ಹಣದಪ್ರಮಿತಿಗಳು

ಒ೦ದು ಆರ್ಥಿಕತೆ ಉಪಯೋಗಿಸುವ ಪ್ರಮಾಣಬದ್ಧೆ ಹಣ ಸ್ವರೂಪಕ್ಕೆ ಹಣ ಪ್ರಮಿತಿಯೆ೦ದು ಸಾಮಾನ್ಯವಾಗಿ ಹೇಳಲಾಗುತ್ತದೆ.ಪ್ರಮಾಣಬದ್ಧ ಹಣವೆಂದರೆ ಸರ್ಕಾರವೇ ತನ್ನ ಕೊಡು ಕೊಳ್ಳೂವಿಕೆಗಳನ್ನು ನಡೆಸುವುದಕ್ಕೆ ಮತ್ತು ಇತರ ಕಾರ್ಯಗಳಿಗೆ ಬಳಸುವ ಕಾನೂನುಬದ್ಧ ಹಣ.ಆದ್ದರಿಂದ ಒಂದು ಆರ್ಥಿಕತೆಯ ಹಣಕಾಸು ವಿಧಾಯಕ ಪ್ರಮಾಣಬದ್ಧ ಹಣವೆಂದು ಯಾವ ಸ್ವರೂಪದ ಹಣವನ್ನು ಜಾರಿಗೆ ತರುತ್ತದೆಯೋ ಅದೇ ಹಣಪ್ರಮಿತಿಯಾಗುತ್ತದೆ.

ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಹಣಪ್ರಮಿತಿಯಿರುತ್ತದೆ. ತನ್ನ ರಾಷ್ಟ್ರದ ಆರ್ಥಿಕ ಚಟುವಟಿಕೆಗಳಿಗೆ ಹೊಂದಿಕೊಳ್ಳುವಂತಹ ಹಣಪ್ರಮಿತಿಯನ್ನು ಅದು ಜಾರಿಗೆ ತರುತ್ತದೆ.ಆದರೆ ಯಾವುದೇ ಒಂದು ಹಣಪ್ರಮಿತಿಯನ್ನು ಒಂದು ರಾಷ್ಟ್ರ ಅಂಗೀಕರಿಸುವಾಗ ಅಂತರರಾಷ್ಟ್ರೀಯ ಹಣಕಾಸು ಅಂಶಹಗಳನ್ನೂ ರಾಷ್ಟ್ರ ಗಮನಿಸಬೇಕಾಗುತ್ತದೆ.ಏಕೆಂದರೆ,ಪ್ರತಿಯೊಂದು ರಾಷ್ಟ್ರವೂ ಅಂತರರಾಷ್ಟ್ರೀಯ ಪಾವತಿಗಳನ್ನು ಮಾಡಬೇಕಾಗಿ ಬರುವುದರಿಂದೆ ಬೇರೆ ರಾಷ್ಟ್ರಗಳು ತನ್ನ ಹಣಪ್ರಮಿತಿಯನ್ನು ಮಾನ್ಯಮಾಡುತ್ತನೆಯೇ ಇಲ್ಲವೇ ಎಂಬ ಅಂಶವನ್ನು ಗಮನಿಸಬೇಕಾಗುತ್ತದೆ. ಆದ್ದರಿಂದ ಒಂದು ಆರ್ಥಿಕತೆ ತನ್ನ ರಾಷ್ಟ್ರಕ್ಕೆ ಒಂದು ನಿರ್ದಿಷ್ಟ ಹಣಪ್ರಮಿತಿಯನ್ನು ಆರಿಸಿಕೊಳ್ಳುವಾಗ ಎರಡು ಅಂಶಗಳನ್ನು ಗಮನಿಸಬೇಕಾಗುತ್ತದೆ.ಅದೆಂದರೆ, ಆಂತರಿಕವಾಗಿ ತನ್ನ ಹಣದ ಮೌಲ್ಯವನ್ನು ಕಾಪಾಡಿಕೊಳ್ಳಲು ಹಣಕಾಸು ಪ್ರಮಿತಿ ಸಹಾಯಕವಾಗಬೇಕು.ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಪಾವತಿಗಳ ವಿಷಯದಲ್ಲಿ ತನ್ನ ಹಣಪ್ರಮಿತಿ ಮಾನ್ಯತೆಯನ್ನು ಪಡೆಯುವಂತಿರಬೇಕು.

