ಟ್ರೆಂಟ್ ಸಭೆ 1545-63. ರೋಮನ್ ಕ್ಯಾತೊಲಿಕ್ ಧರ್ಮದ ಪ್ರಕಾರ ಹತ್ತೊಂಬತ್ತನೆಯ ಸಭೆ. ಕ್ಯಾತೋಲಿಕ್ ಸುಧಾರಣೆಯಲ್ಲಿನ ಆದರ್ಶಗಳು ಮತ್ತು ಶಿಸ್ತಿನ ಕ್ರಮಗಳ ಸಂಹಿತೆಗಳ ದೃಷ್ಟಿಯಿಂದ ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಬಹು ಮುಖ್ಯವಾದುವು.

ಬಹಳ ಹಿಂದಿನಿಂದಲೂ ಕ್ರೈಸ್ತಧರ್ಮದ ಧಾರ್ಮಿಕ ಮುಖಂಡನಾದ ಪೋಪನಿಗಿಂತ ಪರಮಾಧಿಕಾರ ಪಡೆದ ಸಾಮಾನ್ಯ ಸಭೆಯೊಂದು ಅಸ್ತಿತ್ವದಲ್ಲಿತ್ತು. ವಾಸ್ತವವಾಗಿ ಮಾರ್ಟಿನ್ ಲೂತರನೂ ಈ ಸಭೆಗೆ ಮನವಿ ಸಲ್ಲಿಸಿದ್ದ (1518). ಇದರ ಪರಿಣಾಮವಾಗಿ ಒಂದು ಸ್ವತಂತ್ರ ಕ್ರೈಸ್ತಸಭೆಯ ರಚನೆಯ ಜರ್ಮನಿಯಲ್ಲಿ ಸಾರ್ವತ್ರಿಕ ಬೇಡಿಕೆ ಹೆಚ್ಚಿತು. ಆದರೆ ಪೋಪ್ ಅದಕ್ಕೆ ಒಪ್ಪಲಿಲ್ಲ. ಐದನೆಯ ಚಾರ್ಲ್ಸ್ ಚಕ್ರವರ್ತಿ ಈ ಸಭೆಯ ರಚನೆಗೆ ಬೆಂಬಲಿಸಿದನಾದರೂ ಏಳನೆಯ ಪೋಪ್ ಕ್ಲೆಮೆಂಟ್ (1523-34) ಉಪಾಯದಿಂದ ಈ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ. ಆದರೆ ಅವನ ಉತ್ತರಾಧಿಕಾರಿ ಮೂರನೆಯ ಪೋಪ್ (1534-49) ಚರ್ಚಿನ ಸುಧಾರಣೆ ಬಹುಮುಖ್ಯವೆಂದು ಪರಿಗಣಿಸಿದ. ಆತ 1537ರಲ್ಲಿ ಸಭೆ ಕರೆದು ಒಂದು ಸುಧಾರಣಾ ಆಯೋಗವನ್ನು ರಚಿಸಿದ. ಆದರೆ ಫ್ರಾನ್ಸಿನಿಂದ ಬಂದ ವಿರೋಧ ಹಾಗೂ ಪ್ರಾಟೆಸ್ಟಂಟ್‍ರು ಈ ಸಭೆಗೆ ಸೇರಲು ನಿರಾಕರಿಸಿದ್ದು ಈ ಪ್ರಯತ್ನ ವಿಫಲವಾಗಲು ಕಾರಣವಾದುವು.

ತರುವಾಯ 1541ರಲ್ಲಿ ಪೋಪ್ ಪಾಲ್ ಈ ಸಭೆಯನ್ನು ಕರೆಯಲು ಪುನಃ ಪ್ರಯತ್ನಿಸಿದ. ಚಕ್ರವರ್ತಿಯ ಕೋರಿಕೆಯಂತೆ ಇದನ್ನು ಸಾಮ್ರಾಜ್ಯದ ಪ್ರದೇಶದಲ್ಲಿ ಅಂದರೆ ಟ್ರೆಂಟ್‍ನಲ್ಲಿ ನಡೆಸಲು ಒಪ್ಪಲಾಯಿತು. 1542ರ ಮೇ 22ರಂದು ಈ ಸಭಾರಚನೆಯ ಆಜ್ಞೆಯನ್ನು ಪ್ರಕಟಿಸಲಾಯಿತು. ಆದರೆ ಫ್ರಾನ್ಸಿಗೂ ಪವಿತ್ರ ರೋಮನ್ ಸಾಮ್ರಾಜ್ಯಕ್ಕೂ ಯುದ್ಧ ಪ್ರಾರಂಭವಾದುದರಿಂದ 1544ರಲ್ಲಿ ಶಾಂತಿ ಒಪ್ಪಂದವಾಗುವವರೆಗೂ ಈ ಸಭೆಯ ಚಟುವಟಿಕೆಗಳು ನಡೆಯಲಿಲ್ಲ. 1545ರಲ್ಲಿ ಸೇರಿದ ಸಭೆ ತನ್ನ ಕಾರ್ಯವನ್ನು ಮುಂದುವರಿಸುವಲ್ಲಿ ಸಫಲವಾಯಿತು.

ಮೊದಲ ಅವಧಿ :1545-47 ಬದಲಾಯಿಸಿ

1545ರ ಡಿಸೆಂಬರ್ 13ರಂದು ಈ ಸಭೆಯನ್ನು ಉದ್ಘಾಟಿಸಲಾಯಿತು. ಪ್ರಾರಂಭದಲ್ಲಿ ಸಭೆಯಲ್ಲಿ ಮೂವರು ಪೋಪನ ಪ್ರತಿನಿಧಿಗಳು ಹಾಗೂ 31 ಜನ ಪ್ರೆಲಿಟ್ಟುಗಳಿದ್ದರು. ಎರಡನೆಯ ಅಧಿವೇಶನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಚರ್ಚಿಸಲಾಯಿತು. ಅದರಲ್ಲಿ ಮತ ನೀಡುವ ಹಕ್ಕು ರಾಷ್ಟ್ರೀಯವಾಗಿರದೆ ವ್ಯಕ್ತಿಗತವಾಗಿರಬೇಕೆಂದು ತೀರ್ಮಾನಿಸಲಾಯಿತು. ಅವರಲ್ಲಿ ಬಿಷಪ್‍ಗಳು, ಆ್ಯಬಟ್‍ಗಳು ಮತ್ತು ಆ ದೇಶಗಳ ಜನರಲ್‍ಗಳಿಗೆ ಮತ ನೀಡುವ ಹಕ್ಕಿರತಕ್ಕದ್ದೆಂದು ತೀರ್ಮಾನಿಸಲಾಯಿತು. ಆದರೂ ಘಟಿಕೋತ್ಸವ ಸಮಯದಲ್ಲಿ ಈ ಸಭೆ ಇಡೀ ಚರ್ಚ್ ವ್ಯವಸ್ಥೆಯನ್ನೇ ಪ್ರತಿನಿಧಿಸುತ್ತಿತ್ತು. ಇದು ಪೋಪನಗಿಂತಲೂ ಪರಮಾಧಿಕಾರ ಇರುವ ಸಭೆ ಎಂಬ ಮನೋಭಾವ ಎಲ್ಲರಲ್ಲೂ ಇತ್ತು. ಈ ಸಭೆಯ ಮೂಲಭೂತ ಸಮಸ್ಯೆ ಪೋಪ್ ಇಚ್ಛಿಸಿದ್ದ ಧಾರ್ಮಿಕ ಸುಧಾರಣೆಯನ್ನು ಮೊದಲಿಗೆ ಚರ್ಚಿಸುವುದೇ ಅಥವಾ ಚಕ್ರವರ್ತಿ ಇಚ್ಚಿಸಿದ್ದ ಶಿಸ್ತು ಸಂಬಂಧವಾದ ಸುಧಾರಣೆಯನ್ನು ಮೊದಲಿಗೆ ಚರ್ಚಿಸುವುದೇ ಎಂಬುದಾಗಿತ್ತು. ಕೊನೆಗೆ ಇವೆರಡನ್ನೂ ಒಟ್ಟಿಗೆ ಚರ್ಚಿಸಬೇಕೆಂದು ಸಮ್ಮತಿಸಲಾಯಿತು. ಈ ಕಾರ್ಯ ಮೂರು ಹಂತಗಳಲ್ಲಿ ನಡೆಯಬೇಕೆಂದೂ ಸಭೆ ಒಪ್ಪಿತು. ಮೊದಲಿಗೆ ಧರ್ಮಶಾಸ್ತ್ರಜ್ಞರು ಸಭೆ ಸೇರಿ ವಿವಿಧ ಪ್ರಣಾಳಿಕೆಗಳ ಬಗ್ಗೆ ಚರ್ಚಿಸುವುದು. ಅನಂತರ ಎರಡನೆ ಹಂತದಲ್ಲಿ ಈ ಪ್ರಣಾಳಿಕೆಗಳನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸುವುದು. ಮೂರನೆ ಹಂತದಲ್ಲಿ ಸಾರ್ವತ್ರಿಕ ಸಭೆಯಲ್ಲಿ ಅಂತಿಮವಾಗಿ ಈ ನಿರ್ಣಯಗಳನ್ನು ಮತಕ್ಕೆ ಹಾಕಿ ಅಂಗೀಕರಿಸುವುದು.

