ತಾರಕನಾಥ್ ದಾಸ್ ಅಥವಾ ತಾರಕ್ ನಾಥ್ ದಾಸ್ (ಬಂಗಾಳಿ:তারকানাথ দাস) (15 ಜೂನ್ 1884 - 22 ಡಿಸೆಂಬರ್ 1958), ಒಬ್ಬ ಬ್ರಿಟಿಷ್ ವಿರೋಧಿ ಬೆಂಗಾಲಿ ಭಾರತೀಯ ಕ್ರಾಂತಿಕಾರಿ ಹಾಗು ಅಂತರರಾಷ್ಟ್ರೀಯತಾವಾದಿ ವಿದ್ವಾಂಸ. ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೆರವು ಪಡೆಯಲು ಏಷಿಯಾದ ಭಾರತೀಯ ವಲಸಿಗರನ್ನು ಸಂಘಟಿಸಲು ಇವರು ಉತ್ತರ ಅಮೆರಿಕದ ಪಶ್ಚಿಮ ಕರಾವಳಿಗೆ ವಲಸೆಹೋದ ಮೊದಲಿಗರು. ಅಲ್ಲದೇ ತಮ್ಮ ಯೋಜನೆಗಳನ್ನು ಟಾಲ್ಸ್ಟಾಯ್ ರೊಂದಿಗೆ ಚರ್ಚಿಸಿದರು. ಇವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಹೀಗೆ ಇತರ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

Taraknath Das
ಚಿತ್ರ:Taraknathdas1.jpg
ಜನನ(೧೮೮೪-೦೬-೧೫)೧೫ ಜೂನ್ ೧೮೮೪
Kanchrapara, 24 Parganas, Bengal, India
ಮರಣ22 December 1958(1958-12-22) (aged 74)
ಜೀವನ ಸಂಗಾತಿMary Keatinge Morse

ಆರಂಭಿಕ ಜೀವನ ಬದಲಾಯಿಸಿ

ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಕಂಚ್ರಪಾರ ಸಮೀಪ ಮಜುಪಾರದಲ್ಲಿ ತಾರಕ್ ಅವರ ಜನನವಾಯಿತು. ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಇವರ ತಂದೆ ಕಾಳಿಮೋಹನ್ ಕಲ್ಕತ್ತಾದ ಕೇಂದ್ರ ಟೆಲಿಗ್ರ್ಯಾಫ್(ತಂತಿ) ಕಚೇರಿಯಲ್ಲಿ ಗುಮಾಸ್ತ ರಾಗಿದ್ದರು. ಈ ಪ್ರತಿಭಾವಂತ ವಿದ್ಯಾರ್ಥಿಯ ಬರವಣಿಗೆ ಬಗೆಗಿನ ಸೂಕ್ಷ್ಮ ಸಂವೇದನೆಯನ್ನು ಗಮನಿಸಿದ ಮುಖ್ಯೋಪಾಧ್ಯಾಯರು, ದೇಶಭಕ್ತಿ ಎಂಬ ವಿಷಯದ ಮೇಲೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ತೇಜಿಸಿದರು.

ಹದಿನಾರು ವರ್ಷ ವಯಸ್ಸಿನ ಈ ಶಾಲಾ ಬಾಲಕನ ಉತ್ತಮ ದರ್ಜೆಯ ಪ್ರಬಂಧಮಂಡನೆಯಿಂದ ಹಲವರು ಪ್ರಭಾವಿತರಾದರು. ತೀರ್ಪುಗಾರರಲ್ಲೊಬ್ಬರಾಗಿದ್ದ ಅನುಶೀಲನ ಸಮಿತಿಯ ಸ್ಥಾಪಕ ಬ್ಯಾರಿಸ್ಟರ್ P. ಮಿಟ್ಟರ್, ತಮ್ಮ ಸಹಯೋಗಿ ಸತೀಶ್ ಚಂದ್ರ ಬೋಸರಿಗೆ ಈ ಬಾಲಕನನ್ನು ತಮ್ಮ ಸಮಿತಿಯಲ್ಲಿ ದಾಖಲು ಮಾಡಿಕೊಳ್ಳಲು ಹೇಳುತ್ತಾರೆ.

ಉತ್ತಮ ಅಂಕಗಳೊಂದಿಗೆ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, 1901ರಲ್ಲಿ , ತಾರಕ್ ಕಲ್ಕತ್ತಾಕ್ಕೆ ಹೋಗಿ, ವಿಶ್ವವಿದ್ಯಾಲಯದ ಹೆಚ್ಚಿನ ಅಧ್ಯಯನಕ್ಕಾಗಿ ಪ್ರಸಿದ್ಧ ಜನರಲ್ ಅಸೆಂಬ್ಲಿಯ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುತ್ತಾರೆ.(ಇದೀಗ ಇದು ಸ್ಕಾಟಿಷ್ ಚರ್ಚ್ ಕಾಲೇಜ್ ಎಂದು ಪರಿಚಿತವಾಗಿದೆ.) ತಮ್ಮ ರಹಸ್ಯ ದೇಶಭಕ್ತಿ ಚಟುವಟಿಕೆಗೆ, ತಮ್ಮ ಹಿರಿಯ ಸಹೋದರಿ ಗಿರಿಜಾರಿಂದ ಸಂಪೂರ್ಣ ಬೆಂಬಲವನ್ನೂ ಪಡೆಯುತ್ತಾರೆ.

ನಿಯೋಗದ ಉಗಮ ಬದಲಾಯಿಸಿ

ಬೆಂಗಾಲಿ ಉತ್ಸುಕತೆಯನ್ನು ಪ್ರಚೋದಿಸುವ ಸಲುವಾಗಿ, ಪ್ರಸಿದ್ಧ ಬಂಗಾಳಿ ಹಿಂದೂ ನಾಯಕರಾದ ರಾಜ ಸೀತಾರಾಂ ರೇ ಅವರ ಸಾಧನೆಗಳ ಸ್ಮರಣಾ ಸಮಾರಂಭವನ್ನು ಶಿವಾಜಿಯ ಜೊತೆಯಲ್ಲಿ ಒಂದು ಹಬ್ಬವಾಗಿ ಪರಿಚಯಿಸಲಾಯಿತು. ಬಾಘ ಜತಿನ್ ಅಥವಾ ಜತೀಂದ್ರ ನಾಥ್ ಮುಖರ್ಜಿಯ ಜೊತೆಯಲ್ಲಿ ತಾರಕ್, ಬಂಗಾಳದ ಹಿಂದಿನ ರಾಜಧಾನಿ ಜೆಸ್ಸೋರ್ ನ ಮೊಹಮ್ಮದ್ ಪುರದಲ್ಲಿ ನಡೆದ ಸೀತಾರಾಮ ಉತ್ಸವವನ್ನು 1906ರ ಆರಂಭ ತಿಂಗಳಲ್ಲಿ ಆಯೋಜಿಸಲಾಗಿತ್ತು.

ಈ ಉತ್ಸವದಲ್ಲಿ ಜತೀಂದ್ರನಾಥರನ್ನು ಅಧ್ಯಕ್ಷತೆ ವಹಿಸಲು ಆಹ್ವಾನಿಸ ಲಾಗಿತ್ತು. ಈ ಸಂದರ್ಭದಲ್ಲಿ, ತಾರಕ್, ಶ್ರೀಶ್ ಚಂದ್ರ ಸೇನ್, ಸತ್ಯೇಂದ್ರ ಸೇನ್ ಹಾಗು ಆಧರ್ ಚಂದ್ರ ಲಸ್ಕರ್ ರೊಂದಿಗೆ ಜತಿನ್ ಉಪಸ್ಥಿತರಿದ್ದ ಖಾಸಗಿ ಸಮಾಲೋಚನೆಯ ಅವಧಿಯಲ್ಲಿ: ಈ ನಾಲ್ವರೂ, ಒಬ್ಬರ ನಂತರ ಒಬ್ಬರು, ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವವರಿದ್ದರು. ಈ ಸಭೆಯ ಉದ್ದೇಶದ ಬಗ್ಗೆ ಯಾರೊಬ್ಬರಿಗೂ 1952ರವರೆಗೂ ತಿಳಿದಿರಲಿಲ್ಲ. ಮಾತುಕತೆ ಸಂದರ್ಭದಲ್ಲಿ, ತಾರಕ್ ಇದರ ಬಗ್ಗೆ ಮಾಹಿತಿ ನೀಡುತ್ತಾರೆ.