ಹಣಪ್ರಮಿತಿ ಐತಿಹಾಸಿಕವಾಗಿ ನಾನಾ ಸ್ವರೂಪಗಳನ್ನು ಪಡೆದುಕೊಳ್ಳುತ್ತಾ ಬಂದಿದೆ. ವಿಶಾಲವಾಗಿ ಹೇಳುವುದಾದರೆ ಹಣಪ್ರಮಿತಿಯ ಎರಡು ಸ್ವರೂಪಗಳು ಮುಖ್ಯವಾದವು.ಇವುಗಳೆಂದರೆ

(೧)ಲೋಹಪ್ರಮಿತಿ
(೨)ಅಸರಿವರ್ತನೀಯ "ನಿರ್ವಹಿತ" ಕಾಗದದ ಹಣಪ್ರಮಿತಿ.
 
  • ಲೋಹ ಹಣಪ್ರಮಿತಿಗಳು,

ಲೋಹ ಹಣಪ್ರಮಿತಿಯಲ್ಲಿ ಲೋಹದ ನಾಣ್ಯಗಳು ರಾಷ್ಟ್ರದಲ್ಲಿ ಪ್ರಮಾಣ ಬದ್ಧ ಹಣವೆಂದು ಗುರುತಿಸಲ್ಪಟ್ಟದ್ದು ಅವು ಚಲಾವಣೆಯಲ್ಲಿರುತ್ತವೆ.ಲೋಹ ಹಣಪ್ರಮಿತಿಯ ಎರಡು ಸ್ವರೂಪಗಳೆಂದರೆ (೧)ಏಕಲೋಹ ಪ್ರಮಿತಿ (೨)ದ್ವಿಲೋಹ ಪ್ರಮಿತಿ.

ಏಕಲೋಹ ಪ್ರಮಿತಿ:

ಕಾನೂನು ಬದ್ಧ ಹಣ ಒಂದೇ ಲೋಹದಿಂದಾಗಿದ್ದು ಅಂತಹ ಹಣ ಚಲಾವಣೆಯಲ್ಲಿದ್ದರೆ.ಅದನ್ನು ಏಕಲೋಹ ಪ್ರಮಿತಿಯೆಂದು ಕರೆಯಲಾಗುತ್ತದೆ. ಏಕಲೋಹ ಪ್ರಮಿತಿಯಲ್ಲಿ ಪ್ರಮಾಣ ಬದ್ಧ ಹಣ ಪುರ್ಣಶರೀರ ಹಣವಾಗಿದ್ದು,ಪರಿವರ್ತನೆಯ ಸೌಲಭ್ಯವನ್ನು ಹೊಂದಿರುತ್ತದೆ.

ದ್ವಿಲೋಹ ಪ್ರಮಿತಿ:

ನಾವು ಈ ಹಿಂದೆಯೇ ತಿಳಿಸಿರುವಂತೆ ಚಿನ್ನ ಮತ್ತು ಬೆಳ್ಳಿಗಳೆರಡನೂ ಆಧಾರವಾಗಿಟ್ಟುಕೊಂಡು ಹಣ ಚಲಾವಣೆ ಮಾಡುವ ಪದ್ದತಿಯನ್ನು ದ್ವಿಲೋಹ ಪ್ರಮಿತಿ ಎಂದು ಹೆಸರಿಸಲಾಗುತ್ತದೆ. ಕೇವಲ ಚಿನ್ನವನ್ನು ಆಧಾರವಾಗಿಟ್ಟುಕೊಂಡು ಹಣದ ಚಲಾವಣೆಯನ್ನು ಮಾಡುವಾಗ ಚಿನ್ನದ ಕೊರತೆಯಿಂದಾಗಿ ಹಣದ ನೀಡಿಕೆಗೆ ಪುಟತ್ವವನ್ನು ದೊದಕಿಸಿಕೊಡುವುದು ಕಷ್ಟವಾಗುತ್ತದೆ. ಆದ್ದರಿಂದಲೇ ಕೆಲವು ರಾಷ್ಟ್ರಗಳು ಚಿನ್ನ ಮತ್ತು ಬೆಳ್ಳಿಗಳೆರಡನ್ನೂ ಆಧಾರವಾಗಿಟ್ಟುಕೊಂಡು ಹಣವನ್ನು ಚಲಾವಣೆ ಮಾಡುವ ಕ್ರಮವನ್ನು ಜಾರಿಗೆ ತಂದವು.