ಮೂರನೆ ಅಧಿವೇಶನದಲ್ಲಿ ಮುಂದೆ ನಡೆಸಬಹುದಾದ ಎಲ್ಲ ಚರ್ಚೆಯ ವಿಷಯಗಳನ್ನೂ ರೂಪಿಸಲಾಯಿತು. ಹಾಗೂ ಈ ನಿರ್ಣಯಗಳನ್ನು ಧರ್ಮಶಾಸ್ತ್ರದಂತೆಯೇ ಮಾನ್ಯಮಾಡಬೇಕೆಂದು ಒಪ್ಪಲಾಯಿತು. ಧಾರ್ಮಿಕ ಸಂಬಂಧವಾದ ಆಧಾರಗಳಿಗೆ ಲ್ಯಾಟಿನ್ನಿನ ವಲ್ಗೇಟನ್ನು ಸಾಕ್ಷಿಯಾಗಿ ಇಟ್ಟುಕೊಳ್ಳುವುದೆಂದು ನಿರ್ಧರಿಸಲಾಯಿತು.

ನಾಲ್ಕು, ಐದು, ಆರು ಮತ್ತು ಏಳನೆ ಅಧಿವೇಶನಗಳಲ್ಲಿ ಚರ್ಚಿನ ಸ್ವರೂಪಕ್ಕೆ ಸಂಬಂಧಿಸಿದಂತೆ ವಿವಿಧ ಅಂಶಗಳು ಚರ್ಚೆಗೆ ಬಂದುವು. ಅವುಗಳಲ್ಲಿ ಬಿಷಪ್ಪನ ಸ್ಥಾನಮಾನಗಳಿಗೆ ಸಂಬಂಧಿಸಿದ ಭಾಗ ಮುಖ್ಯವಾದುದು. ಬಿಷಪ್ ನ್ಯಾಯತತ್ತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಲಾಯಿತು. ಬಿಷಪ್ಪನ ನಡವಳಿಕೆ ಮತ್ತು ಚಟುವಟಿಕೆಗಳ ಬಗ್ಗೆ ನೀತಿಸಂಹಿತೆಯನ್ನು ರೂಪಿಸಲಾಯಿತು.

