ಶೈನಾ ( ಕೈಬರಹದ ಕನ್ನಡ ಮಾಸಪತ್ರಿಕೆ)

ಒಂದು ವಿಶಿಷ್ಠ ಕನ್ನಡ ಮಾಸಪತ್ರಿಕೆ. ಇದು ಕೈ ಬರಹದ ಪತ್ರಿಕೆ. ಸತತವಾಗಿ ಹತ್ತು ವರ್ಷಗಳಿಂದ ಒಂದು ತಿಂಗಳೂ ನಿಲ್ಲದೆ ಓದುಗರ ಕೈಸೇರುತ್ತಿರುವುದು ಇದರ ವಿಶೇಷತೆ. ಕನ್ನಡ ಭಾಷೆಯ ಮುದ್ದಾದ ಸುಂದರ ಅಕ್ಷರಗಳಿಂದ, ಸಾಂಧರ್ಭಿಕವಾದ ವ್ಯಕ್ತಿ ಹಾಗೂ ವಿಷಯಾಧಾರಿತ ವಿಷೇಶಾಂಕಗಳನ್ನು, ಮುಖಪುಟದ ಚಿತ್ರಗಳ ಸಮೇತ, ದೇಶದ ಪ್ರಚಲಿತ ವಿಷಯಗಳ ಇಣುಕು ನೋಟದೊಂದಿಗೆ, ವ್ಯಂಗ್ಯಚಿತ್ರ, ಪುಟ್ಟ ಹಿತನುಡಿ, ಚಿಂತನಗಳು ಹಾಗೂ ಕೆಳಗೆ ನಮೂದಿಸಿರುವ ಅಂಕಣಗಳನ್ನು ಹೊಂದಿದೆ.

  • ದಾರ್ಶನಿಕತೆಯ ಕಿರುದರ್ಶನ
  • ಕಣ್ಣಭಾಷೆಯ ಹೊಳಪು
  • ಕ್ರಿಯಾಹಾದಿ
  • ಕಾವ್ಯದ ಕೊರಳು
  • ಬಯಲ ಆಲಯ

ಹೀಗೆ ವಿವಿಧ ಆಪ್ತಕೋಶಗಳನ್ನು ತನ್ನ ೮ ಅಥವಾ ೧೦ ಪುಟಗಳ ತೆಕ್ಕೆಯಲ್ಲಿ ಹೊಂದಿರುವ ಈ ಕೈಬರಹದ ಕನ್ನಡ ಮಾಸಿಕ ತುಮಕೂರಿನ ಲೇಖಕಿ, ಬಿ.ಸಿ.ಶೈಲಾ ನಾಗರಾಜ್ ಮತ್ತು ಅವರ ಪುತ್ರಿ, ರಂಗಮ್ಮ ಹೊದೇಕಲ್ ಅವರ ಕನ್ನಡ ಭಾಷೆಯ ಪ್ರೇಮದ ಸಂಕೇತವಾಗಿ ಹೊರಬರುತ್ತಿದೆ. ಯಾವ ಪ್ರಚಾರದ ಅಬ್ಬರವೂ ಇಲ್ಲದೆ ನಿಧಾನವಾಗಿ ಸಾಗಿಬಂದು ೧೦ ವರ್ಷಗಳ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ, ಪತ್ರಿಕೆ 'ಶೈನಾ' ಒಂದು ಶುದ್ಧ ಸಾಹಿತ್ಯ ಪತ್ರಿಕೆ ಆಗಿದೆ. ನಾಡಿನ ಅತ್ಯಂತ ಹಿರಿಯ ಸಾಹಿತಿಗಳಿಂದ ಹಿಡಿದು, ಅನೇಕ ಕನ್ನಡಸಾಹಿತ್ಯಾಸಕ್ತ ಸಹೃದಯರ ಬೆಂಬಲ ಇದಕ್ಕಿದೆ ಹಾಗೂ ಅದರ ಪ್ರಸಾರ ಸಂಖ್ಯೆ ಈಗಾಗಲೇ ೧,೫೦೦ ಕ್ಕೂ ಹೆಚ್ಚಿದೆ.

ಶೈನಾ ಕೈಬರಹ ಪತ್ರಿಕೆಯ ವೈಶಿಷ್ಠ್ಯಸಂಪಾದಿಸಿ

ಇಂದಿನ ಕಂಪ್ಯೂಟರ್ ಮತ್ತು ಹಲವಾರು ತಂತ್ರಜ್ಞಾನಗಳು ನಮ್ಮ ಜೀವನದ ತೊಳಲಾಟಕ್ಕೆ ಸಮಾಧಾನ ತಂದುಕೊಟ್ಟಿರುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಕನ್ನಡಿಗರ ಮನಸ್ಸಿನಲ್ಲೊಂದು ಕಡೆ ತಮ್ಮ ಭಾಷೆಯ ಬರಹ ಸಂಸ್ಕೃತಿ ನೆಲ ಕಚ್ಚಿರುವುದು ತಲ್ಲಣಕ್ಕೆ ಕಾರಣವಾಗಿದೆ. ಪತ್ರ-ಸಂಪರ್ಕವಂತೂ ನಿಂತೇ ಹೋಗಿದೆ. ಹಾಗಾಗಿ ನಮ್ಮ ಮಕ್ಕಳಿಗೆ ಕನ್ನಡದ ಅಕ್ಷರಗಳನ್ನು ತೋರಿಸಿ ಪರಿಚಯಿಸುವ ಕಾಲ ಒದಗಿ ಬಂದಿದೆ. ಇದಕ್ಕೆ ಕಂಡು ಕೊಂಡ ಉಪಾಯವೇ 'ಶೈನಾ ಪತ್ರಿಕೆ'ಯ ಉದಯಕ್ಕೆ ದಾರಿಯಾಯಿತು.[೧] ರಂಗಮ್ಮ ಹೊದೇಕಲ್ ರ ಮುದ್ದಾದ ಅಕ್ಷರಗಳ ಸಾಲುಗಳು, ತಾಯಿ ಶೈಲಜಾರ ಕ್ರಿಯಾಶೀಲತೆ ಪ್ರಬುದ್ಧ ಚಿಂತನೆ, ಪತ್ರಿಕೆಯ ಜೀವಾಳ. ಪತ್ರಿಕೆಯ ಸುಂದರ ಮುಖಪುಟ -ವಿನ್ಯಾಸದೊಡನೆ ಶೈಲಜಾರವರು ಸಂಪಾದಿಸಿದ ಶುದ್ಧ-ಪ್ರತಿಗಳನ್ನು ನೆರಳಚ್ಚು ಮಾಡಿಸಿ ಓದುಗರನ್ನು ತಲುಪಿಸಲಾಗುತ್ತದೆ. ವಿವಿಧ ಆಯಾಮಗಳ ಮೌಲ್ಯಯುತ, ಸಮಾಜಮುಖಿ-ಚಿಂತನೆ, ಕಾವ್ಯ, ವಿಮರ್ಶೆ, ಭಾಷಾ ಬಾಂಧವ್ಯ, ಶೈನಾ ಪತ್ರಿಕೆಯಲ್ಲಿವೆ. ಅಪ್ಪಟ ಸಾಹಿತ್ಯ ಪತ್ರಿಕೆಯಾದ ಶೈನಾದ ವೈಶಿಷ್ಠ್ಯವೆಂದರೆ, ತನ್ನ ಒಂದು ದಶಕದ ಅಸ್ತಿತ್ವದಲ್ಲಿ ದೊಡ್ಡ ಪ್ರಮಾಣದ ಜನಪ್ರಿಯ ಪತ್ರಿಕೆಗಳು ಮರೆತಂತಹ ಮಹತ್ವದ ಸಂಗತಿಗಳನ್ನು ಎತ್ತಿ ಹಿಡಿದು ಕನ್ನಡ ಸಾರಸ್ವತ ಲೋಕಕ್ಕೆ ತನ್ನ ಕೊಡುಗೆಯನ್ನು ಕೊಡುತ್ತಾ ಬಂದಿದೆ.

ಶೈನಾ ಪತ್ರಿಕೆಯ ಚಂದಾದಾರರುಸಂಪಾದಿಸಿ

ಹಿರಿಯ ಚೇತನ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ, ಡಾ.ಸರಜೂ ಕಾಟ್ಕರ್, ಕೆ.ಆರ್.ನಾಗರಾಜ್, ಡಾ.ಸಿ.ಸೋಮಶೇಖರ್, ಎಸ್. ಉಷಾ, ಶಶಿಕಲಾವೀರಯ್ಯಸ್ವಾಮಿ, ಎಸ್.ರಘುನಾಥ್, ವಿಶ್ವೇಶ್ವರ ಭಟ್, ನಾಗತಿಹಳ್ಳಿ ಚಂದ್ರಶೇಖರ್, ರವಿ ಬೆಳಗೆರೆ, ಜ್ಯೋತಿ ಗುರುಪ್ರಸಾದ್, ನೇಮಿಚಂದ್ರ, ಜರಗನಹಳ್ಳಿ ಶಿವಶಂಕರ್, ಡಾ.ಎಚ್.ಎಲ್.ಪುಷ್ಪ, ರುಕ್ಮಿಣಿ ರಾಘವೇಂದ್ರ, ಎಲ್.ಎನ್.ಮುಕುಂದರಾಜು, ಸಿ.ಹೇಮಲತಾ, ಸುಶೀಲಾ ಸೋಮಶೇಖರ್ -ಹೀಗೆ ಅನೇಕ ಮಹನೀಯರು ಮಹಿಳೆಯರು, ಈ ಪತ್ರಿಕೆಗ ಚಂದಾದಾರರಾಗುವ ಮೂಲಕ ತಮ್ಮ ಪ್ರೋತ್ಸಾಹ ಹಾಗೂ ಸಹಕಾರ ಹಸ್ತವನ್ನಿತ್ತಿದ್ದಾರೆ.

ಉಲ್ಲೇಖಗಳುಸಂಪಾದಿಸಿ

  1. [http:// sampada. net/ article/23005 ಕೈಬರಹದ ಪತ್ರಿಕೆ]
  1. ಕೃಪೆ : ತರಂಗ ಪತ್ರಿಕೆ, ಸೆಪ್ಟೆಂಬರ್, ೨೦೦೯, ಪುಟ ೫೮, ಶ್ರೀ ರಂಜಾನ್ ದರ್ಗ.,