಡೀ ಬೋಲಿಯ ಎರಡು ಪ್ರಮುಖ ಭೇದಗಳೆಂದರೆ ಪೂರ್ವೀ ಖಡೀ ಬೋಲಿ ಹಾಗೂ ಪಶ್ಚಿಮೀ ಖಡೀ ಬೋಲಿ.

ಖಡೀ ಬೋಲಿಯಲ್ಲಿ ಬಳಕೆಯಲ್ಲಿರುವ ಶಬ್ದರೂಪಗಳ ಮೂಲ ಪ್ರಾಕೃತದ ಕಾಲದಲ್ಲೇ ಕಣ್ಣಿಗೆ ಬೀಳುತ್ತದೆ. ಅಪಭ್ರಂಶಕಾಲದಲ್ಲಿ ಅದು ಸ್ಪಷ್ಟವಾಗಿ ಮೈದೋರುತ್ತದೆ. ಉದಾಹರಣೆಗೆ ಹಮ್, ಹಮಾರೀ, ತೂ, ಜೋ, ಹೋ, ಕೈಸ್, ಜೈಸ್ ಮೊದಲಾದ ರೂಪಗಳು ಅಪಭ್ರಂಶದ ಅಂತಿಮ ಕಾಲದಲ್ಲಿ ಗೋಚರವಾಗುತ್ತವೆ. ಆದರೆ ಅವುಗಳ ಪ್ರಯೋಗ ಪರಿಮಿತವಾಗಿತ್ತು. ಸಂಧಿಕಾಲದ ಅವಹಟ್ಟದ ಗ್ರಂಥಗಳಲ್ಲಿ ಖಡೀ ಬೋಲಿಯ ಹಲವು ರೂಪಗಳನ್ನು ಕಾಣಬಹುದು.

ಖಡೀಬೋಲಿಯನ್ನು ದೇವನಾಗರೀ ಲಿಪಿಯಲ್ಲೇ ಬರೆಯುತ್ತಾರೆ.

ಸಾಹಿತ್ಯದಲ್ಲಿ ಖಡೀ ಬೋಲಿಯ ಪ್ರಥಮ ಪ್ರಯೋಗವನ್ನು ಗೋರಖ್‍ನಾಥ ಅಮೀರ್ ಖುಸ್ರೂ, ಬಾಬಾ ಫರೀದ್ ಶೇರ್‍ಗಾಂಜೀ ಮೊದಲಾದವರಲ್ಲಿ ಕಾಣಬಹುದು. ಭೋಲಾನಾಥ ತಿವಾರಿ ಖಡೀ ಬೋಲಿಯ ಉಗಮ ಕ್ರಿ.ಶ.1000ದ ಸರಿಸುಮಾರಿನಲ್ಲಿ ಆಯಿತೆಂದೂ ಇದರ ಇತಿಹಾಸವನ್ನು ಆದಿಕಾಲ (1000-1500) ಮಧ್ಯಕಾಲ (1500-1800) ಆಧುನಿಕ ಕಾಲ (1800 ರಿಂದ ಈಚೆ) ಎಂದೂ ಹೇಳಿದ್ದಾರೆ. ಪ್ರಾಚೀನತೆಯ ಬಗೆಗೆ ಇಲ್ಲಿ ಹೇಳಿರುವ ಮಾತನ್ನು ಒಪ್ಪಲು ಸಾಕಷ್ಟು ಆಧಾರಗಳು ದೊರಕವು. ಮುಸಲ್ಮಾನರು ಈ ಬೋಲಿಗೆ ಅಂತರ ಪ್ರಾಂತೀಯ ರೂಪ ವಿತ್ತರು.

ಈ ಬೋಲಿಯಲ್ಲಿ ಕೆಲವು ಜನಪದಗೀತೆಗಳೂ ದೊರೆಯುತ್ತವೆ. ಹಿಂದೀಸಾಹಿತ್ಯದ ಆಧುನಿಕ ಕಾಲದ ಆರಂಭವೇ ಖಡೀ ಬೋಲಿಯ ವಿಶೇಷ ಉನ್ನತಿಯಿಂದ ಆಯಿತು. ಮುದ್ರಣಾಲಯ, ವೃತ್ತಪತ್ರಿಕೆ, ವಿಜ್ಞಾನ ಮೊದಲಾದವುಗಳ ಆವಿರ್ಭಾವದಿಂದಾಗಿ ಗದ್ಯದಲ್ಲಿ ಇದು ವಿಶೇಷವಾಗಿ ಬಳಕೆಗೊಂಡಿತು. 19ನೆಯ ಶತಕದ ತರುವಾಯ ಪಂ. ಮಹಾವೀರ ಪ್ರಸಾದ ದ್ವಿವೇದಿಯವರ ಸತತ ಪ್ರಯತ್ನದಿಂದಾಗಿ ಹಿಂದೀ ಎಂದರೆ ಖಡೀ ಬೋಲಿ ಎನ್ನುವಂತಾಗಿ ಪದ್ಯದ ಮೇಲೂ ಇದರ ಏಕಾಧಿಪತ್ಯ ಸ್ಥಾಪಿತವಾಗಿ ಬ್ರಜಭಾಷೆ ಹಿಂದೆ ಸರಿಯಿತು. ಇಂದು ಇದರ ಸಾಹಿತ್ಯ ವಿಪುಲವಾಗಿ ಬೆಳೆದಿದೆ, ಬೆಳೆಯುತ್ತಿದೆ.