ಹೆನ್ರಿ ರೆನೆ ಆಲ್ಬರ್ಟ್ ಗಯ್‍ ಡಿ ಮೊಪಾಸಾ, (1850 - 93). ಫ್ರೆಂಚ್ ಸಾಹಿತಿ ಹಾಗೂ ಜಗದ್ವಿಖ್ಯಾತ ಸಣ್ಣ ಕತೆಗಾರ. ಕಾದಂಬರಿಗಳನ್ನೂ ಕವನಗಳನ್ನೂ ಬರೆದಿದ್ದಾನೆ.

ಬದುಕು ಮತ್ತು ಬರಹ ಬದಲಾಯಿಸಿ

1850ರ ಆಗಸ್ಟ್ 5 ರಂದು ಮಿರೊ ಮೆಸ್ನಿಲ್‍ನ ಮಹಲ್‍ನಲ್ಲಿ ಹುಟ್ಟಿದ. ತಾತ ಕುಲೀನ ಮನೆತನದ ಜಮೀನ್ದಾರ. ತಂದೆ ಷೇರು ಮಾರುಕಟ್ಟೆಯ ದಲ್ಲಾಳಿ, ತಾಯಿ ಲಾರೆಲಿಪಾಯ್ಟೆವಿನ್ ಕಲಾಪ್ರೇಮಿ, ಸೂಕ್ಷ್ಮ ಸಂವೇದನಾಶೀಲೆ, ಜ್ವೆಟಾಟ್ ಮತ್ತು ರೂವೆನ್‍ಲೈಸಿಗಳಲ್ಲಿ ಮೊಪಾಸಾ ವಿಧ್ಯಾಭ್ಯಾಸ ಮಾಡಿದ.

ಪದವಿ ಪರೀಕ್ಷೆಗೆ ಓದುತ್ತಿರುವಾಗಲೇ ಲೆ ಡಿವ್ ಕ್ರೀಟ್ಯರ್ ಎಂಬ ಕವನ ಸಂಕಲನ ಪ್ರಕಟಿಸಿದ. ಪದವೀಧರನಾದ ಮೇಲೆ ಮೊದಲು ಫ್ರಾಕೋ - ಪ್ರಷ್ಯನ್ ಯುದ್ಧದಲ್ಲಿ ಸೇವೆಸಲ್ಲಿಸಿದ. ಅನಂತರ ಫ್ರೆಂಚ್ ಆಡಳಿತಸೇವೆಗೆ ಸೇರಿ ನೌಕಾ ಹಾಗೂ ಕಡಲ ಸಚಿವಾಲಯದಲ್ಲಿ ನೇಮಕಗೊಂಡ. ಜಲಪರ್ಯಟನೆ ಮತ್ತು ಹಾಗೂ ಗಸ್ಟಾಫ್ ಪ್ಲಾಬರ್ಟ್‍ನ ಮನೆಯಲ್ಲಿ ನಡೆಯುತ್ತಿದ್ದ ಸಾಹಿತ್ಯಗೋಷ್ಠಿಗೆ ತಪ್ಪದೆ ಹಾಜರಾಗುವುದು ಇವೆರಡೇ ಈತನ ಹವ್ಯಾಸಗಳಾಗಿದ್ದವು. ಗಸ್ಟಾಫ್ ಪ್ಲಾಬರ್ಟ್ ಎಂಬಾತ ಮೊಪಾಸಾನ ತಾಯಿಯ ಮಿತ್ರ. ಮೊಪಾಸಾನಂತೆ ಆತನೂ ನಾರ್ಮನ್. ಫ್ಲಾಬರ್ಟ್ ನಿಸರ್ಗವಾದದ ಅಧ್ವರ್ಯ. ಹೆಸರಾಂತ ಸಾಹಿತಿ, ಆತನ ಮನೆಯಲ್ಲಿ ನಡೆಯುತ್ತಿದ್ದ ಸಾಹಿತ್ಯ ಗೋಷ್ಠಿಗಳಲ್ಲಿ ಪ್ರಸಿದ್ಧ ಫೆಂಚ್ ಸಾಹಿತಿಗಳಾದ ಎಮಿಲಿ ಜೋಲಾ ಮುಂತಾದವರು ಇರುತ್ತಿದ್ದರು. ಅವರ ಸಾಹಿತ್ಯ ಚರ್ಚೆಯಲ್ಲಿ ಮೊಪಾಸಾ ಭಾಗವಹಿಸದಿದ್ದರೂ ಮೌನವಾಗಿ ಕುಳಿತು ಕೇಳುತ್ತಿದ್ದ. ಈತ ಬರಹಗಾರನೆಂದು ಅವರು ಯಾರೂ ಪರಿಗಣಿಸಿರಲಿಲ್ಲ. ಒಳ್ಳೆ ವ್ಯಾಯಾಮ ಪಟು ಎಂದಷ್ಟೇ ತಿಳಿದಿದ್ದರು. ಫಾಬರ್ಟ್ ಇತನ ಕೆಲವು ಬರೆಹಗಳನ್ನು ನೋಡಿ ಅವುಗಳಲ್ಲಿ ವಿಶೇಷ ಏನೂ ಎಂದು ತಿಳಿದರೂ ಪ್ರೋತ್ಸಾಹಕ ಮಾತುಗಳನ್ನು ಮಾತ್ರ ಆಡಿದ್ದ.

