ಪ್ರೋಟೀನ್ ಜೈವಿಕ ಸಂಯೋಜನೆ


ಪ್ರೋಟೀನ್ ಜೈವಿಕ ಸಂಯೋಜನೆಯು[ಟಿಪ್ಪಣಿ ೧] ಜೀವಕೋಶಗಳು ಹೊಸ ಪ್ರೋಟೀನ್‌ಗಳನ್ನು ತಯಾರಿಸಿ, ಜೀವಕೋಶದ ಪ್ರೋಟೀನ್‌ಗಳು ಹಾಳಾಗುವುದು ಅಥವಾ ರಪ್ತಿನ ಮೂಲಕ ಕಳೆದು ಹೋದ ಪ್ರೋಟೀನ್‌ಗಳನ್ನು ಪಡೆಯುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಪ್ರಕ್ರಿಯೆ. ಅನುವಾದ, ರೈಬೋಸೋಮ್‌ಗಳಿಂದ ಅಮಿನೊ ಆಮ್ಲ ಜೊತೆಗೂಡಿಸುವುದು, ಮೆಸೆಂಜರ್ ಆರ್‌ಎನ್ಎ (ಎಂಆರ್‌ಎನ್ಎ) ಉತ್ಪಾದನೆ, ಟ್ರಾನ್ಸ್‌ಫರ್ ಆರ್‌ಎನ್ಎ (ಟಿಆರ್‌ಎನ್ಎ) ಅಮಿನೊಅಸಿಲಾಗಿಸುವುದು [ಟಿಪ್ಪಣಿ ೨], ಅನುವಾದದ ಜೊತೆಗೆ ರವಾನಿಸುವುದು ಮತ್ತು ಅನುವಾದ ನಂತರದ ಮಾರ್ಪಾಟುಗಳು ಜೈವಿಕ ಸಂಯೋಜನೆಯ ದಾರಿಯಲ್ಲಿನ ಅಗತ್ಯ ಭಾಗಗಳು. ಪ್ರೋಟೀನ್ ಜೈವಿಕ ಸಂಯೋಜನೆ ಹಲವು ಹೆಜ್ಜೆಗಳಲ್ಲಿ ಕಟ್ಟುನಿಟ್ಟಾಗಿ ನಿಯಂತ್ರಿಸಲ್ಪಟ್ಟಿದೆ. ಮೂಲಭೂತವಾಗಿ ಲಿಪ್ಯಂತರ (ಡಿಎನ್ಎ ಪಡಿಯಚ್ಚು ಬಳಸಿ ಆರ್‌ಎನ್ಎ ಸಂಯೋಜನೆ ವಿದ್ಯಮಾನ) ಮತ್ತು ಅನುವಾದ (ಆರ್‌ಎನ್ಎಯಿಂದ ಅಮಿನೊ ಆಮ್ಲ ಜೋಡಿಸುವ ವಿದ್ಯಮಾನ) ಈ ಹೆಜ್ಜೆಗಳು.
ಸಿಸ್ಟ್ರಾನ್ ಡಿಎನ್ಎ ಹಲವು ರೀತಿಯ ಆರ್‌ಎನ್ಎ ಮಧ್ಯಂತರಗಳಾಗಿ ಲಿಪ್ಯಂತರಗೊಳ್ಳುತ್ತದೆ. ಪಾಲಿಪೆಪ್‌ಟೈಡ್ ಸರಪಳಿಯನ್ನು ಸಂಯೋಜಿಸಲು ಪಡಿಯಚ್ಚಾಗಿ ಅದರ ಕೊನೆಯ ಆವೃತ್ತಿಯು