ಶ್ರೀ ಪಾರ್ಶ್ವನಾಥ ಸ್ವಾಮಿ ಜಿನಮಂದಿರ, ಸಿರ್ಸಿ

ಸ್ಥಳ ಬದಲಾಯಿಸಿ

ಇದು ಸಿರ್ಸಿ ಉಪವಿಭಾಗದ ಕೇಂದ್ರಸ್ಥಾನ.ಶ್ರೀ ಮಾರಿಕಾಂಬಾ ದೇವಾಲಯವು ಇಲ್ಲಿಯ ಪ್ರಮುಖ ಶ್ರದ್ಧಾಕೇಂದ, ಅದರಂತೆ ಇಲ್ಲಿಯ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯು ಬಹು ಪ್ರಸಿದ್ದವಾದುದು. ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನಮಂದಿರವು ಸಿರ್ಸಿ ಪೇಟೆಯ ಬಸದಿಗಳಿಯ ಮುಖ್ಯ ರಸ್ತೆಯ ಪಕ್ಕದಲ್ಲಿದೆ.ಈ ಪೇಟೆಯು ತಾಲೂಕು ಕೇಂದ್ರವಾಗಿರುವುದರಿಂದ ಅನೇಕ ಜೈನ ಕುಟುಂಬಗಳು ಈ ಬಸದಿಗೆ ಆಗಾಗ ಭೇಟಿನೀಡುತ್ತವೆ. ವಿಶೇಷ ಹಬ್ಬಗಳಂದು ಹಾಗೂ ಶುಕ್ರವಾರದಂದು ಹೆಚ್ಚು ಸಂಖ್ಯೆಯಲ್ಲಿ ಶ್ರಾವಕರು ಇಲ್ಲಿಗೆ ಆಗಮಿಸಿ, ಅಭಿಷೇಕ ಪೂಜಾದಿಗಳನ್ನು ನಡೆಸಿಕೊಂಡು ಹೋಗುತ್ತಾರೆ. ಇದು ಸ್ವಾದಿ ಜೈನ ಮಠಕ್ಕೆ ಸೇರಿದುದಾಗಿದೆ. ಗರ್ಭಗುಡಿಯು ಶಿಲಾಮಯವಾಗಿದ್ದು ನವರಂಗ ಹಂಚಿನ ಮಾಡನ್ನು ಹೊಂದಿದೆ. ಬಸದಿಯ ಮುಂಭಾಗದಲ್ಲಿ ಚಂದ್ರಶಾಲೆಯಿದೆ.

ಇತಿಹಾಸ ಬದಲಾಯಿಸಿ

ಬಸದಿಯನ್ನು ಈಗ ಆಲೂರ್ ಜೈನ ಕುಟುಂಬದವರು ನಡೆಸುತ್ತಿದ್ದಾರೆ.ಆಲರು ಕುಟುಂಬದ ಸದಸ್ಯರೇ ಪೂಜಾದಿಗಳನ್ನು ನಡೆಸುತ್ತಿದ್ದಾರೆ, ಈ ಕುಟುಂಬದ ಹಿಂದಿನ ಹಿರಿಯರಾದ ಶ್ರೀ ಪದ್ಮಪ್ಪ ಹೊಂಬಣ್ಣ ಆಲೂರ್ರವರು ಸುಮಾರು ಇನ್ನೂರು ವರ್ಷಗಳ ಹಿಂದೆ ಇದನ್ನು ನಿರ್ಮಿಸಿದ್ದರು, ಆ ಬಳಿಕ ಇತ್ತೀಚೆಗೆ 2010ನೇ ಇಸವಿಯಲ್ಲಿ ಇದರ ಮುಂಭಾಗ ಜೀರ್ಣೋದ್ದಾರವಾಗಿದೆ. ಇದರ ಬಗ್ಗೆ ಕರ್ನಾಟಕದ ಗಝಟಿಯರ್ನಲ್ಲಿ ಉಲ್ಲೇಖವಿದೆ. ಇದರ ಮೂಲ ನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿಯ ಬಿಂಬವನ್ನು ದ.ಕ. ಜಿಲ್ಲೆಯ ಕಾರ್ಕಳದ ಕಪ್ಪುಶಿಲೆಯಿಂದ ತಯಾರಿಸಲಾಗಿದೆ ಎಂದು ಇತಿಹಾಸಕಾರ ಡಾ ॥ ಸೂರ್ಯನಾಥ ಕಾಮತ್ರವರು ಗಝಟಿಯರ್ ತಿಳಿಸಿದ್ದಾರೆ.ಇದು ಸುಮಾರು ಎರಡು ಅಡಿ ಎತ್ತರವಿದ್ದು ಪದ್ಮಾಸನ ಭಂಗಿಯಲ್ಲಿದೆ. ಸುತ್ತಲಿನ ಪ್ರಭಾವಳಿಯಲ್ಲಿ ಹೂಗಳ ಚಿತ್ರಣವಿದೆ.[೧]

