ಮೂತ್ರ ವಿಸರ್ಜನೆ ಎಂದರೆ ಮೂತ್ರಕೋಶದಿಂದ ಮೂತ್ರ ವಿಸರ್ಜನಾ ನಾಳದ ಮೂಲಕ ದೇಹದ ಹೊರಗಡೆಗೆ ಮೂತ್ರದ ಬಿಡುಗಡೆ. ಇದು ಮೂತ್ರ ವ್ಯವಸ್ಥೆಯ ವಿಸರ್ಜನೆಯ ರೂಪವಾಗಿದೆ. ಆರೋಗ್ಯವಂತ ಮಾನವರಲ್ಲಿ (ಮತ್ತು ಅನೇಕ ಇತರ ಪ್ರಾಣಿಗಳಲ್ಲಿ) ಮೂತ್ರ ವಿಸರ್ಜನೆಯ ಕ್ರಿಯೆಯು ಸ್ವಪ್ರೇರಿತ ನಿಯಂತ್ರಣದಲ್ಲಿರುತ್ತದೆ. ಶಿಶುಗಳು, ಕೆಲವು ವಯಸ್ಸಾದ ವ್ಯಕ್ತಿಗಳು, ಮತ್ತು ನರಸಂಬಂಧಿ ಗಾಯ ಉಂಟಾದವರಲ್ಲಿ, ಮೂತ್ರ ವಿಸರ್ಜನೆಯು ನಿರೀಚ್ಛಾ ಪ್ರತಿಕ್ರಿಯೆಯಾಗಿ ಉಂಟಾಗಬಹುದು. ವಯಸ್ಕ ಮನುಷ್ಯರು ದಿನದಲ್ಲಿ ಏಳು ಸಲದವರೆಗೆ ಮೂತ್ರ ವಿಸರ್ಜಿಸುವುದು ಸಾಮಾನ್ಯವಾಗಿದೆ.[೧]

ಆರೋಗ್ಯವಂತ ವ್ಯಕ್ತಿಗಳಲ್ಲಿ, ಕೆಳ ಮೂತ್ರನಾಳವು ಚಟುವಟಿಕೆಯ ಎರಡು ಪ್ರತ್ಯೇಕ ಹಂತಗಳನ್ನು ಹೊಂದಿದೆ: ಶೇಖರಣೆಯ (ಅಥವಾ ರಕ್ಷಣೆಯ) ಹಂತ, ಈ ಹಂತದಲ್ಲಿ ಮೂತ್ರವು ಮೂತ್ರಕೋಶದಲ್ಲಿ ಸಂಗ್ರಹವಾಗುತ್ತದೆ; ಮತ್ತು ಬರಿದು ಮಾಡುವ ಹಂತ, ಈ ಹಂತದಲ್ಲಿ ಮೂತ್ರವು ಮೂತ್ರ ವಿಸರ್ಜನಾ ನಾಳದ ಮೂಲಕ ಬಿಡುಗಡೆಯಾಗುತ್ತದೆ. ಅನುವರ್ತನ ವ್ಯವಸ್ಥೆಯ ಸ್ಥಿತಿಯು ಮಿದುಳಿನಿಂದ ಪ್ರಜ್ಞಾಪೂರ್ವಕ ಸಂಕೇತ ಮತ್ತು ಕೋಶ ಹಾಗೂ ಮೂತ್ರ ವಿಸರ್ಜನಾ ನಾಳದಿಂದ ಸಂವೇದನಾ ತಂತುಗಳ ಕ್ರಿಯಾಶೀಲ ವಿಭವ ಉಂಟಾಗುವ ದರ ಎರಡನ್ನೂ ಅವಲಂಬಿಸಿದೆ. ಕೋಶವು ಕಡಿಮೆ ತುಂಬಿದ್ದಾಗ, ಒಳದಿಕ್ಕಿನ ಕಡೆಯ ಕ್ರಿಯಾಶೀಲ ವಿಭವದ ಉಂಟಾಗುವಿಕೆಯು ಕಡಿಮೆಯಿರುತ್ತದೆ, ಪರಿಣಾಮವಾಗಿ ಹೊರದಾರಿಯ (ಸಂಪೀಡಕ ಮತ್ತು ಮೂತ್ರ ವಿಸರ್ಜನಾ ನಾಳ) ಪ್ರಚೋದನೆಯಾಗಿ, ಮೂತ್ರಕೋಶವು ಸಡಿಲಗೊಳ್ಳುತ್ತದೆ. ಕೋಶವು ಹೆಚ್ಚು ತುಂಬಿದಾಗ, ಒಳದಿಕ್ಕಿನ ಕಡೆಯ ಕ್ರಿಯಾಶೀಲ ವಿಭವದ ಉಂಟಾಗುವಿಕೆಯು ಹೆಚ್ಚಾಗಿ, ಮೂತ್ರಕ್ಕೆ ಹೋಗುವ ಪ್ರೇರಣೆಯ ಪ್ರಜ್ಞಾಪೂರ್ವಕ ಸಂವೇದನೆಯು