ಈ ಕಾಲದಲ್ಲಿ ಬ್ಯಾಪ್ಟಿಸ್ಟ್ ಮತ್ತು ಕನ್‍ಫಾರ್ಮಿಸ್ಟ್ ತತ್ತ್ವಗಳನ್ನು ವಿವರವಾಗಿ ಪರಿಶೀಲಿಸಲಾಯಿತು. ಒಬ್ಬ ಬಿಷಪ್ ಒಂದಕ್ಕಿಂತ ಹೆಚ್ಚು ಅಧಿಕಾರ ಹೊಂದಿರಕೂಡದೆಂದು ಸೂಚಿಸಲಾಯಿತು.

ಈ ಕಾಲಕ್ಕೆ ಸಭೆಯ ಸದಸ್ಯರ ಸಂಖ್ಯೆ 71 ಪ್ರೆಲಿಟ್ಟುಗಳಿಂದ ಕೂಡಿತ್ತು. ಈ ವೇಳಗೆ ಚಕ್ರವರ್ತಿ ಮತ್ತು ಪೋಪರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಿದವು. ಪೋಪನ ಆದೇಶದಂತೆ ಕೆಲವು ಸದಸ್ಯರಿಂದ ಕೂಡಿದ ಸಭೆ ಬಲೋನ್ಯದಲ್ಲಿ ಸೇರಿತು. ಉಳಿದ ಕೆಲವು ಬಿಷಪ್ಪರು ಟ್ರೆಂಟ್‍ನಲ್ಲೇ ಮುಂದುವರಿದು ತಮ್ಮ ಕಾರ್ಯ ಕಲಾಪಗಳನ್ನು ನಡೆಸತೊಡಗಿದರು. ಬಲೋನ್ಯದ ಸಭೆ ಚಕ್ರವರ್ತಿಯ ವಿರೋಧದಿಂದಾಗಿ ಹೆಚ್ಚು ಪ್ರಗತಿ ಸಾಧಿಸಲಿಲ್ಲ. ಈ ಸಭೆ ವಾಸ್ತವವಾಗಿ ಮೂರನೆಯ ಪಾಲನ ನಿಧನದ ವರೆಗೂ ನಾಲ್ಕು ವರ್ಷಗಳ ಕಾಲ ಸ್ಥಗಿತಗೊಂಡಿತ್ತು.

ಎರಡನೆಯ ಅವಧಿ :1551-52 ಬದಲಾಯಿಸಿ

1550ರ ನವೆಂಬರ್ 14ರಂದು ಮೂರನೆ ಜೂಲಿಯಸ್ ನೀಡಿದ ಘೋಷಣೆಯ ಪ್ರಕಾರ ಪುನಃ ಟ್ರೆಂಟ್‍ನಲ್ಲಿ ಸಭೆ ಪ್ರಾರಂಭವಾಯಿತು. ಅದನ್ನು 1551ರ ಮೇ 1ರಂದು ಉದ್ಘಾಟಿಸಲಾಯಿತು. ಏಳನೆಯ ಹೆನ್ರಿಯ ವಿರೋಧದಿಂದಾಗಿ ಫ್ರೆಂಚ್ ಬಿಷಪ್‍ಗಳು ಈ ಸಭೆಯಿಂದ ದೂರ ಉಳಿದರು. ಈ ಕಾಲದಲ್ಲಿ ನಡೆದ ಹಲವು ಅಧಿವೇಶನಗಳಲ್ಲಿ ಚರ್ಚಿನ ವಿವಿಧ ನಡವಳಿಕೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕೊನೆಗೆ 14ನೆಯ ಅಧಿವೇಶನದಲ್ಲಿ ಒಂದು ತೀರ್ಮಾನಕ್ಕೆ ಬಂದು ಧರ್ಮಾಧಿಕಾರಿಗಳ ಶಿಸ್ತಿಗೆ ಸಂಬಂಧಿಸಿದಂತೆ ಸುಧಾರಣೆಗಳನ್ನು ಜಾರಿಗೆ ತರಲಾಯಿತು.

ಈ ವೇಳೆಗೆ ಜರ್ಮನ್ ಪ್ರಾಟೆಸ್ಟಂಟ್ ಪ್ರತಿನಿಧಿಗಳು ಟ್ರೆಂಟ್ ಸಭೆಗೆ ಬಂದು ಹಾಜರಾದರು. ಅವರು ಬಿಷಪ್‍ಗೆ ಹೆಚ್ಚು ಸ್ವಾತಂತ್ರ್ಯ ನೀಡಲು ಮತ್ತು ಪೋಪನ ಮೇಲೆ ಸಾಮಾನ್ಯ ಸಭೆಯ ಪರಮಾಧಿಕಾರ ಸ್ಥಾಪಿಸಲು ಒತ್ತಾಯಿಸಿದರು. 1552ರ ನವೆಂಬರ್ 25ರಂದು ಪ್ರಾರಂಭವಾದ 15ನೆಯ ಅಧಿವೇಶನದಲ್ಲಿ ಕೆಲವು ರಿಯಾಯಿತಿಗಳನ್ನು ಮಾಡಲೋಸುಗ ಸಭೆಯನ್ನು ಮುಂದೆ ಹಾಕಲಾಯಿತು. 1555ರಲ್ಲಿ ಜ್ಯೂಲಿಯಸ್ ನಿಧನವಾದ ಅನಂತರ 4ನೆಯ ಪೋಪನ ಕಾಲದಲ್ಲಿ ಈ ಸಭೆ ಪುನಃ ಸೇರುವ ಆಸೆಯೇ ಇಲ್ಲದಂತಾಯಿತು.

