ಪೇಷ್ವೆ ಎಂಬುದು ಶಿವಾಜಿ ಮರಾಠ ರಾಜ್ಯ ಸ್ಥಾಪಿಸಿದಾಗ ಅಸ್ತಿತ್ವಕ್ಕೆ ಬಂದ ಒಂದು ಹುದ್ದೆ. ಶಿವಾಜಿ ರಚಿಸಿದ ಸಚಿವ ಮಂಡಲದಲ್ಲಿ ಅಷ್ಟ ಪ್ರಧಾನರಿದ್ದರು. ಮುಖ್ಯ ಪ್ರಧಾನನನ್ನು ಪೇಷ್ವೇ ಎಂದು ಕರೆಯಲಾಗುತ್ತಿತ್ತು. ನಾಗರಿಕ ಆಡಳಿತದಲ್ಲಿ ಪೇಷ್ವೆಯರು ಪ್ರಧಾನ ಹೊಣೆಗಾರಿಕೆ.

ಹುದ್ದೆಯ ಉಗಮ ಬದಲಾಯಿಸಿ

1707ರಲ್ಲಿ ಔರಂಗ್‍ಜೇಬನ ಮರಣಾನಂತರ ಶಿವಾಜಿಯ ಹಿರಿಯ ಮಗ ಸಾಂಬಾಜಿಯ ಮಗ ಸಾಹುವನ್ನು ಮೊಗಲರು ಬಿಡುಗಡೆ ಮಾಡಿದಾಗ ಮರಾಠ ರಾಜ್ಯದಲ್ಲಿ ವಿಶಿಷ್ಟ ಪರಿಸ್ಥಿತಿ ಉಂಟಾಯಿತು. ಬಹುಸಂಖ್ಯಾತ ಸರದಾರರ ಬೆಂಬಲದಿಂದ ಸಾಹು ಸಾತಾರಾದಲ್ಲಿ ಮರಾಠಾ ರಾಜ್ಯದ ಸಿಂಹಾಸನವೇರಲು ಸಾಧ್ಯವಾಯಿತು. ರಾಜ ಸಾಹು 1713ರಲ್ಲಿ ಬಾಲಾಜಿ ವಿಶ್ವನಾಥನನ್ನು ಪೇಷ್ವೆಯಾಗಿ ನೇಮಿಸಿದ. ಈ ಘಟನೆ ಮರಾಠಾ ರಾಜ್ಯದ ಇತಿಹಾಸದಲ್ಲೇ ಹೊಸ ಅಧ್ಯಾಯ ತೆರೆಯಿತು. ಅಲ್ಲಿಂದ ಮುಂದೆ ಮರಾಠಾ ಸಾಮ್ರಾಜ್ಯ ಅಸ್ತಿತ್ವದಲ್ಲಿರುವವರೆಗೂ ಬಾಲಾಜಿ ವಿಶ್ವನಾಥನ ವಂಶಸ್ಥರೇ ಪೇಷ್ವೆಗಳಾಗಿದ್ದರು. ಮರಾಠಾ ರಾಜ್ಯದ ಹಾಗೂ ಭಾರತದ ರಾಜಕೀಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ಪ್ರಮುಖ ಪೇಷ್ವೆಗಳು ಬದಲಾಯಿಸಿ

1. ಬಾಲಾಜಿ ವಿಶ್ವನಾಥ ಸಮರ್ಥ ರಾಜಕಾರಣಿ ಹಾಗೂ ಪೇಷ್ವೆ. ಯುದ್ಧ ನಿಪುಣನಾಗಿದ್ದ. ಇವನ ಸಾಮರ್ಥ್ಯದಿಂದಾಗಿ ಉಳಿದ ಮಂತ್ರಿಗಳಿಗಿಂತ ಪೇಷ್ವೆಯ ಸ್ಥಾನಮಾನಗಳು ಹೆಚ್ಚಿದವು. ಅವನು 1720ರ ಏಪ್ರಿಲ್‍ನಲ್ಲಿ ನಿಧನನಾದ. ಆ ವೇಳೆಗೆ ಮರಾಠಾ ರಾಜ್ಯ ಭಾರತದ ರಾಜಕೀಯ ಭೂಪಟದಲ್ಲಿ ಸ್ಥಿರವಾದ ಸ್ಥಾನ ಪಡೆದು ಆ ಕಾಲದ ಪ್ರಬಲ ಶಕ್ತಿಗಳಲ್ಲೊಂದೆನಿಸಿತು. ಅವನ ಅಧಿಕಾರದ ಅವಧಿಯಲ್ಲಿ ರಾಜನ ಆಳ್ವಿಕೆಯಿಂದ ಪೇಷ್ವೆಯ ಆಳ್ವಿಕೆಗೆ ಪರಿವರ್ತನೆ ಆಯಿತೆಂದು ಪರಿಗಣಿಸಲಾಗಿದೆ.

2. ಬಾಲಾಜಿ ವಿಶ್ವನಾಥನ ತರುವಾಯ ಅವನ ಮಗ 1ನೆಯ ಬಾಜೀರಾಯ ಪೇಷ್ವೆಯಾಗಿ ನೇಮಿತನಾದ. ಬಾಜೀರಾಯ ಕುಸಿಯುತ್ತಿದ್ದ ಮೊಗಲ್ ಸಾಮ್ರಾಜ್ಯದ ಬಗ್ಗೆ ಆಕ್ರಮಣಶೀಲ ನೀತಿಯನ್ನು ಅನುಸರಿಸಬೇಕೆಂದು ಪ್ರತಿಪಾದಿಸಿದ. ನಿಜಾಮ ಕೆಲವು ಮರಾಠಾ ಸರದಾರರು ಮತ್ತು ತಾರಾಬಾಯಿಯೊಡಗೂಡಿ, ಪ್ರವರ್ಧಮಾನಕ್ಕೆ ಬರುತ್ತಿದ್ದ ಮರಾಠಾ ಸಾಮ್ರಾಜ್ಯವನ್ನು ಬುಡದಲ್ಲೇ ಕತ್ತರಿಸಲು ಯತ್ನಿಸಿದ. ಅವರ ಸಂಯುಕ್ತ ಸೈನ್ಯ ಒಂದು ಹಂತದಲ್ಲಿ ಪುಣೆಯನ್ನೂ ಆಕ್ರಮಿಸಿಕೊಂಡಿತು. ಆದರೆ ಬಾಜೀರಾಯನ ಶೌರ್ಯ ಹಾಗೂ ಯುದ್ಧತಂತ್ರಗಳ ಮುಂದೆ ಮೊಗಲರು ನಿಲ್ಲದಾದರು. 1728ರ ಪಾಲ್ಖೀಡ್ ಯುದ್ಧದಲ್ಲಿ ನಿಜಾಮ ಸೋತು ಬಾಜೀರಾಯನೊಂದಿಗೆ ಒಪ್ಪಂದ ಮಾಡಿಕೊಂಡ. ಇದರ ಪ್ರಕಾರ ಮೊಗಲರು ರಾಜಸಾಹುವನ್ನು ಛತ್ರಪತಿ ಎಂದು ಒಪ್ಪಿಕೊಳ್ಳಲಾಯಿತು. 1731ರಲ್ಲಿ ಕೊಲ್ಲಾಪುರದಿಂದ ಆಳುತ್ತಿದ್ದ ಶಂಭೂಜಿಗೆ ಮಾನ್ಯತೆ ನೀಡಿ ಅಧೀನ ರಾಜನ ಸ್ಥಾನಮಾನ ಕೊಡಲಾಯಿತು.

1720ರ ದಶಕವಿಡೀ ಗುಜರಾತ್ ಮತ್ತು ಮಾಳ್ವಗಳ ಪರಮಾಧಿಕಾರದ ಬಗ್ಗೆ ಮರಾಠರಿಗೂ ಮೊಗಲರಿಗೂ ಸಂಘರ್ಷಣೆಗಳೂ ನಡೆಯುತ್ತಲೇ ಇದ್ದವು. 1731ರ ಹೊತ್ತಿಗೆ ಬಾಜೀರಾಯ ಈ ಪ್ರದೇಶಗಳಲ್ಲಿ ಮರಾಠರು ಮೇಲುಗೈ ಸಾಧಿಸುವಂತೆ ಮಾಡಿದ್ದಲ್ಲದೆ ನಿಜಾಮನಿಂದ ಮರಾಠರು ಉತ್ತರ ಭಾರತದಲ್ಲಿ ನಡೆಸಬಹುದಾದ ಕಾರ್ಯಾಚರಣೆಯಲ್ಲಿ ಮಧ್ಯ ಪ್ರವೇಶಿಸದಂತೆ ಭರವಸೆ ಪಡೆದ. ಬುಂಡೇಲರಿಗೆ ನೆರವು ನೀಡುವ ನೆಪದಲ್ಲಿ ಪೇಷ್ವೆ ಮರಾಠಾ ಸೈನ್ಯವನ್ನು ಉತ್ತರ ಭಾರತದೊಳಗೆ ನುಗ್ಗಿಸಿದ. ದೆಹಲಿಗೆ ಬೆದರಿಕೆ ಹಾಕಿ ಮೊಗಲ್ ಸಾಮ್ರಾಟ ಮರಾಠರ ಷರತ್ತುಗಳನ್ನು ಒಪ್ಪುವಂತೆ ಮಾಡಿದ. ಬಾಜೀರಾಯ 1740ರಲ್ಲಿ ನಿಧನನಾದಾಗ ನರ್ಮದಾ ಮತ್ತು ಚಂಬಲ್‍ಗಳ ದಕ್ಷಿಣದ ಪ್ರದೇಶ ಮರಾಠರ ಅಧೀನಕ್ಕೆ ಬಂದಿತ್ತು.

3. ಒಂದನೆಯ ಬಾಜೀರಾಯನ ನಿಧನಾನಂತರ ಅವನ ಹಿರಿಯ ಮಗ ನಾನಾ ಸಾಹೇಬ 1740ರಲ್ಲಿ ಪೇಷ್ವೆಯಾಗಿ ನೇಮಿತನಾದ. ಇವನ ಕಾಲದಲ್ಲಿ ಪೇಷ್ವೆಯ ಅಧಿಕಾರ ಅಬಾಧಿತವಾಗಿ ಸಾಗಿತ್ತು. ಮರಾಠಾ ಸೈನ್ಯ ರಾಜಾಸ್ಥಾನದಿಂದ ಹಿಡಿದು ಬಂಗಾಳದವರೆಗೂ ಉತ್ತರ ಪ್ರದೇಶದಿಂದ ಹಿಡಿದು ತಮಿಳುನಾಡಿನವರೆಗೂ ತನ್ನ ಬಲಪ್ರದರ್ಶನ ನಡೆಸಿತು. ಇವನ ಕಾಲದಲ್ಲಿ ನ್ಯಾಯಾಡಳಿತ ಉನ್ನತವಾಗಿತ್ತು. ಆದರೆ, ಮರಾಠಾ ಆಸ್ಥಾನ ನಾನಾ ಬಗೆಯ ಕಾರಸ್ಥಾನಗಳ ಹುತ್ತವಾಗಿತ್ತು. ಪೇಶ್ವೆಯ ಹುದ್ದೆ ಆನುವಂಶಿಕವೆಂಬುದು ಅಧಿಕೃತವಾಗಿ ಸ್ಥಾಪಿತವಾದದ್ದು ಆಗಲೇ. ರಾಜ ಸಾಹು ಸಾಯುವುದಕ್ಕೆ ಸ್ವಲ್ಪ ಮುಂಚೆ 1740ರಲ್ಲಿ ಪೇಷ್ವೆ ಹುದ್ದೆಯನ್ನು ಆನುವಂಶಿಕವೆಂದು ಘೋಷಿಸಿದ. ರಾಜಮನೆತನವನ್ನು ಮುಂದುವರಿಸುವ ಹೊಣೆಯನ್ನು ಪೇಷ್ವೆಗೆ ವಹಿಸಲಾಯಿತು. ಇದರಿಂದ ಪೇಷ್ವೆ ಶಾಸನಬದ್ಧ ಆಡಳಿತದಲ್ಲಿ ಪರಮೋಚ್ಛ ಸ್ಥಾನಪಡೆದ. ರಾಜ ಹಿನ್ನೆಲೆಗೆ ಸರಿಯುವಂತಾಯಿತು. ಸಾಹು ಬದುಕಿರುವವರೆಗೂ ಪೇಷ್ವೆಗಳು ರಾಜನಿಗೆ ವಿಧೇಯರಾಗಿದ್ದರು. ಆದರೆ ಅವನ ಉತ್ತರಾಧಿಕಾರಿಯಾದ ರಾಮರಾಜನ ಕಾಲದಲ್ಲಿ ಸಾಮ್ರಾಜ್ಯದ ವ್ಯವಹಾರಗಳಲ್ಲಿ ಪೇಷ್ವೆಯದೇ ಕೊನೆಯ ಮಾತಾಯಿತು. ಸಾತಾರದಿಂದ ಪುಣೆಗೆ ಇದರ ರಾಜಧಾನಿಯನ್ನು ವರ್ಗಾಯಿಸಲಾಯಿತು.

ನಾನಾಸಾಹೇಬ ದಕ್ಷಿಣ ಭಾರತದ ರಾಜಕೀಯ ವಿದ್ಯಮಾನಗಳಿಗೆ ಹೆಚ್ಚು ಪ್ರಾಮುಖ್ಯ ನೀಡಿದ. ತನ್ನ ಹಿತರಕ್ಷಣೆಯ ಆತುರದಲ್ಲಿ ಇಂಗ್ಲಿಷರಿಗೆ ಮಹಾರಾಷ್ಟ್ರದಲ್ಲಿ ಕೆಲವೊಂದು ಸ್ಥಳಗಳನ್ನು ಬಿಟ್ಟುಕೊಟ್ಟ. ಮರಾಠರು 1758ರಲ್ಲಿ ಪಂಜಾಬನ್ನು ಜಯಿಸಿ ಅಹಮದ್ ಷಾ ಅಬ್ದಾಲಿಯ ಮಗ ತೈಮೂರನನ್ನು ಅಲ್ಲಿಂದ ಹೊರದೂಡಿದರು. ಆದರೆ 1761ರಲ್ಲಿ ಪಾಣಿಪಟ್‍ನಲ್ಲಿ ನಡೆದ ಕದನದಲ್ಲಿ ಅಹಮ್ಮದ್ ಷಾ ಅಬ್ದಾಲಿಯಿಂದ ಮರಾಠರು ಸೋತರು. ನಾನಾಸಾಹೇಬ ಪುಣೆಗೆ ಹಿಂದಿರುಗಿದ ಕೂಡಲೇ ತೀರಿಕೊಂಡ.

4. ಅನಂತರ ಪೇಷ್ವೆಯ ಪ್ರಾಬಲ್ಯ ಪ್ರಶ್ನಾತೀತವಾಗಿ ಉಳಿಯಲಿಲ್ಲ. ನಾನಾ ಸಾಹೇಬನ ಮಗ ಮಾಧವರಾಯ ತನ್ನ ವಂಶದ ಹಿರಿಯ ರಘೋಬನ ಹಿಡಿತದಿಂದ ಬಿಡುಗಡೆಯಾಗಲು ಬಹಳಷ್ಟು ಶ್ರಮಿಸಬೇಕಾಯಿತು. ಕೆಲವು ಮರಾಠಾ ಸರದಾರರು ದಖನ್ ಸುಬೇದಾರನೊಂದಿಗೆ ಸೇರಿಕೊಂಡು ಮರಾಠಾ ಸಾಮ್ರಾಜ್ಯವನ್ನೇ ದುರ್ಬಲಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಜೊತೆಗೆ ಮರಾಠರು ದಕ್ಷಿಣ ಭಾರತದಲ್ಲಿ ಗೊತ್ತು ಗುರಿ ಇಲ್ಲದೆ ಯುದ್ಧಗಳಲ್ಲಿ ತೊಡಗಿ ಅಮೂಲ್ಯ ಸಂಪನ್ಮೂಲವನ್ನೂ ಕಾಲವನ್ನೂ ವ್ಯಯ ಮಾಡಿದರು. 1769-72ರ ಅವಧಿಯಲ್ಲಿ ಉತ್ತರ ಭಾರತದಲ್ಲಿ ಮತ್ತೆ ಮರಾಠರು ತಮ್ಮ ಶೌರ್ಯ ಮೆರೆದರು. ರಜಪೂತರು ಜಾಟರು ಆಫ್ಫ್‍ನರು, ಪಠಾಣರು, ರೋಹಿಲರು, ಮರಾಠಾ ಸೈನ್ಯಕ್ಕೆ ತಲೆ ಬಾಗಿದರು. 1764ರಿಂದ ಬ್ರಿಟಿಷರ ಆಶ್ರಯದಲ್ಲಿದ್ದ ನಾಮಮಾತ್ರ ಮೊಗಲ್ ಸಾಮ್ರಾಟನನ್ನು ಮರಾಠರು ತಮ್ಮ ಆಶ್ರಯಕ್ಕೆ ಸೆಳೆದುಕೊಂಡರು.

ಆದರೆ ಮರಾಠರ ಈ ಯಶಸ್ಸುಗಳು ಬಹುಕಾಲ ಬಾಳಲಿಲ್ಲ. 1772ರಲ್ಲಿ ಪೇಷ್ವೆ ಮಾಧವರಾಯ ಅಕಾಲ ಮರಣ ಹೊಂದಿದ. ಮರಾಠಾ ಒಕ್ಕೂಟಕ್ಕೆ ಇದರಿಂದ ಭಾರಿ ಪೆಟ್ಟು ಬಿತ್ತು. ಮಾಧವರಾಯನ ಉತ್ತರಾಧಿಕಾರಿ 1773ರಲ್ಲಿ ಕೊಲೆಯಾದ. ತರುವಾಯ ಯಾದವೀ ಕಲಹದಿಂದ ಮರಾಠರ ಪ್ರಾಬಲ್ಯ ಕಡಿಮೆಯಾಗುತ್ತ ಹೋಯಿತು.

5. ಮಾಧವರಾಯ ನಿಧನನಾದ ಮೇಲೆ ಹುಟ್ಟಿದ ಸವಾಯಿ ಮಾಧವರಾಯನನ್ನು ಪೇಷ್ವೆಯಾಗಿ ಮಾಡಲಾಯಿತು. ನಾನಾಪಡ್ನವೀಸ ರಾಜ್ಯದ ಪ್ರತಿನಿಧಿಯಾದ. ಆದರೆ ರಘೋಬನ ಸ್ವಾರ್ಥದಿಂದಾಗಿ ಸಾಲ್‍ಸೆಟ್‍ದ್ವೀಪ ಬ್ರಿಟಿಷರಿಗೆ ಹೋಗುವಂತಾಯಿತು. ದಕ್ಷಿಣದಲ್ಲಿ ನಿಜಾಮನನ್ನಾಗಲಿ, ಹೈದರಾಲಿಯನ್ನಾಗಲಿ ಅನಂತರ ಟೀಪುವನ್ನಾಗಲಿ ಮರಾಠರು ಒಟ್ಟಾಗಿ ಎದುರಿಸುವ ದಿನಗಳು ಮುಗಿದಿದ್ದುವು. ದೇಶೀಯ ಶಕ್ತಿಗಳೆಲ್ಲ ಒಂದಾಗಿ ಇಂಗ್ಲಿಷರನ್ನು ಎದುರಿಸುವ ಪರಿಸ್ಥಿತಿ ಇರಲಿಲ್ಲ.

ಪೇಷ್ವೆ ಮತ್ತು ಮಹದಾಜಿಸಿಂಧ್ಯನ ವೈಯುಕ್ತಿಕ ವೈಷಮ್ಯ ಹಾಗೂ ಮಹತ್ವಾಕಾಂಕ್ಷೆಗಳು ಮರಾಠಾ ಸಾಮ್ರಾಜ್ಯವನ್ನು ಹೋಳು ಮಾಡಿದುವು. ವಹದಾಜಿ 1794ರಲ್ಲಿ ನಿಧನನಾದಾಗ ಉತ್ತರ ಭಾರತದಲ್ಲಿ ಮರಾಠಾರ ನೆಲೆಗೆ ಕೊಡಲಿ ಪೆಟ್ಟು ಬಿತ್ತು. ನಾನಾಫಡ್ನವೀಸ ಪೇಷ್ವೆಯನ್ನು ಅಂಕಿತದಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿದ್ದ. ಸವಾಯಿ ಮಾಧವರಾಯ 1795ರಲ್ಲಿ ದುರ್ಮರಣಕ್ಕೀಡಾದಾಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು.

6. ಅನಂತರ ಅಧಿಕಾರಕ್ಕಾಗಿ ಕಲಹ ನಡೆದು ಎರಡನೆಯ ಬಾಜೀರಾಯ ಪೇಷ್ವೆಯಾದ. ಈತ ಕುತಂತ್ರಿ ಸ್ವಾರ್ಥಪರ, ಸಂಕುಚಿತ ಮನೋಭಾವದವನು ಆಗಿದ್ದ. 1802-18ರಲ್ಲಿ ಬ್ರಿಟಿಷರು ಎಲ್ಲ ಮರಾಠ ಸರದಾರರನ್ನು ಬಿಡಿ ಬಿಡಿಯಾಗಿ ಸೋಲಿಸಿದರು. 1818ರಲ್ಲಿ ಮಹೊ ಎಂಬಲ್ಲಿ ಎರಡನೆಯ ಬಾಜೀರಾಯ ಬ್ರಿಟಿಷರಿಗೆ ಶರಣಾಗತನಾದ. ಈ ಘಟನೆಯೊಂದಿಗೆ ಪೇಷ್ವೆಗಳ ಕಾಲ ಮುಗಿಯಿತು.

ಒಂದು ಶತಮಾನ ಕಾಲ ಪೇಷ್ವೆಗಳು ಭಾರತದ ರಾಜಕಾರಣದಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಮೊದಲ ನಾಲ್ವರು ಪೇಷ್ವೆಗಳು ಮರಾಠಾ ಸಾಮ್ರಾಜ್ಯದ ಏಳಿಗೆಗೆ ನೀಡಿದ ಕೊಡುಗೆ ಅಮೂಲ್ಯವಾದುದು.

ಗ್ರಂಥಸೂಚಿ ಬದಲಾಯಿಸಿ

  • Kulkarni, A.R (1996). Marathas and the Marathas Country: The Marathas. Books & Books.
  • Joshi, Pandit Shankar (1980). Chhatrapati Sambhaji, 1657-1689 A.D. s.chand.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪೇಷ್ವೆ&oldid=1060616" ಇಂದ ಪಡೆಯಲ್ಪಟ್ಟಿದೆ