ಅದಿನಾಥ ಸ್ವಾಮಿ ಬಸದಿ ಅಳಿಯೂರು

(ಸದಸ್ಯ:Chandanas608/ನನ್ನ ಪ್ರಯೋಗಪುಟ5 ಇಂದ ಪುನರ್ನಿರ್ದೇಶಿತ)

ಅಳಿಯೂರು ಶ್ರೀ ಆದಿನಾಥ ಸ್ವಾಮಿ ಬಸದಿಯು ಕರ್ನಾಟಕ ಜೈನ ಬಸದಿಗಳಲ್ಲಿ ಒಂದಾಗಿದೆ.

ಬಸದಿಯು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲೂಕು ನೆಲ್ಲಿಕಾರು ಗ್ರಾಮದ ಅಳಿಯೂರು ಎಂಬ ಊರಿನಲ್ಲಿದೆ. ಇಲ್ಲಿ ಪೂಜಿಸಲ್ಪಡುವ ಮೂಲನಾಯಕ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯ ಹತ್ತಿರ ಸರಕಾರಿ ಪ್ರೌಢ ಶಾಲೆ ಇದೆ. ಎಡ ಬದಿದಲ್ಲಿ ಗುರುಗಳ ಪಾದಯಿದೆ. ಎದುರು ಭಾಗದಲ್ಲಿ ಸುಮಾರು ೨ ಕಿ. ಮೀ. ದೂರದಲ್ಲಿ ಬೆಟ್ಟದ ಮೇಲೆ ಚಾರಣ ಮುನಿಗಳ ಪಾದಗಳಿವೆ. ವರ್ಷಕೊಮ್ಮೆ ಇಲ್ಲಿ ಪೂಜೆ ನಡೆಯುತ್ತದೆ. ಬಸದಿಗೆ ಹತ್ತಿರದಲ್ಲಿರುವ ಇನ್ನೊಂದು ಬಸದಿ ವಾಲ್ಪಾಡಿ ಬಸದಿ. ಅದು ಸುಮರು ೪ ಕಿ. ಮೀ. ದೂರದಲ್ಲಿದೆ. ಬಸದಿಗೆ ಬರುವ ೭೦ ಜೈನ ಕುಟುಂಬಗಳಿವೆ. ಬಸದಿಯು ಕಾರ್ಕಳ ಶ್ರೀ ಜೈನ ಮಠಕ್ಕೆ ಸೇರಿದೆ. ಕಾರ್ಕಳ ಗುರುವಾಯನಕೆರೆ ರಸ್ತೆಯಲ್ಲಿ ಹೊಸ್ಮಾರಿನಿಂದ ಮೂಡುಬಿದಿರೆ ರಸ್ತೆಯಲ್ಲಿ ಹೊಸ್ಮಾರಿನಿಂದ ೫ ಕಿ. ಮೀ. ದೂರದಲ್ಲಿದೆ.[]

ಇತಿಹಾಸ

ಬದಲಾಯಿಸಿ

ಈ ಬಸದಿಯನ್ನು ಕೇಸಣ್ಣ - ಬಸವಣ್ಣ, ತಮ್ಮರಸರೆಂಬ ಹಾಸನದ ದಾನಿಗಳು ಸುಮಾರು ೧೨೦೦ ವರ್ಷಗಳ ಹಿಂದೆ ಕಟ್ಟಿಸಿದರಂತೆ.

ಹಿನ್ನಲೆ

ಬದಲಾಯಿಸಿ

ಕೇಸಣ್ಣ - ಬಸವಣ್ಣ, ತಮ್ಮರಸರೆಂಬ ಹಾಸನದ ವ್ಯಾಪಾರಿಗಳು ಎತ್ತುಗಳ ಮೇಲೆ ಹೇರು ಹಾಕಿಕೊಂಡು ಈ ದಾರಿಯಾಗಿ ಹೋಗುವಾಗ ಕಾಡಿನ ನಡುವೆ ನೆಲ್ಲಿಮರದಡಿಯಲ್ಲಿ ಹುಲಿಯೂ - ದನವೂ ಆಟವಡುತ್ತಿದ್ದುದ್ದನ್ನು ಕಂಡರು. ಆಮೇಲೆ ಇಲ್ಲಿ ಅವರಿಗೆ ನೆಲ್ಲಿಮರದಡಿಯಲ್ಲಿ ಶ್ರೀ ಚಂದ್ರನಾಥ ಸ್ವಾಮಿ, ಶ್ಯಾಮಯಕ್ಷ, ಜ್ವಾಲಮಾಲಿನಿ, ಯಕ್ಷಿಯರ ಕಲ್ಲಿನ ಮೂರ್ತಿ ಸಿಗಲಾಗಿ, ಆ ದೇವರನ್ನು ಪ್ರತಿಷ್ಠಾಪಿಸಿದರೆಂದು ದೇವರ ಪೂಜೆಯ ಪ್ರಶಸ್ತಿಯಲ್ಲಿ ಹೇಳಲಾಗುತ್ತಿದೆ.

ಬಸದಿಗೆ ನೆಲೆಯಿದ್ದು, ಶ್ರೀ ಚಂದ್ರನಾಥ ಸ್ವಾಮಿಯ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಪೂಜೆ ನಡೆಯುತ್ತದೆ. ಬಸದಿಯಲ್ಲಿ ಇತರ ತೀರ್ಥಂಕಕರ ಮೂರ್ತಿಗಳು, ಬ್ರಹ್ಮ, ಮಾತೆ ಪದ್ಮಾವತೀ ದೇವಿಯ ಮೂರ್ತಿಯಿದ್ದು ಪೂಜೆ ನಡೆಯುತ್ತಿದೆ. ಈ ದೇವಿಗೆ ಸೀರೆ ಉಡಿಸಿ, ಬಳೆಗಳನ್ನು ಹಾಕಿ ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತಿದೆ. ಪ್ರಾಂಗಣದಲ್ಲಿ ಶ್ರೀ ಕ್ಷೇತ್ರಪಾಲರ ಶಿಲಾಮೂರ್ತಿಗಳಿವೆ. ತೀರ್ಥಂಕರರ ಮಂಟಪದಲ್ಲಿ ಗಣಧರ ಪಾದ, ಶ್ರುತ, ದೇವರು ಇತ್ಯಾದಿ ಮೂರ್ತಿಗಳು ಇದ್ದು, ಪೂಜೆ ನಡೆಯುತ್ತಿದೆ.

ಪ್ರಾಂಗಣ

ಬದಲಾಯಿಸಿ

ಬಸದಿಯ ಅಂಗಳದಲ್ಲಿ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಚೆಲುವಾದ ಕ್ಷೇತ್ರಪಾಲನ ಮೂರ್ತಿಯಿದೆ. ತ್ರಿಶೂಲ, ನಾಗರಕಲ್ಲು ಜೊತೆಗಿವೆ. ಇವೆಲ್ಲವನ್ನು ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಕ್ಷೇತ್ರದ ಬಳಿಯಲ್ಲಿಯೆ ಈ ಹಿಂದೆ ತಪಸ್ಸು ಮಾಡುತಿದ್ದ ಚಾರಣಮುನಿಗಳ ಕಲ್ಲಿನಲ್ಲಿ ಕೆತ್ತಿಸಿದ ಪಾದಗಳಿವೆ, ಸಮೀಪದಲ್ಲಿ ಬಲ್ಲಿಕಲ್ಲುಗಳು, ಅಷ್ಟದಿಕ್ಷಾಲಕರ ಕಲ್ಲುಗಳು ಇವೆ. ಬಸದಿಯನ್ನು ಪ್ರವೇಶಿಸುವಾಗ ಬಲಭಾಗದ ಕೋಣೆಯಲ್ಲಿ ಕಚೇರಿಯೂ, ಎಡಭಾಗದ ಕೋಣೆಯಲ್ಲಿ ಕಾರಣಿಕ ಕಲ್ಕುಡ ದೈವದ ಮಂಚವು ಇರುತ್ತವೆ. ಪ್ರಾರ್ಥನಾ ಮಂಟಪಕ್ಕೆ ಹತ್ತುದಲ್ಲಿ ಗೋಡೆಗಳಲ್ಲಿ ದ್ವಾರಪಾಲಕರ ಚಿತ್ರಗಳಿವೆ, ಉಳಿದೆರಡು ಗೋಡೆಗಳಲ್ಲಿ ತೀರ್ಥಂಕರರ ಪಂಚಕಲ್ಯಾಣಕ್ಕೆ ಸಂಬಂಧಪಟ್ಟ ಚಿತ್ರಗಳಿವೆ. ಪ್ರಾರ್ಥನಾ ಮಂಟಪದಿಂದ ಮುಂದುವರಿದರೆ ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ತೀರ್ಥಮಂಟಪ ಸಿಗುತ್ತದೆ. ಗಂಧಕುಟಿಯು, ಇದಕ್ಕೆ ಮುಂದೆ ಇರುವ ಇನ್ನೊಂದು ಮಂಟಪದಲ್ಲಿದೆ. ಚಾರಣ ಮುನಿಗಳ ಕಲ್ಲಿನಲ್ಲಿ ರಚಿಸಿದ ಪಾದಗಳಿವೆ. ಪದ್ಮಾವತೀ ಅಮ್ಮನವರ ಮೂರ್ತಿ ಪೂರ್ವಕ್ಕೆ ಮುಖ ಮಾಡಿಕೊಂಡಿದೆ. ಕಾಲಿನ ಬಳಿ ಕುಕ್ಕುಟೋರಗ ಇದೆ. ಬಸದಿಯ ಸುತ್ತಲೂ ಮುರುಕಲ್ಲಿನಿಂದ ಕಟ್ಟಲ್ಪಟ್ಟ ಪ್ರಕಾರದ ಗೋಡೆಯಿದೆ. ಬಸದಿಗೆ ಆಫೀಸು ಇದೆ. ಬಸದಿಗೆ ಸಂಬಂಧಿಸಿದ ಸಣ್ಣ ಮಟ್ಟದ ಸಭಾಭವನ, ಆಟದ ಹಾಲ್ ಇದೆ.

ವಿಶೇಷತೆ

ಬದಲಾಯಿಸಿ

ಗರ್ಭಗುಡಿಯ ಸ್ವಾಮಿಯ ಪ್ರಭಾವಳಿಯಲ್ಲಿ “ಈ ಪ್ರಭಾವಳಿಯನ್ನು ೧೮೦೧ ರಲ್ಲಿ ಭಗವಂತನಿಗೆ ಅರ್ಪಿಸಲಾಯಿತು” ಎಂಬ ಬರಹವಿದೆ. ಅಂತೆಯೇ ಇತರ ಚಿಕ್ಕ ಪಂಚಲೋಹದ ಬಿಂಬಗಳ ಪೀಠಗಳಲ್ಲಿಯೂ ಬರಹವಿದೆ. ಆದರೆ ಓದಲು ಬಹಳ ಕಷ್ಟವಿದೆ.

ಪೂಜಾ ವಿಧಾನ

ಬದಲಾಯಿಸಿ

ಮೂಲನಾಯಕ ಭಗವಾನ್ ಆದಿನಾಥ ಸ್ವಾಮಿಯ ಮೂರ್ತಿ ಕಪ್ಪು ಶಿಲೆಯದ್ದಾಗಿದ್ದು, ಸಾಧಾರಣ ೩೦ ಇಂಚು ಎತ್ತರವಿದೆ. ಖಡ್ಗಾಸನ ಭಂಗಿಯಲ್ಲಿದೆ. ಸುತ್ತಲೂ ಮಕರ ತೋರಣದ ಪ್ರಭಾವಲಯವಿದೆ. ದಿನವೂ ಸ್ವಾಮಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಜಲಾಭಿಷೇಕ ನಡೆಸಲಾಗುತ್ತದೆ. ಇತರ ಸಮಯಗಳಲ್ಲಿ ಸಹಸ್ರನಾಮ ಗಂಧಾರ್ಚನೆ, ಆರಾಧನೆಗಳು ನಡೆಯುತ್ತವೆ, ಶ್ರಾವಣ ಶುಕ್ರವಾರ, ನೋಂಪಿಗಳು, ನೂಲಶ್ರಾವಣ, ದಶಲಕ್ಷಣ ಪೂಜೆ, ವಾರ್ಷಿಕೋತ್ಸವ, ಮಹಾವೀರ ಜಯಂತಿ, ದೀಪಾವಳಿ, ಇತ್ಯಾದಿ ಕಾರ್ಯಕ್ರಗಳು ನಡೆಯುತ್ತಿರುತ್ತವೆ, ಇಲ್ಲಿನ ಬ್ರಹ್ಮದೇವರಿಗೆ, ಪದ್ಮಾವತೀ ಅಮ್ಮನವರಿಗೆ ವಿಶೇಷ ಹರಕೆಗಳನ್ನು ಹೇಳಿ ಕೃತಾರ್ಥರಾದವರು ಅನೇಕರಿದ್ದಾರೆ. ಬಸದಿಯಲ್ಲಿ ತ್ರಿಕಾಲದಲ್ಲಿಯೂ ಪೂಜೆ ನಡೆಯುತ್ತದೆ. ಬಸದಿಯಲ್ಲಿ ಆಚರಿಸುವ ವಿಶೇಷ ಪೂಜೆಗಳು ಹೀಗಿವೆ- ನೂಲಶ್ರಾವಣ, ನಾಗರ ಪಂಚಮಿ ನೋಂಪಿ, ಅನಂತ ನೋಂಪಿ, ಶ್ರಾವಣ ಶುಕ್ರವಾರಗಳಲ್ಲಿ ವಿಶೇಷ ಪೂಜೆ ಮತ್ತು ಸಂಘ ಸಂತರ್ಪಣೆ, ನವರಾತ್ರಿಯಲ್ಲಿ ವಿಶೇಷ ಪೂಜೆ, ದೀಪಾವಳಿಯಂದು ಸಾಮೂಹಿಕ ಅಘ್ರ್ಯ ಪ್ರದಾನ, ಬಸದಿಯ ವಾರ್ಷಿಕೋತ್ಸವ, ಮಹಾವೀರ ಜಯಂತಿ ಮತ್ತು ನಿರ್ವಾಣೋತ್ಸವ, ಯುಗಾದಿ ಆಚರಣೆ, ಶ್ರಾವಣ ಶುಕ್ರವಾರಗಳಲ್ಲಿ ವಿಶೇಷಪೂಜೆ, ಸಹಸ್ರನಾಮ, ಕುಂಕುಮಾರ್ಚನೆ, ಗಂಧಾರ್ಚನೆ, ಆರಾಧನೆಗಳಿರುತ್ತದೆ. ಮಧ್ಯಾಹ್ನ ಸಂಘ ಸಂತರ್ಪಣೆಯೂ ಇರುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರ: ಮಂಜುಶೀ ಪ್ರಿಂಟರ್ಸ್. p. ೨೯೯.