ಸದಸ್ಯ:Manthan452/ನನ್ನ ಪ್ರಯೋಗಪುಟ

ಮಂಗಳೂರು (ತುಳು: ಕುಡ್ಲ; ಕೊಂಕಣಿ: ಕೊಡಿಯಾಲ್; ಬ್ಯಾರಿ: ಮೈಕಾಲ; ಆಂಗ್ಲ: ಮ್ಯಾಂಗಲೋರ್; ಮಲಯಾಳಂ: ಮಂಗಲಾಪುರಂ) ಕರ್ನಾಟಕದ ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ.

ಮಂಗಳೂರು

Map

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ನೇತ್ರಾವತಿ ಮತ್ತು ಗುರುಪುರ ನದಿಗಳಿಂದುಂಟಾದ ಹಿನ್ನೀರಿನತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ.

ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು ತುಳು, ಕೊಂಕಣಿ, ಕನ್ನಡ ಮತ್ತು ಬ್ಯಾರಿ ಭಾಷೆ. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಲ್ಯಾಟರೈಟ್ ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು ಜೇಡಿಮಣ್ಣಿನಿಂದ ತಯಾರಿತ ಮಂಗಳೂರು ಹಂಚುಗಳ ಮನೆಗಳು ಇಲ್ಲಿ ಸಾಮಾನ್ಯ.ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.

ಹೆಸರಿನ ಮೂಲ

ಸ್ಥಳೀಯ ಹಿಂದೂ ದೇವತೆಯಾದ ಮಂಗಳಾದೇವಿಯಿಂದ ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ನಾಥ್ಪಂಥದ ಮುಖ್ಯಪುರುಷ, ಪ್ರೇಮಲಾದೇವಿ ಎಂಬ ಕೇರಳದ ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ ಬೋಳಾರದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ ಅಲೂಪ ದೊರೆ ಕುಂದವರ್ಮನಿಂದ ಜೀರ್ಣೋದ್ಧಾರಕ್ಕೆ ಒಳಪಟ್ಟಿತು.

ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು ಪಾಂಡ್ಯ ರಾಜ ಚೆಟ್ಟಿಯನ್ ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ಮಂಗಲಾಪುರಂ ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ ಇಬ್ನ್ ಬತೂತ ಮಂಗಳೂರನ್ನು ಮಂಜರೂರ್ ಎಂದು ಉಲ್ಲೇಖಿಸಿದ್ದಾನೆ.ಕ್ರಿ.ಶ. ೧೫೨೬ರಲ್ಲಿ ಪೋರ್ಚುಗೀಸರು ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ಮ್ಯಾಂಗಲೋರ್ (ಇದು ಮಂಗಳೂರು ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು ಬ್ರಿಟಿಷರ ಕೈವಶವಾದಾಗ ಈ ಪೋರ್ಚುಗೀಸ್ ಹೆಸರು ಆಂಗ್ಲ ಭಾಷೆಯಲ್ಲಿ ಮಿಳಿತಗೊಂಡಿತು.

ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ ತುಳುವರು ಮಾತನಾಡುವ ತುಳು ಭಾಷೆಯಲ್ಲಿ ಮಂಗಳೂರಿಗೆ ಕುಡ್ಲ ಎಂಬ ಹೆಸರಿದೆ. ಕುಡ್ಲ ಎಂದರೆ ಸಂಗಮ ಎಂದರ್ಥ. ನೇತ್ರಾವತಿ ಮತ್ತು ಫಾಲ್ಗುಣಿ ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ಕೊಡಿಯಾಲ್ ಎನ್ನುತ್ತಾರೆ. ಸ್ಥಳೀಯ ಬ್ಯಾರಿ ಸಮುದಾಯದವರು ಬ್ಯಾರಿ ಭಾಷೆಯಲ್ಲಿ ಮಂಗಳೂರನ್ನು ಮೈಕಾಲ ಎಂದು ಕರೆಯುತ್ತಾರೆ. ಮೈಕಾಲಎಂದರೆ ಇದ್ದಿಲು ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು ಮಂಗಲಾಪುರಂ ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು ಮ್ಯಾಂಗಲೋರ್ ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ.

ಇತಿಹಾಸ

ಮಹರ್ಷಿ ಶ್ರೀ ಪರಶುರಾಮನು

ಹಿಂದೂ ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು ಪರಶುರಾಮ ಸೃಷ್ಟಿಯ ಒಂದು ಭಾಗವಾಗಿತ್ತು. ಮಹರ್ಷಿ ಶ್ರೀ ಪರಶುರಾಮನು ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ ಪಯಸ್ವಿನಿ ನದಿ ಹಾಗೂ ಉತ್ತರದಲ್ಲಿ ಗೋಕರ್ಣಗಳ ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, ರಾಮಾಯಣದ ಸಮಯದಲ್ಲಿ ಶ್ರೀ ರಾಮನು ತುಳುನಾಡಿನ ರಾಜನಾಗಿದ್ದನು. ಮಹಾಭಾರತದ ಕಾಲದಲ್ಲಿ ಪಾಂಡವರಲ್ಲಿ ಕಿರಿಯವನಾದ ಸಹದೇವನು ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ ಬನವಾಸಿಯಲ್ಲಿ ವಾಸವಾಗಿದ್ದ ಪಾಂಡವರು, ಮಂಗಳೂರಿನ ಸಮೀಪದ ಸರಪಾಡಿಗೆ ಭೇಟಿಕೊಟ್ಟಿದ್ದರು. ಪಾರ್ಥಸಾರಥಿ ಅರ್ಜುನನು ಗೋಕರ್ಣದಿಂದ ಕಾಸರಗೋಡು ಸಮೀಪದ ಅಡೂರಿಗೆ ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ ಕಣ್ವ, ವ್ಯಾಸ, ವಶಿಷ್ಠ, ವಿಶ್ವಾಮಿತ್ರರು ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು.

ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. ಗ್ರೀಕ್ ಸಂತ ಕೋಸ್ಮಸ್ ಇಂಡಿಕೊಪ್ಲೆಸ್ಟಸ್ ಮಂಗಳೂರು ಬಂದರನ್ನು ಮ್ಯಾಂಗರೌತ್ ಬಂದರು ಎಂದು ಉಲ್ಲೇಖಿಸಿದ್ದಾನೆ. ಪ್ಲೈನಿ ಎಂಬ ರೋಮನ್ ಇತಿಹಾಸಜ್ಞ ನಿತ್ರಿಯಾಸ್ ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ ಗ್ರೀಕ್ಇತಿಹಾಸಕಾರ ಟಾಲೆಮಿಯು ನಿತ್ರೆ ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ ನೇತ್ರಾವತಿ ನದಿಯ ಬಗ್ಗೆ ಆಗಿರಬಹುದು. ಟಾಲೆಮಿಯು ತನ್ನ ರಚನೆಗಳಲ್ಲಿ ಮಂಗಳೂರನ್ನು ಮಗನೂರ್ ಎಂದೂ ಉಲ್ಲೇಖಿಸಿದ್ದಾನೆ. ರೋಮನ್ ಲೇಖಕ ಏರಿಯನ್ ಮಂಗಳೂರನ್ನು ಮ್ಯಾಂಡಗೊರಾ ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ಮಂಗಳಾಪುರ ಎಂದು ಉಲ್ಲೇಖಿಸಿದೆ.

ಕದಂಬರು
ಹೊಯ್ಸಳ

ಕ್ರಿ. ಶ. ೨೦೦ರಿಂದ ೬೦೦ರವರೆಗೆ ಕದಂಬರು ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು ಅಲೂಪರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ ಆಡೆನ್ನ ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು ಪರ್ಷಿಯಾ ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಮೊರಾಕ್ಕೊದ ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ಮಂಜುರನ್' ಅಥವಾ ಮಡ್ಜೌರ್ ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು ಪರ್ಷಿಯಾ ಹಾಗೂ ಯೆಮೆನ್ನ ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ ರಾಯಭಾರಿ ವಿಜಯನಗರಕ್ಕೆ ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. ಮೂಡುಬಿದಿರೆಯಲ್ಲಿರುವ ಶಾಸನಗಳು , ವಿಜಯನಗರ ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು ವಿಜಯನಗರದ ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. ಪೋರ್ಚುಗೀಸರಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರು ಪ್ರಮುಖರು.

ಭೂಗೋಳ ಮತ್ತು ಹವಾಮಾನ

ಮಂಗಳೂರು 12.87° N 74.88° E ಅಕ್ಷಾಂಶ, ರೇಖಾಂಶವನ್ನು ಹೊಂದಿದ್ದು, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.ಇದು ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, ಕರ್ನಾಟಕದ ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಭಾರತ ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.

ನೇತ್ರಾವತಿನದಿ

ಮಂಗಳೂರು ನಗರವು ನೇತ್ರಾವತಿ ಮತ್ತು ಗುರುಪುರ ನದಿಗಳಿಂದುಂಟಾದ ಹಿನ್ನೀರಿನ ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ ಅಳಿವೆಯನ್ನು ಸೃಷ್ಟಿಸಿ ಅರಬ್ಬೀ ಸಮುದ್ರವನ್ನು ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. ಭಾರತದ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ.

ಮಂಗಳೂರು ಉಷ್ಣವಲಯದ ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. ತೇವಾಂಶವು ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್ ವಲಯಕ್ಕೆ ಸೇರುವ ಈ ನಗರವು ಅರಬ್ಬೀ ಸಮುದ್ರ ಶಾಖೆಯ ನೈಋತ್ಯ ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ.

ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ ಬೇಸಿಗೆಕಾಲ. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ ಮಳೆಗಾಲವು ಆರಂಭವಾಗುತ್ತದೆ. ಭಾರತದ ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ. ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ.

ಜನಸಂಖ್ಯೆ

೨೦೧೧ರ ಭಾರತದ ಜನಗಣತಿಯ ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು.ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ.'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು ಭಾರತದ ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ. ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ. ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.

ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, ಕನ್ನಡ, ಹಿಂದಿ, ಆಂಗ್ಲ ಮತ್ತು ಉರ್ದು ಭಾಷೆಗಳೂ ಬಳಕೆಯಲ್ಲಿವೆ. ಕನ್ನಡ ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು ಹಿಂದೂ ಧರ್ಮೀಯರನ್ನು ಒಳಗೊಂಡಿದೆ. ಮೊಗವೀರರು, ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, ಸ್ಥಾನಿಕ ಬ್ರಾಹ್ಮಣರು, ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ ಕೊಂಕಣಿ ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ ಬ್ಯಾರಿ ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ.

ಸಂಸ್ಕೃತಿ

ಮಂಗಳೂರಿನ ನಿವಾಸಿಯೊಬ್ಬರನ್ನು ತುಳುವಿನಲ್ಲಿ ಕುಡ್ಲದಾರ್ ಎಂದೂ, ಕನ್ನಡದಲ್ಲಿ ಮಂಗಳೂರಿನವರು ಎಂದೂ, ಕಾಥೋಲಿಕ್ ಕೊಂಕಣಿಯಲ್ಲಿ ಕೊಡಿಯಾಲ್ ಘರಾನೊ ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ಕೊಡಿಯಾಲ್ಚಿ ಅಥವಾ ಮಂಗ್ಳೂರ್ಚಿ ಎಂದೂ ಆಂಗ್ಲದಲ್ಲಿ ಮ್ಯಾಂಗಲೋರಿಯನ್ ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ಶ್ರೀಮಂತಿ ಬಾಯಿ ಮ್ಯೂಸಿಯಮ್ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ. ಮಣ್ಣಗುಡ್ಡದ ಸಮೀಪವಿರುವ ಬಿಬ್ಲಿಯೋಫೈಲ್ಸ್ ಪಾರಡೈಸ್ ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. ಯಕ್ಷಗಾನವು ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.ದಸರಾ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ನಡೆಯುವ ಹುಲಿವೇಶವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.ಇದರಂತೆಯೇ ಕರಡಿವೇಶವೂ ದಸರಾಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.ಭೂತಕೋಲ ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ ಕಂಬಳವು ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ. ಕೋರಿಕಟ್ಟ (ಕೋಳಿ ಅಂಕ) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ ನಾಗಾರಾಧನೆಯೂ ಇಲ್ಲಿ ಪ್ರಚಲಿತದಲ್ಲಿದೆ.

ಪಾಡ್ದನಗಳು ವೇಷಧಾರಿ ಸಮುದಾಯದವರಿಂದ ತುಳುವಿನಲ್ಲಿ ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ಕೋಲ್ಕೈ (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ಉಂಜಲ್ ಪಾಟ್(ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ಮೊಯ್ಲಾಂಜಿ ಪಾಟ್, ಒಪ್ಪುನೆ ಪಾಟ್(ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ ಬ್ಯಾರಿ ಹಾಡುಗಳು.

ದಸರಾ

ದಸರಾ, ದೀಪಾವಳಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಕ್ರಿಸ್ ಮಸ್, ಮಹಾ ಶಿವರಾತ್ರಿ, ಈಸ್ಟರ್, ನವರಾತ್ರಿ, ಗುಡ್ ಫ್ರೈಡೆ, ಈದ್, ಮೊಹರಂ ಹಾಗೂ ಮಹಾವೀರ ಜಯಂತಿ ಇಲ್ಲಿನ ಜನಪ್ರಿಯ ಹಬ್ಬಗಳು. ಗಣೇಶ ಚತುರ್ಥಿ ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ ಗಣಪತಿ ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಕೊಡಿಯಾಲ್ ತೇರ್ ಅಥವಾ ಮಂಗಳೂರು ರಥೋತ್ಸವ ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.ಮೋಂಟಿ ಫೆಸ್ಟ್ ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು. ಜೈನ್ ಮಿಲನ್ ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ನಡೆಯುವ ಮೊಸರು ಕುಡಿಕೆ ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ಆಟಿ ಪರ್ಬ(ಆಟಿ ಹಬ್ಬ)ವನ್ನು ಇಲ್ಲಿ ಕಳಂಜ ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ಕಳಂಜನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ಕರಾವಳಿ ಉತ್ಸವ ಹಾಗೂ ಕುಡ್ಲೋತ್ಸವಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ ತುಳು ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು.

ಶಿಕ್ಷಣ ಹಾಗೂ ಕ್ರೀಡೆ

ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಕನ್ನಡವಾಗಿದ್ದು, ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು ಆಂಗ್ಲ ಅಥವಾ ಕನ್ನಡ ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಆಂಗ್ಲವು ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, ಕನ್ನಡವನ್ನು ಲಿಪಿಯಾಗಿ ಬಳಸುವ ತುಳು ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.

ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' ಭಾರತದ ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ,"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ,"ಕೆನರಾ ಕಾಲೇಜು, ಸಂತ ಅಲೋಶಿಯಸ್ ಕಾಲೇಜುಹಾಗೂ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜುಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ ಮಂಗಳೂರು ವಿಶ್ವವಿದ್ಯಾನಿಲಯವು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.