ಓದುಗಾರಿಕೆ

ಪ್ರತಿಯೊಬ್ಬ ವ್ಯಕ್ತಿಯ ಮನಸ್ಸನ್ನು ಅರಳಿಸುವ ವಿಶಿಷ್ಟ ಕ್ರಿಯೆ ಓದುಗಾರಿಕೆ. ಓದುವ ಹವ್ಯಾಸವನ್ನು ಯಾರಾದರೂ ಸರಿಯೆ ಬೆಳೆಸಿ ಕೊಳ್ಳುವುದು ಅನಿವಾರ್ಯ. ಓದಲು ಕಲಿಯದವ ಪಶು ಸಮಾನ ಎಂದು ಒಂದು ಹೇಳಿಕೆ ಇದೆ. ಋಗ್ವೇದದಲ್ಲಿ ಎಲ್ಲೆಡೆಯಿಂದಲೂ ನಮಗೆ ಜ್ಞಾನ ಸಂಪಾದನೆಯಾಗಲಿ ಎಂದು ಹೇಳಲಾಗಿದೆ. ಜ್ಞಾನ ಸಂಪಾದಿಸಲು ಅವಶ್ಯವಾದುದು ಓದು.

ಮಕ್ಕಳಿಗೆ ತಂದೆ ಬಾಲ್ಯದೊಳ್ ಅಕ್ಕರದ ವಿದ್ಯೆಯ ಕಲಿಪದಿರ್ದೊಡೆ ಕೊಂದಂ

ಎಂದು ನಮ್ಮ ಚೂಡಾರತ್ನ ಹೇಳಿದ್ದಾನೆ. ತಂದೆಯಾದವನು ತನ್ನ ಮಕ್ಕಳಿಗೆ ಅಕ್ಷರದ ವಿದ್ಯೆ, ಓದುವ ವಿದ್ಯೆ ಕಲಿಸದಿದ್ದ ಪಕ್ಷದಲ್ಲಿ ಅವರನ್ನು ಕೊಂದಂತೆಯೇ ಸರಿ. ಓದಿದವ ತಿಳಿವಳಿಕೆ ಉಳ್ಳವನಾಗುತ್ತಾನೆ. ವ್ಯವಹಾರ ಜ್ಞಾನ ಸಂಪಾದಿಸುತ್ತಾನೆ. ಓದುವ ಹವ್ಯಾಸವುಳ್ಳವರಿಗೆ ಸ್ನೇಹಿತರ ಅಗತ್ಯವೇ ಇಲ್ಲ ಎನ್ನುತ್ತಾನೆ ಒಬ್ಬ ಆಂಗ್ಲ ಬರಹಗಾರ. ಓದುವುದಕ್ಕೆ ಬೇಕಾದುದು ಪುಸ್ತಕ. ಒಳ್ಳೆಯ ಸನ್ಮಾರ್ಗವನ್ನು ತೋರಿಸುವ ಪುಸ್ತಕಗಳು ಉತ್ತಮ ಗೆಳೆಯರಷ್ಟೇ ಕೆಲಸ ಮಾಡುತ್ತವೆ. ಓದುಗಾರಿಕೆ ಕೇವಲ ಸಮಯ ಕಳೆಯುವುದಕ್ಕಷ್ಟೇ ಅಲ್ಲ. ಮನೆಗೆ ದೀಪ ಹೇಗೋ ಹಾಗೆ ಪುಸ್ತಕ. ಅದು ನೀಡುವ ಆನಂದ, ಜ್ಞಾನ ಮಹತ್ವಪೂರ್ಣವಾದದ್ದು, ಪ್ರತಿನಿತ್ಯ ಕನಿಷ್ಠ ಒಂದೋ ಇಲ್ಲ ಅರ್ಧ ಗಂಟೆಯನ್ನಾದರೂ ಒಳ್ಳೆಯ ಗ್ರಂಥಗಳನ್ನು ಓದುವುದಕ್ಕೆ ಮೀಸಲಿಡುವುದು ಅವಶ್ಯ. ನಮ್ಮನ್ನು ಜಾಗೃತರನ್ನಾಗಿಸುವ, ತಪ್ಪಿದ್ದಲ್ಲಿ ಎಚ್ಚರಿಸುವ, ತಿಳುವಳಿಕೆ ಹೆಚ್ಚಿಸುವ ನಿಧಾನದ ಅಧ್ಯಯನ ಮುಖ್ಯ. ಅವಸರದ ಓದು ಓದಾಗುವುದಿಲ್ಲ, ಹಾರುತ್ತ, ನೆಗೆಯುತ್ತ ಓದುವುದು ಸ್ವಾರಸ್ಯ ಉಂಟು ಮಾಡುವುದಿಲ್ಲ. ಪುಟದಿಂದ ಪುಟಕ್ಕೆ ವಿಷಯ ಗ್ರಹಿಸದೆ ಓದುವ ಓದುಗಾರಿಕೆಯಿಂದ ಲಾಭವಿಲ್ಲ.

ಓದು ಎಂದಾಕ್ಷಣ ಕೇವಲ ತರಗತಿಯಲ್ಲಿ ಕುಳಿತು ಪದವಿ ಪರೀಕ್ಷೆಗಾಗಿ ಪಠ್ಯ ಪುಸ್ತಕಗಳನ್ನು ಓದುವ ಓದಷ್ಟೆ ಅಲ್ಲ. ಜ್ಞಾನ ವಿಸ್ತಾರಕ್ಕಾಗಿ ಓದಬೇಕು. ಓದುವ ಹವ್ಯಾಸ ಉಳ್ಳವರು ಗ್ರಂಥಾಲಾಯಗಳ ನೆರವು ಪಡೆಯಬಹುದಾಗಿದೆ. ಮನೆಯಲ್ಲಿ ಪುಸ್ತಕಗಳನ್ನು ಸಂಗ್ರಹಿಸಿಟ್ಟು ಆಗಿಂದಾಗ್ಗೆ ಓದಬಹುದು. ನಮಗೆ ವಿಪತ್ತು ಗಳೊದಗಿದಾಗ ದು:ಖವನ್ನು ಮರೆಯಲೂ ಓದು ನೆರವಾಗುತ್ತದೆ. ಓದಿನಿಂದ ನಮ್ಮ ಸಂಸ್ಕೃತಿಯ ಪರಿಚಯವಾಗುತ್ತದೆ. ಸುಸಂಸ್ಕೃತರೂ ಆಗುತ್ತೇವೆ.