ಬಳಸಲ್ಪಡುತ್ತದೆ. ವಂಶವಾಹಿಗಳು ಪ್ರೋಟೀನ್‌ನನ್ನು ಎಂಆರ್‌ಎನ್ಎದಿಂದ ನೇರವಾಗಿ ಸಂಯೋಜಿಸ ಬಹುದು. ಪ್ರೋಟೀನ್ ಅಲ್ಪ ಕಾಲಾವಧಿಯಲ್ಲಿಯೇ ಅಥವಾ ದೊಡ್ಡ ಪ್ರಮಾಣದಲ್ಲಿ ಲಭ್ಯವಾಗ ಬೇಕಾಗಿದ್ದಲ್ಲಿ ಅದರ ಪೂರ್ವವರ್ತಿ ತಯಾರಾಗುತ್ತದೆ. ಪ್ರೊಪ್ರೋಟೀನ್ ಒಂದು ಅಥವಾ ಹೆಚ್ಚು ತಡೆಹಿಡಿಯುವ ಅಥವಾ ಪ್ರತಿಬಂಧಕ ಪೆಪ್‌ಟೈಡ್‌ಗಳಿರುವ ಸಕ್ರಿಯವಲ್ಲದ ಪ್ರೋಟೀನ್. ಅನುವಾದ ನಂತರದ ಮಾರ್ಪಾಡಿನಲ್ಲಿ ಪ್ರೋಟೀಯೊಲೈಸಿಸ್ ಎಂದು ಕರೆಯಲಾದ ಪ್ರಕ್ರಿಯೆಯಲ್ಲಿ ಪ್ರತಿಬಂಧಕ ಸರಣಿ ತೆಗೆದು ಹಾಕಿದ ಮೇಲೆ ಪ್ರೋಟೀನ್ ಸಕ್ರಿಯವಾಗುತ್ತದೆ. ಪ್ರೊಪ್ರೋಟೀನ್‌ನಲ್ಲಿ ಪೊರೆಯ ಒಳಗೆ ಪ್ರವೇಶಿಸಲು ಅಥವಾ ಮೂಲಕ ಹಾಯಲು (ಅಂದರೆ ಸ್ರವಿಸಲು ಅವನ್ನು ಗುರಿ ಮಾಡಿಕೊಂಡಿರುವುದು) ಅಗತ್ಯವಾದ ನಿರ್ದಿಷ್ಟ ಸಂಕೇತ ಸರಣಿ (ಒಂದು ಎನ್-ಕೊನೆಯ ಸಂಕೇತ ಪೆಪ್‌ಟೈಡ್) ಇರುತ್ತದೆ[೧]. ಸಂಕೇತ ಪೆಪ್‌ಟೈಡ್ ಎಂಡೊಪ್ಲಾಸ್ಮ ಜಾಲತಂತಿಯಲ್ಲಿ ಸೀಳಲ್ಪಡುತ್ತದೆ.[೨] ಪ್ರೊಪ್ರೋಟೀನ್‌ನ ಮುಂಚಿನ ಘಟಕಗಳಲ್ಲಿ (ಪ್ರಿಪೊಪ್ರೋಟೀನ್‌ಗಳು) ಎರಡೂ ಸರಣಿಗಳು (ಪ್ರತಿಭಂದಕ ಮತ್ತು ಸಂಕೇತಗಳು) ಇನ್ನೂ ಇರುತ್ತವೆ.