ಈ ಪದ್ದತಿಯ ಮುಖ್ಯ ಲಕ್ಷಣಗಳೆಂದರೆ:

(೧) ಚಿನ್ನ ಮತ್ತು ಬೆಳ್ಳಿ ನಾಣ್ಯಗಳೆರಡೂ ಚಲಾವಣೆಯಲ್ಲಿರುತ್ತವೆ. ಜನರು ತಮ್ಮ ಪಾವತಿಗಳನ್ನು ಚಿನ್ನ ಮತ್ತು ಬೆಳ್ಳಿಗಳೆರಡರಲ್ಲೂ ಮಾಡಬಹುದು. (೨)ಸರ್ಕಾರ ಚಲಾವಣೆಯಲ್ಲಿರುವ ನೋಟಗೆ ಬೆಲೆಯನ್ನು ಚಿನ್ನ ಮತ್ತು ಬೆಳ್ಳಿಗಳೆರಡರಲ್ಲೂ ಸೂಚಿಸುತ್ತದೆ. (೩)ಎರಡೂ ಲೋಹದ ನಾಣ್ಯಗಳನ್ನೂ ಕಾನೂನು ಬದ್ಧ ಹಣವೆಂದು ಘೋಷಿಸಲಾಗುತ್ತದೆ. (೪)ಚಿನ್ನ ಮತ್ತು ಬೆಳ್ಳಿಗಳೆರಡೂ ಯಾವ ನಿರ್ಬಂಧವೂ ಇಲ್ಲದೆ ಒಂದು ರಾಷ್ಟ್ರದಿಂದ ಮತ್ತೋಂದು ರಾಷ್ಟ್ರಕ್ಕೆ ಚಲಿಸಬಹುದು. (೫)ಜನರು ಸಾಂಕೇತಿಕ ನಾಣ್ಯಗಳು ಮತ್ತು ಕರೆನ್ನಿಗಳನ್ನು ಸುಲಭವಾಗಿ ಸರ್ಕಾರದಿಂದ ಚಿನ್ನ ಅಥವಾ ಬೆಳ್ಳಿಗೆ ಪರಿವರ್ತಿಸಬಹುದು.

ದ್ವಿಲೋಹ ಪ್ರಮಿತಿಯಲ್ಲಿ ಅನೇಕ ಅನುಕೂಲಗಳಿದ್ದವು. ವಾಣಿಜ್ಯ ಮತ್ತು ವ್ಯವಹಾರಗಳಿಗೆ ವಾಸ್ತವವಾಗಿ ಈ ಪ್ರಮಿತಿ ಸುವರ್ಣ ಪ್ರಮಿತಿಗಿಂತ ಹೆಚ್ಚು ಅನುಕೂಲಕರವಾಗಿತ್ತು.ಚಿನ್ನದ ನಾಣ್ಯಗಳನ್ನು ದೊಡ್ಡ ಪ್ರಮಾಣದ ವ್ಯವಹಾರಗಳಿಗೂ ಬೆಳ್ಳಿ ನಾಣ್ಯಗಳನ್ನು ಸಣ್ಣ ಪುಟ್ಟ ವ್ಯವಹಾರಗಳಿಗೂ ಬಳಸುವುದು ಸಾಧ್ಯವಿತ್ತು.ಏಕಲೋಹ ಪ್ರಮಿತಿಗಿಂತ ದ್ವಿಲೋಹ ಪ್ರಮಿತಿ ಚಿನ್ನಕ್ಕೆ ಹೆಚ್ಚಿನ ದೃಢ ಮೌಲ್ಯವನ್ನು ದೊರಕಿಸಿ ಕೊಡುತ್ತಿತ್ತು.ಒಂದು ಲೋಹದ ಮೌಲ್ಯ ಕುಸಿದರೂ ಮತ್ತೊಂದು ಲೋಹದ ಮೌಲ್ಯಹೆಚ್ಚಾಗುತ್ತಿದ್ದುದ್ದರಿಂದ,ದ್ವಿಲೋಹ ಪ್ರಮಿತಿ ಸಹ ಸ್ವಯಂಚಾಲಿತವಾಗಿ ರಾಷ್ಟ್ರದ ಹಣದ ಮೌಲ್ಯವನ್ನು ದೃಢವಾಗಿ ಕಾಪಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿತ್ತು.ಆದರೆ ಮೇಲು ನೋಟಕ್ಕೆ ಕಾಣುವಷ್ಟು ಸರಳ ಸ್ವರೂಪವನ್ನು ದ್ವಿಲೋಹ ಪ್ರಮಿತಿ ಹೊಂದಿಲ್ಲವೆಂಬುದನ್ನು ಅನೇಕ ರಾಷ್ಟ್ರಗಳು ತಮ್ಮ ಅನುಭವದಿಂದಲೇ ಕಂಡುಕೊಂಡವು. ಅಂದರೆ ಈ ಪ್ರಮಿತಿಗೆ ಸಹ ಅನೇಕ ನ್ಯೂನತೆಗಳು ಇದ್ದುವು.

ಗ್ರೆಷಾಮ್ ನಿಯಮ ಅನೇಕ ರಾಷ್ಟ್ರಗಳು ಓಟ್ಟಿಗೇ ದ್ವಿಲೋಹ ಪ್ರಮಿತಿಯನ್ನು ಅನುಸರಿಸದಿದ್ದರೆ ದ್ವಿಲೋಹ ಪ್ರಮಿತಿ ಕೆಲಸ ಮಾಡುವುದು ಬಹಳ ಕಷ್ಟ.ಒಂದೇ ರಾಷ್ಟ್ರ,ಇದನ್ನು ಅನುಸರಿಸಿದ ಪಕ್ಷದಲ್ಲಿ ಗ್ರೆಷಾಮ್ ನಿಯಮ ಅನ್ವಯವಾಗುತ್ತದೆ. ಈ ನಿಯಮದ ಪ್ರಕಾರ ಒಂದು ಆರ್ಥಿಕತೆಯಲ್ಲಿ ಎರಡು ಲೋಹದ ನಾಣ್ಯಗಳು ಚಲಾವಣೆಯಲ್ಲಿದ್ದರೆ ಅಗ್ಗವಾದ ಹಣ ತುಟ್ಟ ಹಣವನ್ನು ಚಲಾವಣೆಯಿಂದ ಹೊರ ದಬ್ಬುತ್ತದೆ.

ಒಂದು ಉದಾಹರಣೆಯನ್ನು ಗಮನಿಸೋಣ.ಸರ್ಕಾರ ದ್ವಿಲೋಹ ಪ್ರಮಿತಿಯ ಆರ್ಥಿಕತೆಯಲ್ಲಿ ಎರಡು ಲೋಹ ನಾಣ್ಯಗಳ ಪರಿವರ್ತನೆಯ ದರವನ್ನು ೧:೧೫ಎಂದು ಗೊತ್ತುಮಾಡುತ್ತದೆಂದು ಭಾವಿಸೋಣ,ಇದನ್ನು ಟಂಕಸಾಲೆ ಪರಿವರ್ತನ ದರ ಎಂದು ಕರೆಯಲಾಗುತ್ತದೆ.ವಾಸ್ತವವಾಗಿ ಮಾರಿಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ನಡುವೆ ಟಂಕಸಾಲೆ ಪರಿವರ್ತನ ದರವೇ ಇರುತ್ತದೆಂದು ಹೇಳುವುದಕ್ಕಾಗುವುದಿಲ್ಲ.ಏಕೆಂದರೆ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಅವುಗಳ ಬೇಡಿಕೆ ಮತ್ತು ನೀಡಿಕೆಗಳಿಂದ ನಿಗದಿಯಾಗುತ್ತದೆ. ವಾಸ್ತವವಾಗಿ ಮಾರುಕಟ್ಟೆಯಲ್ಲಿ ಬೆಳ್ಳಿಯ ಸರಬರಾಜು ಹೆಚ್ಚಾಗಿದೆ,ಮತ್ತು ಚಿನ್ನದ ಸರಬರಾಜು ವಿರಳವಾಗಿದೆ ಎಂದು ಭಾವಿಸೋಣ.ಈ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಇವೆರಡರ ನಡುವೆ ೧:೧೭ರ ದರ ನಿಗದಿಯಾಗುತ್ತದೆ ಎಂದಿಟ್ಟುಕೊಳ್ಳೋಣ.ಸರ್ಕಾರ ಟಂಕಸಾಲೆ ದರವನ್ನು ಬದಲಾಯಿಸುವಂತಿಲ್ಲ.ಹೀಗಾದಾಗ ಸಟ್ಟಾವ್ಯಾಪಾರದಾರರು ಈ ದರಗಳ ವ್ಯತ್ಯಾಸದಿಂದ ಲಾಭವನ್ನು ಗಳಿಸುವುದು ಸಾಧ್ಯ.ಉದಾಹರಣೆಗೆ ಅವರು ಸರ್ಕಾರಕ್ಕೆ ೧೫ ಬೆಳ್ಳಿ ನಾಣ್ಯಗಳನ್ನು ಕೊಟ್ಟು ೧ ಚಿನ್ನದ ನಾಣ್ಯವನ್ನು ಪಡೆದುಕೊಳ್ಳುತ್ತಾರೆ. ಈ ಚಿನ್ನದ ನಾಣ್ಯವನ್ನು ಮಾರುಕಟ್ಟೆಯಲ್ಲಿ ೧೭ ಬೆಳ್ಳಿಯ ನಾಣ್ಯಗಳಿಗೆ ಪರಿವರ್ತಿಸಿಕೊಳ್ಳುತ್ತಾರೆ.ಈ ರೀತಿಯೆ ಪ್ರತಿಯೊಂದು ವ್ಯವಹಾರದಲ್ಲೂ ಅವರಿಗೆ ೨ ನಾಣ್ಯಗಳು ಲಾಭವಾಗಿ ದೊರೆಯುತ್ತದೆ.‍‍ಈಗ ಚಿನ್ನ ತುಟ್ಟಯಾದ ನಾಣ್ಯವಾಗುತ್ತ್ದೆ.ಬೆಳ್ಳಿ ಅಗ್ಗವಾದ ನಾಣ್ಯವಾಗುತ್ತದೆ.ಎಲ್ಲರೂ ಚಿನ್ನವನ್ನು ಸಂಗ್ರಹಿಸುವುದಕ್ಕೆ ತವಕಪಡುತ್ತಾರೆ.ಚಿನ್ನ ಚಲಾವಣೆಯಿಂದ ಮಾಯವಾಗಿಬಿಡುತ್ತದೆ.ಹೀಗೆ ವಾಸ್ತವತೆಯಲ್ಲಿ ದ್ವಿಲೋಹ ಪ್ರಮಿತಿ ಜಾರಿಯಲಿದ್ದರೂ ಏಕಲೋಹ ಪ್ರಮಿತಿ ರೂಢಿಗೆ ಬಂದು ಬಿಡುತ್ತದೆ.ಆದ್ದರಿಂದ ದ್ವಿಲೋಹ ಪ್ರಮಿತಿಯಲ್ಲಿರುವ ಅತ್ಯಂತ ಹೆಚ್ಚಿನ ತೊಡಕೆಂದರೆ ಎರಡು ಲೋಹಗಳ ಟಂಕಸಾಲೆ ದರ ಮತ್ತು ಮಾರುಕಟ್ಟೆ ದರಗಳ ನಡುವೆ ಸಮಾನತೆಯನ್ನು ಕಾಪಾಡುವುದು.ಆದರೆ ಒಂದು ಮುಕ್ತ ಅರ್ಥವ್ಯವಸ್ಥೆಯಲ್ಲಿ ಇವೆರಡರ ನಡುವೆ ಸಮಾನತೆಯನ್ನು ಕಾಪಾಡುವುದು ತುಂಬಾ ಕಷ್ಟದ ಕೆಲಸ.

ದ್ವಿಲೋಹ ಪ್ರಮಿತಿಗೆ ಮೇಲಿನ ನ್ಯೂನತೆಗಳಿದ್ದರೂ ೧೯ನೇ ಶತಮಾನದಲ್ಲಿ ಯೂರೋಪಿನ ಹಲವು ರಾಷ್ಟ್ರಗಳು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ಇದನ್ನು ತಮ್ಮ ಹಣ ಪ್ರಮಿತಿಯಾಗಿ ಆರಿಸಿಕೊಂಡಿದ್ದವು.ಫ್ರಾನ್ಸ್ ಇದನ್ನು ೧೮೦೩ರಿಂದ ೧೮೫೩ರ ವರೆಗೆ ಅನುಸರಿಸುತ್ತಿತ್ತು.೧೮೫೩ರಲ್ಲಿ ಫ್ರಾನ್ಸ್,ಸ್ವಿಡ್ಜರ್ ಲೆಂಡ್,ಬೆಲ್ಜಿಯಂ ಮತ್ತು ಇಟಲಿ ದ್ವಿಲೋಹ ಪ್ರಮಿಯನ್ನು ಒಟ್ಟಾಗಿ ಮತ್ತು ಯಶಸ್ವಿಯಾಗಿ ಅನುಸರಿಸುವ ದೃಷ್ಟಿಯಿಂದ ಒಂದು ಹಣ-ಕಾಸು ಒಕೂಟವನ್ನು ರಚಿಸಿಕೊಂಡವು.ಆದರೆ ಬೆಳ್ಳಿಯ ನೀಡಿಕೆ ಇದ್ದಕ್ಕಿದ್ದಂತೆ ಹೆಚ್ಚಾದುದರಿಂದ ಈ ರಾಷ್ಟ್ರಗಳಲ್ಲಿ ಗ್ರೆಷಾಮ್ ನಿಯಮ ಅನ್ವಯವಾಗುವುದಕ್ಕೆ ಪ್ರಾರಂಭವಾಯಿತು.ಚಿನ್ನದ ನಾಣ್ಯಗಳು ಚಲಾವಣೆಯಿಂದ ಮಾಯವಾಗಿ ಕೇವಲ ಬೆಳ್ಳಿಯ ನಾಣ್ಯಗಳು ಮಾತ್ರ ಈ ರಾಷ್ಟ್ರಗಳಲ್ಲಿ ಚಲಾವಣೆಯಾಗುವುದಕ್ಕೆ ಪ್ರಾರಂಭವಾದವು.ಆದ್ದರಿಂದ ಹಣ-ಕಾಸು ಒಕ್ಕೂಟ ಕುಸಿಯಲೇಬೇಕಾಯಿತು.೧೯ನೇ ಶತಮಾನದ ಕೊನೆಯ ಭಾಗದಲ್ಲಿ ಎರಡು ಹಣ-ಕಾಸು ಸಮ್ಮೇಳನಗಳು ಅಂತರ ರಾಷ್ಟ್ರೀಯ ಮಟ್ಟದಲ್ಲಿ ದ್ವಿಲೋಹ ಪ್ರಮಿತಿಯನ್ನು ಅನುಸರಿಸುವುದು ಉಚಿತವೆಂದು ಶಿಫಾರ್ಸು ಮಾಡಿದವು,ಆದರೆ ಸುವರ್ಣ ಪ್ರಮಿತಿಯ ಮೇಲಿದ್ದ ಬ್ರಿಟನ್ ಇದನ್ನು ತೀವ್ರವಾಗಿ ಪ್ರತಿಭಟಸಿತು.ಇದಕ್ಕಾಗಿ ಆ ಆಲೋಚನೆಯನ್ನು ಕೈಬಿಡಬೇಕಾಯಿತು. ನಂತರ ಇದು ಮತ್ತೆ ಜಾರಿಗೆ ಬರುವ ಸೂಚನೆಗಳೇ ಕಂಡುಬಂದಿಲ್ಲ.