ನಿರ್ದಿಷ್ಟ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆಯುವುದರ ಜೊತೆಗೆ, ಅವರು ಮಿಲಿಟರಿ ತರಬೇತಿ ಹಾಗು ಸ್ಫೋಟಕಗಳ ಬಗ್ಗೆ ಜ್ಞಾನ ಪಡೆದುಕೊಂಡರು. ಇವರುಗಳು, ಸ್ವಾತಂತ್ರ್ಯ ಗಳಿಸುವ ಭಾರತದ ನಿರ್ಧಾರಕ್ಕೆ ಬೆಂಬಲಿಸುವಂತೆ ಸ್ವತಂತ್ರ ಪಾಶ್ಚಿಮಾತ್ಯ ರಾಷ್ಟ್ರಗಳ ಜನರಲ್ಲಿ ಸಹಾನುಭೂತಿಯ ವಾತಾವರಣ ಸೃಷ್ಟಿಸುವ ಹಂಬಲ ಹೊಂದಿದ್ದರು.[೧]

ಉತ್ತರ ಅಮೇರಿಕಾದಲ್ಲಿ ಜೀವನ ಬದಲಾಯಿಸಿ

ತಾರಕ್ ಬ್ರಹ್ಮಚಾರಿ ಎಂಬ ಹೆಸರನ್ನಿಟ್ಟುಕೊಂಡು ಸನ್ಯಾಸಿಯ ವೇಷದಲ್ಲಿ, ಉಪನ್ಯಾಸ ಪ್ರವಾಸ ಕಾರ್ಯಕ್ರಮದ ನೆಪದಲ್ಲಿ ಮದ್ರಾಸ್ ಗೆ ಹೋಗುತ್ತಾರೆ. ಸ್ವಾಮಿ ವಿವೇಕಾನಂದ ಹಾಗು ಬಿಪಿನ್ ಚಂದ್ರ ಪಾಲ್ ರ ನಂತರ,ಆ ಪ್ರದೇಶಗಳಲ್ಲಿ ತಮ್ಮ ಭಾಷಣಗಳಿಂದ ದೇಶಪ್ರೇಮದ ಮನೋಭಾವ ಬೆಳೆಸಿದವರಲ್ಲಿ ಮೊದಲಿಗರು. ವಿಶೇಷವಾಗಿ ಅವರಿಂದ ಉತ್ತೇಜಿತರಾದ ಯುವ ಕ್ರಾಂತಿಕಾರಿಗಳಲ್ಲಿ ನೀಲಕಂಠ ಬ್ರಹ್ಮಚಾರಿ, ಸುಬ್ರಮಣಿಯ ಶಿವ ಹಾಗು ಚಿದಂಬರಂ ಪಿಳ್ಳೈ ಸೇರಿದ್ದಾರೆ.

ಜಪಾನ್ ಮೂಲಕ ತಾರಕ್, 16 ಜುಲೈ 1907ರಲ್ಲಿ ಸಿಯಾಟಲ್ ತಲುಪುತ್ತಾರೆ. ಕೃಷಿ ಕೆಲಸಗಾರನಾಗಿ ಜೀವನೋಪಾಯ ಕಂಡುಕೊಂಡ ನಂತರ, ವಿದ್ಯಾರ್ಥಿಯಾಗಿ ದಾಖಲಾಗುವ ಮೊದಲು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯ ಪ್ರಯೋಗಾಲಯದಲ್ಲಿ ಕೆಲಸ ಆರಂಭಿಸುತ್ತಾರೆ. ಏಕಕಾಲಿಕವಾಗಿ, ಅಮೆರಿಕನ್ ಸಿವಿಲ್ ಅಡ್ಮಿನಿಸ್ಟ್ರೇಶನ್ ನ ಭಾಷಾಂತರಕಾರ ಹಾಗು ವ್ಯಾಖ್ಯಾನಕಾರರಾಗಿ ಅರ್ಹತೆ ಪಡೆದು, ಜನವರಿ 1908ರಲ್ಲಿ ವ್ಯಾನ್ಕೋವರ್ ನ ವಲಸೆಗಾರಿಕೆ ವಿಭಾಗಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿ ಅವರು ಕಲ್ಕತ್ತಾದ ಪೋಲಿಸ್ ಮಾಹಿತಿ ಸೇವೆಯಲ್ಲಿದ್ದ ವಿಲ್ಲಿಯಮ್ C. ಹಾಪ್ಕಿನ್ಸನ್ ರ (1878-1914)ಆಗಮನಕ್ಕೆ ಸಾಕ್ಷಿಯಾಗುತ್ತಾರೆ.

ಇವರು ವಲಸೆಗಾರಿಕೆ ಪರಿವೀಕ್ಷಕ ಹಾಗು ಹಿಂದಿ, ಪಂಜಾಬಿ ಹಾಗು ಗುರುಮುಖಿಯ ವ್ಯಾಖ್ಯಾನಕಾರರಾಗಿ ನೇಮಕಗೊಂಡಿರುತ್ತಾರೆ. ಏಳು ವರ್ಷ ಸುದೀರ್ಘವಾಗಿ, ಅವರು ಹತ್ಯೆಯಾಗುವವರೆಗೆ(ಒಬ್ಬ ಸಿಖ್ ನಿಂದ ಹತ್ಯೆಗೊಳಗಾಗುತ್ತಾರೆ) ಭಾರತ ಸರ್ಕಾರಕ್ಕೆ ತಾರಕ್ ರಂತಹ ವಿದ್ಯಾರ್ಥಿ ತೀವ್ರಗಾಮಿಗಳ ಬಗ್ಗೆ ವಿಸ್ತೃತ ಹಾಗು ನಿಯಮಿತ ವರದಿಗಳನ್ನು ಕಳುಹಿಸುವ ಹಾಗು ಬೇಲಾ ಸಿಂಗ್ ನೇತೃತ್ವದ ಬ್ರಿಟಿಷ್ ಪರವಾದ ಸಿಖ್ ಮಾಹಿತಿದಾರರ ಗುಂಪನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಹೊತ್ತಿದ್ದರು.[೨]

ಪಾಂಡುರಂಗ ಖಂಕೋಜೆ(B.G. ತಿಲಕ್ ರ ಗುಪ್ತಚಾರ) ಜೊತೆಗೂಡಿ, ತಾರಕ್ ಇಂಡಿಯನ್ ಇಂಡಿಪೆನ್ಡೆನ್ಸ್ ಲೀಗ್ ನ ಸ್ಥಾಪನೆ ಮಾಡುತ್ತಾರೆ. ಜತಿನ್ ಮುಖರ್ಜಿ(ಬಾಘ ಜತಿನ್ ಎಂದೂ ಸಹ ಪರಿಚಿತ) ಕಳುಹಿಸಿದ ಹಣದೊಂದಿಗೆ ಅಧರ್ ಲಸ್ಕರ್ ಕಲ್ಕತ್ತಾದಿಂದ ಆಗಮಿಸುತ್ತಾರೆ. ಅವರು ತಾರಕ್ ಗೆ ಆಂಗ್ಲ ಭಾಷೆಯ ನಿಯತಕಾಲಿಕ ಫ್ರೀ ಹಿಂದೂಸ್ತಾನ್ ನ್ನು ಹಾಗು ಅದರ ಗುರುಮುಖಿ ಆವೃತ್ತಿ ಗುರುನ್ ದಿತ್ತ್ ಕುಮಾರ್ ರ ಸ್ವದೇಶ್ ಸೇವಕ್ ನ್ನು ತಾಯ್ನಾಡಿನ ಸೇವಕರು) ಆರಂಭಿಸಲು ಅನುಮತಿ ನೀಡಿರುತ್ತಾರೆ.

ಕಲ್ಕತ್ತಾದಿಂದ 31 ಅಕ್ಟೋಬರ್ 1907ರಲ್ಲಿ ಲಸ್ಕರ್ ಆಗಮಿಸುತ್ತಾರೆ. ಫ್ರೀ ಹಿಂದೂಸ್ತಾನ್ ನಿಯತಕಾಲಿಕವನ್ನು ಕಾನ್ಸ್ಟಾನ್ಸ್ ಬ್ರಿಸ್ಸೆನ್ಡೆನ್ "ಕೆನಡಾದ ಮೊದಲ ದಕ್ಷಿಣ ಏಷಿಯಾದ ಪ್ರಕಟಣೆ ಹಾಗು ಉತ್ತರ ಅಮೆರಿಕದ ಮೊದಲ ಪ್ರಕಟಣೆ" ಎಂದು ವಿವರಿಸುತ್ತಾರೆ. ಸ್ಫೋಟಕಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಹೊಂದಿದ್ದ ಪ್ರಾಧ್ಯಾಪಕ ಸುರೇಂದ್ರ ಮೋಹನ ಬೋಸ್ ಇವರಿಗೆ ನೆರವಾಗುತ್ತಾರೆ.

ನಿಯಮಿತವಾದ ಪತ್ರವ್ಯವಹಾರದ ಮೂಲಕ ಟಾಲ್ಸ್ಟಾಯ್, ಹಿಂಡ್ಮನ್, ಶ್ಯಾಮ್ಜಿ ಕೃಷ್ಣವರ್ಮ, ಮೇಡಂ ಕಾಮ, ತಾರಕ್ ರ ಈ ಸಾಹಸಕ್ಕೆ ಉತ್ತೇಜನ ನೀಡುತ್ತಾರೆ. "ಸಮುದಾಯದ ವಕ್ತಾರರೆಂದು" ವರ್ಣಿಸಲ್ಪಟ್ಟ ಇವರು, ಹಿಂದೂಸ್ತಾನಿ ಅಸೋಸಿಯೇಶನ್ ನನ್ನು 1907ರಲ್ಲಿ ವ್ಯಾನ್ಕೋವರ್ ನಲ್ಲಿ ಸ್ಥಾಪಿಸುತ್ತಾರೆ.

ಅಸ್ತಿತ್ವದಲ್ಲಿದ್ದ ಕಾನೂನಿನೊಂದಿಗೆ ಸಂಪೂರ್ಣವಾಗಿ ಅರಿತಿದ್ದ ತಾರಕ್, ತಮ್ಮ ದೇಶ ಬಾಂಧವರ ಅಗತ್ಯಗಳನ್ನು ಪೂರೈಸುತ್ತಾರೆ, ಇವರಲ್ಲಿ ಬಹುತೇಕರು ಪಂಜಾಬ್ ಪ್ರಾಂತದ ಅನಕ್ಷರಸ್ಥ ವಲಸೆಗಾರರಾಗಿದ್ದರು. ನ್ಯೂವೆಸ್ಟ್ ಮಿನಿಸ್ಟರ್ ಸಮೀಪ ಮಿಲ್ ಸೈಡ್ ನಲ್ಲಿ, ಅವರು ಸ್ವದೇಶ್ ಸೇವಕ್ ಹೋಂನ್ನು ಸ್ಥಾಪಿಸುತ್ತಾರೆ. ಇದು ಏಷಿಯಾದ ಭಾರತೀಯ ವಲಸೆಗಾರರ ಮಕ್ಕಳಿಗೆಂದು ಸ್ಥಾಪಿಸಲಾದ ವಸತಿ ಶಾಲೆಯಾಗಿತ್ತು.

ಇದೆಲ್ಲದರ ಜೊತೆಯಲ್ಲಿ, ಈ ಶಾಲೆಯು ಆಂಗ್ಲ ಭಾಷೆ ಹಾಗು ಗಣಿತಕ್ಕಾಗಿ ಸಂಜೆ ತರಗತಿಗಳನ್ನು ನಡೆಸುತ್ತಿತ್ತು. ಈ ರೀತಿಯಾಗಿ ತಮ್ಮ ಕುಟುಂಬಗಳಿಗೆ ಅಥವಾ ತಮ್ಮ ಮಾಲೀಕರಿಗೆ ಪತ್ರಗಳನ್ನು ಬರೆಯಲು ವಲಸಿಗರಿಗೆ ನೆರವು ನೀಡುತ್ತಿತ್ತು. ಇದು ಅವರಿಗೆ ಭಾರತದೆಡೆಗೆ ತಮ್ಮ ಕರ್ತವ್ಯಗಳ ಬಗ್ಗೆ ಹೆಚ್ಚಿನ ಅರಿವು ಹಾಗು ತಮ್ಮ ಸ್ವೀಕೃತ ತಾಯ್ನಾಡಿನಲ್ಲಿ ತಮ್ಮ ಹಕ್ಕುಗಳನ್ನು ಹೆಚ್ಚಿಸಿಕೊಳ್ಳಲು ನೆರವಾಯಿತು. ಕೆನಡಾದ ಪಶ್ಚಿಮ ಕರಾವಳಿ ಹಾಗು ಉತ್ತರ ಅಮೆರಿಕದಲ್ಲಿ ಆಗ ಸುಮಾರು ಎರಡು ಸಾವಿರ ಭಾರತೀಯರಿದ್ದರು.

ಇವರಲ್ಲಿ ಬಹುತೇಕರು ಸಿಖ್ ಜನಾಂಗಕ್ಕೆ ಸೇರಿದವರಾಗಿದ್ದರು. ಇವರಲ್ಲಿ ಹೆಚ್ಚಿನವರು ಕೃಷಿ ಹಾಗು ಕಟ್ಟಡಗಳ ನಿರ್ಮಾಣದಲ್ಲಿ ತೊಡಗಿದ್ದರು. ಆರಂಭಿಕ ಹಿನ್ನೆಡೆ-ಅಡೆತಡೆಗಳ ನಂತರ, ಈ ಭಾರತೀಯ ಕೃಷಿಕರು 1910ರ ಆರಂಭದಲ್ಲಿ ಕ್ಯಾಲಿಫೋರ್ನಿಯಾನಲ್ಲಿ ಸಮೃದ್ಧ ಭತ್ತದ ಇಳುವರಿ ಪಡೆಯುವಲ್ಲಿ ಯಶಸ್ವಿಯಾದರು.

ಅಲ್ಲದೇ ಸಾಕಷ್ಟು ಮಂದಿ ಚೀನಾ, ಜಪಾನ್, ಕೊರಿಯ, ನಾರ್ವೆ ಹಾಗು ಇಟಲಿಯ ಕರಾರುಬದ್ಧ ವಲಸಿಗರೊಂದಿಗೆ ಕ್ಯಾಲಿಫೋರ್ನಿಯಾದ ವೆಸ್ಟರ್ನ್ ಪೆಸಿಫಿಕ್ ರೈಲ್ವೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದರು.[೩] ತಾರಕ್ ರಂತಹ ಮೂಲಭೂತ ಸುಧಾರಣಾವಾದಿ ಮತ್ತು ತೀವ್ರಗಾಮಿಗಳು, ಭಾರತೀಯ ವಿರೋಧಿ ಹಿಂಸಾಚಾರ ಹಾಗು ಬಹಿಷ್ಕರಣಾ ನೀತಿ ಅನುಸರಿಸುತ್ತಿದ್ದ ರಾಜಕೀಯದ ವಿರುದ್ಧ ಭಾರತೀಯ ಸಮುದಾಯವನ್ನು ಪ್ರತೀಕಾರಕ್ಕೆ ಸಜ್ಜುಗೊಳಿಸಿದರು.[೪]

ಏಷಿಯಾದ ಭಾರತೀಯ ವಲಸೆಗಾರರಿಂದ ಲಂಚ ಪಡೆಯುತ್ತಿರಬಹುದೆಂದು ಶಂಕಿಸಿ, ಹಾಪ್ಕಿನ್ಸನ್ ತಮ್ಮ ಪ್ರಭಾವ ಬಳಸಿ ತಾರಕ್ ರನ್ನು ಬಲಿಪಶುವನ್ನಾಗಿ ಮಾಡಿದರು. ಜೊತೆಗೆ ಅಂತಿಮವಾಗಿ 1908ರ ಮಧ್ಯಭಾಗದ ಹೊತ್ತಿಗೆ ಅವರನ್ನು ಕೆನಡಾದಿಂದ ಹೊರಹಾಕಿದರು. ಬೋಸ್, ಕುಮಾರ್ ಹಾಗು ಚಗನ್ ಖೈರಾಜ್ ವರ್ಮಾರಿಗೆ ದೇಶಬಾಂಧವರ ಭವಿಷ್ಯದ ಜವಾಬ್ದಾರಿಯನ್ನು ವಹಿಸಿ, ತಾರಕ್ ಸಿಯಾಟಲ್ ನಿಂದ ಹಿಡಿದು ಸ್ಯಾನ್ ಫ್ರಾನ್ಸಿಸ್ಕೋವರೆಗಿನ ಪ್ರದೇಶಗಳಲ್ಲಿ ತಮ್ಮ ಗಮನ ಕೇಂದ್ರೀಕರಿಸಲು ವ್ಯಾನ್ಕೋವರ್ ರನ್ನು ತೊರೆಯುತ್ತಾರೆ.

ಸಿಯಾಟಲ್ ತಲುಪಿದ ನಂತರ, ಫ್ರೀ ಹಿಂದೂಸ್ತಾನ ದ ಜುಲೈ 1908ರ ಆವೃತ್ತಿಯು ಬಹಿರಂಗವಾಗಿ ಬ್ರಿಟಿಷ್ ವಿರೋಧಿ ಪ್ರಚಾರ ಪತ್ರಿಕೆಯಾಗಿ ಮಾರ್ಪಾಡಾಯಿತು. ಇದರಲ್ಲಿ ತಾರಕ್ ರ ಧ್ಯೇಯ ಸೂತ್ರವು ಸೇರಿತ್ತು: "ಎಲ್ಲ ದಬ್ಬಾಳಿಕೆಗಳ ವಿರುದ್ಧ ಪ್ರತಿಭಟಿಸುವುದು ಮಾನವೀಯತೆಗೆ ಸಲ್ಲಿಸುವ ಸೇವೆ ಹಾಗು ನಾಗರೀಕತೆಯ ಕರ್ತವ್ಯ." NYC-ಮೂಲದ ಗೇಲಿಕ್ ಅಮೆರಿಕನ್ ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ ಐರಿಶ್ ಕ್ರಾಂತಿಕಾರಿ ಜಾರ್ಜ್ ಫ್ರೀಮನ್ ರನ್ನು ಬ್ರಿಟಿಷ್ ವಿರೋಧಿ ಚಳವಳಿಯ ನಿಜವಾದ ನಾಯಕನೆಂದು ಪರಿಗಣಿಸಲಾಗುತ್ತಿತ್ತು.

ಇವರು ಇಬ್ಬರು ಭಾರತೀಯರಾದ ಸ್ಯಾಮ್ಯುಯೆಲ್ L. ಜೋಷಿ ಹಾಗು ಬರ್ಕತುಲ್ಹಾರೊಂದಿಗೆ ನಿಕಟ ಸಂಪರ್ಕವನ್ನೂ ಹೊಂದಿದ್ದರು. ಫಿಟ್ಜೆರಾಲ್ಡ್ ರಿಂದ ಆಹ್ವಾನಿತರಾಗಿ, ತಾರಕ್ ಆಗಸ್ಟ್ ಸಂಚಿಕೆಯನ್ನು ಹೊರತರುತ್ತಾರೆ. ಜೊತೆಗೆ ನ್ಯೂಯಾರ್ಕ್ ನಿಂದ ಅದೇ ರೀತಿ ಯಾದ ಯಶಸ್ವಿ ಫ್ರೀ ಹಿಂದೂಸ್ತಾನ ನಿಯತಕಾಲಿಕವನ್ನು ಹೊರಡಿಸುತ್ತಾರೆ. ವರ್ಮೊಂಟ್, ನಾರ್ತ್ ಫೀಲ್ಡ್ ನ ನಾರ್ವಿಚ್ ವಿಶ್ವವಿದ್ಯಾಲಯಕ್ಕೆ ತಾರಕ್ ಮಿಲಿಟರಿ ತರಬೇತಿ ಪಡೆಯಲು 1908ರಲ್ಲಿ ಸೇರ್ಪಡೆಯಾಗುತ್ತಾರೆ.

"ಇದೊಂದು ಉನ್ನತ ಮಟ್ಟದ ಇಂಜಿನಿಯರಿಂಗ್ ಹಾಗು ಮಿಲಿಟರಿ ಶಿಕ್ಷಣ ಪ್ರತಿಷ್ಠಾನದ ಸಂಸ್ಥೆಯಾಗಿತ್ತು. ಅವರು ವರ್ಮೊಂಟ್ ನ್ಯಾಷನಲ್ ಗಾರ್ಡ್ ನಲ್ಲಿ... ಸೈನ್ಯಕ್ಕೆ ಸೇರಲೂ ಸಹ ಅರ್ಜಿ ಸಲ್ಲಿಸುತ್ತಾರೆ. (…)" ಎಲ್ಲ ಜನಾಂಗೀಯ ಮೂಲದ ವಿದ್ಯಾರ್ಥಿಗಳ ನಡುವೆ ಜನಪ್ರಿಯತೆ ಹೊಂದಿದ್ದರೂ ಸಹ, ಅವರ ಬ್ರಿಟಿಷ್ ವಿರೋಧಿ ಚಟುವಟಿಕೆಗಳ(ಉದಾಹರಣೆಗೆ ಫ್ರೀ ಹಿಂದೂಸ್ತಾನ್ ನ ಸಂಪಾದಕೀಯತ್ವ) ಕಾರಣದಿಂದಾಗಿ ಸಂಸ್ಥೆಯಿಂದ ಹೊರಹಾಕಲ್ಪಡುತ್ತಾರೆ. ನಂತರ 1909ರ ಕೊನೆಯಲ್ಲಿ, ಅವರು ಸಿಯಾಟಲ್ ಗೆ ಹಿಂದಿರುಗುತ್ತಾರೆ.[೫]

ಘದ್ದರ್ ಪಕ್ಷದ ಸ್ಥಾಪನೆ ಬದಲಾಯಿಸಿ

ಫ್ರೀ ಹಿಂದೂಸ್ತಾನ್ ನ 1909ರ ಸೆಪ್ಟೆಂಬರ್-ಅಕ್ಟೋಬರ್ ಸಂಚಿಕೆಯಲ್ಲಿ "ಸಿಖ್ ರಿಗೆ ನೇರವಾದ ಮನವಿಯೊಂದು" ಪ್ರಕಟವಾಗುತ್ತದೆ, ಇದು ಸ್ವದೇಶ್ ಸೇವಕ್ ನಲ್ಲೂ ಸಹ ಮರುಪ್ರಕಟಣೆಯಾಗುತ್ತದೆ; ಈ ಲೇಖನವು ಹೀಗೆ ಕೊನೆಗೊಳ್ಳುತ್ತದೆ : "ಸ್ವತಂತ್ರ ರಾಷ್ಟ್ರಗಳ ಮುಕ್ತ ಜನರು ಹಾಗು ಸಂಸ್ಥೆಗಳೊಂದಿಗೆ ಸಂಪರ್ಕಕ್ಕೆ ಬಂದು, ಉತ್ತರ ಅಮೆರಿಕ ಖಂಡದಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಕೆಲವು ಸಿಖ್ ರು, ಸ್ವಾತಂತ್ರ್ಯದ ಕಲ್ಪನೆಯನ್ನು ಸಮೀಕರಿಸಿರುವುದರ ಜೊತೆಗೆ ಗುಲಾಮಿತನದ ಇನ್ನೊಂದು ಮುಖವನ್ನು ತುಳಿದುಹಾಕಿದ್ದಾರೆ..."[೬] ಮಾರ್ಚ್ 1912ರಲ್ಲಿ ದಿ ಪಂಜಾಬಿ ಯಲ್ಲಿ ಪ್ರಕಟವಾದ ಒಂದು ಪತ್ರವು, ಕ್ರಾಂತಿಕಾರಿ ಮನೋಭಾವವನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಮುಂದೆ ಬಂದು ಆ ಪ್ರದೇಶದಲ್ಲಿರುವ ಭಾರತೀಯರನ್ನು ಸಂಘಟಿಸಲು ನೆರವಾಗಬೇಕೆಂದು ಕೋರಿತು.' ಮೊದಲಿಗೆ ಅವರು ಕುಮಾರ್ ರನ್ನು ಆಹ್ವಾನಿಸಲು ಹಾಗು ನಂತರದಲ್ಲಿ ಸರ್ದಾರ್ ಅಜಿತ್ ಸಿಂಗ್ ಬಗೆಗೆ ಚರ್ಚೆ ಮಾಡಿದರು. ಆದರೆ ತಾರಕ್ ಅದೇ ವೇಳೆಗೆ ಆಗಮಿಸಿ, ಆರ್ಯನ್ ಕ್ರಾಂತಿಕಾರಿ ಲಾಲಾ ಹರ್ದಯಾಳ್ ರನ್ನು ಆಹ್ವಾನಿಸಲು ಸೂಚಿಸಿದರು. ತಾರಕ್, ಇವರನ್ನು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಭೇಟಿ ಮಾಡಿದ್ದರು. ಹರ್ದಯಾಳ್ ಅವರೊಂದಿಗೆ ಕೆಲಸ ಮಾಡಲು ಒಪ್ಪುವುದರ ಜೊತೆಗೆ ಪೆಸಿಫಿಕ್ ಸಾಗರ ಹಿಂದಿ ಅಸೋಸಿಯೇಶನ್ ನನ್ನು ಸ್ಥಾಪಿಸುತ್ತಾರೆ.

