ತಾಳಗುಂದ ಶಾಸನಗಳು ಕನ್ನಡದ ಹಳೆಯ ಕಲ್ಲಿನ ಶಾಸನಗಳು. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿತಾಳಗುಂದ ಗ್ರಾಮದಲ್ಲಿವೆ. ಇಲ್ಲಿನ ಒಂದು ಶಾಸನವು ಈವರೆಗೆ ಸಿಕ್ಕಿರುವ ಕನ್ನಡದ ಅತಿಹಳೆಯ ಶಾಸನವೆಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.[೧] ಅದುವರೆಗೂ ಹಲ್ಮಿಡಿ ಶಾಸನವು ಕನ್ನಡದ ಅತಿಹಳೆಯ ಶಾಸನವೆಂದು ಪರಿಗಣಿತವಾಗಿತ್ತು. ಆದರೆ ಅದಕ್ಕಿಂತಲೂ ಇದು ಹಳೆಯದೆಂದು ಭಾರತೀಯ ಪುರಾತತ್ವ ಇಲಾಖೆ ಪ್ರಕಟಿಸಿದೆ. ಈ ಮೂಲಕ ಕನ್ನಡ ಬರವಣಿಗೆಯ ಇತಿಹಾಸವು ಸುಮಾರು ಒಂದು ನೂರು ವರ್ಷಗಳಷ್ಟು ಹಿಂದೆ ಹೋದಂತಾಗಿದೆ.[೨][೩]

ಶಾಸನದ ಇತಿಹಾಸ ಬದಲಾಯಿಸಿ

ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆಯಿಂದ ೨೦೧೩-೧೪ರಲ್ಲಿ ನಡೆಸಿದ ಉತ್ಖನನದ ವೇಳೆ ಈ ಶಾಸನ ಪತ್ತೆಯಾಗಿತ್ತು. ಇದರ ಅಧ್ಯಯನಕ್ಕೆ ಸಾಕಷ್ಟು ಸಮಯ ತೆಗೆದುಕೊಂಡ ಪುರಾತತ್ವ ಇಲಾಖೆ ಇದರ ಪ್ರಾಚೀನತೆಯ ಅಂಶಗಳನ್ನು ಬಹಿರಂಗಪಡಿಸಿತು. ಇದರಂತೆ, ಈ ಶಾಸನವೇ ಕನ್ನಡದ ಮೊದಲ ಶಾಸನವೆಂದು ಪರಿಗಣಿಸಲ್ಪಟ್ಟಿದೆ. ಈ ಶಾಸನ ರಚನೆಯಾದ ಅವಧಿ ಕ್ರಿ.ಶ. ೩೭೦-೪೫೦ ಇರಬಹುದೆಂದು ಅಧ್ಯಯನದಿಂದ ತಿಳಿದುಬಂದಿದೆ. ಈ ಶಾಸನ ಕದಂಬ ದೊರೆ ಶಾಂತಿವರ್ಮನ ಕಾಲಕ್ಕಿಂತಲೂ ಹಳೆಯದೆಂಬ ಅಂಶ ಬೆಳಕಿಗೆ ಬಂದಿದೆ.

ಇನಾಮು ಭೂಮಿ ವಿವರ ಬದಲಾಯಿಸಿ

ವಜಿನಾಗ ಎಂಬ ಅಂಬಿಗನಿಗೆ ಕದಂಬ ದೊರೆಯು ಭೂಮಿಯನ್ನು ಇನಾಮು ನೀಡಿದ್ದ ಅಂಶವನ್ನು ಈ ಶಾಸನ ವಿವರಿಸುತ್ತದೆ. ಪ್ರಣವಲಿಂಗೇಶ್ವರ ದೇವಾಲಯದ ಉತ್ತರ ಭಾಗದಲ್ಲಿ ಇದು ಪತ್ತೆಯಾಗಿತ್ತು. ತುಂಡರಿಸಿರುವ ಏಳು ಸಾಲುಗಳಲ್ಲಿ ಕನ್ನಡ ಪದಗಳ ಬಳಕೆ ಮಾಡಿರುವುದರಿಂದ ಶಾಸನ ಶಾಸ್ತ್ರದ ಪ್ರಕಾರ ಇದನ್ನು ಕನ್ನಡ ಶಾಸನ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಅಂಶವನ್ನು ಪುರಾತತ್ವ ಇಲಾಖೆ ದೃಢಪಡಿಸಿದೆ.[೪]

ಕದಂಬ ಸಾಮ್ರಾಜ್ಯ ಬದಲಾಯಿಸಿ

ಕ್ರಿ.ಶ. ೩೪೫ರಲ್ಲಿ ಮಯೂರವರ್ಮ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ. ಉತ್ತರ ಕನ್ನಡ ಜಿಲ್ಲೆಸಿರ್ಸಿ ಸಮೀಪದ ಬನವಾಸಿ ಕದಂಬರ ರಾಜಧಾನಿಯಾಗಿತ್ತು. ಮಯೂರವರ್ಮ ೩೬೫ರಲ್ಲಿ ಮೃತಪಟ್ಟ ನಂತರ ಕಂಗವರ್ಮ, ಭಗೀರಥ ವರ್ಮ, ರಘುಪತಿ ವರ್ಮ ಮುಂತಾದವರು ಕ್ರಿ.ಶ. ೩೬೫-೪೨೫ರವರೆಗೂ ಆಳ್ವಿಕೆ ನಡೆಸಿದ್ದರು. ಇದೇ ಅವಧಿಯಲ್ಲಿ ಶಾಸನ ಕೆತ್ತಿಸಲಾಗಿತ್ತು ಎಂಬುದು ಶಾಸನ ಶಾಸ್ತ್ರ ತಜ್ಞರ ಅನಿಸಿಕೆ.

ಪ್ರಾಚೀನತೆ ಬಗ್ಗೆ ಅನುಮಾನಗಳು ಬದಲಾಯಿಸಿ

ಅತಿ ಹಳೆಯ ಶಾಸನವೆಂದು ಘೋಷಿತವಾಗಿರುವ ಶಾಸನದಲ್ಲಿ ಕೇವಲ ಎರಡೇ ಸಾಲುಗಳಿರುವುದರಿಂದ ಇದನ್ನು ಮರುಪರಿಶೀಲನೆಗೊಳಿಸಬೇಕೆಂಬ ಅಭಿಪ್ರಾಯಗಳೂ ಕೇಳಿಬಂದಿದೆ.[೫]

ಉಲ್ಲೇಖಗಳು ಬದಲಾಯಿಸಿ

ಹೊರಸಂಪರ್ಕ ಕೊಂಡಿಗಳು ಬದಲಾಯಿಸಿ