ಶಿಲಾ ವಿನ್ಯಸ ಬದಲಾಯಿಸಿ

ಈ ಬಸದಿಯಲ್ಲಿ ಚೌವೀಸ ತೀರ್ಥಂಕರರ ಬಿಂಬಗಳಿರುವ ಪ್ರಭಾವಳಿಯನ್ನು ಹೊಂದಿರುವ ಶ್ರೀ ಆದಿನಾಥ ತೀರ್ಥಂಕರರ ಇನ್ನೊಂದು ಬಿಂಬವಿದೆ.ಸುಮಾರು 6 ಇಂಚು ಎತ್ತರದ ಶ್ರೀ ಪದ್ಮಾವತಿ ಅಮ್ಮನವರ ಇನ್ನೊಂದು ಪಂಚಲೋಹದ ವಿಗ್ರಹವಿದೆ.3,ಅಡಿ ಎತ್ತರದ ದೇವರನ್ನು ಒಳಗೊಂಡಿರುವ ಕ್ಷೇತ್ರಪಾಲನ ಸನ್ನಿಧಿಯು ಬಸದಿಯ ಹೊರಗಡೆ ಬಲಭಾಗದಲ್ಲಿದೆ.ಜತೆಯಲ್ಲಿ ಭೈರವ ಕ್ಷೇತ್ರಪಾಲ ಮತ್ತು ನಾಗರ ಶಿಲ್ಪಗಳಿವೆ.ಈ ಶಿಲಾಮೂರ್ತಿಗೆ ದಿನವಹಿ ಪೂಜೆ ಸಲ್ಲಿಸಲಾಗುತ್ತಿದೆ.ಈ ಬಸದಿಗೆ ಮಾನಸ೦ಭವಿಲ್ಲ.ಕೇತ್ರಪಾಲನ ಹಿಂದುಗಡೆ ದೊಡ್ಡದಾದ ಪಾರಿಜಾತ ಹೂವಿನ ಗಿಡವಿದೆ.ಅಂಗಳದಲ್ಲಿ ಗುಲಾಬಿ,ನಂದಿಬಟ್ಟಲು ಮುಂತಾದ ಹೂವಿನ ಗಿಡಗಳಿವೆ. ಬಸದಿಯ ಅಂಗಳದಿಂದ ಮೆಟ್ಟಲುಗಳ ಮೂಲಕ ಮೇಲೇರುವ ದ್ವಾರದ ಎರಡೂ ಬದಿಗಳಲ್ಲಿ ದ್ವಾರಪಾಲಕರ ಶಿಲಾ ಮೂರ್ತಿಗಳಿವೆ.ಮುಂದುವರೆದು ಹೋಗುವಾಗ ಸಿಗುವ ಪ್ರಾರ್ಥನಾ ಮಂಟಪದಲ್ಲಿ ಜಯಘಂಟೆ,ಜಾಗಟೆಗಳನ್ನು ತೂಗಿ ಹಾಕಲಾಗಿದೆ.ಇಲ್ಲಿ ಮೇಲ್ಗಡೆಯ ಮರದ ಮುಚ್ಚುಗೆಯ ನಾಲ್ಕೂ ಮೂಲೆಗಳಲ್ಲಿ ಅಧೋಮುಖ ಕಮಲ ಇದೆ.ಇಲ್ಲಿಂದ ಮುಂದುವರೆದು ಗರ್ಭಗೃಹದ ಕಡೆಗೆ ಹೋಗುವಾಗ ಶುಕನಾಸಿ ಸಿಗುತ್ತದೆ.ಇಲ್ಲಿರುವ ಗಂಧ ಕುಟಿಯ ಬಳಿಯಲ್ಲಿ ಶ್ರುತದೇವಿ,ನವದೇವತಾ ಬಿಂಬ,ಚೌವೀಸ ತೀರ್ಥಂಕರರ ಪ್ರಭಾವಳಿ ಇತ್ಯಾದಿಗಳನ್ನು ಕಾಣಬಹುದು.

ಪೂಜೆ ವಿಧಾನ ಬದಲಾಯಿಸಿ

ಇವೆಲ್ಲದಕ್ಕೂ ದಿನನಿತ್ಯ ಪೂಜೆ ನಡೆಯುತ್ತದೆ.ಇಲ್ಲಿ ಮಾತೆ ಪದ್ಮಾವತಿ ದೇವಿಯ ಸನ್ನಿಧಾನವಿದ್ದು ಅದಕ್ಕೆ ಶುಕ್ರವಾರ ವಿಶೇಷಪೂಜೆ ನಡೆಯುತ್ತದೆ.ಅಮ್ಮನವರ ಮೂರ್ತಿ ಪೂರ್ವದಿಕ್ಕಿಗೆ ಇದ್ದು ಕಾಲಬಳಿ ಕುಕ್ಕುಟ ಸರ್ಪವಿದೆ.ಅಮ್ಮನವರಿಗೆ ಅಲಂಕಾರ ಮಾಡಿ ಷೋಡಶೋಪಚಾರ ಪೂಜೆ ನಡೆಸುತ್ತಾರೆ.ಈ ಬಸದಿಯಲ್ಲಿ ಬೆಳಗ್ಗಿನ ಜಾವ ಮಾತ್ರ ಜಲ,ಗಂಧಾಭಿಷೇಕದೊಂದಿಗೆ ಪೂಜೆ ನಡೆಸಲಾಗುತ್ತದೆ,ದಸರಾ ಹಬ್ಬ,ವಾರ್ಷಿಕೋತ್ಸವ,ಯುಗಾದಿ,ಮಹಾವೀರ ಜಯಂತಿ,ನೂಲಹುಣಿಮೆ.ಇತ್ಯಾದಿ ಪರ್ವಗಳನ್ನೂ ಅಷ್ಟಾತ್ಮಿಕ ಪರ್ವವನ್ನೂ ಆಚರಿಸಲಾಗುತ್ತದೆ.

ಉಲ್ಲೇಖನ ಬದಲಾಯಿಸಿ

  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೫೧.