ಉಂಟಾಗುತ್ತದೆ. ವ್ಯಕ್ತಿಯು ಮೂತ್ರವನ್ನು ವಿಸರ್ಜಿಸಲು ಸಿದ್ಧನಾದಾಗ, ಅವನು ಪ್ರಜ್ಞಾಪೂರ್ವಕವಾಗಿ ಬರಿದಾಗಿಸುವಿಕೆಯನ್ನು ಆರಂಭಿಸುತ್ತಾನೆ, ಮತ್ತು ಆಗ ಮೂತ್ರಕೋಶವು ಸಂಕೋಚನಗೊಂಡು ಹೊರದಾರಿಯು ಸಡಿಲಗೊಳ್ಳುತ್ತದೆ. ಮೂತ್ರಕೋಶವು ಸಂಪೂರ್ಣವಾಗಿ ಖಾಲಿಯಾಗುವವರೆಗೆ ಬರಿದಾಗುವಿಕೆಯು ಮುಂದುವರಿಯುತ್ತದೆ, ಮತ್ತು ಆ ಹಂತದಲ್ಲಿ ಮೂತ್ರಕೋಶವು ಸಡಿಲಗೊಂಡು ಶೇಖರಣೆಯನ್ನು ಪುನರಾರಂಭಿಸಲು ಹೊರದಾರಿಯು ಸಂಕೋಚನಗೊಳ್ಳುತ್ತದೆ. ಮೂತ್ರ ವಿಸರ್ಜನೆಯನ್ನು ನಿಯಂತ್ರಿಸುವ ಸ್ನಾಯುಗಳು ಸ್ವನಿಯಂತ್ರಿತ ಮತ್ತು ದೈಹಿಕ ನರ ವ್ಯವಸ್ಥೆಗಳಿಂದ ನಿಯಂತ್ರಿತವಾಗಿರುತ್ತವೆ. ಶೇಖರಣೆ/ಸಂಗ್ರಹದ ಹಂತದಲ್ಲಿ ಆಂತರಿಕ ಮೂತ್ರ ನಾಳದ ಸಂಪೀಡಕವು ಬಿಗಿಯಾಗಿ ಉಳಿದಿರುತ್ತದೆ ಮತ್ತು ಅನುವೇದನಾ ಪ್ರಚೋದನೆಯಿಂದ ಕೆಳನೂಕುವ ಸ್ನಾಯುವು ಸಡಿಲಗೊಂಡಿರುತ್ತದೆ. ಮೂತ್ರ ವಿಸರ್ಜನೆಯ ಅವಧಿಯಲ್ಲಿ, ಉಪಾನುವೇದಕ ಪ್ರಚೋದನೆಯು ಕೆಳನೂಕುವ ಸ್ನಾಯುವು ಸಂಕೋಚನಗೊಳ್ಳುವಂತೆ ಮತ್ತು ಆಂತರಿಕ ಮೂತ್ರನಾಳ ಸಂಪೀಡಕವು ಸಡಿಲಗೊಳ್ಳುವಂತೆ ಮಾಡುತ್ತದೆ. ಬಾಹ್ಯ ಮೂತ್ರನಾಳ ಸಂಪೀಡಕವು ಶಾರೀರಿಕ ನಿಯಂತ್ರಣದಲ್ಲಿರುತ್ತದೆ ಮತ್ತು ಇದನ್ನು ಮೂತ್ರವಿಸರ್ಜನೆಯ ಅವಧಿಯಲ್ಲಿ ಪ್ರಜ್ಞಾಪೂರ್ವಕವಾಗಿ ಸಡಿಲಗೊಳಿಸಲಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. American Urological Association (2014). "Diagnosis and Treatment of Overactive Bladder (Non-Neurogenic) in Adults: AUA/SUFU Guideline" (PDF). Archived from the original (PDF) on 2013-09-21. Retrieved 1 June 2015. {{cite web}}: Unknown parameter |dead-url= ignored (help)