ಸುಂಕದ ರಸ್ತೆ ಎಂದರೆ ಯಾವುದರ ಮೇಲೆ ಸಾಗಣೆಗಾಗಿ ಶುಲ್ಕವನ್ನು (ಸುಂಕ) ನಿರ್ಧರಿಸಲಾಗುತ್ತದೊ ಅಂತಹ ಖಾಸಗಿ ಅಥವಾ ಸಾರ್ವಜನಿಕ ರಸ್ತೆ. ಇದು ರಸ್ತೆ ಬೆಲೆ ನಿರ್ಧಾರಣದ ಒಂದು ರೂಪ ಮತ್ತು ಸಾಮಾನ್ಯವಾಗಿ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಯ ವೆಚ್ಚವನ್ನು ಭರ್ತಿಮಾಡಿಕೊಳ್ಳಲು ನೆರವಾಗಲು ಅನುಷ್ಠಾನಗೊಳಿಸಲಾಗಿರುತ್ತದೆ.

ಸುಂಕದ ರಸ್ತೆಗಳು ಯಾವುದೋ ರೂಪದಲ್ಲಿ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿವೆ. ಕಾಲ್ನಡಿಗೆಯಲ್ಲಿ, ಬಂಡಿಯಲ್ಲಿ ಅಥವಾ ಕುದುರೆ ಸವಾರಿ ಮಾಡಿ ಸಾಗುವ ಪ್ರಯಾಣಿಕರ ಮೇಲೆ ಸುಂಕ ವಿಧಿಸಲಾಗುತ್ತಿತ್ತು; ಆದರೆ ಅವುಗಳ ಪ್ರಾಮುಖ್ಯ ಮೋಟಾರು ವಾಹನದ ಉದಯದೊಂದಿಗೆ ಹೆಚ್ಚಿತು, ಮತ್ತು ಅನೇಕ ಆಧುನಿಕ ಸುಂಕದ ರಸ್ತೆಗಳು ಪ್ರತ್ಯೇಕವಾಗಿ ಮೋಟಾರು ವಾಹನಗಳ ಮೇಲೆ ಶುಲ್ಕ ವಿಧಿಸುತ್ತವೆ. ಸುಂಕದ ಪ್ರಮಾಣವು ಸಾಮಾನ್ಯವಾಗಿ ವಾಹನದ ಪ್ರಕಾರ, ತೂಕ, ಅಚ್ಚುಗಂಬಿಗಳ ಸಂಖ್ಯೆಯನ್ನು ಅವಲಂಬಿಸಿ ಬದಲಾಗುತ್ತದೆ, ಮತ್ತು ಹಲವುವೇಳೆ ಸರಕು ಟ್ರಕ್ಕುಗಳ ಮೇಲೆ ಕಾರುಗಳಿಗಿಂತ ಹೆಚ್ಚಿನ ದರಗಳನ್ನು ವಿಧಿಸಲಾಗುತ್ತದೆ.

ಸುಂಕಗಳನ್ನು ಹಲವುವೇಳೆ ಸುಂಕದ ಕಟ್ಟೆಗಳಲ್ಲಿ, ಸುಂಕದ ಮನೆಗಳಲ್ಲಿ, ಪ್ಲಾಜ಼ಾಗಳಲ್ಲಿ, ಕಛೇರಿಗಳಲ್ಲಿ, ಮುಂಗಟ್ಟೆಗಳಲ್ಲಿ, ಅಥವಾ ದ್ವಾರಗಳಲ್ಲಿ ವಸೂಲು ಮಾಡಲಾಗುತ್ತದೆ. ಕೆಲವು ಸುಂಕ ವಸೂಲಿ ಸ್ಥಳಗಳು ಮಾನವರಹಿತವಿರುತ್ತವೆ ಮತ್ತು ಬಳಕೆದಾರನು ಒಂದು ಯಂತ್ರದಲ್ಲಿ ಹಣವನ್ನು ಕಟ್ಟುತ್ತಾನೆ. ಒಮ್ಮೆ ಸರಿಯಾದ ಸುಂಕ ಕಟ್ಟಲಾಗಿದೆ ಎಂದು ಖಾತರಿಯಾದ ಮೇಲೆ ಯಂತ್ರವು ದ್ವಾರವನ್ನು ತೆರೆಯುತ್ತದೆ. ವೆಚ್ಚಗಳನ್ನು ತಗ್ಗಿಸಲು ಮತ್ತು ಸಮಯ ವಿಳಂಬವನ್ನು ಕಡಿಮೆಮಾಡಲು ಇಂದು ಅನೇಕ ಸುಂಕಗಳನ್ನು ಯಾವುದೋ ರೂಪದ ಸ್ವಯಂಚಾಲಿತ ಅಥವಾ ವಿದ್ಯುನ್ಮಾನ ಸುಂಕ ವಸೂಲಿ ಉಪಕರಣದ ಮೂಲಕ ವಸೂಲು ಮಾಡಲಾಗುತ್ತದೆ. ಇದು ವಿದ್ಯುನ್ಮಾನೀಯವಾಗಿ ಸುಂಕ ಪಾವತಿಸುವವನ ಟ್ರಾನ್ಸ್‌ಪಾಂಡರ್‌ನೊಂದಿಗೆ ಸಂವಹನ ನಡೆಸುತ್ತದೆ. ಕೆಲವು ವಿದ್ಯುನ್ಮಾನ ಸುಂಕದ ರಸ್ತೆಗಳು ಸುಂಕದ ಕಟ್ಟೆಗಳ ವ್ಯವಸ್ಥೆಯನ್ನು ಕೂಡ ನಿರ್ವಹಿಸುತ್ತವೆ. ಇದರಿಂದ ಟ್ರಾನ್ಸ್‌ಪಾಂಡರ್‌ಗಳನ್ನು ಹೊಂದಿಲ್ಲದ ಜನರು ಆದಾಗ್ಯೂ ಸುಂಕವನ್ನು ಕಟ್ಟಬಹುದು, ಆದರೆ ಅನೇಕ ಹೊಸ ರಸ್ತೆಗಳು ಈಗ ಟ್ರಾನ್ಸ್‌ಪಾಂಡರ್ ಇಲ್ಲದೇ ರಸ್ತೆ ಬಳಸುವ ಚಾಲಕರಿಗೆ ಸುಂಕ ವಿಧಿಸಲು ಸ್ವಯಂಚಾಲಿತ ಸಂಖ್ಯಾಫಲಕ ಗುರುತಿಸುವಿಕೆಯನ್ನು ಬಳಸುತ್ತವೆ, ಮತ್ತು ಕೆಲವು ಹೆಚ್ಚು ಹಳೆಯ ಸುಂಕದ ರಸ್ತೆಗಳನ್ನು ಇಂತಹ ವ್ಯವಸ್ಥೆಗಳಿಂದ ಉನ್ನತೀಕರಿಸಲಾಗುತ್ತಿದೆ.

ಸುಂಕದ ರಸ್ತೆಗಳ ಬಗ್ಗೆ ಟೀಕೆಗಳಲ್ಲಿ ವಾಹನ ನಿಲ್ಲಿಸಿ ಸುಂಕ ಕಟ್ಟಲು ತೆಗೆದುಕೊಳ್ಳುವ ಸಮಯ, ಸುಂಕದ ಕಟ್ಟೆಗಳ ನಿರ್ವಾಹಕರ ವೆಚ್ಚ (ಕೆಲವು ಸಂದರ್ಭಗಳಲ್ಲಿ ಆದಾಯದ ಸುಮಾರು ಮೂರರಲ್ಲಿ ಒಂದು ಭಾಗದಷ್ಟು) ಸೇರಿವೆ. ಸ್ವಯಂಚಾಲಿತ ಸುಂಕ ಪಾವತಿ ವ್ಯವಸ್ಥೆಗಳು ಇವೆರಡನ್ನೂ ಕಡಿಮೆಮಾಡಲು ನೆರವಾಗುತ್ತವೆ. ಇತರರು ಒಂದೇ ರಸ್ತೆಗಾಗಿ ಎರಡು ಬಾರಿ ಪಾವತಿಸಬೇಕಾಗಿರುವುದಕ್ಕೆ ಆಕ್ಷೇಪಿಸುತ್ತಾರೆ: ಇಂಧನ ತೆರಿಗೆಗೆಳಲ್ಲಿ, ಮತ್ತು ಸುಂಕದ ರೂಪದಲ್ಲಿ.