ಮೂರನೆಯ ಅವಧಿ :1562-63 ಬದಲಾಯಿಸಿ

ನಾಲ್ಕನೆ ಪೋಪ್ ಆಯ್ಕೆಯಾದ ಕೂಡಲೆ ಈ ಸಭೆಯನ್ನು ಪುನರುಜ್ಜೀವಿಸುವುದಾಗಿ ಘೋಷಿಸಿದ. ಜರ್ಮನಿಯಂತೆ ಫ್ರಾನ್ಸು ಪೋಪನ ವಿರುದ್ಧ ಸಂಘಟಿತವಾಗುವುದನ್ನು ತಪ್ಪಿಸುವುದೇ ಇವನ ಉದ್ದೇಶವಾಗಿತ್ತು. 1562ರ ಜನವರಿ 18ರಂದು 17ನೆಯ ಅಧಿವೇಶನ ಪ್ರಾರಂಭವಾಯಿತು. ಇದರಲ್ಲಿ 113 ಪ್ರೆಲಿಟ್ಟುಗಳು ಭಾಗವಹಿಸಿದ್ದರು. ಹೊಸ ಪೇಪಲ್ ಲಿಗೇಟುಗಳೂ ಇದ್ದರು. 18ನೆಯ ಅಧಿವೇಶನ ಮುಗಿಯುವುದರೊಳಗಾಗಿ ನಿಷೇಧ ಗ್ರಂಥಗಳ ಪಟ್ಟಿಯನ್ನು ತಯಾರಿಸಲಾಯಿತು. ಇದರಿಂದಾಗಿ ಸಭೆಯಲ್ಲಿ ಗೊಂದಲವೆದ್ದಿತು. ಬಿಷಪ್ಪರ ಕರ್ತವ್ಯಗಳನ್ನು ನಿರ್ಧರಿಸುವ ವಿಷಯಗಳಲ್ಲೂ ಭಿನ್ನಾಭಿಪ್ರಾಯ ಮೂಡಿತು. ಪರಿಣಾಮವಾಗಿ 19 ಮತ್ತು 20ನೆಯ ಅಧಿವೇಶನಗಳು ನಿಷ್ಫಲವಾದುವು. 21ನೆಯ ಅಧಿವೇಶನದ ಪ್ರಾಟೆಸ್ಟಂಟ್ ಸಿದ್ಧಾಂತದ ವಿರುದ್ಧ ತೀರ್ಮಾನ ಕೈಗೊಳ್ಳುವಲ್ಲಿ ಯಶಸ್ವಿಯಾಯಿತು. 22ನೆಯ ಅಧಿವೇಶನದಲ್ಲಿ ಸಭೆ ಧಾರ್ಮಿಕ ವಿಷಯಗಳ ಬಗ್ಗೆ ನಿರ್ಧಾರ ಕೈಗೊಂಡಿತು. ಚಕ್ರವರ್ತಿಯ ಬೇಡಿಕೆಗಳನ್ನು ಪರಿಗಣಿಸುವ ಅಥವಾ ಬಿಡುವ ಅಧಿಕಾರವನ್ನು ಪೋಪನಿಗೆ ಬಿಡಲಾಯಿತು. ಧರ್ಮಾಧಿಕಾರಿಗಳ ಬಗ್ಗೆ ಒಂದು ನೀತಿಸುಧಾರಣಾ ನಿರೂಪವನ್ನು ಹೊರಡಿಸಲಾಯಿತು. ನವೆಂಬರ್ 13ರಂದು ಫ್ರೆಂಚ್ ಬಿಷಪ್‍ಗಳು ಸಭೆಯಲ್ಲಿ ಭಾಗವಹಿಸಿದಾಗ ಬಿಷಪ್‍ಗಳ ವಾಸದ ವಿಷಯದ ಬಗ್ಗೆ ವಿವಾದವೆದ್ದಿತು. ಫ್ರೆಂಚ್ ಬಿಷಪ್‍ಗಳನ್ನು ಸ್ಪೇನ್ ಬಿಷಪ್‍ಗಳು ಬೆಂಬಲಿಸಿದರು.

ಹೀಗೆ 1563ರ ಡಿಸೆಂಬರ್ ವರೆಗೂ ಕೆಲವು ಅಧಿವೇಶನಗಳು ನಡೆದವು. ಅಂತಿಮವಾಗಿ 25ನೆಯ ಅಧಿವೇಶನದಲ್ಲಿ ಕೆಲವು ಮಹತ್ತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅದರಲ್ಲಿ ಬಿಷಪ್‍ಗಳ ಹಾಗೂ ಪ್ರಾಂತೀಯ ಧರ್ಮಾಧಿಕಾರಿಗಳ ನೇಮಕ, ಧಾರ್ಮಿಕ ಆದೇಶಗಳ ಸುಧಾರಣೆ ಮೊದಲಾದ ವಿಷಯಗಳ ಬಗ್ಗೆ ನಿರ್ದಿಷ್ಟ ನಿಯಮಗಳನ್ನು ರಚಿಸಲಾಯಿತು. ಇನ್ನು ಕೆಲವು ನಿರ್ಣಯಗಳು ವಿವಾಹ, ಧಾರ್ಮಿಕ ತೆರಿಗೆ, ಸಂತರು, ವಿಗ್ರಹಗಳು, ಮೊದಲಾದವುಗಳಿಗೆ ಸಂಬಂಧಿಸಿದ್ದವು. ಮುಂದಿನ ವರ್ಷ ಪೋಪ್ ನಾಲ್ಕನೆಯ ಪಿಯಸ್ ಈ ಪ್ರಣಾಳಿಕೆಗಳನ್ನು ಮಾನ್ಯ ಮಾಡಿ ಅವುಗಳ ಸಾರಸಂಗ್ರಹವನ್ನು ಪ್ರಕಟಿಸಿದ. ಆದರೆ ಈ ನಿಬಂಧಾವಳಿಗಳನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: