ಸ್ಲಾತ್‍ ಮರಗಳ ಮೇಲೆ ವಾಸಿಸುವ ಒಂದು ಸಸ್ತನಿ ಪ್ರಾಣಿ. ದಕ್ಷಿಣ ಅಮೆರಿಕ ಹಾಗೂ ಮಧ್ಯ ಅಮೆರಿಕದ ಸಮಶೀತೋಷ್ಣ ವಲಯದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಜೀವನದ ಬಹುಭಾಗವನ್ನು ಮರಗಳ ಮೇಲೆ ತಲೆಕೆಳಗಾಗಿ ಕಳೆಯುತ್ತವೆ. ಸ್ಲಾತ್ ಗಳಲ್ಲಿ ಎರಡು ಬೆರಳಿನ ಸ್ಲಾತ್[೧] ಹಾಗೂ ಮೂರು ಬೆರಳಿನ ಸ್ಲಾತ್ ಎಂಬ ಎರಡು ವಿಧಗಳಿವೆ.

ಸ್ಲಾತ್

ಇದರ ಬಹಳ ನಿಧಾನ ಗತಿಯ ಚಯಾಪಚಯ(ಮೆಟಬಾಲಿಸಮ್) ಹಾಗೂ ಚಲನೆಯಿಂದಾಗಿ ಇದಕ್ಕೆ ಸ್ಲಾತ್ ಎಂಬ ಹೆಸರು ಬಂದಿದೆ. ಸ್ಲಾತ್ ಎಂಬುದರ ಅರ್ಥ ನಿಧಾನ (slow). ಇವುಗಳ ಮುಖ್ಯ ಆಹಾರ ಎಲೆಗಳಾಗಿರುವುದರಿಂದ, ಅಂತಹ ಕಡಿಮೆ ಶಕ್ತಿಯನ್ನು ಉತ್ಪಾದಿಸುವ ಆಹಾರಕ್ಕೆ ತಕ್ಕುದಾಗಿ ಮತ್ತು ಬೆಕ್ಕು, ಹದ್ದು ಮುಂತಾದ ಬೇಟೆಗಾರ ಪ್ರಾಣಿಗಳ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈರೀತಿ ವಿಕಾಸ ಹೊಂದಿದೆ.

ಇವು ನೆಲದ ಮೇಲೆ ಅಸಹಾಯಕ ಪ್ರಾಣಿಗಳಾಗಿವೆ, ಆದರೆ ನೀರಿನಲ್ಲಿ ಈಜಬಲ್ಲವು. ಇವುಗಳ ಮೈಮೇಲೆ ಇರುವ ದಟ್ಟವಾದ ಕೂದಲಿನ ಮೇಲೆ ಹಸಿರು ಪಾಚಿ ಬೆಳೆದಿರುತ್ತದೆ. ಇದು ಸ್ಲಾತ್ ಗಳಿಗೆ ಛದ್ಮವೇಷ (camouflage) ಧರಿಸಲು ನೆರವಾಗುತ್ತದೆ. ಇವುಗಳಿಂದ ಸ್ಲಾತ್ ಗೆ ಪೋಷಕಾಂಶಗಳೂ ದೊರೆಯುತ್ತದೆ. ಈ ಪಾಚಿಗಳು ಕೆಲವು ಜಾತಿಯ ಪತಂಗಗಳಿಗೂ ಆಹಾರವಾಗಿದ್ದು ಆ ಪತಂಗಗಳು ಕೇವಲ ಸ್ಲಾತ್ ಮೈಮೇಲೆ ಮಾತ್ರ ಬೆಳೆಯುವಂತವಾಗಿದ್ದು ’ಸ್ಲಾತ್ ಪತಂಗ’ಗಳೆಂದೇ ಕರೆಯಲ್ಪಡುತ್ತವೆ.[೨]