ಇದು ಘದರ್ ಪಕ್ಷದ ಸ್ಥಾಪನೆಗೆ ಮೊದಲ ಹೆಜ್ಜೆಯಾಯಿತು. "ಹಲವು ನಾಯಕರುಗಳು ಇತರ ಪಕ್ಷಗಳು ಹಾಗು ಭಾರತದ ಬೇರೆ ಬೇರೆ ಪ್ರಾಂತಗಳಿಗೆ ಸೇರಿದವರಾಗಿದ್ದರು. ಹರ್ದಯಾಳ್, ರಾಸ್ ಬಿಹಾರಿ ಬೋಸ್, ಬರ್ಕತುಲ್ಲ, ಸೇಟ್ ಹುಸೈನ್ ರಹಿಮ್, ತಾರಕ್ ನಾಥ್ ದಾಸ್ ಹಾಗು ವಿಷ್ಣು ಗಣೇಶ ಪಿಂಗಳೆ...ಘದರ್ ಪಕ್ಷವು 1857ರ ದಂಗೆಯ ನಂತರ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಮೊದಲ ವ್ಯವಸ್ಥಿತ ತೀವ್ರವಾದಿ ಪ್ರತಿಭಟನೆಯಾಗಿತ್ತು.

ನೂರಾರು ಸಂಖ್ಯೆಯಲ್ಲಿ ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದರೆಂದು" ಖುಷ್ವಂತ್ ಸಿಂಗ್ ಬರೆಯುತ್ತಾರೆ.[೭]'

ಬರ್ಲಿನ್ ನಿಂದ ಕಾಬೂಲ್ ನವರೆಗೆ ಬದಲಾಯಿಸಿ

ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ 1914ರಲ್ಲಿ ದಾಖಲಾಗುತ್ತಾರೆ. ತಾರಕ್ ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾರೆ. ನಂತರ ಅಂತರರಾಷ್ಟ್ರೀಯ ಸಂಬಂಧ ಹಾಗು ಅಂತಾರಾಷ್ಟ್ರೀಯ ಕಾನೂನು ವಿಷಯಗಳ ಮೇಲೆ, ತಮ್ಮ PhD ಪ್ರೌಢ ಪ್ರಬಂಧ ಮಂಡನೆಗೆ ಮುಂದಾಗುತ್ತಾರೆ.ಆ ವಿಶ್ವವಿದ್ಯಾಲಯದಲ್ಲೇ ಬೋಧನಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಾರೆ.

ಅವರು ನಂತರ ರಾಜ್ಯಶಾಸ್ತ್ರದಲ್ಲಿ ವಾಶಿಂಗ್ಟನ್ ವಿಶ್ವವಿದ್ಯಾಲಯದಿಂದ PhD ಪದವಿ ಪಡೆದರು. ತಾವು ಮಾಡುವ ಕೆಲಸಗಳಿಗೆ ಹೆಚ್ಚಿನ ಕ್ರಿಯಾ ಸ್ವಾತಂತ್ರ್ಯ ಪಡೆಯುವ ಉದ್ದೇಶದಿಂದ, ಅದೇ ವರ್ಷ ಅವರು ಅಮೆರಿಕನ್ ಪೌರತ್ವವನ್ನೂ ಸಹ ಪಡೆದರು. ಪ್ರಾಧ್ಯಾಪಕರುಗಳಾದ ರಾಬರ್ಟ್ ಮೊರ್ಸ್ಸ್ ಲೋವೆಟ್ಟ್, ಉಫಂ ಪೋಪ್, UC ಬರ್ಕ್ಲಿಯಲ್ಲಿದ್ದ ಆರ್ಥರ್ ರೈಡರ್ ಹಾಗು ಡೇವಿಡ್ ಸ್ಟಾರ್ ಜೋರ್ಡನ್ ಹಾಗು ಪಾಲೋ ಆಲ್ಟೊದ ಸ್ಟೂಅರ್ಟ್(ಇವರು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯಕ್ಕೆ ಸೇರಿದವರಾಗಿದ್ದರು.) ರೊಂದಿಗೆ ಜೊತೆಗೂಡಿ ತಾರಕ್, ಈಸ್ಟ್ ಇಂಡಿಯಾ ಅಸೋಸಿಯೇಶನ್ ನನ್ನು ಸ್ಥಾಪಿಸಿದರು.

ಇವರನ್ನು ಅಮೆರಿಕನ್ ವಿಶ್ವವಿದ್ಯಾಲಯಗಳ ಪ್ರತಿನಿಧಿಯಾಗಿ ಇಂಟರ್ನ್ಯಾಷನಲ್ ಸ್ಟೂಡೆಂಟ್ಸ್' ಅಸೋಸಿಯೇಶನ್ ಗೆ ಆಹ್ವಾನಿಸಲಾಯಿತು. ಅವರಿಗೆ ಇಂಡೋ-ಜರ್ಮನ್ ಯೋಜನೆಯ ಬಗ್ಗೆ ಈಗಾಗಲೇ ತಿಳಿಸಲಾಗಿತ್ತು. ಅಲ್ಲದೇ ಜನವರಿ 1915ರಲ್ಲಿ ಬರ್ಲಿನ್ ನಲ್ಲಿ ಅವರು ವೀರೇಂದ್ರನಾಥ್ ಚಟ್ಟೋಪಾಧ್ಯಾಯರನ್ನು ಭೇಟಿಯಾಗುತ್ತಾರೆ. ಈ ಸಭೆಯಲ್ಲಿ ಭಾಗವಹಿಸಲು ಬರ್ಲಿನ್ ಗೆ ಬರ್ಕತುಲ್ಲ ಹಾಗು ಹರ್ದಯಾಲ್ ಸಹ ಆಗಮಿಸುತ್ತಾರೆ. ಇವರೆಲ್ಲರೂ ಒಂದೇ ತಂಡವಾಗಿ ರೂಪುಗೊಂಡು ರಾಜ ಮಹೇಂದ್ರ ಪ್ರತಾಪರ ಕಾಬುಲ್ ದಂಡಯಾತ್ರೆಗೆ ಜೊತೆಗೂಡುತ್ತಾರೆ.

ಏಪ್ರಿಲ್ 1916ರಲ್ಲಿ ಕಾಬುಲ್ಶಿರಾಜ್-ಉಲ್-ಅಖ್ಬರ್ , ತಾರಕ್ ರ ಭಾಷಣವನ್ನು ಕಾನ್ಸ್ಟ್ಯಾನ್ಟಿನೋಪಲ್ ನ ದಿನಪತ್ರಿಕೆಯಲ್ಲಿ ಮತ್ತೆ ಪ್ರಕಟಿಸುತ್ತಾರೆ: ಭಾಷಣದಲ್ಲಿ, ಒಟ್ಟೋಮನ್ ಸೇನೆಗೆ ಜರ್ಮನ್ ಅಧಿಕಾರಿಗಳು ನೀಡುತ್ತಿದ್ದ ತರಬೇತಿಯ ಬಗ್ಗೆ ಶ್ಲಾಘಿಸ ಲಾಗಿತ್ತು. ಜೊತೆಗೆ ತುರ್ಕರ ಎದೆಗಾರಿಕೆ ಹಾಗು ಧೈರ್ಯವನ್ನೂ ಮೆಚ್ಚಲಾಗಿತ್ತು. ಜರ್ಮನಿ ಹಾಗು ಆಸ್ಟ್ರಿಯಾ ದೇಶಗಳೇ ಯುದ್ಧ ಘೋಷಿಸಿದ್ದು, ಆದರೆ ಅವರ ಮಿತ್ರರಾಷ್ಟ್ರಗಳಲ್ಲ ಎಂಬುದನ್ನು ಅವರು ಜ್ಞಾಪಿಸುತ್ತಾರೆ.

ಅಲ್ಲದೇ ಈ ಯುದ್ಧಕ್ಕೆ ಕಾರಣವೆಂದರೆ ಮಾನವ ಕುಲದ ಮೇಲೆ ಅವರ ಶತ್ರುಗಳು ನಡೆಸುತ್ತಿದ್ದ ದುಷ್ಕೃತ್ಯಗಳನ್ನು ನಿವಾರಿಸಿ ಭೂಮಿಯನ್ನು ಶುದ್ಧೀಕರಣಗೊಳಿಸುವುದೇ ಆಗಿತ್ತು. ಜೊತೆಗೆ ಭಾರತ, ಈಜಿಪ್ಟ್, ಪರ್ಷಿಯಾ, ಮೊರಾಕ್ಕೋ ಹಾಗು ಆಫ್ರಿಕಾದ ಅದೃಷ್ಟ ಹೀನ ನಾಗರಿಕರನ್ನು ಇಂಗ್ಲಿಷ್, ಫ್ರೆಂಚ್ ಹಾಗು ರಷ್ಯನ್ನರಿಂದ ಪಾರುಮಾಡುವುದೇ ಆಗಿತ್ತು. ಇವರುಗಳು ಬಲವಂತದಿಂದ ಈ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡಿ, ಇಲ್ಲಿನ ಜನರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡಿದ್ದರು.

ಟರ್ಕಿ, ಕೇವಲ ತನ್ನ ದೇಶ ಕಾಪಾಡಿಕೊಳ್ಳಲು ಮಾತ್ರವಲ್ಲದೇ ಸ್ವಾತಂತ್ರ್ಯ ಗಳಿಸುವ ಸಲುವಾಗಿ ಯುದ್ಧದಲ್ಲಿ ಭಾಗಿಯಾಗಿದೆಯೆಂದು ತಾರಕ್ ಒತ್ತಿ ಹೇಳಿದರು. ಆದರೆ ಇದರ ಜೊತೆಯಲ್ಲಿ 300 ದಶಲಕ್ಷ ಮುಸ್ಲಿಮರಿಗೆ ಹೊಸ ಬದುಕು ನೀಡುವುದು, ಹಾಗು ಭದ್ರತೆಯ ಬುನಾದಿ ಯ ಮೇಲೆ ಆಫ್ಘಾನ್ ರಾಷ್ಟ್ರ ಸ್ಥಾಪಿಸುವುದು ಇದರ ಉದ್ದೇಶವಾಗಿದೆ. ಈ ರಾಷ್ಟ್ರವು, 350 ದಶಲಕ್ಷ ಭಾರತೀಯರು, ಹಿಂದೂಗಳು ಹಾಗು ಮುಸ್ಲಿಮರು ಇಬ್ಬರಿಗೂ ಸಂರಕ್ಷಕ ಹಾಗು ಸಹಾಯಕರಾಗಿ ಇವರಿಬ್ಬರ ನಡುವಿನ ಸಂಬಂಧವನ್ನು ಉತ್ತಮಗೊಳಿಸಬೇಕೆಂಬುದು ಅವರ ಉದ್ದೇಶ ವಾಗಿತ್ತು. (ಪೊಲಿಟಿಕಲ್, ಪುಟ. 304)

ಜುಲೈ 1916ರಲ್ಲಿ ತಾರಕ್ ಕ್ಯಾಲಿಫೋರ್ನಿಯಾಕ್ಕೆ ಹಿಂದಿರುಗುತ್ತಾರೆ. ಇದರ ನಂತರ, ಜಪಾನೀಸ್ ಎಕ್ಸ್ ಪಾನ್ಶನ್ ಅಂಡ್ ಇಟ್ಸ್ ಸಿಗ್ನಿಫಿಕೆನ್ಸ್ ಇನ್ ವರ್ಲ್ಡ್ ಪಾಲಿಟಿಕ್ಸ್ ವಿಷಯದ ಮೇಲೆ ಆಳವಾದ ಅಧ್ಯಯನಕ್ಕಾಗಿ ಜಪಾನ್ ಗೆ ಪ್ರಯಾಣಿಸುತ್ತಾರೆ. ಈ ಅಧ್ಯಯನವು 1917ರಲ್ಲಿ ಈಸ್ ಜಪಾನ್ ಏ ಮೆನಿಸ್ ಟು ಏಷಿಯಾ? ಎಂಬ ಶೀರ್ಷಿಕೆಯಡಿ ಪುಸ್ತಕವಾಗಿ ಪ್ರಕಟಗೊಂಡಿತು. ಈ ಪುಸ್ತಕಕ್ಕೆ ಮುನ್ನುಡಿಯನ್ನು ಚೀನಾದ ಮಾಜಿ ಪ್ರಧಾನಿ ಶಾವೋ-ಐ ಹೊಂಗ್ ತೊಂಗ್ ಬರೆದಿದ್ದಾರೆ.

ರಾಷ್ ಬಿಹಾರಿ ಬೋಸ್ ಹಾಗು ಹೇರಂಬಲಾಲ್ ಗುಪ್ತರೊಂದಿಗೆ ಜೊತೆಗೂಡಿ ಮಾಸ್ಕೋನಲ್ಲಿನ ಒಂದು ಕಾರ್ಯಾಚರಣೆಗೆ ಹೊರಡಲು ಅನುವಾದರು. ಆದರೆ ಅಷ್ಟರಲ್ಲೇ ಕುಪ್ರಸಿದ್ಧ ಹಿಂದೂ ಜರ್ಮನ್ ಪಿತೂರಿ ವಿಚಾರಣೆಗಾಗಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು. ಸಂಪೂರ್ಣವಾಗಿ ಶ್ವೇತವರ್ಣೀಯರನ್ನು ಒಳಗೊಂಡಿದ್ದ ತೀರ್ಪುಗಾರರ ಮಂಡಲಿಯು ಇವರನ್ನು "ಅತ್ಯಂತ ಅಪಾಯಕಾರಿ ಅಪರಾಧಿಯೆಂದು" ಆರೋಪಿಸಿತು. ಜೊತೆಗೆ ಮಂಡಳಿಯು ಅವರ ಅಮೆರಿಕನ್ ಪೌರತ್ವವನ್ನು ಕಸಿದುಕೊಂಡು ಅವರನ್ನು ಬ್ರಿಟಿಷ್ ಪೊಲೀಸರಿಗೆ ಹಿಡಿದುಕೊಡುವಂತೆ ಸೂಚಿಸಿತು. ಇವರನ್ನು, 30 ಏಪ್ರಿಲ್ 1918ರಲ್ಲಿ,ಲೀವನ್ವರ್ತ್ ಫೆಡರಲ್ ಕಾರಾಗೃಹದಲ್ಲಿ ಇಪ್ಪತ್ತೆರೆಡು ತಿಂಗಳ ಕಾಲ ಬಂಧನದಲ್ಲಿರಿಸಲಾಯಿತು.

ಅಧ್ಯಾಪಕರಾಗಿ ವೃತ್ತಿಜೀವನ ಬದಲಾಯಿಸಿ

ಕಾರಾಗೃಹದಿಂದ ಬಿಡುಗಡೆಯಾದ ನಂತರ, ತಾರಕ್ ತಮ್ಮ ಬಹಳ ದಿನಗಳ ಗೆಳತಿ ಹಾಗು ಪೋಷಕಿ ಮೇರಿ ಕೀಟಿಂಗೆ ಮೊರ್ಸ್ ರನ್ನು 1924ರಲ್ಲಿ ವಿವಾಹವಾದರು. ಈಕೆ, ನ್ಯಾಷನಲ್ ಅಸೋಸಿಯೇಶನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಕಲರ್ಡ್ ಪೀಪಲ್ ಹಾಗು ನ್ಯಾಷನಲ್ ವುಮನ್'ಸ್ ಪಾರ್ಟಿಯ ಸಂಸ್ಥಾಪಕ ಸದಸ್ಯೆಯಾಗಿದ್ದರು. ಈಕೆಯೊಂದಿಗೆ, ತಾರಕ್ ಯುರೋಪ್ ಗೆ ದೀರ್ಘಾವಧಿ ಪ್ರವಾಸ ಕೈಗೊಳ್ಳುತ್ತಾರೆ. ಅವರು ತಮ್ಮ ಚಟುವಟಿಕೆಗಳಿಗೆ ಮ್ಯೂನಿಚ್ ನ್ನು ಪ್ರಮುಖ ಕೇಂದ್ರ ಸ್ಥಳವನ್ನಾಗಿಸಿಕೊಳ್ಳುತ್ತಾರೆ. ಅಲ್ಲಿಯೇ ಇವರು ಇಂಡಿಯಾ ಇನ್ಸ್ಟಿಟ್ಯೂಟ್ ನ್ನು ಸ್ಥಾಪಿಸುತ್ತಾರೆ, ಸಂಸ್ಥೆಯು ಜರ್ಮನಿಯಲ್ಲಿ ಉನ್ನತ ಶಿಕ್ಷಣ ಪಡೆವ ಪ್ರತಿಭಾನ್ವಿತ ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿತ್ತು.

ಅವರು ಶ್ರೀ ಅರಬಿಂದೊ ಅವರ ಜೊತೆ ನಿಕಟವಾದ ಸಂಪರ್ಕ ಹೊಂದಿ, ಆಂತರಿಕ ಆಧ್ಯಾತ್ಮಿಕ ಶಿಸ್ತನ್ನು ಪಾಲಿಸಿದರು. ಅಮೆರಿಕನ್ ಸಂಯುಕ್ತ ಸಂಸ್ಥಾನಕ್ಕೆ ಮರಳಿದ ನಂತರ, ತಾರಕ್ ರನ್ನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ ಹಾಗು ಜಾರ್ಜ್ ಟೌನ್ ವಿಶ್ವವಿದ್ಯಾಲಯದ ವಿದ್ವನ್ಮಂಡಲಿಯ ಸದಸ್ಯರೆಂದು ಜಂಟಿಯಾಗಿ ನೇಮಕ ಮಾಡಲಾಯಿತು. ತಮ್ಮ ಪತ್ನಿಯ ಜೊತೆಗೂಡಿ, ಅವರು 1935ರಲ್ಲಿ ತಾರಕ್ ನಾಥ್ ದಾಸ್ ಪ್ರತಿಷ್ಠಾನ ಆರಂಭಿಸಿದರು. ಇದು ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜಿಸುವ ಅಲ್ಲದೇ U.S. ಹಾಗು ಏಷಿಯನ್ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಂಬಂಧಗಳನ್ನು ಬೆಳೆಸುವ ಉದ್ದೇಶ ಹೊಂದಿತ್ತು.

ತಾರಕ್ ನಾಥ್ ದಾಸ್ ಪ್ರತಿಷ್ಠಾನ ಬದಲಾಯಿಸಿ

ಪ್ರಸಕ್ತ, ಈ ಪ್ರತಿಷ್ಠಾನವು, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ಪದವಿ ವಿದ್ಯಾರ್ಥಿಗಳಿಗೆ ನೆರವಾಗಲು ಧನಸಹಾಯ ನೀಡುತ್ತದೆ. ಪದವಿ ಶಿಕ್ಷಣ ಮುಗಿಸಿದವರು ಅಥವಾ ಒಂದು ವರ್ಷದ ಪದವಿ ಶಿಕ್ಷಣ ಮುಗಿಸಲಿರುವವರು ಹಾಗು ಪದವಿಗಾಗಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ನೆರವಿಗೆ ಅರ್ಹರಾಗಿರುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ತಾರಕ್ ನಾಥ್ ದಾಸ್ ನಿಧಿಯನ್ನು ಸುಮಾರು ಹನ್ನೆರಡು ವಿಶ್ವವಿದ್ಯಾಲಯಗಳಲ್ಲಿ ನೀಡಲಾಗುತ್ತದೆ.

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮೇರಿ ಕೀಟಿಂಗ್ ದಾಸ್ ನಿಧಿ ಎಂದು ಕರೆಯಲ್ಪಡುವ ಏಕೈಕ ಸಂಸ್ಥೆ ಸಾಕಷ್ಟು ನಿಧಿ ಹೊಂದಿದೆ. ಇದರ ಆದಾಯವನ್ನು ಭಾರತ ಕುರಿತಾದ ಉಪನ್ಯಾಸಗಳಿಗೆ ಹಾಗು ಸಮ್ಮೇಳನಗಳಿಗೆ ಬಳಸಿಕೊಳ್ಳಲಾಗುತ್ತದೆ. ಇತರ ಸಹಯೋಗಿ ವಿಶ್ವವಿದ್ಯಾಲಯಗಳೆಂದರೆ ಪಿಟ್ಟ್ಸ್ ಬರ್ಗ್ ವಿಶ್ವವಿದ್ಯಾಲಯ, ನ್ಯೂಯಾರ್ಕ್ ವಿಶ್ವವಿದ್ಯಾಲಯ, ವಾಶಿಂಗ್ಟನ್ ವಿಶ್ವವಿದ್ಯಾಲಯ, ವರ್ಜೀನಿಯಾ ವಿಶ್ವವಿದ್ಯಾಲಯ, ಹೊವರ್ಡ್ ವಿಶ್ವವಿದ್ಯಾಲಯ, ಯೇಲ್ ವಿಶ್ವವಿದ್ಯಾಲಯ, ಚಿಕಾಗೋ ವಿಶ್ವವಿದ್ಯಾಲಯ, ಮಿಚಿಗನ್ ವಿಶ್ವವಿದ್ಯಾಲಯ, ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯ, ಅಮೆರಿಕನ್ ವಿಶ್ವವಿದ್ಯಾಲಯ ಹಾಗು ಮನೋವದಲ್ಲಿರುವ ಹವಾಯಿ ವಿಶ್ವವಿದ್ಯಾಲಯ.

ನಂತರದ ಬದುಕು ಬದಲಾಯಿಸಿ

ಆಗಿನ 1947ರ ಭಾರತ ವಿಭಜನೆಯಿಂದ ತೀವ್ರ ಕಳವಳ ಅನುಭವಿಸಿದವರಲ್ಲಿ ತಾರಕ್ ಸಹ ಒಬ್ಬರು. ಜೊತೆಗೆ ತಮ್ಮ ಕೊನೆಯ ಉಸಿರಿರುವವರೆಗೂ ದಕ್ಷಿಣ ಏಷಿಯಾದ ವಿಭಜನಾ ಪ್ರಕ್ರಿಯೆಯನ್ನು ಉತ್ಕಟವಾಗಿ ವಿರೋಧಿಸಿದರು. ನಲವತ್ತಾರು ಸುದೀರ್ಘ ವರ್ಷಗಳನ್ನು ಬೇರೆ ದೇಶಗಳಲ್ಲಿ ಕಳೆದ ನಂತರ, 1952ರಲ್ಲಿ ವಾಟುಮುಲ್ ಪ್ರತಿಷ್ಠಾನಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗುವ ಮೂಲಕ ತಮ್ಮ ತಾಯ್ನಾಡಿಗೆ ಮತ್ತೆ ಭೇಟಿ ನೀಡಿದರು.

ಕಲ್ಕತ್ತಾದಲ್ಲಿ ಅವರು ವಿವೇಕಾನಂದ ಸೊಸೈಟಿ ಸ್ಥಾಪಿಸಿದರು. ಆಗ, 9 ಸೆಪ್ಟೆಂಬರ್ 1952ರಲ್ಲಿ, ಬಾಘ ಜತಿನ್ ರ ವೀರಮರಣದ 37ನೇ ಜಯಂತಿ ಸಮಾರಂಭದಲ್ಲಿ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಆಪ್ತ ಸಲಹಾಕಾರ ಜತೀಂದ್ರ ರು ಎತ್ತಿ ಹಿಡಿದ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಲು ಯುವಜನತೆಗೆ ಮನವಿ ಮಾಡಿದರು.[೮] ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಹಿಂದಿರುಗಿದ ನಂತರ 22 ಡಿಸೆಂಬರ್ 1958ರಲ್ಲಿ ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು.

ಮೂಲಗಳು ಬದಲಾಯಿಸಿ

  • “ದಾಸ್, ತಾರಕನಾಥ್ (ಡಾ.)” ಡಿಕ್ಷನರಿ ಆಫ್ ನ್ಯಾಷನಲ್ ಬಯೋಗ್ರಫಿ ಯಲ್ಲಿ, (ಸಂಪಾದನೆ.) S.P. ಸೇನ್, 1972, ಸಂಪುಟ I, ಪುಟಗಳು 363–4
  • ಪೊಲಿಟಿಕಲ್ ಟ್ರಬಲ್ ಇನ್ ಇಂಡಿಯಾ: ಏ ಕಾನ್ಫಿಡೆನ್ಶಿಯಲ್ ರಿಪೋರ್ಟ್ , ಜೇಮ್ಸ್ ಕ್ಯಾಂಪ್ಬೆಲ್ ಕೆರ್ ರಿಂದ, 1917, 1973ರಲ್ಲಿ ಮರುಮುದ್ರಣಗೊಂಡಿದೆ
  • ಸಾಧಕ್ ಬಿಪ್ಲಾಬಿ ಜತೀಂದ್ರನಾಥ್ , ಪೃಥ್ವಿಂದ್ರ ಮುಖರ್ಜಿ ಅವರಿಂದ, ಪಶ್ಚಿಮ ಬಂಗಾಳ ರಾಜ್ಯ ಪುಸ್ತಕ ಮಂಡಳಿ, 1990, ಪುಟಗಳು441–469
  • ಸ್ಯಾನ್ ಫ್ರ್ಯಾನ್ಸಿಸ್ಕೋ ಟ್ರಯಲ್ ರಿಪೋರ್ಟ್ , 75 ಸಂಪುಟಗಳು; ದಾಖಲೆ ಗುಂಪುಗಳು 49, 60, 85 & 118 (U.S. ನ್ಯಾಷನಲ್ ಆರ್ಚಿವ್ಸ್, ವಾಶಿಂಗ್ಟನ್ D.C. & ಫೆಡರಲ್ ಆರ್ಚಿವ್ಸ್, ಸ್ಯಾನ್ ಬ್ರುನೋ)
  • M.N.ರಾಯ್ ಗ್ರಂಥಾಲಯ & ಘದರ್ ಸಂಗ್ರಹ (ದಕ್ಷಿಣ/ಆಗ್ನೇಯ ಗ್ರಂಥಾಲಯ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿ)
  • “ತಾರಕನಾಥ್ ದಾಸ್” ವಿಲ್ಲಿಯಮ್ A. ಎಲ್ಲಿಸ್ ರಿಂದ, ನಾರ್ವಿಚ್ ವಿಶ್ವವಿದ್ಯಾಲಯ 1819-1911 , ಸಂ. III, 1911
  • “ಡಿಪೋರ್ಟೇಶನ್ ಆಫ್ ಹಿಂದೂ ಪಾಲಿಟಿಕ್ಸ್” ಶೈಲೆಂದ್ರನಾಥ್ ಘೋಷ್ ರಿಂದ, ದಿ ಡಯಲ್ ನಲ್ಲಿ, 23 ಆಗಸ್ಟ್ 1919, ಪುಟಗಳು 145–7
  • "ದಿ ವರ್ಮೊಂಟ್ ಎಜುಕೇಶನ್ ಆಫ್ ತಾರಕನಾಥ್ ದಾಸ್: ಆನ್ ಎಪಿಸೋಡ್ ಇನ್ ಬ್ರಿಟಿಷ್-ಅಮೆರಿಕನ್-ಇಂಡಿಯನ್ ರಿಲೇಶನ್ಸ್" ರೋನಾಲ್ಡ್ ಸ್ಪೆಕ್ಟರ್ ರಿಂದ, ವರ್ಮೊಂಟ್ ಇತಿಹಾಸ ದಲ್ಲಿ, ಸಂಪುಟ.48, ನಂ. 2, 1980 (ಇಲ್ಲಸ್ಟ್ರೆಟೆಡ್), ಪುಟಗಳು 88-95
  • "ಮದರಾಸಿನಲ್ಲಿ ತಾರಕನಾಥ್" ಅಕೂರ್ ಅನಂತಾಚಾರಿ ಅವರಿಂದ, ಸಂಡೆ ಸ್ಟ್ಯಾನ್ಡರ್ಡ್ , ಚೆನ್ನೈ, 31 ಮೇ 1964
  • ತಾರಕನಾಥ್ ದಾಸ್: ಲೈಫ್ ಅಂಡ್ ಲೆಟರ್ಸ್ ಆಫ್ ಏ ರೆವಲ್ಯೂಷನರಿ ಇನ್ ಎಕ್ಸೈಲ್ , ತಪನ್ K. ಮುಖರ್ಜಿಯಿಂದ, ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನ್, ಕೊಲ್ಕತ್ತಾ, 1998, 304 ಪುಟಗಳು
  • Op. cit.: ಸಂತೋಷ್ ಸಾಹಾ ಅವರಿಂದ ವಿಮರ್ಶೆ, ಜರ್ನಲ್ ಆಫ್ 3rd ವರ್ಲ್ಡ್ ಸ್ಟಡೀಸ್ ನಲ್ಲಿ, ಸ್ಪ್ರಿಂಗ್, 2000
  • ಲಿಯೋನಾರ್ಡ್ A. ಗೊರ್ಡೊನ್ ರಿಂದ ತಾರಕ್ ನಾಥ್ ದಾಸ್ ಪ್ರತಿಷ್ಠಾನದ ಬಗ್ಗೆ Archived 2007-06-07 ವೇಬ್ಯಾಕ್ ಮೆಷಿನ್ ನಲ್ಲಿ.
  • ವಾಶಿಂಗ್ಟನ್ ವಿಶ್ವವಿದ್ಯಾಲಯದಲ್ಲಿ “ಹಿಂದೂ” ವಿದ್ಯಾರ್ಥಿಗಳು, 1908-1915 Archived 2011-06-11 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು ಬದಲಾಯಿಸಿ

  1. ಸಾಧಕ್ ಬಿಪ್ಲಾಬಿ ಜತೀಂದ್ರನಾಥ್, [ಸಂಕ್ಷಿಪ್ತವಾಗಿ. ಜತೀಂದ್ರನಾಥ್ ], ಪೃಥ್ವಿಂದ್ರ ಮುಖರ್ಜಿ ಅವರಿಂದ, ಪಶ್ಚಿಮ ಬಂಗಾಳ ರಾಜ್ಯ ಪುಸ್ತಕ ಮಂಡಳಿ, 1990, ಪುಟಗಳು. 442-443
  2. ಜೇಮ್ಸ್ ಕ್ಯಾಂಪ್ಬೆಲ್ ಕೆರ್, ಪೊಲಿಟಿಕಲ್ ಟ್ರಬಲ್ ಇನ್ ಇಂಡಿಯಾ ,[ಸಂಕ್ಷಿಪ್ತವಾಗಿ. ಪೊಲಿಟಿಕಲ್ ], 1917, 1973, ಪುಟಗಳು. 247, 251
  3. ಗೇಲ್ ಎನ್ಸೈಕ್ಲೋಪೀಡಿಯಾ ಆಫ್ ಮಲ್ಟಿಕಲ್ಚರಲ್ ಅಮೆರಿಕ
  4. ದಿ ಹಿಸ್ಟರಿ ಆಫ್ ಮೆಟ್ರೋಪಾಲಿಟನ್ ವ್ಯಾನ್ಕೋವರ್ , ಕಾನ್ಸ್ಟನ್ಸ್ ಬ್ರಿಸ್ಸೆನ್ಡೆನ್ ರಿಂದ, ಹಾರ್ಬರ್ ಪ್ರಕಾಶನ
  5. ಪೊಲಿಟಿಕಲ್ , ಪುಟಗಳು. 119-120, 221-222
  6. ಪೊಲಿಟಿಕಲ್ , ಪುಟಗಳು229-231
  7. ಇಲ್ಲಸ್ಟ್ರೆಟೆಡ್ ವೀಕ್ಲಿ ಆಫ್ ಇಂಡಿಯಾ, 26 ಫೆಬ್ರವರಿ 1961; ಘದರ್ ಮೂವ್ಮೆಂಟ್:ಐಡಿಯಾಲಜಿ, ಆರ್ಗನೈಸೆಶನ್ ಅಂಡ್ ಸ್ಟ್ರ್ಯಾಟೆಜಿ ಹರಿಚ್ K. ಪುರಿ ಅವರಿಂದ, ಗುರು ನಾನಕ್ ದೇವ್ ಯೂನಿವರ್ಸಿಟಿ ಪ್ರೆಸ್, 1983
  8. ಆನಂದಬಜಾರ್ ಪತ್ರಿಕಾ , ಕೊಲ್ಕತ್ತಾ, 10 ಸೆಪ್ಟೆಂಬರ್ 1952)