1873ರಲ್ಲಿ ಇಟ್ರೆಟಾಟ್ ರಂಗಮಂದಿರದ ಮೇಲೆ ಮೊಪಾಸಾನ ಒಂದು ಕಿರುನಾಟಕ ಪ್ರದರ್ಶಿತವಾಯಿತು. ಫ್ಲಾಬರ್ಟ್‍ನ ಸಾಹಿತ್ಯಗೋಷ್ಠಿಯ ಕೆಲವರು ನಾಟಕವನ್ನು ನೋಡಿದರು. ಮೊಪಾಸಾ ಅದರಲ್ಲಿ ಒಂದು ಸ್ತ್ರೀ ಪಾತ್ರವಹಿಸಿದ್ದ. ಇದು ಅಂಥ ವಿಶೇಷವೆನಿಸದ ಇನ್ನೊಂದು ಪ್ರಯತ್ನ. ಪ್ಲಾಬರ್ಟ್‍ನ ನಿಸರ್ಗವಾದಕ್ಕೆ ಮಾರುಹೋಗಿದ್ದ ಮೊಪಾಸಾ ಏಳು ವರ್ಷಗಳ ಕಾಲ ಆತನ ಶಿಷ್ಯನಾಗಿ ಅದರಲ್ಲಿ ತರಬೇತಿ ಪಡೆದ. ಅದರ ಫಲವಾಗಿ 1880ರಲ್ಲಿ ಡ ವರ್ಸ್ ಎಂಬ ಕವನ ಸಂಕಲನ ಪ್ರಕಟವಾಯಿತು. ಬಹುಬೇಗ ಕವನಗಳ ರಚನೆ ತನ್ನ ಮಾದ್ಯಮ ಅಲ್ಲವೆಂದು ಅರಿತುಕೊಂಡು ಗದ್ಯದ ಕಡೆ, ಅದರಲ್ಲೂ ಕಥೆ ಬರೆಯುವುದರ ಕಡೆ ಗಮನಹರಿಸಿದ. ಜೋಲಾ ಮತ್ತು ಹೈಸ್‍ಮನ್ ಸಂಪಾದಿತ ಸೋಯ್‍ರಿಡಿ ಮಿಡಾನ್ ಎಂಬ ಕಥಾ ಸಂಕಲನದಲ್ಲಿ ಮೊಪಾಸಾನ ಮೊದಲ ಸಣ್ಣ ಕಥೆ ಬೌಲ್ ಡಿ ಸೂಯಿಫ್ ಸಹ ಸೇರಿತ್ತು. ಈ ಮೊದಲ ಕಥೆಯೇ ಆಚಾರ್ಯ ಕೃತಿ ಎನಿಸಿದ್ದು ಒಂದು ಅಪೂರ್ವ ಘಟನೆ. ಈ ಶ್ರೇಷ್ಠ ಕಥೆಯನ್ನು ಮೀರಿಸುವ ಮತ್ತೊಂದು ಕಥೆಯನ್ನು ಬೇರೆಯವರಿರಲಿ ಸ್ವತಃ ಮೊಪಾಸಾನೇ ಬರೆಯಲಿಕ್ಕಾಗಲಿಲ್ಲ. ಈ ಕೃತಿ ಸಾಹಿತ್ಯದ ಒಂದು ಅದ್ಭುತ ಸಾಧನೆ. ಸೊಗಸಾದ ಗದ್ಯಶೈಲಿಯಲ್ಲಿ ರೂಪುಗೊಂಡ ಬರೆಹ. 1881 ರಲ್ಲಿ ಬಂದ ಲಾ ಮೇಯ್ಸನ್ ಯಶಸ್ವಿ ಇನ್ನೊಂದು ಮೆಟ್ಟಿಲು. ಕಥಾವಸ್ತುಗಳ ಬಗೆಗೆ ಮುಜುಗರಪಟ್ಟುಕೊಂಡವರೂ ಈ ಕಥೆಗಳಲ್ಲಿ ಕಾಣುವ ಕಥನ ಕೌಶಲವನ್ನು ಮೆಚ್ಚಿದರು. 1883ರಲ್ಲಿ ಪ್ರಕಟವಾದ ಮದಾಮಾಷೆಲೆ ಫೈಫಿ ಜಯಭೇರಿಯನ್ನು ಬಾರಿಸಿತು. ಅದೇ ವರ್ಷ ಉನ್ ವೈ ಎಂಬ ಮೊದಲ ಬೃಹದ್ ಕಾದಂಬರಿ ಪ್ರಕಟವಾಯಿತು. ಸಾಮಾನ್ಯ ಮಹಿಳೆಯೊಬ್ಬಳ ಭ್ರಮನಿರಸನದ ವೇದನೆಯನ್ನು ಈ ಕಥೆ ವಿಶದಪಡಿಸುತ್ತದೆ. ಇದರಲ್ಲಿ ಕೆಲವು ಭಾಗಗಳು ಅಶ್ಲೀಲವಾಗಿವೆಯೆಂದು ಈ ಪುಸ್ತಕದ ಸಾರ್ವಜನಿಕ ಮಾರಾಟವನ್ನು ನಿಷೇಧಿಸಲಾಯಿತು.

1884ರಲ್ಲಿ ಬಂದ ಅವ್ ಸೋಲೀಲ್ ಎಂಬ ಪ್ರವಾಶ ಕಥನ ಅಷ್ಟು ಯಶಸ್ವಿಯಾಗಲಿಲ್ಲ. ಅದು ಮೊಪಾಸಾನ ಸಾಹಿತ್ಯ ಸಾಧನೆ ಉತ್ಕರ್ಷದ ಶಿಖರವನ್ನು ಮುಟ್ಟಿದ ಕಾಲ. ಕ್ಲೇರ್ ಡ ಲೂನ್; ,ಮಿಸ್ ಹ್ಯಾರಿಯೆಟ್; ಲೆ ಸೀವುರ್ಸ್ ರೊಂಡೋಲಿ ಜ್ವೆಟೆ ಎಂಬ ಕೃತಿಗಳು ಬಂದುವು. 1885ರಲ್ಲಿ ಮತ್ತು ಅನಂತರ ಬಂದ ಪುಸ್ತಕಗಳು ಮೊಪಾಸಾದ ಅವನತಿಯ ಕಾಲವನ್ನು ಸೂಚಿಸುತ್ತದೆ. ಕಾಂಟೆಸ್ ಎಟ್ ನೋವೆಲ್ಲೆ; ಮಾಸ್ಕರ್ ಪೇರೆಂಟ್ ಮತ್ತು ಕಾಂಟೆಸ್ ದು ಜೌರ್ ಎಟ್ ಡಿ ಲಾ ನೈಟ್ - ಇವು ಈ ಕಾಲದ ಕೃತಿಗಳು; ಬೆಲ್ ಆಮಿ ಎಂಬ ಕಾದಂಬರಿ ಸುಂದರ ಮುಖದ, ಮೃಗ ಹೃದಯದ ವಂಚಕನೊಬ್ಬ ಕೇವಲ ಬಾಹ್ಯಾಕರ್ಷಣೆಯಿಂದ ಎಲ್ಲರನ್ನೂ ಮೋಸಗೊಳಿಸುವ ನಡೆಸುತ್ತ ಜೀವನದ ಕಥೆ.

ಮೊಪಾಸಾ ಹಲವು ಬಗೆಯ ಪಾತ್ರಗಳನ್ನು ರಚಿಸಿದ್ದಾನೆ. ಅವನಿಗೆ ಪ್ರಿಯವಾದ ಪಾತ್ರಗಳೆಂದರೆ ಕೃಷಿಕರು, ಹಳ್ಳಿಗಮಾರರು, ಸೇವಕರು, ಸಾಹಿತಿಗಳನ್ನೂ ಅವರಿಗೆ ಸಾಲಗೊಡುವ ಶ್ರೀಮಂತರನ್ನೂ ಕ್ಷುದ್ರ ಸ್ತ್ರೀಯರನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾನೆ. ಟಾಯಿನ್ (1886); ಲಾ ಪೆಟೇಟ್‍ರೋಗ್ (1886) ಎಂಬ ಪುಸ್ತಕಗಳಲ್ಲಿ ಹಲವಾರು ಗ್ರಾಮೀಣ ಕೃಷಿಕ ಪಾತ್ರಗಳನ್ನೂ ಕಾಣಬಹುದು.

ಮೊಪಾಸಾ ಮರಣಕ್ಕೆ ಕಾರಣವಾದ ಕಾಯಿಲೆಯ ಮೊದಲ ಚಿಹ್ನೆಗಳು ಕಾಣಿಸಿದ್ದು ಇದೇ ಕಾಲದಲ್ಲಿ. ಲಿ ಹೊರ್ಲಾ (1887) ಎಂಬ ಕೃತಿಯಲ್ಲಿ ಈ ಮನೋವಿಕಾರದ ಸುಳಿವು ಕಾಣುತ್ತದೆ. ಸಮುದ್ರಯಾನದಿಂದ ಮನಸ್ಥಿತಿ ಕೊಂಚ ಸುಧಾರಿಸಿತಾದರೂ ಬರೆವಣಿಗೆ ಕಡಿಮೆಯಾಯಿತು. 1888 ರಲ್ಲಿ ಪ್ರಕಟವಾದ ಸುರ್‍ಲವೊ ಮತ್ತು ಲಿ ರೋಜಿಯೆರ್ ಡಿ ಮದಾಂ ಹುಸ್ಸಾನ್ ಎಂಬೆರಡು ಕೃತಿಗಳ ಅನಂತರ ಮತ್ತೆ ಸಣ್ಣ ಕಥೆಗಳನ್ನು ಬರೆಯತೊಡಗಿದ. ರ್ಯಾಬೆಲೇಸಿಯನ್ ಕತೆಗಳಲ್ಲಿ ಹಾಸ್ಯದ ಬುಗ್ಗೆಗಳು ಅಲ್ಲಲ್ಲಿ ತೋರಿಬರುತ್ತವೆ. ಪಿಯರೆ ಎಟ್ ಜೀನ್ (1888); ಪೋರ್ಟ್ ಕೊಮೆ ಲಾ ಮಾರ್ಟ್ (1889), ನಾಟರಚ ಕ್ಯೂರ್ (1890) ಎಂಬ ಕಾದಂಬರಿಗಳು ಅತೀವ ಮಾನವೀಯ ಅನುಕಂಪವನ್ನು ಅಭಿವ್ಯಕ್ತಿಸುತ್ತದೆ. ಇನುಟೈಲ್ ಬ್ಯುಟೆನ (1890) ಕತೆಗಳಲ್ಲಿ ಜೀವನದಲ್ಲಿ ಕಹಿಯುಂಡವರ ಬಗ್ಗೆ ತೀವ್ರ ಕನಿಕರ ಕಾಣುತ್ತದೆ. ಲಾ ವೈ ಎರಾಂಟೆ (1890) ಎಂಬ ಪ್ರವಾಸಾನುಭವಗಳ ಪುಸ್ತಕದೊಂದಿಗೆ ಮೊಪಾಸಾನ ಬರೆವಣಿಗೆ ಮುಕ್ತಾಯವಾಯಿತು. 1891ರಲ್ಲಿ ಪ್ರಕಟವಾದ ಮ್ಯುಸೊಟೆ ಎಂಬ ಪ್ರಹಸನ ಎಂ, ಜಾಕ್ವೆಸ್ ನಾರ್ಮಂಡ್‍ನ ಜೊತೆಗೆ ಸೇರಿ ಬರೆದದ್ದು; ಇದರ ಅನಂತರ ಮೊಪಾಸಾ ಬರೆಯಲಿಲ್ಲ.

ಅನುವಂಶಿಕವಾಗಿ ಅಂಟಿಬಂದ ನರಗಳ ರೋಗ, ವಿಪರೀತ ದೈಹಿಕ ಶ್ರಮ, ವಿವೇಚನಾರಹಿತ ಔಷಧಿ ಸೇವನೆ ಎಲ್ಲ ಮೇಳೈಸಿ ದೇಹಸ್ಥಿತಿ ಹದಗೆಟ್ಟಿತು. ಮಾನವ ದ್ವೇಷ ಉಲ್ಬಣವಾಗಿ ವಿಚಿತ್ರ ದೃಶ್ಯಗಳು ಕಾಣಿಸುವ ಭ್ರಮೆ ಉಂಟಾಯಿತು. ಪಾಶ್ರ್ವವಾಯು ಪೀಡಿತನಾಗಿ 1891ರಲ್ಲಿ ಮಾಗಿಯನ್ನು ಕ್ಯಾನೆಯಲ್ಲಿ ಕಳೆವ ಯೋಚನೆಯಲ್ಲಿರುವಾಗಲೇ ಬುದ್ಧಿ ವಿಕಲ್ಪವಾಯಿತು. 1892 ರಲ್ಲಿ ಆತ್ಮಹತ್ಯೆಯ ಪ್ರಯತ್ನವನ್ನೂ ಮಾಡಿ ವಿಫಲನಾದ. ಆಗ ಈತನನ್ನು ಪ್ಯಾರಿಸ್ಸಿಗೆ ಕರೆದೊಯ್ಯಲಾಯಿತು. 18 ತಿಂಗಳ ಕಾಲ ವೇದನೆಯಲ್ಲಿ ನರಳಿ 1893ರಲ್ಲಿ ಜುಲೈ, 6 ರಂದು ಮರಣ ಹೊಂದಿದ. ಮಾಂಟೆ ಪಾರ್ನಾಸೆ ಸ್ಮಶಾನದಲ್ಲಿ ಇವನನ್ನು ಸಮಾಧಿ ಮಾಡಲಾಯಿತು.

ಈತನ ಸಮಗ್ರ ಕೃತಿಗಳನ್ನು ಎಲ್. ಕೊನಾರ್ಡ್ ಎಂಬಾತ ಸಂಪಾದಿಸಿ 29 ಸಂಪುಟಗಳಲ್ಲಿ ಪ್ರಕಟಿಸಿದ್ದಾನೆ (1908 - 10).

ಒಟ್ಟಾರೆ ಅವಲೋಕನ ಬದಲಾಯಿಸಿ

ಸಣ್ಣಕಥಾ ಸಾಹಿತ್ಯದಲ್ಲಿ ಈತನ ಸ್ಥಾನ ಚಿರಸ್ಥಾಯಿಯಾದುದು. ಅತ್ಯಂತ ಶ್ರೇಷ್ಠ ಸಣ್ಣ ಕಥೆಗಾರನೆಂದು ಲೋಕವಿಖ್ಯಾತನಾಗಿದ್ದಾನೆ. ಈತನ ಅತ್ಯಂತ ಸೊಗಸಾದ ಕಾದಂಬರಿಗಳೂ ಸಾಹಿತ್ಯಕ್ಕೆ ಈತನ ಶ್ರೇಷ್ಠ ಕೊಡುಗೆಗಳಾಗಲಿಲ್ಲ. ಈತ ಸುಮಾರು ಮುನ್ನೂರು ಸಣ್ಣ ಕಥೆಗಳನ್ನು ಬರೆದಿದ್ದಾನೆ.

ವಸ್ತುನಿಷ್ಠ, ಸೂಕ್ಷ್ಮ ಹಾಗೂ ಸವಿವರವಾದ ಅವಲೋಕನ ಈತನ ವಿಶಿಷ್ಟ ಸಾಮರ್ಥ್ಯ. ಜೀವನದ ಅರ್ಥದ ಬಗ್ಗೆ ಜಿಜ್ಞಾಸೆ, ಯಾವುದೇ ತತ್ವಸಿದ್ಧಾಂತಗಳ ಬೋಧನೆಯಾಗಲಿ, ಪ್ರತಿಪಾದನೆಯಲ್ಲಿ ಈತನ ಸಾಹಿತ್ಯದ ಗುರಿ ಅಲ್ಲ. ಜೀವನವನ್ನು ತನ್ನದೇ ದೃಷ್ಟಿಯಲ್ಲಿ ನೋಡಿ ಚಿತ್ರಿಸುವ ಕಲೆಗಾರಿಕೆ ಈತನದು. ಭಾಷೆಯಲ್ಲಿ ಆಡಂಬರವಿಲ್ಲ. ಅಲಂಕಾರ, ಉತ್ಪ್ರೇಕ್ಷೆಗಳಿಲ್ಲ. ದುಂದು ಮಾತುಗಳಿಲ್ಲ. ಒಂದೇ ಒಂದು ಪದವನ್ನೂ ಅನವಶ್ಯವಾಗಿ ಬಳಸುವುದಿಲ್ಲ. ಸರಳವಾದ ಆಡುಮಾತೇ ಸಾಕಾದರೆ ಅದನ್ನೇ ಬಳಸಲು ಹಿಂದೆ ಮುಂದೆ ನೋಡುವುದಿಲ್ಲ. ಹೀಗಾಗಿ ಈತನ ಶೈಲಿ ಸರಳವಾದುದು. ಬಿಗಿಯಾದುದು. ಅಮೂರ್ತ ಭಾವನೆ, ವಿಚಾರಗಳ ತಂಟೆಗೆ ಹೋಗದೆ ಕೇವಲ ಇಂದ್ರಿಯ ಗ್ರಾಹ್ಯ ಸಂಗತಿಗಳಿಗಷ್ಟೇ ಈತನ ದೃಷ್ಟಿ ಸೀಮಿತ. ಲೋಕದ ಯಾವ ವ್ಯಕ್ತಿಗಳೂ ಈತನ ದೃಷ್ಟಿಯಲ್ಲಿ ಆಧ್ಯಾತ್ಮಜೀವಿಗಳಾಗಿ ತೋರುವುದಿಲ್ಲ. ಎಲ್ಲ ಕಡೆ ಕಾಣುವವರು ಸಾಧಾರಣ ಮಾನವರಷ್ಟೇ.


ಈತ ಒಬ್ಬ ಅದ್ವಿತೀಯ ಕಲಾವಿದ. ಈತನ ಕಥಸಂವಿಧಾನ ಕೌಶಲ ಅದ್ಭುತವಾದುದು. ಕಥೆಗಳ ಮುಕ್ತಾಯ ಅನಿರೀಕ್ಷಿತವಾಗಿದ್ದು ಚಕಿತಗೊಳಿಸುತ್ತದೆ.

"https://kn.wikipedia.org/w/index.php?title=ಮೊಪಾಸಾ&oldid=1161180" ಇಂದ ಪಡೆಯಲ್ಪಟ್ಟಿದೆ