ಡಾಂಗ್ ಸೋನ್ ಸಂಸ್ಕೃತಿ

ಡಾಂಗ್ ಸೋನ್ - ಉತ್ತರ ಅನ್ನಾಮ್‍ನಲ್ಲಿರುವ ಪ್ರಸಿದ್ಧ ಪ್ರಾಗೈತಿಹಾಸಿಕ ನೆಲೆಯಾಗಿದ್ದು ಇಲ್ಲಿ ಮೊಟ್ಟಮೊದಲ ಬಾರಿಗೆ ಕಂಚಿನ ಯುಗಕ್ಕೆ ಸಂಬಂಧಿಸಿದ ಕಂಚಿನ ಆಯುಧಗಳು ವಿಶೇಷವಾಗಿ ದೊರಕಿಸಿದುವು. ಆದ್ದರಿಂದ ಇಲ್ಲಿಯ ಸಂಸ್ಕೃತಿಯನ್ನು ಡಾಂಗ್ ಸೋನ್ ಸಂಸ್ಕೃತಿ ಎಂದು ಕರೆಯಲಾಯಿತು.

ಕಂಚಿನ ಒಂದು ಪ್ರತಿಮೆ

ಕ್ರಿ.ಪೂ. ಮೊದಲನೆಯ ಸಹಸ್ರಮಾನದ ಉತ್ತರಾರ್ಧಕ್ಕೆ ಸೇರುವ ಈ ಸಂಸ್ಕೃತಿ ಸುತ್ತಮುತ್ತಲ ಸ್ಥಳಗಳಲ್ಲೂ ಹರಡಿತು. ಈ ಸಂಸ್ಕೃತಿಯ ನೆಲೆಗಳಲ್ಲಿ ದೊರಕಿದ ಕಂಚಿನ ಆಯುಧಗಳು ಸೀಸಮಿಶ್ರಿತವಾದವು. ಇವು ಮುಖ್ಯವಾಗಿ ಕಠಾರಿ, ರಂಧ್ರಗಳುಳ್ಳ ಕೊಡಲಿ, ಕಳೆಗುದ್ದಲಿ, ಈಟಿಯ ಮೊನೆ ಮತ್ತು ಬುರುಡೆಮದ್ದಲೆ (ಕೆಟ್ಲ್‍ಡ್ರಮ್) ಮುಂತಾದ ರೂಪಗಳಲ್ಲಿ ವಿಶೇಷವಾಗಿ ದೊರಕಿವೆ. ಬುರುಡೆ ಮದ್ದಲೆಗಳ ಮೇಲೆ ಕುದುರೆಸವಾರರ ಚಿತ್ರಗಳಿವೆ. ಇವರ ಉಡಿಗೆತೊಡಿಗೆಗಳು ಚೌ ಸಂಸ್ಕೃತಿಯ ಲಕ್ಷಣಗಳನ್ನು ತೋರ್ಪಡಿಸುವುದರಿಂದ, ಡಾಂಗ್-ಸೋನ್ ಸಂಸ್ಕೃತಿ ಹುಲ್ಲುಗಾವಲಿನ ಜನಗಳಿಂದ ಇಲ್ಲಿಗೆ ಕ್ರಿ.ಪೂ. 6ನೆಯ ಶತಮಾನದಲ್ಲಿ ಬಂದಿರಬೇಕೆಂದು ಊಹಿಸಲಾಗಿದೆ. ಸೀಸವನ್ನು ಉತ್ತರ ಚೀನದಲ್ಲೂ ವಿಶೇಷವಾಗಿ ಬಳಸಲಾಗುತ್ತಿತ್ತು. ಒಂದೆರಡು ಶತಮಾನಗಳ ಅನಂತರ ಇಂಡೊನೇಷ್ಯದಲ್ಲಿ ಅಲ್ಲಲ್ಲಿ ಕಂಚಿನ ಆಯುಧಗಳ ಉಪಯೋಗ ಪ್ರಾರಂಭವಾಯಿತು. ಆದರೂ ಡಾಂಗ್-ಸೋನ್ ಸಂಸ್ಕೃತಿ ಪೂರ್ಣವಾಗಿ ತನ್ನ ಪ್ರಭಾವವನ್ನು ಬೀರಲಿಲ್ಲ. ನವಶಿಲಾಯುಗದ ಸಂಸ್ಕೃತಿಯೇ ವಿಶೇಷವಾಗಿತ್ತು. ಭಾರತೀಯರು ಕಬ್ಬಿಣದ ಬಳಕೆಯನ್ನು ವಿಶೇಷವಾಗಿ ಹರಡುವ ವರೆಗೂ ಡಾಂಗ್-ಸೋನ್ ಸಂಸ್ಕೃತಿ ಅಲ್ಲಲ್ಲಿ ಇತ್ತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: