ರೂಬಾರ್ಬ್ (ರೀಯಮ್ ರಬಾರ್ಬರಮ್) ಪಾಲಿಗೊನೇಸಿಯಿ ಕುಟುಂಬದಲ್ಲಿನ ಸಸ್ಯದ ಒಂದು ಪ್ರಜಾತಿ. ಅದು ಗಿಡ್ಡನೆಯ, ದಪ್ಪ ಬೇರುಕಾಂಡಗಳಿಂದ ಬೆಳೆಯುವ ಒಂದು ಮೂಲಿಕೆಯಂಥ ಬಹುವಾರ್ಷಿಕ ಸಸ್ಯ. ಅದು ಉದ್ದನೆಯ ತಿರುಳಿನಿಂದ ಕೂಡಿದ ಕಾಮುಗಳನ್ನು ಹೊಂದಿರುವ ಸ್ವಲ್ಪ ತ್ರಿಕೋನಾಕಾರದ ದೊಡ್ಡ ಎಲೆಗಳನ್ನು ಮತ್ತು ದೊಡ್ಡ ಸಂಯುಕ್ತ ಎಲೆಯಂಥ ಹಸಿರು ಮಿಶ್ರಿತ ಬಿಳಿಯಿಂದ ಗುಲಾಬಿ ಬಣ್ಣದ ಹೂಗೊಂಚಲುಗಳಲ್ಲಿ ಗುಂಪುಗೂಡಲ್ಪಟ್ಟಿರುವ ಚಿಕ್ಕ ಹೂವುಗಳನ್ನು ಉತ್ಪತ್ತಿ ಮಾಡುತ್ತದೆ. ಅಡಿಗೆ ಬಳಕೆಯಲ್ಲಿ, ತಾಜಾ ಎಳೆಯ ಎಲೆ ಕಾಮುಗಳು (ತೊಟ್ಟುಗಳು) ಗರಿಗರಿಯಾಗಿರುತ್ತವೆ ಮತ್ತು ತೀಕ್ಷ್ಣ, ಒಗರು ರುಚಿಯನ್ನು ಹೊಂದಿರುತ್ತವೆ.