ವತ್ಸ ಪ್ರಾಚೀನ ಭಾರತಉತ್ತರಪಥದ ಹದಿನಾರು ಮಹಾಜನಪದಗಳಲ್ಲಿ ಒಂದು. ಇದು ಗಂಗಾ ಬಯಲಿನಲ್ಲಿ ಸ್ಥಿತವಾಗಿತ್ತು. ಕೌಶಾಂಬಿ ಇದರ ರಾಜಧಾನಿ[೧], ಈಗ ಇದನ್ನು ಕೋಸಮ್ ಎಂದು ಕರೆಯಲಾಗುತ್ತದೆ ಮತ್ತು ಉತ್ತರ ಪ್ರದೇಶದಲ್ಲಿನ ಸಣ್ಣ ಪಟ್ಟಣವಾಗಿದೆ. ಈ ಪಟ್ಟಣದಲ್ಲಿ ಕೋಸಮ್ ಅವಶೇಷಗಳು ಎಂದು ಕರೆಯಲಾದ ಒಂದು ಪುರಾತತ್ವ ತಾಣವಿದೆ ಮತ್ತು ಇದು ಪ್ರಾಚೀನ ಭಾರತದ ಕೌಶಾಂಬಿಯೆಂದು ನಂಬಲಾಗಿದೆ. ವತ್ಸದ ಭೌಗೋಳಿಕ ನೆಲೆ ಗಂಗಾ ಮತ್ತು ಯಮುನಾ ನದಿಗಳ ಸಂಗಮದ ಹತ್ತಿರವಿತ್ತು.

ವತ್ಸ ಮಹಾಜನಪದ

ವತ್ಸರು ಕುರು ರಾಜವಂಶದ ಶಾಖೆಯಾಗಿದ್ದರು. ಋಗ್ವೈದಿಕ ಕಾಲದಲ್ಲಿ, ಕುರು ರಾಜ್ಯವು ಹರ್ಯಾಣಾ/ದೆಹಲಿ ಮತ್ತು ಪ್ರಯಾಗ್/ಕೌಶಾಂಬಿವರೆಗೆ ಗಂಗಾ ಜಮುನಾ ದೋವಾಬ್ ಪ್ರದೇಶವನ್ನು ಒಳಗೊಂಡಿತ್ತು ಮತ್ತು ಹಸ್ತಿನಾಪುರ ಅದರ ರಾಜಧಾನಿಯಾಗಿತ್ತು. ಉತ್ತರ ವೈದಿಕ ಕಾಲದಲ್ಲಿ, ಹಸ್ತಿನಾಪುರ ಪ್ರವಾಹಗದಿಂದ ನಾಶವಾಯಿತು, ಮತ್ತು ಕುರು ರಾಜ ನಿಚಕ್ಷು ತನ್ನ ಎಲ್ಲ ಪ್ರಜೆಗಳೊಂದಿಗೆ ತನ್ನ ರಾಜಧಾನಿಯನ್ನು ಸ್ಥಳಾಂತರಿಸಿ ಹೊಸದಾಗಿ ನಿರ್ಮಾಣಗೊಂಡ ರಾಜಧಾನಿ ಕೌಶಾಂಬಿಯಲ್ಲಿ ನೆಲೆಸಿದ. ವೈದಿಕ ಕಾಲದ ನಂತರದಲ್ಲಿ, ಆರ್ಯಾವರ್ತ ಹಲವು ಮಹಾಜನಪದಗಳನ್ನು ಹೊಂದಿದ್ದಾಗ, ಕುರು ರಾಜವಂಶವು ಕುರುಗಳು ಮತ್ತು ವತ್ಸರ ನಡುವೆ ವಿಭಜನೆಗೊಂಡಿತ್ತು. ಕುರುಗಳು ಹರ್ಯಾಣಾ/ದೆಹಲಿ/ಮೇಲಿನ ದೋವಾಬ್ ಪ್ರದೇಶವನ್ನು ನಿಯಂತ್ರಿಸುತ್ತಿದ್ದರೆ, ವತ್ಸರು ಕೆಳಗಿನ ದೋವಾಬ್ ಪ್ರದೇಶವನ್ನು ನಿಯಂತ್ರಿಸುತ್ತಿದ್ದರು. ಆಮೇಲೆ, ವಸ್ತರು ಎರಡು ಶಾಖೆಗಳಾಗಿ ವಿಭಜನೆಗೊಂಡರು -- ಮಥುರಾದಲ್ಲಿನ ಒಂದು ಶಾಖೆ, ಮತ್ತು ಕೌಶಾಂಬಿಯಲ್ಲಿನ ಇನ್ನೊಂದು ಶಾಖೆ. ನಿಚಕ್ಷು ಜನಮೇಜಯನ ಮೊಮ್ಮಗನ ಮೊಮ್ಮಗ.

ಕೌಶಾಂಬಿಗೆ ಸ್ಥಳಾಂತರಗೊಂಡ ವಿಷಯ ಭಾಸನ ಸ್ವಪ್ನವಾಸವದತ್ತ ಮತ್ತು ಪ್ರತಿಜ್ಞಾ ಯೌಗಂಧರಾಯಣಗಳಿಂದ ಬೆಂಬಲಿತವಾಗಿದೆ. ಇವೆರಡೂ ಪುಸ್ತಕಗಳು ರಾಜ ಉದಯನನು ಭಾರತ ಕುಲದ ವಂಶಸ್ಥನೆಂದು ವರ್ಣಿಸಿವೆ. ಪುರಾಣಗಳು ನಿಚಕ್ಷುವಿನ ಉತ್ತರಾಧಿಕಾರಿಗಳ ಪಟ್ಟಿಯನ್ನು ಒದಗಿಸುತ್ತವೆ, ಪಟ್ಟಿಯಲ್ಲಿ ಕೊನೆಯವನು ರಾಜ ಕ್ಷೇಮಕ. ವತ್ಸ ರಾಜ್ಯದ ಹೆಸರು ಕಾಶಿಯ ರಾಜ ವತ್ಸನಿಂದ ಬಂದಿತು ಎಂದು ಇತರ ಪುರಾಣಗಳು ಹೇಳುತ್ತವೆ. ಚೇದಿ ರಾಜಕುಮಾರ ಕುಶ ಅಥವಾ ಕುಶಾಂಬನು ರಾಜಧಾನಿ ಕೌಶಾಂಬಿಯನ್ನು ಸ್ಥಾಪಿಸಿದನು ಎಂದು ರಾಮಾಯಣ ಮತ್ತು ಮಹಾಭಾರತಗಳು ಹೇಳುತ್ತವೆ.

ಎರಡನೇ ಶತಾನೀಕ, ಪರಾಂತಪನು ಸ್ವಲ್ಪ ಖಚಿತ ಮಾಹಿತಿ ಲಭ್ಯವಿರುವ ವತ್ಸ ರಾಜ್ಯದ ಮೊದಲ ಅರಸನಾಗಿದ್ದಾನೆ. ಪುರಾಣಗಳು ಇವನ ತಂದೆಯ ಹೆಸರು ವಸುದಾನ ಎಂದು ಹೇಳಿದರೆ, ಭಾಸನು ಇವನ ತಂದೆಯ ಹೆಸರು ಸಹಸ್ರಾಣೀಕನೆಂದು ಹೇಳುತ್ತಾನೆ. ಶತಾನೀಕನು ವಿದೇಹದ ಒಬ್ಬ ರಾಜಕುಮಾರಿಯನ್ನು ವಿವಾಹವಾದನು. ಇವರಿಬ್ಬರ ಮಗನೇ ಉದಯನ. ಶತಾನೀಕನು ಮೃಗವತಿಯನ್ನೂ ವಿವಾಹವಾದನು, ಇವಳು ಲಿಚ್ಛವಿ ಮುಖ್ಯಸ್ಥ ಚೇಟಕನ ಮಗಳು. ಶತಾನೀಕನು ದಧಿವಾಹನನ ಆಳ್ವಿಕೆಯ ಕಾಲದಲ್ಲಿ ಅಂಗ ರಾಜ್ಯದ ರಾಜಧಾನಿ ಚಂಪಾವನ್ನು ಆಕ್ರಮಣಮಾಡಿದನು.

ಉಲ್ಲೇಖಗಳು ಬದಲಾಯಿಸಿ

  1. Geographical Review of India. Original from the University of Michigan: Geographical Society of India. 1951. p. 27.
"https://kn.wikipedia.org/w/index.php?title=ವತ್ಸ&oldid=785571" ಇಂದ ಪಡೆಯಲ್ಪಟ್ಟಿದೆ