ದೇಹಲಕ್ಷಣಗಳು ಬದಲಾಯಿಸಿ

ಸ್ಲಾತ್‍ಗಳು ಸಾಮಾನ್ಯವಾಗಿ ೬೦ ರಿಂದ ೮೦ ಸೆಂ.ಮೀ. ಉದ್ದ ಹಾಗೂ ೩.೬ ರಿಂದ ೭.೭ ಕಿಲೋ ಭಾರವಿರುತ್ತವೆ. ಎರಡು ಬೆರಳಿನ ಸ್ಲಾತ್‍ಗಳು ಸ್ವಲ್ಪ ದೊಡ್ಡ ಗಾತ್ರದಾಗಿರುತ್ತವೆ. ಸ್ಲಾತ್‍ಗಳ ಕೈಗಳು ಉದ್ದವಾಗಿದ್ದು, ಗುಂಡಾಕಾರದ ತಲೆ ಮತ್ತು ಸಣ್ಣ ಕಿವಿಗಳನ್ನು ಹೊಂದಿರುತ್ತವೆ. ಮೂರುಬೆರಳಿನ ಸ್ಲಾತ್‍ಗಳಿಗೆ ೫ರಿಂದ ೬ ಸೆಂ.ಮೀ. ಉದ್ದದ ಬಾಲವಿರುತ್ತದೆ. ಬಹುತೇಕ ಎಲ್ಲಾ ಸಸ್ತನಿಗಳಿಗೆ ಏಳು ಕುತ್ತಿಗೆಯ ಮೂಳೆ (cervical vertebrae)ಗಳಿರುತ್ತವೆ. ಆದರೆ ಎರಡು ಬೆರಳಿನ ಸ್ಲಾತ್ ಗೆ ಒಂಬತ್ತು ಹಾಗೂ ಮೂರುಬೆರಳಿನ ಸ್ಲಾತ್‍ಗೆ ಆರು ಮೂಳೆಗಳಿರುತ್ತವೆ. ಇದರಿಂದ ಅವುಗಳ ಕುತ್ತಿಗೆಯನ್ನು ೨೭೦ಡಿಗ್ರಿಗಳಷ್ಟು ತಿರುಗಿಸಲು ಸಾಧ್ಯವಾಗುತ್ತದೆ.[೩]

ಇವುಗಳು ಬಣ್ಣಗಳನ್ನು ಗುರುತಿಸುವ ದೃಷ್ಟಿ ಹೊಂದಿರುತ್ತವೆ. ಆದರೆ ಇವುಗಳ ದೃಷ್ಟಿಶಕ್ತಿ ಹಾಗೂ ಶ್ರವಣಶಕ್ತಿ ಉತ್ತಮವಾಗಿರುವುದಿಲ್ಲ. ಆದ್ದರಿಂದ ಇವು ವಾಸನೆ ಮತ್ತು ಸ್ಪರ್ಶದ ಮೂಲಕ ಆಹಾರ ಹುಡುಕುತ್ತದೆ.[೪]

ಅವುಗಳ ಚಯಾಪಚಯಕ್ರಿಯೆ (ಮೆಟಬಾಲಿಸಂ) ಗತಿಯು ಬಹಳ ನಿಧಾನದ್ದಾಗಿದೆ. ದೇಹ ಉಷ್ಣತೆ ಕಡಿಮೆ ಇರುತ್ತದೆ. (30 ರಿಂದ 34 °C) ಚಟುವಟಿಕೆಯಲ್ಲಿದ್ದಾಗಿನ ದೇಹದ ಉಷ್ಣತೆಗಿಂತ ವಿಶ್ರಾಂತಿಯಲ್ಲಿ ಇನ್ನೂ ಉಷ್ಣತೆ ಕಡಿಮೆಯಾಗಿರುತ್ತದೆ. ಇವುಗಳ ದೇಹದ ಉಷ್ಣತೆಯು ಹೊರಗಿನ ವಾತಾವರಣಕ್ಕೆ ತಕ್ಕಂತೆ ಬದಲಾಗುವಂತದ್ದಾಗಿದೆ.(ಸುಮಾರು ೨೫ ರಿಂದ ೩೫°C). ೨೦ °C ಅಷ್ಟು ಕೆಳಗೂ ಹೋಗಬಲ್ಲುದು. ಇವುಗಳ ಮೈಮೇಲಿನ ಕೂದಲು ಇತರ ಸಸ್ತನಿಗಳ ಮೈಮೇಲೆ ಬೆಳೆಯುವ ಕೂದಲಿನ ವಿರುದ್ಧ ದಿಕ್ಕಿನಲ್ಲಿ ಬೆಳೆಯುತ್ತದೆ. ಇವು ಮರಗಳಲ್ಲಿ ತಲೆಕೆಳಗಾಗಿರುವುದರಿಂದ ವಾತಾವರಣದಿಂದ ಸೂಕ್ತರಕ್ಷಣೆಗಾಗಿ ಈ ರೀತಿ ವಿಕಾಸವಾಗಿದೆ.

ಇವುಗಳ ಕೈಗಳು ನೇತಾಡಲು ಹಾಗೂ ಬಿಗಿಯಾಗಿ ಹಿಡಿದುಕೊಳ್ಳಲು ರೂಪುಗೊಂಡಿವೆ. ಅವುಗಳ ವಿಶೇಷ ರೀತಿಯ ಕಾಲು ಹಾಗೂ ಕೈಗಳು ಉದ್ದವಾಗಿ ಬಾಗಿದ ಪಂಜವನ್ನು ಹೊಂದಿದ್ದು ಹೆಚ್ಚು ಶ್ರಮವಿಲ್ಲದೇ ಕೊಂಬೆಗಳಲ್ಲಿ ನೇತಾಡಲು ಸಹಾಯವಾಗುವಂತಿವೆ.

ಆಹಾರ ಬದಲಾಯಿಸಿ

ಸಿಕ್ರೋಪಿಯಾ ಮರದ ಎಲೆಗಳೇ ಇವುಗಳ ಮುಖ್ಯ ಆಹಾರವಾಗಿದೆ. ಎರಡುಬೆರಳಿನ ಸ್ಲಾತ್‍ಗಳು ಇದರ ಜೊತೆ ಕೀಟ, ಹಣ್ಣು, ಹಲ್ಲಿ ಮುಂತಾದವುಗಳನ್ನು ತಿನ್ನುತ್ತವೆ.

ವಂಶಾಭಿವೃದ್ಧಿ ಮತ್ತು ಆಯಸ್ಸು ಬದಲಾಯಿಸಿ

ಇವುಗಳ ಗರ್ಭಾವಧಿ ಆರುತಿಂಗಳು (ಮೂರು ಬೆರಳಿನ ಸ್ಲಾತ್) ಹಾಗೂ ಹನ್ನೆರಡು ತಿಂಗಳು (ಎರಡು ಬೆರಳಿನ ಸ್ಲಾತ್) ಆಗಿದ್ದು ಒಮ್ಮೆ ಒಂದು ಮರಿಗೆ ಜನ್ಮ ನೀಡುತ್ತದೆ. ಸಾಮಾನ್ಯವಾಗಿ ಮರಿಗಳು ಐದುತಿಂಗಳು ತಾಯಿಯ ಜೊತೆಗೆ ಇರುತ್ತದೆ.

ಇವುಗಳ ಸರಾಸರಿ ಆಯಸ್ಸು ೨೦ ವರ್ಷಗಳಾಗಿದ್ದು ಪಾಲನೆಯಲ್ಲಿಟ್ಟಾಗ ೩೦ ವರ್ಷದವರೆಗೂ ಜೀವಿಸಬಲ್ಲವು.[೫]

ಉಲ್ಲೇಖಗಳು ಬದಲಾಯಿಸಿ

  1. "Overview". The Sloth Conservation Foundation. Retrieved 29 November 2017.
  2. Bennington-Castro, Joseph. "The Strange Symbiosis Between Sloths and Moths". Gizmodo. Retrieved 1 December 2017.
  3. "Three-Toed Sloths". National Geographic. Retrieved 1 December 2017.
  4. "Sloth". Encyclopedia Brittanica. Retrieved 1 December 2017.
  5. "Southern two-toed sloth". Smithsonian's National Zoo (in ಇಂಗ್ಲಿಷ್). Retrieved 2017-12-01.
"https://kn.wikipedia.org/w/index.php?title=ಸ್ಲಾತ್&oldid=1023317" ಇಂದ ಪಡೆಯಲ್ಪಟ್ಟಿದೆ