ಪ್ರೋಟೀನ್ ಸಂಯೋಜನೆಯಲ್ಲಿ ಒಂದು ಸೂಕ್ತ ಚಾರ್ಜಾದ (ಟಿಆರ್‌ಎನ್ಎ ಪ್ರತಿಕೋಡಾನು ಅಣುವಿಗೆ ಸೂಕ್ತ ಅಮಿನೊ ಆಮ್ಲ ಅಂಟಿಕೊಳ್ಳುವುದು) ಅನುಕ್ರಮ ಟಿಆರ್‌ಎನ್ಎ ಅಣುಗಳನ್ನು ಎಂಆರ್‌ಎನ್ಎ ಅಣುಗಳ ಜೊತೆಗೆ ತರಲಾಗುತ್ತದೆ. ಚಾರ್ಜಾದ ಟಿಆರ್‌ಎನ್ಎ ಪ್ರತಿಕೋಡಾನಿಗೆ ಎಂಆರ್‌ಎನ್ಎ ಕೋಡಾನನ್ನು ಪ್ರತ್ಯಾಮ್ಲ ಜೋಡಿಯ (ಬೇಸ್ ಪೇರ್) ಮೂಲಕ ಹೊಂದಿಸಲಾಗುತ್ತದೆ. ನಂತರ ಅಮಿನೊ ಆಮ್ಲಗಳನ್ನು ಒಂದಕ್ಕೊಂದು ತಳಕು ಹಾಕಿಕೊಂಡು ಬೆಳೆಯುತ್ತಿರುವ ಪ್ರೋಟೀನ್‌ ಸರಪಳಿಯನ್ನು ಹಿಗ್ಗಿಸಲಾಗುತ್ತದೆ ಮತ್ತು ಅಮಿನೊ ಆಮ್ಲಗಳಿಲ್ಲದ ಟಿಆರ್‌ಎನ್ಎಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಪೂರ್ಣ ಸಂಕೀರ್ಣ ಪ್ರಕ್ರಿಯೆಗಳನ್ನು ರೈಬೋಸೋಮ್‌ ಆರ್‌ಎನ್ಎ ಎಂದು ಕರೆಯಲಾದ ಎರಡು ಮುಖ್ಯ ಆರ್‌ಎನ್ಎ ಸರಪಳಿಗಳು ಮತ್ತು ೫೦ಕ್ಕೂ ಹೆಚ್ಚು ಬೇರೆ ಬೇರೆ ಪ್ರೋಟೀನ್‌ಗಳನ್ನು ಹೊಂದಿದ ರೈಬೋಸೋಮ್‌ಗಳು ನಡೆಸುತ್ತವೆ. ರೈಬೋಸೋಮ್ ಎಂಆರ್‌ಎನ್ಎ ಅಣುವಿನ ಒಂದು ತುದಿಗೆ ಅಂಟಿಕೊಳ್ಳುತ್ತದೆ ಮತ್ತು ಅದರ ಉದಕ್ಕೂ ಚಲಿಸುತ್ತದೆ, ಅಮಿನೊ ಆಮ್ಲಗಳ ಭಾರಹೊತ್ತ ಟಿಆರ್‌ಎನ್ಎ ಅಣುಗಳನ್ನು ಬಂಧಿಸುತ್ತದೆ ಮತ್ತು ಅಮಿನೊ ಆಮ್ಲಗಳನ್ನು ಜೋಡಿಸಿ ಹೊಸ ಪ್ರೋಟೀನ್ ಸರಣಿಯನ್ನು ರೂಪಿಸುತ್ತದೆ.[೩]
ಪ್ರೋಕ್ಯಾರಿಯೋಟ್‌ ಮತ್ತು ಯೂಕ್ಯಾರಿಯೋಟ್‌ಗಳಲ್ಲಿನ ಪ್ರೋಟೀನ್ ಜೈವಿಕ ಸಂಯೋಜನೆ ನಡುವೆ ಹೋಲಿಕೆಗಳಿವೆಯಾದರೂ ಕೆಲವು ವ್ಯತ್ಯಾಸಗಳೂ ಇವೆ.

ಆರ್‌ಎನ್ಎ ಬೀಜಕಣದಲ್ಲಿ ಲಿಪ್ಯಂತರವಾಗುತ್ತದೆ ಮತ್ತು ಒಮ್ಮೆ ಪೂರ್ಣವಾಗಿ ಸಂಸ್ಕರಿಸಿದ ಮೇಲೆ ಆರ್‌ಎನ್ಎಯನ್ನು ಜೀವರಸಕ್ಕೆ ರವಾನಿಸಲಾಗುತ್ತದೆ. ಇದನ್ನು ಮುಂದೆ ರೈಬೋಸೋಮ್‌ (ನಸು ಬೂದಿ ಬಣ್ಣದಲ್ಲಿ ಟಿಆರ್‌ಎನ್ಎ ಹಿಂದೆ ತೋರಿಸಲಾಗಿದೆ) ಅನುವಾದಿಸುತ್ತದೆ.

ಲಿಪ್ಯಂತರ ಬದಲಾಯಿಸಿ

 
ಪ್ರೋಟೀನ್ ಲಿಪ್ಯಂತರ ಪ್ರಕ್ರಿಯೆಯನ್ನು ತೋರುವ ಚಿತ್ರ.


ಲಿಪ್ಯಂತರದಲ್ಲಿ ಜಿನೋಮ್‌ ಡಿಎನ್ಎಯ ಎರಡು ಸುರುಳಿಗಳಲ್ಲಿ ಒಂದು ಎಳೆಯನ್ನು ಪಡಿಯಚ್ಚಾಗಿಸಿ ಕೊಂಡು ಎಂಆರ್‌ಎನ್‌ಎ ಸರಪಳಿ ತಯಾರಾಗುತ್ತದೆ. ಇದನ್ನು ಪಡಿಯಚ್ಚು ಎಳೆ ಎಂದು ಕರೆಯಲಾಗಿದೆ. ಲಿಪ್ಯಂತರವನ್ನು ಮೂರು ಹಂತಗಳಾಗಿ ವಿಂಗಡಿಸ ಬಹುದು: ಆರಂಭ, ಉದ್ದವಾಗುವಿಕೆ ಮತ್ತು ಕೊನೆಗೊಳ್ಳುವಿಕೆ ಮತ್ತು ಪ್ರತಿ ಹೆಜ್ಜೆಯೂ ವಂಶವಾಹಿಯನ್ನು ಸರಿಯಾಗಿ ಲಿಪ್ಯಂತರ ಮಾಡುವ ಹೊಣೆ ಹೊತ್ತ ದೊಡ್ಡ ಸಂಖ್ಯೆಯ ಲಿಪ್ಯಂತರ ಏಜೆಂಟುಗಳಂತಹ ಪ್ರೋಟೀನ್‌ಗಳು ಮತ್ತು ಸಹಸಕ್ರಿಯಕಾರಕಗಳಿಂದ (ಕೊಯಾಕ್ಟಿವೇಟರ್‌) ನಿಯಂತ್ರಿತವಾಗಿದೆ.
ಲಿಪ್ಯಂತರವು ಡಿಎನ್ಎ ಇರುವ ಜೀವಕೋಶದ ಬೀಜಕಣದಲ್ಲಿ ನಡೆಯುತ್ತದೆ. ಜೀವಕೋಶದ ಡಿಎನ್ಎ ಎರಡು ತಂತುಗಳಿಂದ ರೂಪಿತವಾಗಿದ್ದು ತಂತು ಅಥವಾ ಎಳೆಗಳಲ್ಲಿ ಸಕ್ಕರೆ ಮತ್ತು ಪಾಸ್ಪೇಟ್‌ಗಳು ಇವೆ. ಈ ಎಳೆಗಳು ಎದರುಬದುರು ಎಳೆಗಳ ಪ್ರತ್ಯಾಮ್ಲಗಳ ನಡುವಿನ ಜಲಜನಕ ಬಂಧನದಿಂದ ಹಿಡಿದಿಡಲ್ಪಟ್ಟಿವೆ. ಪ್ರತಿ ಎಳೆಯಲ್ಲಿನ ಸಕ್ಕರೆ ಮತ್ತು ಪಾಸ್ಪೇಟ್‌ಗಳು ಹೆಚ್ಚು ಗಟ್ಟಿಯಾದ ಪಾಸ್ಪೊಡೈಯಿಸ್ಟರ್ ಎರಡು ವೆಲೆನ್ಸಿ ಬಂಧನದಿಂದ ಸೇರಿಸಲ್ಪಟ್ಟಿವೆ. ಹೆಲಿಕೇಸ್ ಕಿಣ್ವ ಡಿಎನ್ಎ “ಜಿಪ್ಪುತೆಗೆಯುತ್ತದೆ” (ಎರಡು ಭಿನ್ನ ಎಳೆಗಳ ನಡುವಿನ ಜಲಜನಕ ಬಂಧನವನ್ನು ಒಡೆಯುವುದು) ಮತ್ತು ಒಂದು ನ್ಯೂಕ್ಲಿಯೊಟೈಡ್ ಸರಪಳಿಯನ್ನು ನಕಲಿಸಲು ಮುಕ್ತವಾಗಿಸುತ್ತದೆ. ಆರ್‌ಎನ್‌ಎ ಪಾಲಿಮರೇಸ್ ಡಿಎನ್ಎ ಎಳೆಯನ್ನು ೩-ಪ್ರೈಮ್ (೩`) ತುದಿಯಿಂದ ೫-ಪ್ರೈಮ್‌ (೫’) ತುದಿಯ ದಿಕ್ಕಿನಲ್ಲಿ ಓದುತ್ತದೆ ಜೊತೆಗೆ ೫’ ನಿಂದ ೩’ ದಿಕ್ಕಿನ ಮೆಸೆಂಜರ್ ಆರ್‌ಎನ್ಎಯ ಒಂದು ಎಳೆಯನ್ನು ಸಂಯೋಜಿಸುತ್ತದೆ. ಸಾಮಾನ್ಯ ಆರ್‌ಎನ್ಎ ರಚನೆಯು ಡಿಎನ್ಎ ರಚನೆಯನ್ನೇ ಹೋಲುತ್ತದೆ ಆದರೆ ಡಿಎನ್ಎನಲ್ಲಿನ ತೈಮಿನ್ ನ್ಯೂಕ್ಲಿಯೋಟೈಡ್‌ (ಸಾಮಾನ್ಯವಾಗಿ Tಯಿಂದ ಸೂಚಿತವಾಗುತ್ತದೆ) ಬದಲಿಗೆ ಆರ್‌ಎನ್ಎನಲ್ಲಿ ಯುರಾಸಿಲ್ ನ್ಯೂಕ್ಲಿಯೋಟೈಡ್‌ (Uಯಿಂದ ಸೂಚಿತವಾಗುತ್ತದೆ) ಇರುತ್ತದೆ. ಎಂಆರ್‌ಎನ್ಎ ಒಂದು ಎಳೆ ಬೀಜಕಣ ತೊರೆದು ಬಿಜಕಣ ರಂಧ್ರಗಳ ಮೂಲಕ ಜೀವರಸಕ್ಕೆ ವಲಸೆ ಹೋಗುತ್ತದೆ.
ಲಿಪ್ಯಂತರದ ಮೊದಲ ಉತ್ಪಾದನೆ ಪ್ರೋಕ್ಯಾರಿಯೋಟ್ ಜೀವಕೋಶಗಳಲ್ಲಿ ಯೂಕ್ಯಾರಿಯೋಟ್ ಜೀವಕೋಶಗಳಿಗಿಂತ ಭಿನ್ನವಾಗಿದ್ದು ಅದರ ಎಂಆರ್‌ಎನ್‌ಎಗೆ ಲಿಪ್ಯಂತರ ನಂತರದ ಮಾರ್ಪಾಡುಗಳು ಅಗತ್ಯವಿಲ್ಲ. ಇದಕ್ಕೆ ಭಿನ್ನವಾಗಿ ಯೂಕ್ಯಾರಿಯೋಟ್ ಜೀವಕೋಶಗಳಲ್ಲಿ ಮೊದಲ ಉತ್ಪಾದನೆಯನ್ನು ಪ್ರಾಥಮಿಕ ಲಿಪ್ಯಂತರ ಎಂದು ಕರೆಯಲಾಗುತ್ತದೆ ಮತ್ತು ಅದಕ್ಕೆ ಲಿಪ್ಯಂತರದ ನಂತರದ ಮಾರ್ಪಾಟಿನ ಅಗತ್ಯವಿದೆ (ಅದರ ಮುಚ್ಚಳವಾಗಿ ೭ ಮಿಥೈಲ್-ಗ್ವಾನೊಸಿನ್, ಬಾಲವಾಗಿ ಪಾಲಿ-ಎ ಸೇರಿಸಲಾಗುತ್ತದೆ). ಇಂತಹ ಬದಲಾವಣೆಯ ನಂತರ ಹೆಎಚ್ಎನ್‌ಆರ್‌ಎನ್‌ಎ (ಹೆಟರೊಜೀನಸ್ ಬೀಜಕಣ ಆರ್‌ಎನ್‌ಎ) ಬರುತ್ತದೆ ಮತ್ತು ಹೆಚ್ಎನ್ಆರ್‌ಎನ್‌ಎ ನಂತರ ಸ್ಪೈಸಸೋಮ್‌ಗಳ ಮೂಲಕ ವಂಶವಾಹಿಯ ಸಂಕೇತಗಳಲ್ಲದ ಭಾಗಗಳನ್ನು ಒಟ್ಟಿಗೆ ಸೇರಿಸಿದ (ಇವನ್ನು ಇಂಟ್ರಾನ್‌ಗಳು ಎನ್ನಲಾಗಿದೆ) ನಂತರ ಕೊನೆಯದಾಗಿ ಎಂಆರ್‌ಎನ್ಎ ಉತ್ಪನ್ನವಾಗುತ್ತದೆ.

ಅನುವಾದ ಬದಲಾಯಿಸಿ

 
ಅನುವಾದ ಪ್ರಕ್ರಿಯೆಯನ್ನು ತೋರುವ ಚಿತ್ರ.
 
ಎಂಆರ್‌ಎನ್ಎ ಅನುವಾದ ಮತ್ತು ರೈಬೋಸೋಮ್‌ಗಳು ಪ್ರೋಟೀನ್‌ಗಳನ್ನು ಸಂಯೋಜಿಸುವ ಚಿತ್ರ.


ಆರ್‌ಎನ್‌ಎಯಿಂದ ಪ್ರೋಟೀನ್ ಸಂಯೋಜನೆಯನ್ನು ಅನುವಾದ ಎಂದು ಕರೆಯಲಾಗಿದೆ. ಯೂಕ್ಯಾರಿಯೋಟ್‌ಗಳಲ್ಲಿ ಅನುವಾದ ರೈಬೋಸೋಮ್‌ಗಳಿರುವ ಜೀವರಸದಲ್ಲಿ ನಡೆಯುತ್ತದೆ. ರೈಬೋಸೋಮ್‌ಗಳು ಸಣ್ಣ ಮತ್ತು ದೊಡ್ಡ ಉಪಘಟಕಗಳಿಂದ ಕೂಡಿದ್ದು ಅವು ಎಂಆರ್‌ಎನ್ಎಯನ್ನು ಸುತ್ತುವರೆಯುತ್ತವೆ. ಅನುವಾದದಲ್ಲಿ ಮೆಸೆಂಜರ್ ಆರ್‌ಎನ್ಎ (ಎಂಆರ್‌ಎನ್ಎ) ಸಂಕೇತವನ್ನು ಬಿಡಿಸಿ ಮುಕ್ಕೂಟ ನ್ಯೂಕ್ಲಿಯೋಟೈಡ್‌ನ ವಂಶವಾಹಿ ಕೋಡ್‌ ನಿಯಮಗಳ ಪ್ರಕಾರ ನಿರ್ದಿಷ್ಟ ಪಾಲಿಪೆಪ್‌ಟೈಡನ್ನು ತಯಾರಿಸಲಾಗುತ್ತದೆ. ಇದು ಎಂಆರ್‌ಎನ್ಎ ಸರಣಿಯ ಪಡಿಯಚ್ಚನ್ನು ಮಾರ್ಗದರ್ಶಿಯಾಗಿ ಬಳಸಿ ಪ್ರೋಟೀನಾಗುವ ಅಮಿನೊ ಆಮ್ಲಗಳ ಸರಣಿಯನ್ನು ರಚಿಸುತ್ತದೆ. ಅನುವಾದ ನಾಲ್ಕು ಹಂತಗಳಲ್ಲಿ ಮುಂದುವರೆಯುತ್ತದೆ: ಸಕ್ರಿಯವಾಗುವಿಕೆ, ಆರಂಭ, ಉದ್ದವಾಗುವಿಕೆ, ಮತ್ತು ಕೊನೆಯಾಗುವಿಕೆ (ಎಲ್ಲ ಹಂತಗಳೂ ಅನುವಾದದ ಉತ್ಪಾದನೆಯಾದ ಅಮಿನೊ ಆಮ್ಲ ಅಥವಾ ಪಾಲಿಪೆಪ್‌ಟೈಡ್‌ ಸರಣಿಯ ಬೆಳವಣಿಗೆಯನ್ನು ವಿವರಿಸುತ್ತವೆ).
ಸಕ್ರಿಯವಾಗುವಿಕೆಯಲ್ಲಿ ಸರಿಯಾದ ಅಮಿನೊ ಆಮ್ಲ ಸೂಕ್ತವಾದ ಟ್ರಾನ್ಸಫರ್ ಆರ್‌ಎನ್ಎಯನ್ನು ಸೇರುತ್ತದೆ. ನಿಜವಾಗಿಯೂ ಇದು ತಾಂತ್ರಿಕ ಅರ್ಥದಲ್ಲಿ ಅನುವಾದ ಹೆಜ್ಜೆಯಲ್ಲವಾದರೂ ಅನುವಾದ ಮುಂದುವರೆಯಲು ಇದು ಅಗತ್ಯ. ಅಮಿನೊ ಆಮ್ಲ ತನ್ನ ಕಾರ್ಬೊಕ್ಸಿಲ್‌ ಗುಂಪಿನಿಂದ ಟಿಆರ್‌ಎನ್‌ನ ೩` OH (೩ ಪ್ರೈಮ್ ಆಮ್ಲಜನಕ ಮತ್ತು ಜಲಜನಕ) ಎಸ್ಟರ್ ಬಾಂಡ್ [ಟಿಪ್ಪಣಿ ೩] ಮೂಲಕ ಸೇರುತ್ತದೆ. ಟಿಆರ್‌ಎನ್‌ಎ ಹೀಗೆ ಅಮಿನೊ ಆಮ್ಲದೊಂದಿಗೆ ಸೇರಿದಾಗ ಅದನ್ನು ಚಾರ್ಜಾದದ್ದು ಎಂದು ಕರೆಯಲಾಗುತ್ತದೆ. ಆರಂಭವು ರೈಬೋಸೋಮ್‌ನ ಸಣ್ಣ ಉಪಘಟಕ ಆರಂಭದ ಏಜೆಂಟುಗಳ ಸಹಾಯದಿಂದ ಟಿಆರ್‌ಎನ್ಎನ ೫’ (೫ ಪ್ರೈಮ್) ತುದಿಗೆ ಸೇರುವುದನ್ನು ಒಳಗೊಂಡಿದೆ ಮತ್ತು ಇದಕ್ಕೆ ಇತರ ಪ್ರೋಟೀನ್‌ಗಳು ಸಹಾಯ ಮಾಡುತ್ತವೆ. ಉದ್ದವಾಗುವಿಕೆ ಪಕ್ಕದ ಅಮಿನೊಅಸಿಲ್-ಟಿಆರ್‌ಎನ್‌ಎಯು (ಚಾರ್ಜಾದ ಟಿಆರ್‌ಎನ್ಎ) ಸಾಲಿನಲ್ಲಿ ರೈಬೋಸೋಮ್‌ನ್ನು ಜಿಟಿಪಿ (ಗ್ವಾನೋಸಿನ್ ಟ್ರೈಪಾಸ್ಪೇಟ್) ಮತ್ತು ಉದ್ದವಾಗುವಿಕೆ ಏಜೆಂಟುಗಳೊಂದಿಗೆ ಸೇರಿದಾಗ ಆಗುತ್ತದೆ. ಪಾಲಿಪೆಪ್‌ಟೈಡ್‌ನ ಕೊನೆಯಾಗಿಸುವಿಕೆಯು ರೈಬೋಸೋಮ್‌ನ ಎ ಸೈಟ್ ನಿಲ್ಲಿಸುವ ಕೋಡಾನನ್ನು (ಈ ಕೋಡಾನುಗಳು UAA, UAG ಅಥವಾ UGA)[ಟಿಪ್ಪಣಿ ೪] ಎದುರಿಸಿದಾಗ ಆಗುತ್ತದೆ. ಹೀಗಾದಾಗ ಯಾವ ಟಿಆರ್‌ಎನ್ಎಯೂ ಈ ಕೋಡಾನನ್ನು ಗುರುತಿಸುವುದಿಲ್ಲ ಆದರೆ ಬಿಡುಗಡೆಯ ಏಜೆಂಟುಗಳು ಅರ್ಥವಿಲ್ಲದ ಕೋಡಾನನ್ನು ಗುರಿಸುತ್ತವೆ ಮತ್ತು ಪಾಲಿಪೆಪ್‌ಟೈಡ್ ಸರಪಳಿಯ ಬಿಡುಗಡೆಗೆ ಕಾರಣವಾಗುತ್ತವೆ. ಪ್ರೋಟೀನ್ ಜೈವಿಕ ಸಂಯೋಜನೆಯಲ್ಲಿನ ಈ ಅನುವಾದವನ್ನು ಕೆಲಸ ಮಾಡದಂತೆ ಮಾಡುವ ಅಥವಾ ಪ್ರತಿಬಂಧಿಸುವ ಸಾಮರ್ಥ್ಯವನ್ನು ಅನಿಸೊಮೈಸಿನ್, ಸೈಕ್ಲೊಹೆಕ್ಸಿಮೈಡ್‌, ಕ್ಲೋರಾಮ್‌ಫೆನಿಕಾಲ್‌, ಟೆಟ್ರಾಸೈಕ್ಲಿನ್, ಸ್ಟ್ರೆಪ್ಟೊಮೈಸಿನ್, ಎರಿತ್ರೊಮೈಸಿನ್‌, ಪುರೊಮೈಸಿನ್‌ನಂತಹ ಕೆಲವು ಪ್ರತಿಜೀವಕಗಳಲ್ಲಿ (ಯಾಂಟಿಬಯೋಟಿಕ್‌) ಬಳಸಲಾಗಿದೆ.

ಪ್ರೋಟೀನ್ ಅನುವಾದದ ನಂತರದ ಘಟನೆಗಳು ಬದಲಾಯಿಸಿ


ಜೈವಿಕ ಸಂಯೋಜನೆಯ ನಂತರದ ಘಟನೆಗಳು ಅನುವಾದ ನಂತರದ ಮಾರ್ಪಾಡುಗಳು ಮತ್ತು ಪ್ರೋಟೀನ್ ಮಡಚಿಕೊಳ್ಳುವಿಕೆಯನ್ನು ಒಳಗೊಂಡಿವೆ. ಸಂಯೋಜನೆಯ ಸಮಯದಲ್ಲಿ ಮತ್ತು ನಂತರದಲ್ಲಿ ಕೆಲವು ಸಲ ಮಡಿಚಿಕೊಂಡು ಎರಡನೆಯ ಮತ್ತು ಮೂರನೆಯ ಎಂದು ಕರೆಯಲಾದ ರಚನೆಗಳನ್ನು ಪಡೆಯುತ್ತವೆ. ಇದನ್ನು ಪ್ರೋಟೀನ್ ಮಡಿಚಿಕೊಳ್ಳುವಿಕೆ ಎಂದು ಕರೆಯಲಾಗಿದೆ.

ಟಿಪ್ಪಣಿಗಳು ಬದಲಾಯಿಸಿ

  1. ಇಂಗ್ಲೀಶ್‌ ವಿಕಿಪೀಡಿಯದ Protien Biosynthesis ಲೇಖನ ಅನುವಾದ. ಲಿಂಕ್ https://en.wikipedia.org/wiki/Protein_biosynthesis
  2. ರಸಾಯನಿಕ ಸಂಯುಕ್ತಕ್ಕೆ ಅಮಿನೊಅಸಿಲ್‌ ಗುಂಪು ಸೇರಿಸುವುದು
  3. ಆಮ್ಲ ಮತ್ತು ಆಲ್ಕೋಹಾಲ್ ನಡುವಿನ ರಾಸಾಯನಿಕ ಕ್ರಿಯೆಯ ಮೂಲಕ ಆಗುವ ಬಾಂಡ್
  4. ಆರ್‌ಎನ್‌ಎನಲ್ಲಿರುವ ನಾಲ್ಕು ನ್ಯೂಕ್ಲಿಯೋಟೈಡ್‌ಗಳು ಅಡೆನಿನ್-A, ಗ್ವಾನಿನ್-G, ಸಿಸ್ಟೊಸಿನ್-C ಮತ್ತು ಯುರಾಸಿಲ್-U

ಉಲ್ಲೇಖಗಳು ಬದಲಾಯಿಸಿ

  1. Alberts, Bruce (2002). Molecular biology of the cell. New York: Garland Science. p. 760. ISBN 0-8153-3218-1.
  2. Alberts, Bruce (2002 above).
  3. Alberts, Bruce. Molecular Biology of the Cell, 5e. New York: Garland Science, 2008.