ಶುಕ್ರಾಚಾರ್ಯನು ದೈತ್ಯರ ಗುರು. ಈತನ ತಂದೆ ಭೃಗು ಮಹರ್ಷಿ, ತಾಯಿ ಪುಲೋಮೆ, ಅಣ್ಣ ಚ್ಯವನ ಮಹರ್ಷಿ. ಈತ ಈಶ್ವರನನ್ನು ಕುರಿತು ಘೋರತಪಸ್ಸನ್ನು ಮಾಡಿದ. ಈಶ್ವರ ಸುಪ್ರೀತನಾಗಿ ಮೃತಸಂಜೀವಿನಿ ವಿದ್ಯೆಯನ್ನು ದಯಪಾಲಿಸಿದ. ಶುಕ್ರಾಚಾರ್ಯ ವಿಷ್ಣುದ್ವೇಷಿಯಾಗಿದ್ದ. ಇದಕ್ಕೆ ಕಾರಣ ಹೀಗಿದೆ: ಒಮ್ಮೆ ಕೆಲವು ದುಷ್ಟ ರಾಕ್ಷಸರನ್ನು ವಿಷ್ಣುವಿನ ಸುದರ್ಶನ ಚಕ್ರ ಅಟ್ಟಿಸಿಕೊಂಡು ಹೋಯಿತು. ರಾಕ್ಷಸರು ಭಯಭೀತರಾಗಿ ಪುಲೋಮೆಯ ಮೊರೆ ಹೊಕ್ಕರು. ಆಕೆ ರಾಕ್ಷಸರಿಗೆ ಅಭಯವನ್ನಿತ್ತಳು. ತಾನು ಮಾತು ಕೊಟ್ಟಿರುವುದರಿಂದ ರಾಕ್ಷಸರ ಬದಲಿಗೆ ತನ್ನನ್ನು ಕೊಲ್ಲುವಂತೆ ವಿನಂತಿಸಿಕೊಂಡಳು. ವಿಷ್ಣುವಿನ ಚಕ್ರ ಅವಳನ್ನು ಕೊಂದಿತು. ತಾಯಿಯ ಸಾವಿನಿಂದ ಶುಕ್ರಾಚಾರ್ಯ ವಿಷ್ಣುವನ್ನು ಸದಾ ದ್ವೇಷಿಸತೊಡಗಿದ.

ರಾಕ್ಷಸರಾಜನಾದ ಬಲಿಚಕ್ರವರ್ತಿಯ ಬಗ್ಗೆ ಈತನಿಗೆ ಅತಿಯಾದ ಪ್ರೀತಿ. ಬ್ರಾಹ್ಮಣ ವಟುವಾಗಿ ವಿಷ್ಣು ಮೂರಡಿ ಜಾಗವನ್ನು ಕೇಳಿದಾಗ ಬಲಿ ಒಪ್ಪಿದ. ಇದರಿಂದ ರಾಕ್ಷಸ ವೃಂದಕ್ಕೆ ಅಪಾಯವೆಂದು ಅರಿತ ಶುಕ್ರಾಚಾರ್ಯ ಬಲಿಯನ್ನು ತಡೆದ. ಕಮಂಡಲದಲ್ಲಿನ ಒಂದು ಹನಿ ನೀರೂ ಕೆಳಗೆ ಬೀಳದಂತೆ ಮಾಡಲು ಯೋಗಶಕ್ತಿಯಿಂದ ಸೂಕ್ಷ್ಮರೂಪ ದಲ್ಲಿ ಹೋಗಿ ಕಮಂಡಲದಲ್ಲಿ ಕುಳಿತ. ಇದನ್ನು ತಿಳಿದ ವಿಷ್ಣು ದರ್ಭೆಯಿಂದ ತಿವಿದಾಗ ಇವನ ಒಂದು ಕಣ್ಣು ಕುರುಡಾಯಿತು.

ಇವನ ಶಿಷ್ಯ ಕಚ. ರಾಕ್ಷಸರಿಂದ ಕೊಲ್ಲಲ್ಪಟ್ಟ ಅವನನ್ನು ಈತ ಮಂತ್ರ ಬಲದಿಂದ ಪುನಃ ಬದುಕಿಸಿ ಮೃತ ಸಂಜೀವಿನೀ ವಿದ್ಯೆಯನ್ನು ಬೋಧಿಸಿದ. ಇದರಿಂದ ರಾಕ್ಷಸರು ಕುಪಿತರಾದರು. ಅವನನ್ನು ಮದುವೆ ಯಾಗಬೇಕೆಂದು ಶುಕ್ರಾಚಾರ್ಯನ ಮಗಳು ದೇವಯಾನಿ ಬಯಸಿದಾಗ ಗುರುವಿನ ಮಗಳೆಂದು ನಿರಾಕರಿಸಿದ. ಶುಕ್ರಾಚಾರ್ಯ ತನ್ನ ಮಗಳಿಗೋಸ್ಕರ ತಪಃಶಕ್ತಿಯನ್ನು ಉಪಯೋಗಿಸಿದ. ಗಂಗೆ ರಾಕ್ಷಸರನ್ನು ಕಡೆಗಣಿಸಿ ಅವರ ನಾಶಕ್ಕೆ ಕಾರಣಳಾಗಿದ್ದಾಳೆ ಎಂದು ಬಗೆದ. ಈತ ಗಂಗೆಯನ್ನು ಬಹುವಾಗಿ ದ್ವೇಷಿಸಿದ. ಅನಂತರ ಅವಳು ಶಿಷ್ಟಜನರ ರಕ್ಷಣೆಯ ನೇತೃತ್ವವನ್ನು ಹೊತ್ತು ಅದಕ್ಕಾಗಿ ತನ್ನ ಸರ್ವಸ್ವವನ್ನು ಅರ್ಪಿಸುವುದನ್ನು ಮನಗಂಡ ಮಹಾ ಛಲವಾದಿಯಾಗಿದ್ದ ಈತ ಆಕೆಗೆ ಶರಣಾದ. ಕೊಟ್ಟರೆ ವರ, ಇಟ್ಟರೆ ಶಾಪ ಇದು ಇವನ ಜಾಯಮಾನವಾಗಿತ್ತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: